Skip to content
Opens in a new window
Listen to this chapter • 4:34

[1] ಯೇಸು ಈ ಮಾತುಗಳನ್ನು ಹೇಳಿದ ಮೇಲೆ ಆಕಾಶದ ಕಡೆಗೆ ಕಣ್ಣೆತ್ತಿ ನೋಡಿ ಹೇಳಿದ್ದೇನೆಂದರೆ, “ತಂದೆಯೇ, ಸಮಯ ಬಂದಿದೆ; ಮಗನು ನಿನ್ನನ್ನು ಮಹಿಮೆಪಡಿಸುವುದಕೊಸ್ಕರ ನಿನ್ನ ಮಗನನ್ನು ಮಹಿಮೆಪಡಿಸು.

[2] ನೀನು ಯಾರಾರನ್ನು ಕೊಟ್ಟಿದ್ದೀಯೋ ಅವರೆಲ್ಲರಿಗೂ ನಿತ್ಯಜೀವವನ್ನು ಕೊಡಬೇಕೆಂದು, ಆತನಿಗೆ ಎಲ್ಲಾ ಮನುಷ್ಯರ ಮೇಲೆ ಅಧಿಕಾರವನ್ನು ಕೊಟ್ಟಿರುವೆ.

[3] ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವುದೇ ನಿತ್ಯಜೀವವು.

[4] ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ಭೂಲೋಕದಲ್ಲಿ ನಾನು ನಿನ್ನನ್ನು ಮಹಿಮೆಪಡಿಸಿದ್ದೇನೆ.

[5] ಈಗ ತಂದೆಯೇ, ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು, ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಂತೆಯೇ ನಿನ್ನೊಂದಿಗೆ ನನ್ನನ್ನು ಮಹಿಮೆಪಡಿಸು.

[6] “ಲೋಕದಲ್ಲಿ ನೀನು ನನಗೆ ಕೊಟ್ಟಿರುವ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ಪ್ರಕಟಪಡಿಸಿದ್ದೇನೆ. ಇವರು ನಿನ್ನವರಾಗಿದ್ದರು ಮತ್ತು ನೀನು ಇವರನ್ನು ನನಗೆ ಕೊಟ್ಟಿದ್ದೀ. ಇವರು ನಿನ್ನ ವಾಕ್ಯಕ್ಕೆ ವಿಧೇಯರಾಗಿದ್ದಾರೆ.

[7] ನೀನು ನನಗೆ ಕೊಟ್ಟದ್ದೆಲ್ಲವೂ ನಿನ್ನಿಂದಲೇ ಬಂದಿದೆ ಎಂದು ಈಗ ಇವರು ತಿಳಿದುಕೊಂಡಿದ್ದಾರೆ.

[8] ಹೇಗೆಂದರೆ, ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿದ್ದಾರೆ ಮತ್ತು ನಾನು ನಿನ್ನ ಬಳಿಯಿಂದ ಬಂದವನೆಂದು ಇವರು ನಿಜವಾಗಿ ತಿಳಿದು, ನೀನೇ ನನ್ನನ್ನು ಕಳುಹಿಸಿದ್ದೀ ಎಂದು ನಂಬಿದ್ದಾರೆ.

[9] ನಾನು ಇವರಿಗಾಗಿಯೇ ಬೇಡಿಕೊಳ್ಳುತ್ತೇನೆ. ಲೋಕಕ್ಕೋಸ್ಕರ ಬೇಡಿಕೊಳ್ಳದೆ, ನೀನು ನನಗೆ ಕೊಟ್ಟವರಿಗಾಗಿಯೇ ಬೇಡಿಕೊಳ್ಳುತ್ತೇನೆ, ಏಕೆಂದರೆ, ಇವರು ನಿನ್ನವರು.

[10] ನನ್ನದೆಲ್ಲವೂ ನಿನ್ನದೇ ಮತ್ತು ನಿನ್ನದೆಲ್ಲವೂ ನನ್ನದೇ. ನಾನು ಇವರಲ್ಲಿ ಮಹಿಮೆಗೊಂಡಿದ್ದೇನೆ.

[11] ಇನ್ನು ಮೇಲೆ ನಾನು ಲೋಕದಲ್ಲಿ ಇರುವುದಿಲ್ಲ, ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆ ಇವರೂ ಒಂದಾಗಿರಬೇಕೆಂದು, ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡು.

[12] ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ.

[13] “ಆದರೆ ಈಗ ನಾನು ನಿನ್ನ ಬಳಿಗೆ ಬರುತ್ತೇನೆ. ಆದುದರಿಂದ ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರುವಂತೆ ನಾನು ಲೋಕದಲ್ಲಿದ್ದು ಈ ಮಾತುಗಳನ್ನಾಡುತ್ತಿದೇನೆ.

[14] ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದ್ದೇನೆ, ನಾನು ಈ ಲೋಕದವನಲ್ಲದವನಾಗಿರುವ ಪ್ರಕಾರ ಇವರೂ ಈ ಲೋಕದವರಲ್ಲ. ಆದಕಾರಣ ಲೋಕವು ಇವರನ್ನು ದ್ವೇಷಿಸುತ್ತದೆ.

[15] ಇವರನ್ನು ಲೋಕದಿಂದ ತೆಗೆಯಬೇಕೆಂದು ನಾನು ಬೇಡಿಕೊಳ್ಳುವುದಿಲ್ಲ, ಆದರೆ ಇವರನ್ನು ಕೆಡುಕನಿಂದ ಕಾಪಾಡಬೇಕೆಂದು ನಾನು ಬೇಡಿಕೊಳ್ಳುತ್ತೇನೆ.

[16] ನಾನು ಲೋಕದವನಲ್ಲದೆ ಇರುವಂತೆ ಇವರೂ ಲೋಕದವರಲ್ಲ.

[17] ನೀನು ಸತ್ಯದಿಂದ ಇವರನ್ನು ಪ್ರತಿಷ್ಠೆಪಡಿಸು, ನಿನ್ನ ವಾಕ್ಯವೇ ಸತ್ಯ.

[18] ನೀನು ನನ್ನನ್ನು ಲೋಕಕ್ಕೆ ಕಳುಹಿಸಿದಂತೆಯೇ, ನಾನು ಸಹ ಇವರನ್ನು ಲೋಕಕ್ಕೆ ಕಳುಹಿಸಿದ್ದೇನೆ.

[19] ಇವರು ನಿಜವಾಗಿ ಪ್ರತಿಷ್ಠಿರಾಗಬೇಕೆಂದು, ನನ್ನನ್ನು ನಾನೇ ಇವರಿಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ.

[20] “ಆದರೆ ಇವರಿಗೋಸ್ಕರ ಮಾತ್ರವಲ್ಲದೆ ಇವರ ವಾಕ್ಯದಿಂದ ನನ್ನನ್ನು ನಂಬುವವರಿಗೋಸ್ಕರವಾಗಿಯೂ ನಿನ್ನನ್ನು ಬೇಡಿಕೊಳ್ಳುತ್ತೇನೆ.

[21] ತಂದೆಯೇ, ನೀನು ನನ್ನಲ್ಲಿಯೂ ನಾನು ನಿನ್ನಲ್ಲಿಯೂ ಇರುವ ಹಾಗೆಯೇ ಅವರು ಸಹ ಒಂದಾಗಿರಬೇಕೆಂತಲೂ ಬೇಡಿಕೊಳ್ಳುತ್ತೇನೆ. ನೀನು ನನ್ನನ್ನು ಕಳುಹಿಸಿದ್ದೀ ಎಂದು ಲೋಕವು ನಂಬುವುದಕ್ಕಾಗಿ, ಅವರೆಲ್ಲರೂ ನಮ್ಮಲ್ಲಿ ಒಂದಾಗಿರಲಿ ಎಂದು ನಿನ್ನನ್ನು ಕೇಳಿಕೊಳ್ಳುತ್ತೇನೆ.

[22] ನಾವು ಒಂದಾಗಿರುವ ಹಾಗೆಯೇ ಇವರೂ ಒಂದಾಗಿರಬೇಕೆಂದು ನೀನು ನನಗೆ ಕೊಟ್ಟಿರುವ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ.

[23] ನಾನು ಇವರಲ್ಲಿಯೂ ನೀನು ನನ್ನಲ್ಲಿಯೂ ಇರುವಂತೆ ಇವರೂ ಐಕ್ಯತೆಯಲ್ಲಿ ಪರಿಪೂರ್ಣರಾಗಿರಲಿ. ಹೀಗೆ ನೀನು ನನ್ನನ್ನು ಕಳುಹಿಸಿದ್ದೀ, ಎಂದೂ ಮತ್ತು ನೀನು ನನ್ನನ್ನು ಪ್ರೀತಿಸಿದಂತೆ, ಇವರನ್ನೂ ನೀನು ಪ್ರೀತಿಸುತ್ತೀ ಎಂದು ಲೋಕವು ತಿಳಿದುಕೊಳ್ಳುವುದು.

[24] ತಂದೆಯೇ, ನೀನು ನನಗೆ ಕೊಟ್ಟವರು, ನಾನಿರುವ ಸ್ಥಳದಲ್ಲಿ ನನ್ನೊಂದಿಗೆ ಇದ್ದುಕೊಂಡು, ಜಗದುತ್ಪತ್ತಿಗೂ ಮೊದಲೇ ನೀನು ನನ್ನನ್ನು ಪ್ರೀತಿಸಿ ನನಗೆ ಕೊಟ್ಟಿರುವ ಮಹಿಮೆಯನ್ನು ಇವರು ನೋಡಬೇಕೆಂದು, ನಾನು ಆಶಿಸುತ್ತೇನೆ.

[25] ನೀತಿಸ್ವರೂಪನಾದ ತಂದೆಯೇ, ಲೋಕವು ನಿನ್ನನ್ನು ತಿಳಿಯಲಿಲ್ಲ, ಆದರೆ ನಾನು ನಿನ್ನನ್ನು ತಿಳಿದಿದ್ದೇನೆ ಮತ್ತು ಇವರು ನೀನೇ ನನ್ನನ್ನು ಕಳುಹಿಸಿದ್ದೀ ಎಂದು ತಿಳಿದಿದ್ದಾರೆ.

[26] ನಾನು ಅವರಿಗೆ ನಿನ್ನ ಹೆಸರನ್ನು ತಿಳಿಸಿದ್ದೇನೆ. ಇನ್ನೂ ತಿಳಿಸುವೆನು. ಏಕೆಂದರೆ, ನೀನು ನನ್ನನ್ನು ಪ್ರೀತಿಸಿದಂಥ ಪ್ರೀತಿಯು ಇವರಲ್ಲಿ ಇರಬೇಕೆಂತಲೂ ಮತ್ತು ನಾನೂ ಅವರಲ್ಲಿ ಇರಬೇಕೆಂದೂ ಪ್ರಾರ್ಥಿಸುತ್ತೇನೆ” ಎಂದನು.

ಯೋಹಾನನು — Chapters