Skip to content
Opens in a new window
Listen to this chapter • 5:41

[1] ಫರಿಸಾಯರಲ್ಲಿ ಯೆಹೂದ್ಯರ ಹಿರೀಸಭೆಯವನಾದ ನಿಕೊದೇಮನೆಂಬ ಒಬ್ಬ ಮನುಷ್ಯನಿದ್ದನು.

[2] ಅವನು ರಾತ್ರಿಯಲ್ಲಿ ಯೇಸುವಿನ ಬಳಿಗೆ ಬಂದು ಆತನಿಗೆ, “ಗುರುವೇ, ನೀನು ದೇವರ ಬಳಿಯಿಂದ ಬಂದ ಬೋಧಕನೆಂದು ನಾವು ಬಲ್ಲೆವು. ನೀನು ಮಾಡುವಂಥ ಈ ಸೂಚಕ ಕಾರ್ಯಗಳನ್ನು ದೇವರ ಸಹಾಯವಿಲ್ಲದೆ ಮಾಡುವುದು ಯಾರಿಂದಲೂ ಆಗದು” ಎಂದು ಹೇಳಿದನು.

[3] ಯೇಸು ಅವನಿಗೆ, “ನಾನು ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು,” ಎಂದು ಉತ್ತರ ಕೊಟ್ಟನು.

[4] ನಿಕೊದೇಮನು ಆತನನ್ನು, “ಮನುಷ್ಯನು ಮುದುಕನಾದ ಮೇಲೆ ತಿರುಗಿ ಹುಟ್ಟುವುದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ಎರಡನೆಯ ಸಾರಿ ಪ್ರವೇಶಿಸಿ ಹುಟ್ಟುವುದಕ್ಕಾದೀತೇ?” ಎಂದು ಕೇಳಿದನು.

[5] ಅದಕ್ಕೆ ಯೇಸು “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಮತ್ತು ಆತ್ಮನಿಂದಲೂ ಹುಟ್ಟದಿದ್ದರೆ ಅವನು ದೇವರ ರಾಜ್ಯದಲ್ಲಿ ಪ್ರವೇಶಿಸಲಾರನು.

[6] ದೇಹದಿಂದ ಹುಟ್ಟಿದ್ದು ದೇಹವೇ, ಆತ್ಮನಿಂದ ಹುಟ್ಟಿದ್ದು ಆತ್ಮವೇ.

[7] ‘ನೀವು ಹೊಸದಾಗಿ ಹುಟ್ಟಬೇಕು’ ಎಂದು ನಾನು ನಿನಗೆ ಹೇಳಿದ್ದರಿಂದ ಆಶ್ಚರ್ಯಪಡಬೇಡ

[8] ಗಾಳಿಯು ಇಷ್ಟ ಬಂದ ಕಡೆ ಬೀಸುತ್ತದೆ. ನೀನು ಅದರ ಶಬ್ದವನ್ನು ಕೇಳುತ್ತೀ, ಆದರೆ ಅದು ಎಲ್ಲಿಂದ ಬರುತ್ತದೋ ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದವರೆಲ್ಲರೂ ಅದರಂತೆಯೇ” ಎಂದನು.

[9] ಅದಕ್ಕೆ ನಿಕೊದೇಮನು “ಇದೆಲ್ಲಾ ಹೇಗೆ ಸಾಧ್ಯ?” ಎಂದಾಗ,

[10] ಯೇಸು ಅವನಿಗೆ ಹೇಳಿದ್ದೇನಂದರೆ, “ಇಸ್ರಾಯೇಲರಿಗೆ ಬೋಧಕನಾಗಿರುವ ನಿನಗೆ ಈ ಸಂಗತಿಗಳು ತಿಳಿಯುವುದಿಲ್ಲವೋ?

[11] ನಿನಗೆ ನಿಜನಿಜವಾಗಿ ಹೇಳುತ್ತೇನೆ, ನಾವು ತಿಳಿದಿರುವುದನ್ನು ಮಾತನಾಡುತ್ತೇವೆ ಮತ್ತು ನೋಡಿದ್ದಕ್ಕೆ ಸಾಕ್ಷಿ ಕೊಡುತ್ತೇವೆ. ಆದರೂ ನೀವು ನಮ್ಮ ಸಾಕ್ಷಿಯನ್ನು ಸ್ವೀಕರಿಸುವುದಿಲ್ಲ.

[12] ನಾನು ಭೂಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ನೀವು ನಂಬುವುದಿಲ್ಲ, ಪರಲೋಕದ ಕಾರ್ಯಗಳನ್ನು ಕುರಿತು ನಿಮಗೆ ಹೇಳಿದರೆ ಹೇಗೆ ನಂಬುವಿರಿ?

[13] ಪರಲೋಕದಿಂದ ಇಳಿದು ಬಂದವನೇ, ಅಂದರೆ, ಮನುಷ್ಯಕುಮಾರನೇ ಹೊರತು ಮತ್ತಾರು ಪರಲೋಕಕ್ಕೆ ಏರಿ ಹೋದವರಿಲ್ಲ.

[14] ಇದಲ್ಲದೆ ಮೋಶೆಯು ಅಡವಿಯಲ್ಲಿ ಕಂಚಿನ ಸರ್ಪವನ್ನು ಮೇಲೆ ಎತ್ತಿ ನಿಲ್ಲಿಸಿದ ಹಾಗೆಯೇ ಮನುಷ್ಯಕುಮಾರನು ಸಹ ಮೇಲಕ್ಕೆ ಎತ್ತಲ್ಪಡಬೇಕು.

[15] ಹೀಗೆ ಆತನನ್ನು ನಂಬುವವರೆಲ್ಲರೂ ನಿತ್ಯಜೀವವನ್ನು ಹೊಂದುವರು.

[16] “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.

[17] ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ಅಪರಾಧಿಯೆಂದು ಖಂಡಿಸಲಿಕ್ಕೆ ಕಳುಹಿಸಲಿಲ್ಲ.

[18] ಆತನನ್ನು ನಂಬುವವನಿಗೆ ನ್ಯಾಯತೀರ್ಪು ಆಗುವುದಿಲ್ಲ, ಆದರೆ ನಂಬದವನಿಗೆ ಆಗಲೇ ತೀರ್ಪಾಯಿತು. ಏಕೆಂದರೆ, ಅವನು ದೇವರ ಒಬ್ಬನೇ ಮಗನ ಹೆಸರಿನ ಮೇಲೆ ನಂಬಿಕೆ ಇಡಲಿಲ್ಲ.

[19] ಆ ತೀರ್ಪು ಏನೆಂದರೆ ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವುದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಪ್ರೀತಿಸಿದರು.

[20] ಕೆಟ್ಟದ್ದನ್ನು ಮಾಡುವವರು ತಮ್ಮ ದುಷ್ಕೃತ್ಯಗಳು ಬಹಿರಂಗವಾಗಬಾರದೆಂದು ಬೆಳಕಿಗೆ ಬರುವುದಿಲ್ಲ ಮತ್ತು ಬೆಳಕನ್ನು ದ್ವೇಷಿಸುತ್ತಾರೆ.

[21] ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ಬಂದವನಾಗಿ ತನ್ನ ಕೃತ್ಯಗಳನ್ನು ಪ್ರಕಟಪಡಿಸುವುದಕ್ಕಾಗಿ ಬೆಳಕಿಗೆ ಬರುತ್ತಾನೆ.”

[22] ಆ ಮೇಲೆ ಯೇಸು ತನ್ನ ಶಿಷ್ಯರೊಡನೆ ಯೂದಾಯ ದೇಶಕ್ಕೆ ಬಂದು ಅಲ್ಲಿ ಅವರ ಜೊತೆ ಇದ್ದು, ದೀಕ್ಷಾಸ್ನಾನ ಕೊಡುತ್ತಿದ್ದನು.

[23] ಇದಲ್ಲದೆ ಯೋಹಾನನೂ ಸಹ ಸಾಲಿಮ್ ಎಂಬ ಊರಿಗೆ ಹತ್ತಿರವಿರುವ ಐನೋನೆಂಬ ಸ್ಥಳದಲ್ಲಿದ್ದು ದೀಕ್ಷಾಸ್ನಾನ ಕೊಡುತ್ತಿದ್ದನು, ಏಕೆಂದರೆ, ಅಲ್ಲಿ ಬಹಳ ನೀರಿತ್ತು. ಜನರು ಬಂದು ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.

[24] ಆಗ ಇನ್ನೂ ಯೋಹಾನನ್ನು ಸೆರೆಮನೆಯಲ್ಲಿ ಹಾಕಿರಲಿಲ್ಲ.

[25] ಹೀಗಿರಲಾಗಿ ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಒಬ್ಬ ಯೆಹೂದ್ಯನಿಗೂ ಶುದ್ಧಾಚಾರವನ್ನು ಕುರಿತು ವಾದ ಉಂಟಾಯಿತು.

[26] ಆಗ ಅವರು ಯೋಹಾನನ ಬಳಿಗೆ ಬಂದು ಅವನಿಗೆ “ಗುರುವೇ, ಯೊರ್ದನ್ ನದಿಯ ಆಚೆ ನಿನ್ನ ಬಳಿಯಲ್ಲಿದ್ದ ಒಬ್ಬನ ವಿಷಯದಲ್ಲಿ ನೀನು ಸಾಕ್ಷಿ ಕೊಟ್ಟೆಯಲ್ಲಾ, ಇಗೋ, ಆತನು ದೀಕ್ಷಾಸ್ನಾನ ಕೊಡುತ್ತಿದ್ದಾನೆ, ಆತನ ಬಳಿಗೆ ಎಲ್ಲರೂ ಹೋಗುತ್ತಿದ್ದಾರೆ.” ಎಂದು ಹೇಳಲು

[27] ಯೋಹಾನನು “ಪರಲೋಕದಿಂದ ಅನುಗ್ರಹಿಸದ ಹೊರತು ಮನುಷ್ಯನು ಏನ್ನನ್ನೂ ಹೊಂದಲಾರನು.

[28] ‘ನಾನು ಕ್ರಿಸ್ತನಲ್ಲ,’ ಆದರೆ ‘ಆತನಿಗೆ ಮುಂದಾಗಿ ಕಳುಹಿಸಲ್ಪಟ್ಟವನಾಗಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ.

[29] ಮದಲಗಿತ್ತಿಯುಳ್ಳವನೇ ಮದಲಿಂಗನು. ಆದರೂ ಮದಲಿಂಗನ ಗೆಳೆಯನು ಅವನ ಹತ್ತಿರ ನಿಂತುಕೊಂಡು ಅವನ ಮಾತುಗಳನ್ನು ಕೇಳಿ ಮದಲಿಂಗನ ಧ್ವನಿಗೆ ಬಹು ಸಂತೋಷಪಡುತ್ತಾನಲ್ಲವೇ. ಆದಕಾರಣ ಈ ನನ್ನ ಸಂತೋಷವು ಪರಿಪೂರ್ಣವಾಯಿತು.

[30] ಆತನು ವೃದ್ಧಿಯಾಗಬೇಕು ನಾನು ಕಡಿಮೆಯಾಗಬೇಕು, ಅಂದನು.

[31] ಮೇಲಿನಿಂದ ಬರುವವನು ಎಲ್ಲರಿಗಿಂತಲೂ ಮೇಲಾದವನು, ಭೂಲೋಕದಿಂದ ಹುಟ್ಟಿದವನು ಭೂಲೋಕದವನಾಗಿದ್ದು ಭೂಲೋಕಕ್ಕೆ ಸಂಬಂಧಿಸಿದ ಮಾತುಗಳನ್ನು ಆಡುತ್ತಾನೆ. ಪರಲೋಕದಿಂದ ಬರುವವನು ಎಲ್ಲವುಗಳಿಗಿಂತಲೂ ಮೇಲಾದವನು.

[32] ತಾನು ಕಂಡು ಕೇಳಿದ್ದಕ್ಕೆ ಸಾಕ್ಷಿ ಕೊಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಯಾರೂ ಸ್ವೀಕರಿಸುವುದಿಲ್ಲ.

[33] ಆತನ ಸಾಕ್ಷಿಯನ್ನು ಸ್ವೀಕರಿಸಿದವನು ದೇವರು ಸತ್ಯವಂತನೆಂದು ದೃಢಪಡಿಸುವವನಾಗಿದ್ದಾನೆ.

[34] ಹೇಗೆಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮ ವರವನ್ನು ಅಳತೆಮಾಡದೆ ಧಾರಾಳವಾಗಿ ಅನುಗ್ರಹಿಸುವುದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ.

[35] ತಂದೆಯಾದ ದೇವರು ತನ್ನ ಮಗನನ್ನು ಪ್ರೀತಿಸಿ ಎಲ್ಲವನ್ನೂ ಆತನ ಕೈಯಲ್ಲಿ ಕೊಟ್ಟಿದ್ದಾನೆ.

[36] ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು. ಮಗನಿಗೆ ಅವಿಧೇಯನಾಗುವವನು ಜೀವವನ್ನು ಕಾಣುವುದೇ ಇಲ್ಲ. ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು.”

ಯೋಹಾನನು — Chapters