Skip to content
Opens in a new window
Listen to this chapter • 7:51

[1] ಪೌಲನು ದೆರ್ಬೆಗೂ ಲುಸ್ತ್ರಕ್ಕೂ ಬಂದನು. ಅಲ್ಲಿ, ತಿಮೊಥೆಯನೆಂಬ ಹೆಸರಿನ ಒಬ್ಬ ಶಿಷ್ಯನಿದ್ದನು. ಅವನ ತಾಯಿ ವಿಶ್ವಾಸಿಯಾಗಿದ್ದ ಯೆಹೂದ್ಯ ಸ್ತ್ರೀ. ಆದರೆ ಅವನ ತಂದೆ ಒಬ್ಬ ಗ್ರೀಕನಾಗಿದ್ದನು.

[2] ಲುಸ್ತ್ರ ಹಾಗೂ ಇಕೋನ್ಯಗಳಲ್ಲಿದ್ದ ಸಹೋದರರು ತಿಮೊಥೆಯನ ಬಗ್ಗೆ ಒಳ್ಳೆಯ ಸಾಕ್ಷಿ ಹೇಳುತ್ತಿದ್ದರು.

[3] ತಿಮೊಥೆಯನನ್ನು ಪೌಲನು ತನ್ನೊಂದಿಗೆ ಪ್ರಯಾಣದಲ್ಲಿ ಕರೆದುಕೊಂಡು ಹೋಗಬೇಕೆಂದು ಅಪೇಕ್ಷಿಸಿ, ಆ ಪ್ರದೇಶದಲ್ಲಿ ನೆಲೆಸಿದ ಯೆಹೂದ್ಯರ ನಿಮಿತ್ತ ತಿಮೊಥೆಯನಿಗೆ ಸುನ್ನತಿ ಮಾಡಿಸಿದನು. ಏಕೆಂದರೆ ಅವನ ತಂದೆ ಗ್ರೀಕನು ಎಂಬುದನ್ನು ಅವರೆಲ್ಲರೂ ತಿಳಿದಿದ್ದರು.

[4] ಅವರು ಪಟ್ಟಣಗಳಲ್ಲಿ ಪ್ರಯಾಣಮಾಡುತ್ತಿರುವಾಗ ಯೆರೂಸಲೇಮಿನಲ್ಲಿದ್ದ ಅಪೊಸ್ತಲರು, ಹಿರಿಯರು ತೆಗೆದುಕೊಂಡ ತೀರ್ಮಾನಗಳನ್ನು ಜನರು ಅನುಸರಿಸಿ ನಡೆಯುವಂತೆ ಅವರಿಗೆ ಬೋಧಿಸಿದರು.

[5] ಹೀಗೆ ಸಭೆಗಳು ವಿಶ್ವಾಸದಲ್ಲಿ ಬಲಗೊಂಡು ಸಂಖ್ಯೆಯಲ್ಲಿ ಅನುದಿನ ಹೆಚ್ಚುತ್ತಾ ಬಂದವು.

[6] ಏಷ್ಯಾ ಪ್ರಾಂತದಲ್ಲಿ ಸುವಾರ್ತೆ ಸಾರಬಾರದೆಂದು ಪವಿತ್ರಾತ್ಮ ತಡೆದದ್ದರಿಂದ ಪೌಲ ಮತ್ತು ಅವನ ಜೊತೆಯವರು ಫ್ರುಗ್ಯ ಹಾಗೂ ಗಲಾತ್ಯ ಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು.

[7] ಮೂಸ್ಯದ ಸೀಮೆಯನ್ನು ತಲುಪಿದಾಗ ಬಿಥೂನ್ಯವನ್ನು ಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಅನುಮತಿಸಲಿಲ್ಲ.

[8] ಆದ್ದರಿಂದ ಅವರು ಮೂಸ್ಯವನ್ನು ದಾಟಿ ತ್ರೋವಕ್ಕೆ ಬಂದರು.

[9] ಆ ರಾತ್ರಿಯಲ್ಲಿ ಪೌಲನಿಗೆ ಒಂದು ದರ್ಶನವಾಯಿತು. ಅದರಲ್ಲಿ ಮಕೆದೋನ್ಯದವನೊಬ್ಬನು ನಿಂತುಕೊಂಡು, “ಮಕೆದೋನ್ಯ ದಾಟಿ ಬಂದು ನಮಗೆ ಸಹಾಯಮಾಡು,” ಎಂದು ಅವನನ್ನು ಬೇಡಿಕೊಂಡನು.

[10] ಪೌಲನಿಗೆ ಈ ದರ್ಶನವಾದಾಗ ಆ ಜನರಿಗೆ ಸುವಾರ್ತೆ ಸಾರಲು ದೇವರು ನಮ್ಮನ್ನು ಕರೆಯುತ್ತಿದ್ದಾರೆಂದು ತಿಳಿದುಕೊಂಡು ಕೂಡಲೇ ಮಕೆದೋನ್ಯಕ್ಕೆ ಹೊರಡಲು ಸಿದ್ಧರಾದೆವು.

[11] ನಾವು ನೌಕೆ ಹತ್ತಿ ತ್ರೋವದಿಂದ ನೇರವಾಗಿ ಸಮೊಥ್ರಾಕೆಗೆ ಹೊರಟೆವು. ಮರುದಿನ ನೆಯಾಪೊಲಿಗೆ ತಲುಪಿದೆವು.

[12] ಅಲ್ಲಿಂದ ಮಕೆದೋನ್ಯ ಪ್ರಾಂತದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ಪ್ರವಾಸ ಸ್ಥಳವಾಗಿತ್ತು. ನಾವು ಆ ಪಟ್ಟಣದಲ್ಲಿ ಕೆಲವು ದಿನ ಉಳಿದುಕೊಂಡೆವು.

[13] ಪ್ರಾರ್ಥನೆಯ ಸ್ಥಳ ಸಿಕ್ಕಬಹುದೆಂದು ಭಾವಿಸಿ ಸಬ್ಬತ್ ದಿನದಂದು ಪಟ್ಟಣದ ದ್ವಾರದ ಹೊರಗಿದ್ದ ನದಿತೀರಕ್ಕೆ ಹೋದೆವು. ಅಲ್ಲಿ ಕುಳಿತುಕೊಂಡು ಕೂಡಿಬಂದಿದ್ದ ಮಹಿಳೆಯರೊಂದಿಗೆ ಮಾತನಾಡಲು ಪ್ರಾರಂಭಿಸಿದೆವು.

[14] ಅವರಲ್ಲಿ ಒಬ್ಬ ಮಹಿಳೆಯ ಹೆಸರು ಲುದ್ಯ ಎಂದಿತ್ತು. ಆಕೆ ಥುವತೈರ ಊರಿನವಳೂ ಕೆನ್ನೀಲಿ ಬಣ್ಣದ ಬಟ್ಟೆಗಳ ವ್ಯಾಪಾರಿಯೂ ದೇವರನ್ನು ಆರಾಧಿಸುವವಳೂ ಆಗಿದ್ದಳು. ಪೌಲನು ಹೇಳಿದ್ದನ್ನು ಲಕ್ಷ್ಯಕೊಡುವಂತೆ ಕರ್ತ ಯೇಸು ಆಕೆಯ ಹೃದಯವನ್ನು ತೆರೆದರು.

[15] ಆಕೆಯೂ ಆಕೆಯ ಮನೆಯವರೂ ದೀಕ್ಷಾಸ್ನಾನ ಹೊಂದಿದಾಗ, “ನಾನು ಕರ್ತ ಯೇಸುವಿಗೆ ನಂಬಿಗಸ್ತಳೆಂದು ನೀವು ತೀರ್ಮಾನಿಸಿಕೊಂಡರೆ, ಬಂದು ನನ್ನ ಮನೆಯಲ್ಲಿ ತಂಗಿರಿ,” ಎಂದು ನಮ್ಮನ್ನು ಒತ್ತಾಯ ಮಾಡಿದಳು.

[16] ಒಂದು ದಿನ ನಾವು ಪ್ರಾರ್ಥನೆಯ ಸ್ಥಳಕ್ಕೆ ಹೋಗುತ್ತಿದ್ದೆವು, ಆಗ ಭವಿಷ್ಯ ಹೇಳುವ ದುರಾತ್ಮವುಳ್ಳ ದಾಸಿಯೊಬ್ಬಳು ನಮ್ಮನ್ನು ಭೇಟಿಯಾದಳು. ಭವಿಷ್ಯ ಹೇಳುವುದರಿಂದ ಆಕೆ ತನ್ನ ಯಜಮಾನನಿಗೆ ಬಹಳ ಹಣ ಸಂಪಾದಿಸುತ್ತಿದ್ದಳು.

[17] ಅವಳು, “ಈ ಮನುಷ್ಯರು ಮಹೋನ್ನತ ದೇವರ ದಾಸರು. ರಕ್ಷಣೆಯ ಮಾರ್ಗವನ್ನು ನಿಮಗೆ ಸಾರುತ್ತಾರೆ,” ಎಂದು ಗಟ್ಟಿಯಾಗಿ ಕೂಗುತ್ತಾ ಪೌಲನ ಮತ್ತು ನಮ್ಮ ಹಿಂದೆಯೇ ಬಂದಳು.

[18] ಹೀಗೆ ಬಹಳ ದಿನ ಮಾಡುತ್ತಲೇ ಇದ್ದಳು. ಆದರೆ ಪೌಲನು ಬಹು ಬೇಸರಗೊಂಡು ಹಿಂದಿರುಗಿ ಆ ದುರಾತ್ಮಕ್ಕೆ, “ಇವಳನ್ನು ಈಗಲೇ ಬಿಟ್ಟು ಹೊರಗೆ ಬರಬೇಕೆಂದು ಕ್ರಿಸ್ತ ಯೇಸುವಿನ ಹೆಸರಿನಲ್ಲಿ ನಿನಗೆ ಅಪ್ಪಣೆ ಕೊಡುತ್ತೇನೆ,” ಎಂದು ಹೇಳಲು, ಅದೇ ಗಳಿಗೆಯಲ್ಲಿ ಆ ದುರಾತ್ಮವು ಆಕೆಯನ್ನು ಬಿಟ್ಟುಹೋಯಿತು.

[19] ಅವಳ ಯಜಮಾನರು ತಾವು ಹಣ ಸಂಪಾದಿಸುವ ನಿರೀಕ್ಷೆಯೇ ಹೋಯಿತೆಂದು ತಿಳಿದು, ಪೌಲ ಸೀಲರನ್ನು ಹಿಡಿದು ಸಂತೆಸ್ಥಳದಲ್ಲಿದ್ದ ಅಧಿಕಾರಿಗಳ ಮುಂದೆ ವಿಚಾರಣೆಗಾಗಿ ಎಳೆದುಕೊಂಡು ಹೋದರು.

[20] ಅವರನ್ನು ನ್ಯಾಯಾಧಿಪತಿಗಳ ಮುಂದೆ ನಿಲ್ಲಿಸಿ, “ಯೆಹೂದ್ಯರಾಗಿರುವ ಇವರು, ನಮ್ಮ ಪಟ್ಟಣದಲ್ಲಿ ಬಹು ಗಲಿಬಿಲಿ ಮಾಡುತ್ತಿದ್ದಾರೆ.

[21] ರೋಮನವರಾದ ನಾವು ಸ್ವೀಕರಿಸಲೂ ಇಲ್ಲವೆ ಅನುಸರಿಸಲೂ ಆಗದಂಥಾ ಆಚಾರಗಳನ್ನು ಪ್ರಕಟಿಸುತ್ತಿದ್ದಾರೆ,” ಎಂದರು.

[22] ಪೌಲ, ಸೀಲರಿಗೆ ವಿರೋಧವಾಗಿ ಜನಸಮೂಹವೆಲ್ಲಾ ಕೂಡಿಕೊಂಡಿತು. ನ್ಯಾಯಾಧಿಪತಿಗಳು ಪೌಲ, ಸೀಲರ ಬಟ್ಟೆಗಳನ್ನು ಕಿತ್ತುಹಾಕಿಸಿ ಛಡಿಗಳಿಂದ ಹೊಡೆಯಬೇಕೆಂದು ಆಜ್ಞಾಪಿಸಿದರು.

[23] ಅವರನ್ನು ಛಡಿ ಏಟುಗಳಿಂದ ಬಹಳವಾಗಿ ಥಳಿಸಿ ಸೆರೆಮನೆಗೆ ಹಾಕಲಾಯಿತು. ಅವರನ್ನು ಜಾಗರೂಕತೆಯಿಂದ ಕಾಯಬೇಕೆಂದು ಸೆರೆಮನೆಯ ಅಧಿಕಾರಿಗೆ ಆಜ್ಞಾಪಿಸಲಾಯಿತು.

[24] ಇಂಥಾ ಆಜ್ಞೆಯನ್ನು ಪಡೆದು, ಅವನು ಸೆರೆಮನೆಯ ಒಳಕೋಣೆಯಲ್ಲಿ ಅವರನ್ನು ಹಾಕಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಂಧಿಸಿದರು.

[25] ಸುಮಾರು ಮಧ್ಯರಾತ್ರಿಯಲ್ಲಿ ಪೌಲ, ಸೀಲರು ಪ್ರಾರ್ಥನೆ ಮಾಡುವವರಾಗಿ ಸ್ತುತಿಗೀತೆಯಿಂದ ದೇವರಿಗೆ ಸ್ತೋತ್ರ ಮಾಡುತ್ತಿದ್ದರು. ಸೆರೆಮನೆಯಲ್ಲಿ ಇತರ ಕೈದಿಗಳು ಅದನ್ನು ಆಲಿಸುತ್ತಿದ್ದರು.

[26] ಆಗ ತಕ್ಷಣವೇ ಭೀಕರವಾದ ಭೂಕಂಪವಾಗಿ ಸೆರೆಮನೆಯ ಅಸ್ತಿವಾರವು ಕದಲಿತು. ಕೂಡಲೇ ಸೆರೆಮನೆಯ ಎಲ್ಲಾ ಬಾಗಿಲುಗಳು ತೆರೆದವು. ಎಲ್ಲರನ್ನು ಬಂಧಿಸಿದ್ದ ಸರಪಣಿಗಳು ಸಡಿಲಗೊಂಡವು.

[27] ಸೆರೆಮನೆಯ ಅಧಿಕಾರಿ ಎಚ್ಚತ್ತುಕೊಂಡು, ಸೆರೆಮನೆಯ ಬಾಗಿಲುಗಳು ತೆರೆದಿರುವುದನ್ನು ಕಂಡು, ಸೆರೆಯಾಳುಗಳು ತಪ್ಪಿಸಿಕೊಂಡು ಹೋಗಿರಬಹುದೆಂದು ಭಾವಿಸಿ, ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು.

[28] ಆದರೆ ಪೌಲನು, “ನೀನು ಹಾನಿ ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲಿಯೇ ಇದ್ದೇವೆ,” ಎಂದು ಗಟ್ಟಿಯಾಗಿ ಕೂಗಿದನು.

[29] ಅವನು ದೀಪ ತರಬೇಕೆಂದು ಹೇಳಿ ಓಡಿಹೋಗಿ ಭಯದಿಂದ ನಡುಗುತ್ತಾ ಪೌಲ, ಸೀಲರ ಮುಂದೆ ಅಡ್ಡಬಿದ್ದನು.

[30] ಆಮೇಲೆ ಅವರನ್ನು ಹೊರಗೆ ಕರೆದುಕೊಂಡು ಬಂದು, “ಮಹನೀಯರೇ, ನಾನು ರಕ್ಷಣೆ ಹೊಂದಲು ಏನು ಮಾಡಬೇಕು?” ಎಂದನು.

[31] “ಕರ್ತ ಯೇಸುವಿನಲ್ಲಿ ವಿಶ್ವಾಸವನ್ನಿಡು. ನೀನು ರಕ್ಷಣೆ ಹೊಂದುವೆ, ನಿನ್ನ ಮನೆಯವರೂ ರಕ್ಷಣೆಹೊಂದುವರು,” ಎಂದರು.

[32] ಆಮೇಲೆ ಅವರು ಅವನಿಗೂ ಅವನ ಮನೆಯವರೆಲ್ಲರಿಗೂ ಕರ್ತ ಯೇಸುವಿನ ಸುವಾರ್ತೆಯನ್ನು ತಿಳಿಸಿದರು.

[33] ಆ ಅಧಿಕಾರಿ, ರಾತ್ರಿಯ ಅದೇ ಗಳಿಗೆಯಲ್ಲಿ ಪೌಲ, ಸೀಲರನ್ನು ಕರೆದುಕೊಂಡು ಹೋಗಿ, ಅವರ ಗಾಯಗಳನ್ನು ತೊಳೆದನು. ಆಮೇಲೆ ಅವನೂ ಅವನ ಮನೆಯವರೆಲ್ಲರೂ ದೀಕ್ಷಾಸ್ನಾನವನ್ನು ಹೊಂದಿದರು.

[34] ಸೆರೆಮನೆಯ ಅಧಿಕಾರಿ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಅವರಿಗೆ ಊಟಬಡಿಸಿದನು ಮತ್ತು ಅವನೂ ತನ್ನ ಮನೆಯವರೆಲ್ಲರೂ ದೇವರಲ್ಲಿ ವಿಶ್ವಾಸವಿಟ್ಟಿದ್ದಕ್ಕಾಗಿ ಉಲ್ಲಾಸಗೊಂಡನು.

[35] ಬೆಳಗಾದ ತರುವಾಯ ನ್ಯಾಯಾಧಿಪತಿಗಳು ತಮ್ಮ ಅಧಿಕಾರಿಗಳನ್ನು ಸೆರೆಮನೆಯ ಅಧಿಕಾರಿಯ ಬಳಿಗೆ ಕಳುಹಿಸಿ, “ಆ ಮನುಷ್ಯರನ್ನು ಬಿಡುಗಡೆಮಾಡು,” ಎಂದು ತಿಳಿಸಿದರು.

[36] ಸೆರೆಮನೆಯ ಅಧಿಕಾರಿ ಪೌಲನಿಗೆ, “ನಿನ್ನನ್ನು ಸೀಲನನ್ನು ಬಿಟ್ಟುಬಿಡಲು ನ್ಯಾಯಾಧಿಪತಿಗಳು ಕಳುಹಿಸಿದ್ದಾರೆ. ಈಗ ನೀವು ಸಮಾಧಾನದಿಂದ ಹೋಗಬಹುದು,” ಎಂದು ಪ್ರಕಟಿಸಿದನು.

[37] ಆದರೆ ಪೌಲನು ಅಧಿಕಾರಿಗಳಿಗೆ, “ನಾವು ರೋಮ್ ಪೌರರಾಗಿದ್ದು ಯಾವ ನ್ಯಾಯವಿಚಾರಣೆ ಮಾಡದೇ ಬಹಿರಂಗವಾಗಿ ನಮ್ಮನ್ನು ಛಡಿಯಿಂದ ಹೊಡೆಸಿ, ನಮ್ಮನ್ನು ಸೆರೆಮನೆಗೆ ತಳ್ಳಿದ್ದಾರೆ. ಈಗ ರಹಸ್ಯವಾಗಿ ನಮ್ಮನ್ನು ಕಳುಹಿಸಿಬಿಡಬೇಕೆಂದಿದ್ದಾರೋ? ಇಲ್ಲ, ಅವರು ತಾವೇ ಬಂದು ನಮ್ಮನ್ನು ಹೊರಗೆ ಕರೆದುಕೊಂಡು ಹೋಗಲಿ,” ಎಂದನು.

[38] ಅಧಿಕಾರಿಗಳು ಹೋಗಿ ಇದನ್ನು ನ್ಯಾಯಾಧಿಪತಿಗಳಿಗೆ ವರದಿಮಾಡಿದರು. ಪೌಲ, ಸೀಲರು ರೋಮ್ ಪೌರರೆಂದು ಕೇಳಿ ಅವರು ಗಾಬರಿಗೊಂಡರು.

[39] ಆದುದರಿಂದ ನ್ಯಾಯಾಧಿಪತಿಗಳು ಬಂದು ಶಾಂತಪಡಿಸಿ ಸೆರೆಮನೆಯಿಂದ ಅವರನ್ನು ಹೊರಗೆ ಕರೆದುಕೊಂಡು ಹೋಗಿ, ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

[40] ಪೌಲ, ಸೀಲರು ಸೆರೆಮನೆಯಿಂದ ಹೊರಗೆ ಬಂದ ಮೇಲೆ ಲುದ್ಯಳ ಮನೆಗೆ ಹೋಗಿ, ಅಲ್ಲಿ ಸಹೋದರರನ್ನು ಭೇಟಿಯಾಗಿ ಅವರನ್ನು ಪ್ರೋತ್ಸಾಹಿಸಿ, ಅಲ್ಲಿಂದ ಹೊರಟು ಹೋದರು.

ಅಪೊಸ್ತಲರ ಕೃತ್ಯಗಳು — Chapters