[1] ಯೇಸು ಹಾದು ಹೋಗುತ್ತಿದ್ದಾಗ, ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನನ್ನು ಕಂಡನು.
[2] ಆತನ ಶಿಷ್ಯರು, “ಗುರುವೇ, ಇವನು ಕುರುಡನಾಗಿ ಹುಟ್ಟಿರುವುದಕ್ಕೆ ಯಾರು ಪಾಪಮಾಡಿದರು? ಇವನೋ ಅಥವಾ ಇವನ ತಂದೆತಾಯಿಗಳೋ?” ಎಂದು ಆತನನ್ನು ಕೇಳಿದರು.
[3] ಯೇಸು, “ಇವನಾಗಲಿ ಇವನ ತಂದೆತಾಯಿಗಳಾಗಲಿ ಪಾಪ ಮಾಡಲಿಲ್ಲ. ಆದರೆ ದೇವರ ಕ್ರಿಯೆಗಳು ಇವನಲ್ಲಿ ತೋರಿಬರುವುದಕ್ಕಾಗಿ ಹೀಗಾಯಿತು.
[4] ನನ್ನನ್ನು ಕಳುಹಿಸಿದಾತನ ಕ್ರಿಯೆಗಳನ್ನು ನಾವು ಹಗಲಿರುವಾಗಲೇ ಮಾಡಬೇಕು. ರಾತ್ರಿ ಬರುತ್ತದೆ, ಅದು ಬಂದಾಗ ಯಾರೂ ಕೆಲಸ ಮಾಡಲಾರರು.
[5] ನಾನು ಲೋಕದಲ್ಲಿರುವಾಗ ಲೋಕಕ್ಕೆ ಬೆಳಕಾಗಿದ್ದೇನೆ” ಎಂದನು.
[6] ಆತನು ಹೀಗೆ ಹೇಳಿ ನೆಲದ ಮೇಲೆ ಉಗುಳಿ ಆ ಉಗುಳಿನಿಂದ ಕೆಸರು ಮಾಡಿ, ಆ ಕೆಸರನ್ನು ಕುರುಡನ ಕಣ್ಣುಗಳಿಗೆ ಹಚ್ಚಿದನು.
[7] ಆತನು ಅವನಿಗೆ, “ನೀನು ಹೋಗಿ ಸಿಲೋವ (ಸಿಲೋವ ಎಂದರೆ ‘ಕಳುಹಿಸಲ್ಪಟ್ಟವನು’ ಎಂದರ್ಥ) ಕೊಳದಲ್ಲಿ ತೊಳೆದುಕೋ” ಎಂದನು. ಅವನು ಹೋಗಿ ತೊಳೆದುಕೊಂಡು ದೃಷ್ಟಿಯುಳ್ಳವನಾಗಿ ಬಂದನು.
[8] ಆಗ ನೆರೆಹೊರೆಯವರು ಅವನು ಮೊದಲು ಭಿಕ್ಷುಕನಾಗಿದ್ದಾಗ ಅವನನ್ನು ನೋಡಿದ್ದವರೂ, “ಭಿಕ್ಷೆಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೇ?” ಎಂದು ವಿಚಾರಿಸಿದರು.
[9] ಕೆಲವರು, “ಹೌದು ಇವನೇ” ಎಂದರು. ಇನ್ನೂ ಕೆಲವರು, “ಅವನಲ್ಲ ಆದರೆ ಅವನ ಹಾಗೆ ಇದ್ದಾನೆ” ಎಂದರು. ಆದರೆ ಅವನಾದರೋ, “ನಾನೇ ಅವನು” ಎಂದು ಹೇಳಿದನು.
[10] ಆಗ ಅವರು “ಹಾಗಾದರೆ ನಿನ್ನ ಕಣ್ಣು ಹೇಗೆ ತೆರೆದವು?” ಎಂದು ಅವನನ್ನು ಕೇಳಿದ್ದಕ್ಕೆ,
[11] ಅವನು, “ಯೇಸು ಎಂಬ ಹೆಸರುಳ್ಳ ಮನುಷ್ಯನು ಮಣ್ಣಿನಲ್ಲಿ ಕೆಸರು ಮಾಡಿ ನನ್ನ ಕಣ್ಣಿಗೆ ಹಚ್ಚಿ ನನಗೆ, ‘ಸಿಲೋವ ಕೊಳಕ್ಕೆ ಹೋಗಿ ತೊಳೆದುಕೋ’ ಎಂದು ಹೇಳಿದನು. ಅದರಂತೆ ನಾನು ಹೋಗಿ ತೊಳೆದುಕೊಂಡೆನು. ಆಗ ನನಗೆ ದೃಷ್ಟಿ ಬಂತು” ಎಂದನು.
[12] ಅವರು, “ಆತನು ಎಲ್ಲಿದ್ದಾನೆ?” ಎಂದು ಅವನನ್ನು ಕೇಳಿದ್ದಕ್ಕೆ, ಅವನು “ನನಗೆ ಗೊತ್ತಿಲ್ಲ” ಎಂದನು.
[13] ಜನರು ಮೊದಲು ಆ ಕುರುಡನಾಗಿದ್ದವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಬಂದರು.
[14] ಯೇಸು ಕೆಸರು ಮಾಡಿ ಅವನಿಗೆ ದೃಷ್ಟಿ ಕೊಟ್ಟ ದಿನವು ಸಬ್ಬತ್ ದಿನವಾಗಿತ್ತು.
[15] ಆದಕಾರಣ ಆ ಫರಿಸಾಯರು ಸಹ ಅವನನ್ನು ವಿಚಾರಿಸಿ ನಿನಗೆ ಹೇಗೆ ದೃಷ್ಟಿ ಬಂದಿತು ಎಂದು ಪುನಃ ಕೇಳಿದರು. ಅವನು ಅವರಿಗೆ, “ಅವನು ಕೆಸರನ್ನು ನನ್ನ ಕಣ್ಣಿನ ಮೇಲೆ ಇಟ್ಟನು, ನಾನು ತೊಳೆದುಕೊಂಡೆನು, ನನಗೆ ದೃಷ್ಟಿ ಬಂದಿತು” ಎಂದು ಉತ್ತರಕೊಟ್ಟನು.
[16] ಫರಿಸಾಯರಲ್ಲಿ ಕೆಲವರು, “ಈ ಮನುಷ್ಯನು ದೇವರಿಂದ ಬಂದವನಲ್ಲ, ಏಕೆಂದರೆ ಆತನು ಸಬ್ಬತ್ ದಿನವನ್ನು ಆಚರಿಸುವುದಿಲ್ಲ” ಎಂದರು. ಇನ್ನು ಕೆಲವರು, “ಇಂಥಾ ಮಹತ್ಕಾರ್ಯಗಳನ್ನು ಮಾಡುವುದು ಪಾಪಿಯಾದ ಮನುಷ್ಯನಿಂದ ಹೇಗಾದೀತು?” ಎಂದರು. ಹೀಗೆ ಅವರಲ್ಲಿ ಭೇದವುಂಟಾಯಿತು.
[17] ಹೀಗಿರಲಾಗಿ ಅವರು ಪುನಃ ಆ ಕುರುಡನನ್ನು, “ಆತನು ನಿನಗೆ ದೃಷ್ಟಿ ಕೊಟ್ಟದ್ದರಿಂದ ನೀನು ಆತನ ವಿಷಯವಾಗಿ ಏನು ಹೇಳುತ್ತೀ?” ಎಂದು ಕೇಳಿದಾಗ, ಅವನು “ಆತನು ಒಬ್ಬ ಪ್ರವಾದಿ” ಎಂದು ಉತ್ತರಕೊಟ್ಟನು.
[18] ಆದರೆ ದೃಷ್ಟಿ ಹೊಂದಿದವನ ವಿಷಯವಾಗಿ ಆ ಯೆಹೂದ್ಯರು; ಅವನ ತಂದೆತಾಯಿಗಳನ್ನು ಕರೆದು ವಿಚಾರಿಸುವವರೆಗೂ, ಅವನು ಹುಟ್ಟು ಕುರುಡನಾಗಿದ್ದು, ಈಗ ದೃಷ್ಟಿ ಹೊಂದಿದ್ದಾನೆಂಬುದನ್ನು ನಂಬಲಿಲ್ಲ.
[19] ಅವರು “ಕುರುಡನಾಗಿ ಹುಟ್ಟಿದನೆಂದು ನೀವು ಹೇಳುವ ನಿಮ್ಮ ಮಗನು ಇವನೋ? ಹಾಗಾದರೆ ಈಗ ಇವನಿಗೆ ಹೇಗೆ ದೃಷ್ಟಿ ಬಂದಿತು?” ಎಂದು ಅವರನ್ನು ಕೇಳಿದರು.
[20] ಅವನ ತಂದೆ ತಾಯಿಗಳು, “ಇವನು ನಮ್ಮ ಮಗನೆಂದೂ ಕುರುಡನಾಗಿ ಹುಟ್ಟಿದನೆಂದೂ ಬಲ್ಲೆವು.
[21] ಈಗ ಇವನು ನೋಡುವುದು ಹೇಗೆಂದು ನಮಗೆ ಗೊತ್ತಿಲ್ಲ. ಯಾರು ಇವನ ಕಣ್ಣುಗಳನ್ನು ತೆರೆದರೋ ನಮಗೆ ಗೊತ್ತಿಲ್ಲ, ಇವನನ್ನೇ ಕೇಳಿರಿ. ಇವನು ಪ್ರಾಯದವನಾಗಿದ್ದಾನಲ್ಲಾ, ಇವನೇ ತನ್ನ ವಿಷಯವಾಗಿ ಹೇಳುವನು” ಎಂದು ಉತ್ತರಕೊಟ್ಟರು.
[22] ಅವನ ತಂದೆ ತಾಯಿಗಳು ಯೆಹೂದ್ಯರಿಗೆ ಭಯಪಟ್ಟದ್ದರಿಂದ ಹೀಗೆ ಹೇಳಿದರು. ಏಕೆಂದರೆ ಯಾರಾದರೂ ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡರೆ ಅವನನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕೆಂದು ಯೆಹೂದ್ಯರು ಆಗಲೇ ತೀರ್ಮಾನಿಸಿಕೊಂಡಿದ್ದರು.
[23] “ಇವನು ಪ್ರಾಯದವನು ಇವನನ್ನೇ ಕೇಳಿರಿ” ಎಂದು ಅವನ ತಂದೆತಾಯಿಗಳು ಹೇಳಿದ್ದಕ್ಕೆ ಇದೇ ಕಾರಣ.
[24] ಆದಕಾರಣ ಅವರು ಕುರುಡನಾಗಿದ್ದ ಆ ಮನುಷ್ಯನನ್ನು ಎರಡನೆಯ ಸಾರಿ ಕರೆದು, “ನೀನು ದೇವರಿಗೆ ಗೌರವವನ್ನು ಸಲ್ಲಿಸು; ಈ ಮನುಷ್ಯನು ಪಾಪಿಷ್ಠನೆಂದು ನಾವು ಬಲ್ಲೆವು” ಎಂದರು.
[25] ಅದಕ್ಕೆ ಅವನು, “ಆತನು ಪಾಪಿಷ್ಠನೋ ಏನೋ ನನಗೆ ಗೊತ್ತಿಲ್ಲ, ಒಂದು ಮಾತ್ರ ಬಲ್ಲೆನು ನಾನು ಕುರುಡನಾಗಿದ್ದೆನು; ಈಗ ನಾನು ನೋಡುತ್ತಿದ್ದೇನೆ” ಎಂದನು.
[26] ಅವರು ಅವನನ್ನು, “ಆತನು ನಿನಗೆ ಏನು ಮಾಡಿದನು? ನಿನ್ನ ಕಣ್ಣುಗಳನ್ನು ಹೇಗೆ ತೆರೆದನು?” ಎಂದು ಕೇಳಿದ್ದಕ್ಕೆ,
[27] ಅವನು, “ನಿಮಗೆ ಆಗಲೇ ಹೇಳಿದೆನಲ್ಲಾ, ನೀವು ಕೇಳಲಿಲ್ಲ! ನೀವು ಯಾಕೆ ಪುನಃ ಪುನಃ ಕೇಳುತ್ತಿದ್ದೀರಿ? ನೀವು ಸಹ ಆತನ ಶಿಷ್ಯರಾಗುವುದಕ್ಕೆ ಬಯಸುತ್ತಿದ್ದೀರೋ?” ಎಂದನು.
[28] ಅದಕ್ಕೆ ಅವರು ಅವನನ್ನು ನಿಂದಿಸಿ, “ನೀನು ಆತನ ಶಿಷ್ಯನು. ಆದರೆ ನಾವು ಮೋಶೆಯ ಶಿಷ್ಯರು.
[29] ಮೋಶೆಯ ಸಂಗಡ ದೇವರು ಮಾತನಾಡಿದನೆಂದು ನಾವು ಬಲ್ಲೆವು, ಆದರೆ ಈತನು ಎಲ್ಲಿಯವನೋ ನಮಗೆ ತಿಳಿಯದು” ಎಂದರು.
[30] ಅದಕ್ಕೆ ಆ ಮನುಷ್ಯನು, “ಆತನು ನನ್ನ ಕಣ್ಣುಗಳನ್ನು ತೆರೆದರೂ ಆತನು ಎಲ್ಲಿಯವನೆಂದು ನಿಮಗೆ ತಿಳಿಯದೆ ಇರುವುದು ಆಶ್ಚರ್ಯವಲ್ಲವೇ!
[31] ಪಾಪಿಷ್ಠರ ಪ್ರಾರ್ಥನೆಯನ್ನು ದೇವರು ಕೇಳುವುದಿಲ್ಲ, ಆದರೆ ಯಾರು ಭಕ್ತರಾಗಿದ್ದು ಆತನ ಚಿತ್ತದಂತೆ ನಡೆಯುತ್ತಾರೋ ಅವರ ಪ್ರಾರ್ಥನೆಯನ್ನು ಕೇಳುತ್ತಾನೆಂದು ಬಲ್ಲೆವು.
[32] ಹುಟ್ಟು ಕುರುಡನಾಗಿದ್ದ ಒಬ್ಬ ಮನುಷ್ಯನ ಕಣ್ಣುಗಳನ್ನು ಯಾವನಾದರೂ ತೆರೆದಿದ್ದನ್ನು ಲೋಕಾದಿಯಿಂದ ಒಬ್ಬನಾದರೂ ಕೇಳಲಿಲ್ಲ.
[33] ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು” ಎಂದನು.
[34] ಈ ಮಾತಿಗೆ ಅವರು, “ನೀನು ಕೇವಲ ಪಾಪದಲ್ಲಿ ಹುಟ್ಟಿದವನು, ನೀನು ನಮಗೆ ಉಪದೇಶಮಾಡುತ್ತಿಯೋ?” ಎಂದು ಹೇಳಿ ಅವನನ್ನು ಹೊರಗೆ ಹಾಕಿದರು.
[35] ಅವನನ್ನು ಹೊರಗೆ ಹಾಕಿದರೆಂದು ಯೇಸು ಕೇಳಿ ಅವನನ್ನು ಕಂಡುಕೊಂಡು, “ನೀನು ಮನುಷ್ಯಕುಮಾರನನ್ನು ನಂಬುತ್ತೀಯೋ?” ಎಂದು ಕೇಳಿದನು.
[36] ಅದಕ್ಕೆ ಅವನು, “ಕರ್ತನೇ ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು, ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದಾಗ,
[37] ಯೇಸು, “ನೀನು ಅವನನ್ನು ನೋಡಿದ್ದೀ ಮತ್ತು ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದಾಗ,
[38] ಅವನು, “ಕರ್ತನೇ, ನಾನು ನಂಬುತ್ತೇನೆ” ಎಂದು ಹೇಳಿ ಆತನಿಗೆ ಅಡ್ಡಬಿದ್ದನು.
[39] ಆಗ ಯೇಸುವು, “ನಾನು ನ್ಯಾಯತೀರ್ಪಿಗಾಗಿ ಈ ಲೋಕಕ್ಕೆ ಬಂದಿದ್ದೇನೆ. ಆ ತೀರ್ಪು ಏನೆಂದರೆ ಕುರುಡರು ನೋಡುವರು, ದೃಷ್ಟಿ ಇರುವವರು ಕುರುಡರಾಗುವರು” ಎಂದನು.
[40] ಇದನ್ನು ಆತನೊಂದಿಗಿದ್ದ ಫರಿಸಾಯರಲ್ಲಿ ಕೆಲವರು ಕೇಳಿ, “ನಾವು ಸಹ ಕುರುಡರೇನು?” ಎಂದು ಕೇಳಿದಾಗ,
[41] ಯೇಸು ಅವರಿಗೆ, “ನೀವು ಕುರುಡರಾಗಿದ್ದರೆ ನಿಮಗೆ ಪಾಪವು ಇರುತ್ತಿರಲಿಲ್ಲ. ಆದರೆ ‘ನಿಮಗೆ ಕಣ್ಣುಕಾಣುತ್ತವೆ’ ಎಂದು ನೀವು ಹೇಳುವುದರಿಂದ ನಿಮ್ಮ ಪಾಪ ನಿಮಗೆ ಉಳಿದಿದೆ” ಎಂದನು.