Skip to content
Opens in a new window
Listen to this chapter • 7:52

[1] ಈ ಸಂಗತಿಗಳಾದ ಮೇಲೆ ಯೇಸು ಗಲಿಲಾಯದಲ್ಲಿ ಸಂಚಾರ ಮಾಡಿದನು. ಯೆಹೂದ್ಯರು ಆತನನ್ನು ಕೊಲ್ಲುವ ಪ್ರಯತ್ನದಲ್ಲಿದುದ್ದರಿಂದ ಆತನಿಗೆ ಯೂದಾಯದಲ್ಲಿ ಸಂಚರಿಸಲು ಮನಸ್ಸಾಗಲಿಲ್ಲ.

[2] ಆಗ ಯೆಹೂದ್ಯರ ಗುಡಾರಗಳ ಹಬ್ಬವು ಸಮೀಪವಾಗಿತ್ತು,

[3] ಆದುದರಿಂದ ಆತನ ಸಹೋದರರು ಆತನಿಗೆ “ನೀನು ಮಾಡುವ ಕಾರ್ಯಗಳನ್ನು ನಿನ್ನ ಶಿಷ್ಯರೂ ಸಹ ನೋಡುವಂತೆ, ಇಲ್ಲಿಂದ ಹೊರಟು, ಯೂದಾಯಕ್ಕೆ ಹೋಗು.

[4] ಪ್ರಸಿದ್ಧಿಗೆ ಬರಬೇಕೆಂದಿರುವವನು ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದರಿಂದ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ” ಎಂದು ಹೇಳಿದರು.

[5] ಏಕೆಂದರೆ ಆತನ ಸಹೋದರರು ಸಹ ಆತನನ್ನು ನಂಬಲಿಲ್ಲ.

[6] ಅದಕ್ಕೆ ಯೇಸು ಅವರಿಗೆ, “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.

[7] ಲೋಕವು ನಿಮ್ಮನ್ನು ದ್ವೇಷಿಸಲಾರದು, ಆದರೆ ನಾನು ಅದರ ಕ್ರಿಯೆಗಳು ಕೆಟ್ಟವುಗಳೆಂದು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ.

[8] ನೀವು ಈ ಹಬ್ಬಕ್ಕೆ ಹೋಗಿರಿ, ನನ್ನ ಸಮಯವು ಇನ್ನೂ ಬಾರದಿರುವುದರಿಂದ ನಾನು ಈ ಹಬ್ಬಕ್ಕೆ ಈಗ ಹೋಗುವುದಿಲ್ಲ” ಎಂದು ಹೇಳಿದನು.

[9] ಇದನ್ನು ಹೇಳಿದ ಮೇಲೆ ಆತನು ಗಲಿಲಾಯದಲ್ಲಿಯೇ ಉಳಿದುಕೊಂಡನು.

[10] ಆದರೆ ಆತನ ಸಹೋದರರು ಹೋದ ಮೇಲೆ ಆತನು ಸಹ ಹಬ್ಬಕ್ಕೆ ಬಹಿರಂಗವಾಗಿ ಹೋಗದೆ, ರಹಸ್ಯವಾಗಿ ಹೋದನು.

[11] ಆ ಹಬ್ಬದಲ್ಲಿ ಯೆಹೂದ್ಯರು, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು.

[12] ಜನರು ಗುಂಪುಗಳಲ್ಲಿ ಆತನ ವಿಷಯವಾಗಿ ಗೊಣಗುಟ್ಟುತಿದ್ದರು. ಕೆಲವರು “ಆತನು ಒಳ್ಳೆಯ ಮನುಷ್ಯನು” ಎಂದರು, ಇನ್ನು ಕೆಲವರು “ಇಲ್ಲ ಆತನು ಜನರಿಗೆ ಮೋಸ ಮಾಡುತ್ತಾನೆ” ಎಂದರು.

[13] ಆದರೂ ಯೆಹೂದ್ಯರ ಭಯದಿಂದ ಯಾರೂ ಆತನ ವಿಷಯದಲ್ಲಿ ಬಹಿರಂಗವಾಗಿ ಮಾತನಾಡಲಿಲ್ಲ.

[14] ಹಬ್ಬದ ಮಧ್ಯಕಾಲದಲ್ಲಿ ಯೇಸು ದೇವಾಲಯಕ್ಕೆ ಹೋಗಿ ಬೋಧಿಸತೊಡಗಿದನು.

[15] ಯೆಹೂದ್ಯರು ಅದಕ್ಕೆ ಆಶ್ಚರ್ಯಪಟ್ಟು, “ಶಾಸ್ತ್ರಭ್ಯಾಸ ಮಾಡದಿರುವ ಈತನಿಗೆ ಶಾಸ್ತ್ರಗಳು ತಿಳಿದಿರುವುದಾದರೂ ಹೇಗೆ?” ಎಂದರು.

[16] ಅದಕ್ಕೆ ಯೇಸು “ನಾನು ಹೇಳುವ ಬೋಧನೆಯು ನನ್ನದಲ್ಲ. ನನ್ನನ್ನು ಕಳುಹಿಸಿದಾತನದೇ.

[17] ಯಾರಿಗಾದರೂ ಆತನ ಚಿತ್ತದಂತೆ ನಡೆಯುವುದಕ್ಕೆ ಮನಸ್ಸಿದೆಯೋ ಅವರಿಗೆ ಈ ಬೋಧನೆಯು ದೇವರಿಂದ ಬಂದ್ದದ್ದೋ ಅಥವಾ ನಾನೇ ಮಾತನಾಡುತ್ತೇನೋ ಎಂಬುದು ಗೊತ್ತಾಗುವುದು.

[18] ತನ್ನಷ್ಟಕ್ಕೆ ತಾನೇ ಮಾತನಾಡುವವನು ತನ್ನ ಸ್ವಂತ ಗೌರವ ಹುಡುಕುತ್ತಾನೆ, ಆದರೆ ತನ್ನನ್ನು ಕಳುಹಿಸಿದಾತನ ಗೌರವನ್ನೇ ಹುಡುಕುವ ಮನುಷ್ಯನೇ ಸತ್ಯವಂತನು; ಆತನಲ್ಲಿ ಕೆಟ್ಟತನವಿಲ್ಲ.

[19] ಮೋಶೆಯು ನಿಮಗೆ ಧರ್ಮಶಾಸ್ತ್ರವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಒಬ್ಬನಾದರೂ ಆ ಧರ್ಮಶಾಸ್ತ್ರದಂತೆ ನಡೆಯಲಿಲ್ಲ. ನೀವು ನನ್ನನ್ನು ಕೊಲ್ಲುವುದಕ್ಕೆ ಹುಡುಕುವುದೇಕೆ?” ಎಂದು ಕೇಳಿದನು.

[20] ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಯಾರು ಹುಡುಕುತ್ತಿದ್ದಾರೆ?” ಎಂದರು.

[21] ಯೇಸು ಅವರಿಗೆ “ನಾನು ಒಂದು ಸೂಚಕ ಕಾರ್ಯವನ್ನು ಮಾಡಿದೆನು, ಅದಕ್ಕೆ ನೀವೆಲ್ಲರೂ ಬೆರಗಾಗಿದ್ದೀರಿ.

[22] ಮೋಶೆಯು ನಿಮಗೆ ಸುನ್ನತಿಯೆಂಬ ನಿಯಮವನ್ನು ನೇಮಿಸಿದನು, (ಅದು ಮೋಶೆಯಿಂದ ಬಂದದ್ದೆಂದು ನಾನು ಹೇಳುವುದಿಲ್ಲ, ಮೂಲಪುರುಷರ ಕಾಲದಿಂದ ಬಂದದ್ದು) ಮತ್ತು ಮನುಷ್ಯನಿಗೆ ಸುನ್ನತಿಯನ್ನು ಸಬ್ಬತ್ ದಿನದಲ್ಲಿಯೂ ಮಾಡುತ್ತೀರಿ.

[23] ಮೋಶೆಯ ಧರ್ಮಶಾಸ್ತ್ರವನ್ನು ಮೀರಬಾರದೆಂದು ಒಬ್ಬನು ಸಬ್ಬತ್ ದಿನದಲ್ಲಿ ಸುನ್ನತಿಯನ್ನು ಮಾಡಿಸಿಕೊಳ್ಳುವುದಾದರೆ, ನಾನು ಸಬ್ಬತ್ ದಿನದಲ್ಲಿ ಒಬ್ಬ ಮನುಷ್ಯನನ್ನು ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ?

[24] ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ನ್ಯಾಯಬದ್ಧವಾಗಿ ತೀರ್ಪುನ್ನು ಮಾಡಿರಿ” ಎಂದನು.

[25] ಆಮೇಲೆ ಯೆರೂಸಲೇಮಿನವರಲ್ಲಿ ಕೆಲವರು “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ?

[26] ನೋಡಿರಿ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ ಮತ್ತು ಅವರು ಆತನಿಗೆ ಏನೂ ಹೇಳುತ್ತಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತನೆಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ?

[27] ಆದರೆ ಇವನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು, ಕ್ರಿಸ್ತನು ಬರುವಾಗ ಆತನು ಎಲ್ಲಿಂದ ಬಂದವನೆಂದು ಒಬ್ಬರಿಗೂ ತಿಳಿಯುವುದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು.”

[28] ಯೇಸುವು ಇದನ್ನು ತಿಳಿದು ದೇವಾಲಯದಲ್ಲಿ ಉಪದೇಶ ಮಾಡುವಾಗ, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ, ಆದರೂ ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದಾತನು ಸತ್ಯವಂತನು. ನೀವು ಆತನನ್ನು ಅರಿತವರಲ್ಲ.

[29] ಆದರೆ ನಾನು ಆತನನ್ನು ಬಲ್ಲೆನು ಏಕೆಂದರೆ, ನಾನು ಆತನ ಕಡೆಯಿಂದ ಬಂದವನು ಮತ್ತು ಆತನೇ ನನ್ನನ್ನು ಕಳುಹಿಸಿದನು” ಎಂದು ಕೂಗಿ ಹೇಳಿದನು.

[30] ಇದಕ್ಕಾಗಿ ಆತನನ್ನು ಬಂಧಿಸುವುದಕ್ಕೆ ಪ್ರಯತ್ನಿಸಿದರೂ ಆತನ ಸಮಯ ಇನ್ನೂ ಬಾರದೆ ಇದ್ದ ಕಾರಣ ಯಾರೂ ಆತನ ಮೇಲೆ ಕೈ ಹಾಕಲಿಲ್ಲ.

[31] ಜನರಲ್ಲಿ ಅನೇಕರು ಆತನನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕ ಕಾರ್ಯಗಳನ್ನು ಮಾಡುವನೇನೋ?” ಎಂದು ಹೇಳಿದರು.

[32] ಜನರು ಆತನ ವಿಷಯವಾಗಿ ಗೊಣಗುಟ್ಟಿದ ಮಾತುಗಳನ್ನು ಫರಿಸಾಯರು ಕೇಳಿಸಿಕೊಂಡು ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಬಂಧಿಸಲು ದೇವಾಲಯದ ಕಾವಲುಗಾರರನ್ನು ಕಳುಹಿಸಿದರು.

[33] ಆಗ ಯೇಸು ಅವರಿಗೆ “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಆಮೇಲೆ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟು ಹೋಗುತ್ತೇನೆ.

[34] ನೀವು ನನ್ನನ್ನು ಹುಡುಕುವಿರಿ, ಆದರೆ ಕಂಡುಕೊಳ್ಳದೆ ಹೋಗುವಿರಿ. ನಾನು ಇರುವಲ್ಲಿಗೆ ನೀವು ಬರಲಾರಿರಿ” ಎಂದನು.

[35] ಅದಕ್ಕೆ ಯೆಹೂದ್ಯರು “ಇವನು ನಮಗೆ ಸಿಕ್ಕದ ಹಾಗೆ ಎಲ್ಲಿ ಹೋಗಬೇಕೆಂದಿದ್ದಾನೆ? ಗ್ರೀಕರ ನಡುವೆ ಚದುರಿಕೊಂಡಿರುವ ನಮ್ಮವರ ಬಳಿಗೆ ಹೋಗಿ ಆ ಗ್ರೀಕರಿಗೆ ಬೋಧನೆ ಮಾಡಬೇಕೆಂದಿರುವನೋ?

[36] ‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಂಡುಕೊಳ್ಳದೆ ಹೋಗುವಿರಿ ಮತ್ತು ನಾನು ಇರುವಲ್ಲಿಗೆ ನೀವು ಬರಲಾರಿರಿ’ ಎಂದು ಹೇಳಿದ ಮಾತಿನ ಅರ್ಥ ಏನಾಗಿರಬಹುದು?” ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.

[37] ಜಾತ್ರೆಯ ಮಹಾದಿನವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು “ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.

[38] ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನನ್ನಲ್ಲಿ ಯಾವನು ನಂಬಿಕೆಯಿಡುವನೋ ಅವನೊಳಗಿನಿಂದ ಜೀವಕರವಾದ ನೀರಿನ ಬುಗ್ಗೆಗಳು ಹರಿಯುವವು” ಎಂದು ಕೂಗಿ ಹೇಳಿದನು.

[39] ಆದರೆ ಯೇಸು ತನ್ನನ್ನು ನಂಬುವವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೀಗೆ ಹೇಳಿದನು. ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ ಕಾರಣ ಪವಿತ್ರಾತ್ಮವರವು ಇನ್ನೂ ಕೊಡಲ್ಪಟ್ಟಿರಲಿಲ್ಲ.

[40] ಜನರಲ್ಲಿ ಕೆಲವರು ಆ ಮಾತುಗಳನ್ನು ಕೇಳಿದಾಗ “ನಿಜವಾಗಿಯೂ ಈತನು ಪ್ರವಾದಿಯಾಗಿದ್ದಾನೆ” ಎಂದರು.

[41] ಕೆಲವರು, “ಈತನು ಕ್ರಿಸ್ತನು” ಎಂದರು, ಆದರೆ ಇನ್ನೂ ಕೆಲವರು “ಕ್ರಿಸ್ತನು ಗಲಿಲಾಯದಿಂದ ಬರುವುದುಂಟೆ?

[42] ದಾವೀದನ ಸಂತಾನದಿಂದಲೂ ದಾವೀದನು ಇದ್ದ ಬೇತ್ಲೆಹೇಮೆಂಬ ಗ್ರಾಮದಿಂದಲೂ ಕ್ರಿಸ್ತನು ಬರುವನು ಎಂಬುದಾಗಿ ಪವಿತ್ರ ಗ್ರಂಥವು ಹೇಳುತ್ತದಲ್ಲವೇ?” ಅಂದರು.

[43] ಹೀಗೆ ಆತನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು.

[44] ಅವರಲ್ಲಿ ಕೆಲವರು ಆತನನ್ನು ಬಂಧಿಸಬೇಕೆಂದಿದ್ದರೂ ಆದರೆ ಯಾರು ಆತನ ಮೇಲೆ ಕೈ ಹಾಕಲಿಲ್ಲ.

[45] ಬಳಿಕ ಆ ದೇವಾಲಯದ ಕಾವಲುಗಾರರು, ಮುಖ್ಯಯಾಜಕರ ಮತ್ತು ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಕರೆತರಲಿಲ್ಲ?” ಎಂದು ಅವರನ್ನು ಕೇಳಿದ್ದಕ್ಕೆ,

[46] ಕಾವಲುಗಾರರು “ಈ ಮನುಷ್ಯನು ಮಾತನಾಡುವ ರೀತಿಯಲ್ಲಿ ಯಾರೂ ಎಂದೂ ಮಾತನಾಡಿದ್ದಿಲ್ಲ” ಎಂದು ಉತ್ತರ ಕೊಟ್ಟರು.

[47] ಆಗ ಫರಿಸಾಯರು ಅವರಿಗೆ “ನೀವೂ ಸಹ ಆತನ ಮಾತಿಗೆ ಮರುಳಾದೀರಾ?

[48] ಹಿರೀಸಭೆಯವರಲ್ಲಾಗಲಿ ಫರಿಸಾಯರಲ್ಲಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ?

[49] ಧರ್ಮಶಾಸ್ತ್ರವನ್ನು ಅರಿಯದ ಈ ಹಿಂಡು ಶಾಪಗ್ರಸ್ತರೇ” ಎಂದು ಹೇಳಿದರು.

[50] ಮೊದಲು ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು,

[51] ಅವನು ಅವರಿಗೆ “ನಮ್ಮ ಧರ್ಮಶಾಸ್ತ್ರವು ಮೊದಲು ಒಬ್ಬನನ್ನು ವಿಚಾರಿಸಿ ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ಅವನ ವಿಷಯವಾಗಿ ಖಂಡನೆ ಮಾಡುವುದುಂಟೇ?” ಎಂದು ಹೇಳಿದ್ದಕ್ಕೆ,

[52] ಅವರು ಅವನಿಗೆ “ನೀನು ಸಹ ಗಲಿಲಾಯದವನೋ? ನೀನೇ ಪರಿಶೋಧಿಸಿ ನೋಡು ಗಲಿಲಾಯದಿಂದ ಪ್ರವಾದಿಯು ಬರುವುದಿಲ್ಲ,” ಎಂದರು.

[53] ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.

ಯೋಹಾನನು — Chapters