[1] ಯೆಹೂದ್ಯರಲ್ಲದವರು ಸಹ ದೇವರ ವಾಕ್ಯವನ್ನು ಸ್ವೀಕರಿಸಿದರೆಂಬ ವಾರ್ತೆಯನ್ನು ಅಪೊಸ್ತಲರೂ ಯೂದಾಯದಲ್ಲೆಲ್ಲಾ ಇದ್ದ ಸಹೋದರರೂ ಕೇಳಿದರು.
[2] ಆದ್ದರಿಂದ ಪೇತ್ರನು ಯೆರೂಸಲೇಮಿಗೆ ಹೋದಾಗ ಸುನ್ನತಿಯಾದವರು ಅವನೊಂದಿಗೆ ವಾಗ್ವಾದಮಾಡಿ,
[3] “ಸುನ್ನತಿ ಇಲ್ಲದವರ ಮನೆಯೊಳಗೆ ಹೋಗಿ ಅವರೊಂದಿಗೆ ಊಟಮಾಡಿದೆ,” ಎಂದರು.
[4] ಆಗ ಸಂಭವಿಸಿದ್ದೆಲ್ಲವನ್ನು ಪೇತ್ರನು ಕ್ರಮವಾಗಿ ವಿವರಿಸಿ:
[5] “ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡುತ್ತಿದ್ದೆನು. ಆಗ ನಾನು ಧ್ಯಾನಪರವಶನಾಗಿ ಒಂದು ದರ್ಶನವನ್ನು ಕಂಡೆನು. ನಾಲ್ಕು ಮೂಲೆಗಳನ್ನು ಹಿಡಿದ ದೊಡ್ಡ ಜೋಳಿಗೆಯಂತಿರುವ ಒಂದು ವಸ್ತುವು ಪರಲೋಕದಿಂದ ಕೆಳಗೆ ಇಳಿದು ನಾನಿದ್ದಲ್ಲಿಗೆ ಬರುವುದನ್ನು ಕಂಡೆನು.
[6] ನಾನು ಅದರೊಳಗೆ ನೋಡಲು ಅದರಲ್ಲಿ ಭೂಲೋಕದ ಮೇಲೆ ತಿರುಗಾಡುವ ಪ್ರಾಣಿಗಳೂ ಕಾಡು ಮೃಗಗಳೂ ಕ್ರಿಮಿಕೀಟಗಳೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳೂ ಇದ್ದುದನ್ನು ಕಂಡೆನು.
[7] ಮಾತ್ರವಲ್ಲದೆ, ‘ಪೇತ್ರನೇ ಎದ್ದೇಳು, ಕೊಂದು ತಿನ್ನು,’ ಎಂದು ನನಗೆ ಹೇಳುವ ಒಂದು ವಾಣಿಯನ್ನು ಕೇಳಿಸಿಕೊಂಡೆನು.
[8] “ಅದಕ್ಕೆ ನಾನು, ‘ಸ್ವಾಮಿ, ನನ್ನಿಂದಾಗದು! ಅಶುದ್ಧವಾದದ್ದನ್ನೂ ನಿಷಿದ್ಧವಾದದ್ದನ್ನೂ ನಾನೆಂದೂ ತಿಂದವನಲ್ಲ,’ ಎಂದು ಉತ್ತರಕೊಟ್ಟೆನು.
[9] “ಆಗ ಪರಲೋಕದ ಆ ವಾಣಿಯು, ‘ದೇವರು ಶುದ್ಧೀಕರಿಸಿದ ಯಾವುದನ್ನೂ ಅಶುದ್ಧವೆನ್ನಬೇಡ,’ ಎಂದು ಎರಡನೆಯ ಸಾರಿ ನನಗೆ ಹೇಳಿತು.
[10] ಹೀಗೆ ಮೂರು ಬಾರಿಯಾದ ತರುವಾಯ ಅವೆಲ್ಲವನ್ನೂ ಪರಲೋಕಕ್ಕೆ ಹಿಂದಿರುಗಿ ತೆಗೆದುಕೊಳ್ಳಲಾಯಿತು.
[11] “ಆ ಸಮಯಕ್ಕೆ ಸರಿಯಾಗಿ ಕೈಸರೈಯದಿಂದ ನನ್ನ ಬಳಿಗೆ ಕಳುಹಿಸಲಾದ ಮೂರು ಜನರು ನಾನು ಉಳಿದುಕೊಂಡಿದ್ದ ಮನೆಯ ಮುಂದೆ ಬಂದು ನಿಂತರು.
[12] ಏನೂ ಸಂಶಯಪಡದೇ ಅವರ ಜೊತೆಯಲ್ಲಿ ಹೋಗಬೇಕೆಂದು ಪವಿತ್ರಾತ್ಮ ದೇವರು ನನಗೆ ಅಪ್ಪಣೆಕೊಟ್ಟರು. ಇದಲ್ಲದೆ ಈ ಆರು ಜನ ಸಹೋದರರೂ ನನ್ನೊಂದಿಗೆ ಹೊರಟರು. ನಾವು ಆ ಮನುಷ್ಯನ ಮನೆಯೊಳಗೆ ಪ್ರವೇಶಿಸಿದೆವು.
[13] ತನ್ನ ಮನೆಯಲ್ಲಿ ಒಬ್ಬ ದೇವದೂತನು ಪ್ರತ್ಯಕ್ಷನಾಗಿ, ‘ಪೇತ್ರ ಎಂದು ಕರೆಯಲಾಗುವ ಸೀಮೋನನನ್ನು ಯೊಪ್ಪದಿಂದ ಕರೆಕಳುಹಿಸು.
[14] ಅವನು ಕೊಡುವ ವಾಕ್ಯದ ಮೂಲಕ ನೀನೂ ನಿನ್ನ ಮನೆಯಲ್ಲಿರುವವರೆಲ್ಲರೂ ರಕ್ಷಣೆ ಹೊಂದುವಿರಿ,’ ಎಂದು ಹೇಳಿದ್ದನ್ನು ಅವನು ನಮಗೆ ವಿವರಿಸಿದನು.
[15] “ನಾನು ಮಾತನಾಡಲು ಪ್ರಾರಂಭ ಮಾಡಿದಾಗ, ಪವಿತ್ರಾತ್ಮ ದೇವರು ಮೊದಲು ನಮ್ಮ ಮೇಲೆ ಇಳಿದಂತೆಯೇ ಅವರ ಮೇಲೆಯೂ ಇಳಿದು ಬಂದರು.
[16] ‘ಯೋಹಾನನು ನೀರಿನಿಂದ ದೀಕ್ಷಾಸ್ನಾನ ಮಾಡಿಸಿದ್ದಾನೆ. ನೀವಾದರೋ ಪವಿತ್ರಾತ್ಮ ದೇವರಿಂದ ದೀಕ್ಷಾಸ್ನಾನ ಹೊಂದುವಿರಿ,’ ಎಂದು ಕರ್ತ ಯೇಸುವು ಹೇಳಿದ ಮಾತುಗಳನ್ನು ನಾನು ಆಗ ಜ್ಞಾಪಿಸಿಕೊಂಡೆನು.
[17] ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಂಬಿಕೆಯನ್ನಿಟ್ಟ ನಮಗೆ ಕೊಟ್ಟ ಪವಿತ್ರಾತ್ಮ ವರವನ್ನೇ ದೇವರು ಅವರಿಗೂ ಕೊಟ್ಟಿರಲು, ದೇವರಿಗೆ ಅಡ್ಡಿಮಾಡಲು ನಾನು ಯಾರು?” ಎಂದನು.
[18] ಯೆಹೂದಿ ವಿಶ್ವಾಸಿಗಳು ಇದನ್ನು ಕೇಳಿದಾಗ, ಅವರಿಗೆ ಯಾವ ಆಕ್ಷೇಪಣೆಯೂ ಇರಲಿಲ್ಲ. ಹಾಗಾದರೆ ದೇವರು, “ಯೆಹೂದ್ಯರಲ್ಲದವರಿಗೂ ಸಹ ಜೀವಕ್ಕಾಗಿ ಪಶ್ಚಾತ್ತಾಪವನ್ನು ಕೊಟ್ಟಿದ್ದಾರೆ,” ಎಂದು ಹೇಳಿ ದೇವರನ್ನು ಕೊಂಡಾಡಿದರು.
[19] ಸ್ತೆಫನನ ಮರಣದ ನಂತರ ಸಂಭವಿಸಿದ ಹಿಂಸೆಯ ನಿಮಿತ್ತ ಚದರಿಹೋದವರು ಫೊಯಿನಿಕೆ, ಸೈಪ್ರಸ್ ಮತ್ತು ಅಂತಿಯೋಕ್ಯದವರೆಗೆ ಪ್ರಯಾಣಮಾಡಿದರು. ಹೀಗೆ ಅವರು ಯೆಹೂದ್ಯರಿಗೆ ಮಾತ್ರವೇ ವಾಕ್ಯವನ್ನು ಸಾರಿದರು.
[20] ಆದರೆ ಅವರಲ್ಲಿ, ಕೆಲವರು ಅಂದರೆ ಸೈಪ್ರಸ್ ಮತ್ತು ಕುರೇನೆದ ಪುರುಷರು ಅಂತಿಯೋಕ್ಯಕ್ಕೆ ಹೋಗಿ ಗ್ರೀಕರಿಗೂ ಕರ್ತ ಯೇಸುವಿನ ಶುಭಸಮಾಚಾರ ಸಾರಲು ಪ್ರಾರಂಭಿಸಿದರು.
[21] ಕರ್ತ ಯೇಸುವಿನ ಹಸ್ತವು ಅವರೊಂದಿಗಿತ್ತು ಬಹಳಷ್ಟು ಜನರು ನಂಬಿ ಕರ್ತ ಯೇಸುವಿನ ಕಡೆಗೆ ತಿರುಗಿಕೊಂಡರು.
[22] ಈ ಸಮಾಚಾರ ಯೆರೂಸಲೇಮಿನ ಸಭೆಯವರಿಗೆ ತಿಳಿಯಿತು. ಅವರು ಬಾರ್ನಬನನ್ನು ಅಂತಿಯೋಕ್ಯಕ್ಕೆ ಕಳುಹಿಸಿಕೊಟ್ಟರು.
[23] ಅವನು ಅಲ್ಲಿಗೆ ಬಂದು ದೇವರ ಕೃಪೆಯನ್ನು ಕಂಡು ಹರ್ಷಭರಿತನಾಗಿ, ಅವರೆಲ್ಲರೂ ಕರ್ತನಿಗೆ ಹೃದಯಪೂರ್ವಕವಾಗಿ ಭಯಭಕ್ತಿ ಉಳ್ಳವರಾಗಿರಬೇಕೆಂದು ಅವರನ್ನು ಪ್ರೋತ್ಸಾಹಿಸಿದನು.
[24] ಬಾರ್ನಬನು ಸತ್ಪುರುಷನೂ ಪವಿತ್ರಾತ್ಮಭರಿತನೂ ಪೂರ್ಣನಂಬಿಕೆಯುಳ್ಳವನೂ ಆಗಿದ್ದನು. ಅಲ್ಲಿ ಅನೇಕರು ಕರ್ತ ಯೇಸುವಿನ ಕಡೆಗೆ ಬಂದರು.
[25] ಅನಂತರ ಬಾರ್ನಬನು ಸೌಲನನ್ನು ಹುಡುಕುವುದಕ್ಕಾಗಿ ತಾರ್ಸಕ್ಕೆ ಹೋದನು.
[26] ಅಲ್ಲಿ ಸೌಲನನ್ನು ಭೇಟಿಯಾಗಿ, ಅಂತಿಯೋಕ್ಯಕ್ಕೆ ಕರೆದುಕೊಂಡು ಬಂದನು. ಅನಂತರ ಇಡೀ ಒಂದು ವರ್ಷಕಾಲ ಬಾರ್ನಬನು, ಸೌಲನು ಅಲ್ಲಿ ಸಭೆಯವರೊಂದಿಗೆ ಇದ್ದುಕೊಂಡು ಬಹಳ ಜನರಿಗೆ ಬೋಧನೆ ಮಾಡಿದರು. ಶಿಷ್ಯರಿಗೆ ಪ್ರಥಮ ಬಾರಿ “ಕ್ರೈಸ್ತರು” ಎಂಬ ಹೆಸರು ಬಂದದ್ದು ಅಂತಿಯೋಕ್ಯದಲ್ಲಿಯೇ.
[27] ಈ ಸಮಯದಲ್ಲಿ ಯೆರೂಸಲೇಮಿನಿಂದ ಕೆಲವು ಪ್ರವಾದಿಗಳು ಅಂತಿಯೋಕ್ಯಕ್ಕೆ ಬಂದರು.
[28] ಅವರಲ್ಲೊಬ್ಬ ಅಗಬ ಎಂಬವನು ಪವಿತ್ರಾತ್ಮ ಪ್ರೇರಿತನಾಗಿ ಎದ್ದು ನಿಂತುಕೊಂಡು ಲೋಕಕ್ಕೆಲ್ಲಾ ಭೀಕರ ಕ್ಷಾಮ ಬರುವುದೆಂದು ತಿಳಿಸಿದನು. ಇದು ಕ್ಲೌದ್ಯನ ಆಳ್ವಿಕೆಯಲ್ಲಿ ಸಂಭವಿಸಿತು.
[29] ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ ಸಹಾಯ ಒದಗಿಸಲು ಅನುಕೂಲಸ್ಥರಾದ ಶಿಷ್ಯರು ತಮ್ಮ ಶಕ್ತ್ಯಾನುಸಾರ ಕೊಡಲು ನಿರ್ಧರಿಸಿದರು.
[30] ಇದಕ್ಕನುಗುಣವಾಗಿ ಬಾರ್ನಬ ಮತ್ತು ಸೌಲರ ಮುಖಾಂತರ ಹಿರಿಯರಿಗೆ ತಮ್ಮ ದೇಣಿಗೆಗಳನ್ನು ಕಳುಹಿಸಿದರು.