Skip to content
Opens in a new window
Listen to this chapter • 8:54

[1] ಪೆಂಟೆಕೋಸ್ಟ್ ಎಂಬ ಐವತ್ತನೆಯ ದಿನದ ಹಬ್ಬದಂದು, ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಂದಾಗಿ ಕೂಡಿ ಬಂದಿದ್ದರು.

[2] ಆಗ ಬೀಸುತ್ತಿರುವ ಬಿರುಗಾಳಿಯ ರಭಸವಾದ ಶಬ್ದವು ಫಕ್ಕನೆ ಪರಲೋಕದಿಂದ ಬಂದು ಅವರು ಕುಳಿತುಕೊಂಡಿದ್ದ ಮನೆಯನ್ನೆಲ್ಲಾ ತುಂಬಿಕೊಂಡಿತು.

[3] ಅಗ್ನಿ ಜ್ವಾಲೆಗಳು ಬೆಂಕಿಯ ನಾಲಿಗೆಗಳಂತೆ ವಿಂಗಡವಾಗಿ ಬಂದು ಪ್ರತಿಯೊಬ್ಬರ ಮೇಲೆ ಇಳಿಯುವುದನ್ನು ಅವರು ಕಂಡರು.

[4] ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಮಾತ್ರವಲ್ಲದೆ ಪವಿತ್ರಾತ್ಮ ದೇವರು ಕೊಟ್ಟ ಪ್ರೇರಣೆಯ ಪ್ರಕಾರ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡಲು ಪ್ರಾರಂಭಿಸಿದರು.

[5] ಆಗ ಜಗತ್ತಿನ ಪ್ರತಿಯೊಂದು ದೇಶದಿಂದಲೂ ಬಂದ ದೇವಭಕ್ತಿಯುಳ್ಳ ಯೆಹೂದ್ಯರು ಯೆರೂಸಲೇಮಿನಲ್ಲಿದ್ದರು.

[6] ಈ ಶಬ್ದ ಕೇಳಿದಾಗ, ಜನರ ಗುಂಪೊಂದು ಕೂಡಿಬಂದಿತು. ಬಂದವರೆಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿಯೇ ಆ ಶಿಷ್ಯರು ಮಾತಾಡುತ್ತಿರುವುದನ್ನು ಕೇಳಿ, ಆಶ್ಚರ್ಯಗೊಂಡರು.

[7] ಅವರು ಅತ್ಯಾಶ್ಚರ್ಯವುಳ್ಳವರಾಗಿ, “ಇಲ್ಲಿ ಮಾತನಾಡುತ್ತಿರುವವರೆಲ್ಲರೂ ಗಲಿಲಾಯದವರಲ್ಲವೇ?

[8] ನಾವೆಲ್ಲರೂ ನಮ್ಮ ನಮ್ಮ ಮಾತೃಭಾಷೆಗಳಲ್ಲಿಯೇ ಇವರು ಮಾತಾಡುತ್ತಿರುವುದನ್ನು ಕೇಳುತ್ತಿರುವುದು ಹೇಗೆ?

[9] ಪಾರ್ಥಿಯರು, ಮೇದ್ಯರು ಹಾಗೂ ಏಲಾಮ್ಯರು, ಮೆಸೊಪೊಟೇಮಿಯ, ಯೂದಾಯ, ಕಪ್ಪದೋಕ್ಯ, ಪೊಂತ, ಏಷ್ಯಾ,

[10] ಫ್ರುಗ್ಯ ಮತ್ತು ಪಂಫುಲ್ಯ, ಈಜಿಪ್ಟ್ ಹಾಗೂ ಕುರೇನೆದ ಹತ್ತಿರದ ಲಿಬ್ಯದ ಭಾಗಗಳ ನಿವಾಸಿಗಳು; ರೋಮ್ ಪಟ್ಟಣದಿಂದ ಬಂದ ಸಂದರ್ಶಕರು ಇಲ್ಲಿ ಬಂದಿದ್ದಾರೆ.

[11] ಇವರಲ್ಲದೆ, ಯೆಹೂದ್ಯರು ಮತ್ತು ಯೆಹೂದಿ ವಿಶ್ವಾಸಕ್ಕೆ ಬಂದಿದ್ದವರೂ ಇಲ್ಲಿದ್ದಾರೆ. ಅವರೊಂದಿಗೆ ಕ್ರೇತದವರು ಹಾಗೂ ಅರಬೀಯರು ನಮ್ಮ ಭಾಷೆಗಳಲ್ಲಿಯೇ ದೇವರ ಮಹತ್ಕಾರ್ಯಗಳನ್ನು ಹೇಳುತ್ತಿರುವದನ್ನು ಕೇಳುತ್ತಿದ್ದೇವಲ್ಲಾ!” ಎಂದು ಹೇಳಿದರು.

[12] ಅವರು ಆಶ್ಚರ್ಯದಿಂದಲೂ ಗಲಿಬಿಲಿಗೊಂಡವರಾಗಿಯೂ, “ಇದರ ಅರ್ಥವೇನು?” ಎಂದು ತಮ್ಮತಮ್ಮೊಳಗೆ ಪ್ರಶ್ನೆಮಾಡಿಕೊಂಡರು.

[13] ಆದರೆ, ಅವರಲ್ಲಿ ಕೆಲವರು, ಅವರ ಬಗ್ಗೆ ಹಾಸ್ಯಮಾಡುತ್ತಾ, “ಇವರು ಕುಡಿದು ಮತ್ತರಾಗಿದ್ದಾರೆ,” ಎಂದರು.

[14] ಆಗ ಹನ್ನೊಂದು ಜನರೊಂದಿಗೆ ಪೇತ್ರನು ಎದ್ದು ನಿಂತುಕೊಂಡು, ಜನಸಮೂಹವನ್ನು ಉದ್ದೇಶಿಸಿ ಹೇಳಿದ್ದೇನೆಂದರೆ: “ಯೆಹೂದ್ಯರೇ, ಯೆರೂಸಲೇಮಿನ ಸರ್ವನಿವಾಸಿಗಳೇ, ಇದರ ಬಗ್ಗೆ ನಾನು ವಿವರಿಸುತ್ತೇನೆ, ಕೇಳಿರಿ. ನಾನು ಹೇಳುವುದನ್ನು ಜಾಗರೂಕತೆಯಿಂದ ಆಲಿಸಿರಿ.

[15] ನೀವು ಊಹಿಸಿದಂತೆ, ಈ ಜನರು ಕುಡಿದು ಮತ್ತರಾಗಿಲ್ಲ. ಈಗ ಸಮಯ ಬೆಳಿಗ್ಗೆ ಒಂಬತ್ತು ಗಂಟೆ!

[16] ಇದು ಪ್ರವಾದಿ ಯೋವೇಲನ ಪ್ರವಾದನೆಯ ನೆರವೇರುವಿಕೆಯಾಗಿದೆ:

[17] “ದೇವರು ಹೇಳುವುದೇನೆಂದರೆ: ‘ಅಂತ್ಯ ದಿನಗಳಲ್ಲಿ ನನ್ನ ಆತ್ಮವನ್ನು ಎಲ್ಲಾ ಮನುಷ್ಯರ ಮೇಲೆ ಸುರಿಸುವೆನು, ನಿಮ್ಮ ಗಂಡು ಹೆಣ್ಣುಮಕ್ಕಳು ಪ್ರವಾದಿಸುವರು, ನಿಮ್ಮ ಯುವಜನರಿಗೆ ದರ್ಶನಗಳು ಕಾಣುವವು, ನಿಮ್ಮ ಹಿರಿಯರಿಗೆ ಕನಸುಗಳು ಬೀಳುವುವು.

[18] ಆ ದಿನಗಳಲ್ಲಿ, ನನ್ನ ದಾಸ ದಾಸಿಯರ ಮೇಲೆ, ನನ್ನ ಆತ್ಮವನ್ನು ಸುರಿಸುವೆನು, ಅವರು ಪ್ರವಾದಿಸುವರು.

[19] ನಾನು ಆಕಾಶದಲ್ಲಿ ಅದ್ಭುತಗಳನ್ನು, ಭೂಮಿಯಲ್ಲಿ ಸೂಚಕಕಾರ್ಯಗಳನ್ನು, ರಕ್ತ, ಬೆಂಕಿ, ಹಬೆಯನ್ನು ತೋರಿಸುವೆನು.

[20] ಕರ್ತದೇವರ ಮಹಿಮೆಯುಳ್ಳ ಮಹಾದಿನವೂ ಬರುವುದಕ್ಕೆ ಮೊದಲು ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.

[21] ಆಗ ಕರ್ತದೇವರ ಹೆಸರನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆ ಆಗುವುದು.’

[22] “ಇಸ್ರಾಯೇಲ್ ಜನರೇ, ಈ ವಿಷಯವನ್ನು ಕೇಳಿರಿ: ದೇವರು ನಜರೇತಿನ ಯೇಸುಸ್ವಾಮಿಯವರ ಮುಖಾಂತರ ನಿಮ್ಮ ಮಧ್ಯದಲ್ಲಿ ಅದ್ಭುತಕಾರ್ಯಗಳನ್ನೂ ಆಶ್ಚರ್ಯಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ನಡೆಸಿದ್ದರಿಂದ, ಯೇಸು ದೇವರ ಮೆಚ್ಚಿಕೆ ಪಡೆದವರಾಗಿದ್ದಾರೆಂಬುದನ್ನು, ನೀವೇ ತಿಳಿದಿರುವಿರಿ.

[23] ದೇವರು ತಾವು ಮುಂಚಿತವಾಗಿ ನಿರ್ಣಯಿಸಿದ ಪ್ರಕಾರವೂ ತಾವು ಮೊದಲೇ ತಿಳಿದಿರುವಂತೆ ದೇವರು ಯೇಸುವನ್ನು ತಾವಾಗಿಯೇ ನಿಮಗೆ ಒಪ್ಪಿಸಿಕೊಟ್ಟರು. ನೀವಾದರೋ ದುಷ್ಟರ ಸಹಾಯದಿಂದ ಯೇಸುವನ್ನು ಶಿಲುಬೆಗೆ ಹಾಕಿ ಕೊಲೆಮಾಡಿದಿರಿ.

[24] ಆದರೆ ದೇವರು ಯೇಸುವನ್ನು ಮರಣ ವೇದನೆಯಿಂದ ಬಿಡಿಸಿ ಜೀವಂತವಾಗಿ ಎಬ್ಬಿಸಿದರು. ಏಕೆಂದರೆ ಯೇಸುವನ್ನು ಹಿಡಿದಿಟ್ಟುಕೊಂಡಿರಲು ಮರಣಕ್ಕೆ ಸಾಧ್ಯವಾಗಲಿಲ್ಲ.

[25] ದಾವೀದನು ಯೇಸುಸ್ವಾಮಿಯವರ ಬಗ್ಗೆ ಹೀಗೆ ಹೇಳಿದ್ದಾನೆ: “ ‘ನಾನು ಕರ್ತದೇವರನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ. ನಾನು ಕದಲದಂತೆ ಕರ್ತದೇವರು ನನ್ನ ಬಲಗಡೆಯಲ್ಲಿದ್ದಾರೆ.

[26] ಆದ್ದರಿಂದ ನನ್ನ ಹೃದಯ ಹರ್ಷಿಸುವುದು, ನನ್ನ ನಾಲಿಗೆ ಉಲ್ಲಾಸಗೊಳ್ಳುವುದು; ನನ್ನ ಶರೀರವು ಸಹ ನಿರೀಕ್ಷೆಯಿಂದ ನೆಲೆಯಾಗಿರುವುದು.

[27] ಏಕೆಂದರೆ ನೀವು ನನ್ನ ಪ್ರಾಣವನ್ನು ಪಾತಾಳದಲ್ಲಿ ಬಿಟ್ಟುಬಿಡುವುದಿಲ್ಲ, ನಿಮ್ಮ ಪರಿಶುದ್ಧ ವ್ಯಕ್ತಿಯನ್ನು ಕೊಳೆಯುವಂತೆ ಬಿಡುವುದೇ ಇಲ್ಲ.

[28] ನೀವು ನನಗೆ ಜೀವಮಾರ್ಗಗಳನ್ನು ತಿಳಿಯಪಡಿಸಿರುವಿರಿ; ನಿಮ್ಮ ಸನ್ನಿಧಿಯಲ್ಲಿ ನನ್ನನ್ನು ಆನಂದಭರಿತನಾಗ ಮಾಡುವಿರಿ.’

[29] “ಪ್ರಿಯರೇ, ಮೂಲಪಿತೃ ದಾವೀದನು ಮರಣಹೊಂದಿದನು; ಸಮಾಧಿಮಾಡಲಾಯಿತು. ಇಂದಿಗೂ ಅವನ ಸಮಾಧಿ ನಮ್ಮಲ್ಲಿದೆ ಎಂಬುದನ್ನು ನಾನು ನಿಮಗೆ ಧೈರ್ಯದಿಂದ ಹೇಳಬಲ್ಲೆ.

[30] ಆದರೆ ಪ್ರವಾದಿಯಾಗಿದ್ದ ದಾವೀದನ ಸಂತತಿಯವರಲ್ಲಿ ಒಬ್ಬರನ್ನು ಅವನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು, ಎಂದು ಆಣೆಯಿಟ್ಟು ದೇವರು ವಾಗ್ದಾನ ಮಾಡಿದ್ದನ್ನು ದಾವೀದನು ತಿಳಿದಿದ್ದನು.

[31] ದಾವೀದನು ಕ್ರಿಸ್ತ ಯೇಸುವಿನ ಪುನರುತ್ಥಾನದ ಬಗ್ಗೆ ಮುಂಚಿತವಾಗಿಯೇ ನೋಡಿ, ಹೀಗೆ ಮಾತನಾಡಿದನು: ‘ಅವರನ್ನು ಪಾತಾಳದಲ್ಲಿಯೇ ಬಿಡಲಿಲ್ಲ; ಅವರ ದೇಹವು ಕೊಳೆಯುವ ಅವಸ್ಥೆಯನ್ನು ಕಾಣಲಿಲ್ಲ.’

[32] ದೇವರು ಈ ಯೇಸುವನ್ನೇ ಮರಣದಿಂದ ಎಬ್ಬಿಸಿದರು. ಇದಕ್ಕೆ ನಾವೆಲ್ಲರೂ ಸಾಕ್ಷಿಗಳು.

[33] ಆದ್ದರಿಂದ ಯೇಸು ದೇವರ ಬಲಗಡೆಗೆ ಏರಿಹೋಗಿ ವಾಗ್ದಾನಮಾಡಿದ ಪವಿತ್ರಾತ್ಮ ದೇವರನ್ನು ತಂದೆಯಿಂದ ಪಡೆದುಕೊಂಡರು. ಈಗ ನೀವು ಕಂಡು ಕೇಳಿರುವ ಆ ಪವಿತ್ರಾತ್ಮ ವರವನ್ನು ಯೇಸುವೇ ಇವರ ಮೇಲೆ ಸುರಿಸಿದ್ದಾರೆ.

[34] ದಾವೀದನು ಪರಲೋಕಕ್ಕೆ ಏರಿಹೋಗಲಿಲ್ಲವಾದರೂ ಹೀಗೆ ಹೇಳಿದ್ದಾನೆ: “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು

[35] ನಿನ್ನ ಪಾದಗಳ ಪೀಠವಾಗಿ ಮಾಡುವವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕುಳಿತುಕೊಂಡಿರು.” ’

[36] “ಆದ್ದರಿಂದ ನೀವು ಶಿಲುಬೆಗೇರಿಸಿದ ಈ ಯೇಸುವನ್ನೇ ದೇವರು ಕರ್ತ ಹಾಗೂ ಕ್ರಿಸ್ತ ಆಗಿಯೂ ಮಾಡಿದ್ದಾರೆ ಎಂಬುದು ಎಲ್ಲಾ ಇಸ್ರಾಯೇಲ್ ಮನೆತನದವರಿಗೆ ಸ್ಪಷ್ಟವಾಗಿ ತಿಳಿದಿರಲಿ,” ಎಂದನು.

[37] ಜನರು ಇದನ್ನು ಕೇಳಿದಾಗ ಅವರಿಗೆ ಹೃದಯದಲ್ಲಿ ಅಲಗು ನೆಟ್ಟಂತಾಗಿ, “ಸಹೋದರರೇ, ನಾವೇನು ಮಾಡಬೇಕು?” ಎಂದು ಪೇತ್ರನನ್ನೂ ಉಳಿದ ಅಪೊಸ್ತಲರನ್ನೂ ಕೇಳಿದರು.

[38] ಅದಕ್ಕೆ ಪೇತ್ರನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಪಶ್ಚಾತ್ತಾಪಪಟ್ಟು, ನಿಮ್ಮ ಪಾಪಗಳ ಕ್ಷಮೆಗಾಗಿ ಕ್ರಿಸ್ತ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಳ್ಳಿರಿ. ಆಗ ನೀವು ಪವಿತ್ರಾತ್ಮ ವರವನ್ನು ಪಡೆದುಕೊಳ್ಳುವಿರಿ.

[39] ಈ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರ ಇರುವ ಎಲ್ಲರಿಗೂ ನಮ್ಮ ಕರ್ತದೇವರು ತಮ್ಮ ಕಡೆಗೆ ಕರೆಯುವ ಎಲ್ಲರಿಗಾಗಿಯೂ ಇರುವುದು,” ಎಂದನು.

[40] ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, ಸಾಕ್ಷಿ ನುಡಿದು, “ಈ ಕೆಟ್ಟ ಸಂತತಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿರಿ,” ಎಂದು ಹೇಳಿದನು.

[41] ಪೇತ್ರನ ಸಂದೇಶವನ್ನು ಸ್ವೀಕರಿಸಿದವರು ದೀಕ್ಷಾಸ್ನಾನ ಪಡೆದರು. ಆ ದಿನ ಸುಮಾರು ಮೂರು ಸಾವಿರ ಜನರು ಅವರೊಂದಿಗೆ ಸೇರಿದರು.

[42] ಅವರೆಲ್ಲರು ಅಪೊಸ್ತಲರ ಬೋಧನೆಯಲ್ಲಿ, ಅನ್ಯೋನ್ಯತೆಯಲ್ಲಿ, ರೊಟ್ಟಿ ಮುರಿಯುವುದರಲ್ಲಿ, ಪ್ರಾರ್ಥನೆ ಮಾಡುವುದರಲ್ಲಿ ತಮ್ಮನ್ನು ಸಮರ್ಪಿಸಿಕೊಂಡು,

[43] ಪ್ರತಿಯೊಬ್ಬರೂ ಭಯಭಕ್ತಿಉಳ್ಳವರಾಗಿದ್ದರು. ಅಪೊಸ್ತಲರು ಅನೇಕ ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದರು.

[44] ವಿಶ್ವಾಸಿಗಳೆಲ್ಲರೂ ಒಟ್ಟಾಗಿದ್ದು, ತಮ್ಮಲ್ಲಿರುವ ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು.

[45] ಅವರು ಆಸ್ತಿಪಾಸ್ತಿಯನ್ನು ಮಾರಿ ಅವರವರ ಅವಶ್ಯಕತೆಗೆ ಅನುಸಾರವಾಗಿ ಎಲ್ಲರಿಗೂ ಹಂಚುತ್ತಿದ್ದರು.

[46] ಪ್ರತಿದಿನವೂ ದೇವಾಲಯದಲ್ಲಿ ಒಮ್ಮನಸ್ಸಿನಿಂದ ಸಭೆ ಕೂಡಿಬರುವುದನ್ನು ಕ್ರಮವಾಗಿ ಮುಂದುವರೆಸಿದರು. ತಮ್ಮ ಮನೆಗಳಲ್ಲಿ ರೊಟ್ಟಿ ಮುರಿಯುತ್ತಾ ಆನಂದದಿಂದಲೂ ಸರಳ ಹೃದಯದಿಂದಲೂ ಊಟಮಾಡುತ್ತಿದ್ದರು.

[47] ಅವರು ದೇವರಿಗೆ ಸ್ತೋತ್ರ ಮಾಡುತ್ತಾ, ಜನರೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ರಕ್ಷಣೆ ಹೊಂದಿದವರನ್ನು ಕರ್ತ ಯೇಸುವು ಪ್ರತಿದಿನವೂ ಅವರೊಂದಿಗೆ ಸೇರಿಸುತ್ತಿದ್ದರು.

ಅಪೊಸ್ತಲರ ಕೃತ್ಯಗಳು — Chapters