[1] ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆಂಬ ಸುದ್ದಿಯನ್ನು ಫರಿಸಾಯರು ಕೇಳಿದರೆಂದು ಕರ್ತನಿಗೆ ತಿಳಿದಾಗ,
[2] (ಆದರೆ ಯೇಸು ತಾನೇ ದೀಕ್ಷಾಸ್ನಾನ ಮಾಡಿಸುತ್ತಿರಲಿಲ್ಲ. ಆತನ ಶಿಷ್ಯರೇ ಮಾಡಿಸುತ್ತಿದ್ದರು),
[3] ಆತನು ಯೂದಾಯವನ್ನು ಬಿಟ್ಟು ತಿರುಗಿ ಗಲಿಲಾಯಕ್ಕೆ ಹೊರಟು ಹೋದನು.
[4] ಆತನು ಸಮಾರ್ಯ ಸೀಮೆಯನ್ನು ಹಾದುಹೋಗಬೇಕಾಯಿತು.
[5] ಹೋಗುವಾಗ ಸಮಾರ್ಯ ಸೀಮೆಗೆ ಸೇರಿದ ಸುಖರೆಂಬ ಊರಿಗೆ ಬಂದನು. ಅದು ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಹತ್ತಿರದಲ್ಲಿತ್ತು.
[6] ಅಲ್ಲಿ ಯಾಕೋಬನು ತೆಗೆಸಿದ ಬಾವಿಯಿತ್ತು. ಯೇಸು ಪ್ರಯಾಣಮಾಡಿದ್ದರಿಂದ ಆಯಾಸಗೊಂಡು ಆ ಬಾವಿಯ ಬಳಿಯಲ್ಲಿ ಹಾಗೆ ಕುಳಿತುಕೊಂಡನು. ಆಗ ಹೆಚ್ಚು ಕಡಿಮೆ ಮಧ್ಯಾಹ್ನವಾಗಿತ್ತು.
[7] ಸಮಾರ್ಯದವಳಾದ ಒಬ್ಬ ಸ್ತ್ರೀ ನೀರು ಸೇದುವುದಕ್ಕೆ ಬಂದಳು. ಯೇಸು ಆಕೆಯನ್ನು “ನನಗೆ ಕುಡಿಯುವುದಕ್ಕೆ ನೀರನ್ನು ಕೊಡು,” ಎಂದು ಕೇಳಿದನು.
[8] ಅಷ್ಟರಲ್ಲಿ ಆತನ ಶಿಷ್ಯರು ಊಟಕ್ಕೆ ಬೇಕಾದದ್ದನ್ನು ಕೊಂಡುಕೊಳ್ಳುವುದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು.
[9] ಆ ಸಮಾರ್ಯದ ಸ್ತ್ರೀಯು ಆತನಿಗೆ, “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವುದಾದರೂ ಹೇಗೆ?” ಎಂದು ಹೇಳಿದಳು. ಏಕೆಂದರೆ ಯೆಹೂದ್ಯರಿಗೂ ಸಮಾರ್ಯದವರಿಗೂ ಹೊಕ್ಕುಬಳಕೆ ಇರಲಿಲ್ಲ.
[10] ಅದಕ್ಕೆ ಯೇಸು “ದೇವರ ವರವೇನೆಂಬುದೂ ಮತ್ತು ನನಗೆ ಕುಡಿಯುವುದಕ್ಕೆ ನೀರು ಕೊಡು ಎಂದು ಕೇಳುವಾತನು ಯಾರೆಂಬುದೂ ನಿನಗೆ ತಿಳಿದಿದ್ದರೆ ನೀನೇ ಅವನನ್ನು ಕೇಳುತ್ತಿದ್ದೆ. ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು” ಅಂದನು.
[11] ಆ ಸ್ತ್ರೀ ಆತನಿಗೆ, “ಅಯ್ಯಾ, ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ ಮತ್ತು ಬಾವಿ ಆಳವಾಗಿದೆ, ಹೀಗಿರುವಾಗ, ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂದಿತು?
[12] ನಮ್ಮ ಹಿರಿಯವನಾದ ಯಾಕೋಬನಿಗಿಂತ ನೀನು ದೊಡ್ಡವನೋ? ಅವನೇ ಈ ಬಾವಿಯನ್ನು ನಮಗೆ ಕೊಟ್ಟವನು. ಅವನೂ ಅವನ ಮಕ್ಕಳೂ ಅವನ ಜಾನುವಾರುಗಳೂ ಸಹಿತವಾಗಿ ಇದೇ ಬಾವಿಯ ನೀರು ಕುಡಿದಿದ್ದರು” ಅನ್ನಲು,
[13] ಯೇಸು ಆಕೆಗೆ, “ಈ ನೀರನ್ನು ಕುಡಿಯುವವರೆಲ್ಲರಿಗೆ ಪುನಃ ನೀರಡಿಕೆಯಾಗುವುದು,
[14] ಆದರೆ, ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ನೀರಡಿಕೆಯಾಗುವುದಿಲ್ಲ. ನಾನು ಅವನಿಗೆ ಕೊಡುವ ನೀರು ಅವನಲ್ಲಿ ಉಕ್ಕುವ ನೀರಿನ ಬುಗ್ಗೆಗಳಾಗಿದ್ದು ನಿತ್ಯ ಜೀವವನ್ನು ಉಂಟುಮಾಡುವುದು” ಎಂದು ಹೇಳಿದನು.
[15] ಆ ಸ್ತ್ರೀಯು, “ಅಯ್ಯಾ, ನನಗೆ ಆ ನೀರನ್ನು ಕೊಡು, ಕೊಟ್ಟರೆ ಇನ್ನು ಮೇಲೆ ನನಗೆ ನೀರಡಿಕೆಯಾಗುವುದಿಲ್ಲ. ನೀರು ಸೇದುವುದಕ್ಕೆ ಇಷ್ಟು ದೂರ ಬರಬೇಕಾಗಿರುವುದಿಲ್ಲ” ಅನ್ನಲು,
[16] ಯೇಸು ಆಕೆಗೆ “ಹೋಗಿ ನಿನ್ನ ಗಂಡನನ್ನು ಇಲ್ಲಿಗೆ ಕರೆದುಕೊಂಡು ಬಾ” ಎಂದು ಹೇಳಿದನು.
[17] ಅದಕ್ಕೆ ಆ ಸ್ತ್ರೀಯು “ನನಗೆ ಗಂಡನಿಲ್ಲ” ಎಂದಳು. ಯೇಸು ಆಕೆಗೆ, “ನನಗೆ ಗಂಡನಿಲ್ಲವೆಂದು ನೀನು ಹೇಳಿದ್ದು ಸರಿಯೇ.
[18] ನಿನಗೆ ಐದು ಮಂದಿ ಗಂಡಂದಿರಿದ್ದರು. ಈಗ ನಿನಗಿರುವವನು ನಿನ್ನ ಗಂಡನಲ್ಲ; ನೀನು ಹೇಳಿದ್ದು ನಿಜವಾದ ಸಂಗತಿ” ಎಂದನು.
[19] ಆ ಸ್ತ್ರೀ ಆತನಿಗೆ, “ಅಯ್ಯಾ, ನೀನು ಒಬ್ಬ ಪ್ರವಾದಿ ಎಂದು ನನಗೆ ಕಾಣುತ್ತದೆ.
[20] ನಮ್ಮ ಹಿರಿಯರು ಈ ಬೆಟ್ಟದಲ್ಲಿ ದೇವಾರಾಧನೆ ಮಾಡುತ್ತಿದ್ದರು, ಆದರೆ ಯೆಹೂದ್ಯರಾದ ನೀವು ಆರಾಧನೆ ಮಾಡತಕ್ಕ ಸ್ಥಳವು ಯೆರೂಸಲೇಮಿನಲ್ಲಿಯೇ ಎಂದು ನೀವು ಹೇಳುತ್ತೀರಲ್ಲಾ” ಎಂದಳು.
[21] ಯೇಸು ಆಕೆಗೆ “ಅಮ್ಮಾ, ನನ್ನ ಮಾತನ್ನು ನಂಬು, ಒಂದು ಕಾಲ ಬರುತ್ತದೆ. ಆ ಕಾಲದಲ್ಲಿ ನೀವು ತಂದೆಯನ್ನು ಆರಾಧಿಸಬೇಕಾದರೆ, ಯೆರೂಸಲೇಮಿಗಾಗಲಿ ಅಥವಾ ಈ ಬೆಟ್ಟಕ್ಕಾಗಲಿ ಹೋಗುವುದಿಲ್ಲ.
[22] ಸಮಾರ್ಯದವರಾದ ನೀವು ಅರಿಯದೇ ಇರುವಂಥದನ್ನು ಆರಾಧಿಸುತ್ತೀರಿ, ಆದರೆ ನಾವು ಅರಿತಿರುವುದನ್ನೇ ಆರಾಧಿಸುವವರಾಗಿದ್ದೇವೆ. ಏಕೆಂದರೆ, ಬರಬೇಕಾದ ರಕ್ಷಣೆಯು ಯೆಹೂದ್ಯರೊಳಗಿಂದ ಬರುತ್ತದಷ್ಟೆ.
[23] ಅದಕ್ಕಿಂತ ಹೆಚ್ಚಾಗಿ, ನಿಜವಾದ ಆರಾಧಕರು ತಂದೆಯನ್ನು ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ, ಅದುದರಿಂದ, ತಂದೆಯು ನಿಜವಾಗಿಯೂ ಈ ರೀತಿ ಆರಾಧಿಸುವವರನ್ನೇ ಹುಡುಕುತ್ತಾನೆ.
[24] ದೇವರು ಆತ್ಮನಾಗಿದ್ದಾನೆ, ಮತ್ತು ಆತನನ್ನು ಆರಾಧಿಸುವವರು ಆತ್ಮನಿಂದಲೂ ಮತ್ತು ಸತ್ಯದಿಂದಲೂ ಆರಾಧಿಸಬೇಕಾಗಿದೆ” ಎಂದನು.
[25] ಆ ಹೆಂಗಸು ಆತನಿಗೆ “ಮೆಸ್ಸೀಯನು (ಎಂದರೆ ಕ್ರಿಸ್ತನು) ಬರುತ್ತಾನೆಂದು ನಾನು ಬಲ್ಲೆನು. ಆತನು ಬಂದಾಗ ನಮಗೆ ಎಲ್ಲವನ್ನು ತಿಳಿಸಿಕೊಡುವನು” ಎಂದು ಹೇಳಲು,
[26] ಯೇಸು ಆಕೆಗೆ “ನಿನ್ನ ಸಂಗಡ ಮಾತನಾಡುತ್ತಿರುವ ನಾನೇ ಆತನು” ಎಂದು ಹೇಳಿದನು.
[27] ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೂ, “ನಿನಗೆ ಏನು ಬೇಕು? ಆಕೆಯ ಸಂಗಡ ಯಾಕೆ ಮಾತನಾಡುತ್ತಿರುವೆ?” ಎಂದು ಒಬ್ಬರೂ ಆತನನ್ನು ಕೇಳಲಿಲ್ಲ.
[28] ಆಗ ಆ ಸ್ತ್ರೀ ತನ್ನ ನೀರಿನ ಕೊಡವನ್ನು ಅಲ್ಲೇ ಬಿಟ್ಟು ಊರೊಳಕ್ಕೆ ಹೋಗಿ ಜನರಿಗೆ,
[29] “ಅಲ್ಲಿ ಒಬ್ಬನಿದ್ದಾನೆ, ನಾನು ಇದುವರೆಗೆ ಮಾಡಿದ್ದನ್ನೆಲ್ಲಾ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಬರತಕ್ಕ ಕ್ರಿಸ್ತನು ಅವನೇ ಇರಬಹುದೋ?” ಎಂದು ಹೇಳಿದಳು.
[30] ಆಗ ಅವರೆಲ್ಲರು ಊರನ್ನು ಬಿಟ್ಟು ಆತನ ಬಳಿಗೆ ಬಂದರು.
[31] ಅಷ್ಟರೊಳಗೆ ಶಿಷ್ಯರು “ಗುರುವೇ, ಊಟಮಾಡು” ಎಂದು ಆತನನ್ನು ಕೇಳಿಕೊಂಡರು.
[32] ಆದರೆ ಆತನು ಅವರಿಗೆ “ನಿಮಗೆ ತಿಳಿಯದಿರುವ ಆಹಾರವು ನನ್ನ ಬಳಿಯಲ್ಲಿ ಉಂಟು” ಎಂದು ಹೇಳಲು
[33] ಶಿಷ್ಯರು, “ಆತನಿಗೆ ಯಾರಾದರೂ ಊಟಕ್ಕೆ ತಂದು ಕೊಟ್ಟರೇನೊ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[34] ಯೇಸು ಅವರಿಗೆ “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡಿ ಆತನ ಕೆಲಸವನ್ನು ಪೂರೈಸುವುದೇ ನನ್ನ ಆಹಾರ.
[35] ‘ಇನ್ನೂ ನಾಲ್ಕು ತಿಂಗಳುಗಳಾದ ಮೇಲೆ ಸುಗ್ಗಿಯು ಬರುವುದೆಂದು ನೀವು ಹೇಳುವುದುಂಟಷ್ಟೆ’? ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ. ಅವು ಬಲಿತು ಬೆಳ್ಳಗಾಗಿ ಕೊಯ್ಲಿಗೆ ಸಿದ್ಧವಾಗಿದೆಯೆಂದು ನಿಮಗೆ ಹೇಳುತ್ತೇನೆ.
[36] ಕೊಯ್ಯುವವನಿಗೆ ಈಗಲೇ ಕೂಲಿ ದೊರೆಯುತ್ತದೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನಿಗೂ ಮತ್ತು ಕೊಯ್ಯುವವನಿಗೂ ಒಟ್ಟಿಗೆ ಸಂತೋಷವಾಗುವುದು.
[37] ‘ಬಿತ್ತುವವನೊಬ್ಬನು, ಕೊಯ್ಯುವವನು ಬೇರೊಬ್ಬನು’ ಎಂದು ಹೇಳುವ ಮಾತು ಇದರಲ್ಲಿ ಸತ್ಯವಾಗಿದೆ.
[38] ನೀವು ಪ್ರಯಾಸ ಪಡದಂಥ ಬೆಳೆಯನ್ನು ಕೊಯ್ಯುವುದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು, ಬೇರೊಬ್ಬರು ಪ್ರಯಾಸಪಟ್ಟರು, ನೀವು ಅವರ ಕಷ್ಟದಲ್ಲಿ ಸೇರಿದ್ದೀರಿ” ಎಂದು ಹೇಳಿದನು.
[39] “ನಾನು ಮಾಡಿದ್ದನ್ನೆಲ್ಲಾ ಆತನು ನನಗೆ ಹೇಳಿದನು” ಎಂಬುದಾಗಿ ಸಾಕ್ಷಿಕೊಡುತ್ತಿರುವ ಆ ಸ್ತ್ರೀಯ ಮಾತಿನಿಂದ, ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು.
[40] ಆದುದರಿಂದ ಆ ಸಮಾರ್ಯದವರು ಆತನ ಬಳಿಗೆ ಬಂದು; ನೀನು ನಮ್ಮಲ್ಲಿ ಇರಬೇಕೆಂದು ಆತನನ್ನು ಬೇಡಿಕೊಳ್ಳಲು, ಆತನು ಎರಡು ದಿನ ಅಲ್ಲಿಯೇ ತಂಗಿದನು.
[41] ಇನ್ನೂ ಹೆಚ್ಚು ಜನರು ಆತನ ವಾಕ್ಯವನ್ನು ಕೇಳಿ ನಂಬಿದರು,
[42] ಜನರು ಆ ಸ್ತ್ರೀಗೆ, “ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ. ನಾವು ಸ್ವತಃ ಕಿವಿಯಾರೆ ಕೇಳಿ ಈತನು ನಿಜವಾಗಿಯೂ ಲೋಕರಕ್ಷಕನೇ ಎಂದು ತಿಳಿದುಕೊಂಡಿದ್ದೇವೆ” ಎಂದರು.
[43] ಎರಡು ದಿನಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು.
[44] ಏಕೆಂದರೆ ಪ್ರವಾದಿಗೆ ಸ್ವಂತದೇಶದಲ್ಲಿ ಗೌರವವಿಲ್ಲವೆಂದು ಯೇಸು ತಾನೇ ಹೇಳಿದ್ದನು.
[45] ಆತನು ಗಲಿಲಾಯವನ್ನು ತಲುಪಿದಾಗ ಗಲಿಲಾಯದವರು ಆತನನ್ನು ಸ್ವಾಗತಿಸಿದರು. ಯೆರೂಸಲೇಮಿನ ಪಸ್ಕಹಬ್ಬದ ಸಮಯದಲ್ಲಿ ಆತನು ಅಲ್ಲಿ ಮಾಡಿದ್ದನ್ನೆಲ್ಲಾ ಅವರು ನೋಡಿದ್ದರು, ಏಕೆಂದರೆ, ಅವರೂ ಹಬ್ಬಕ್ಕೆ ಹೋಗಿದ್ದರು.
[46] ಹೀಗಿರಲಾಗಿ, ಯೇಸು ತಾನು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಹಿಂತಿರುಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಅರಮನೆಯ ಒಬ್ಬ ಅಧಿಕಾರಿಯ ಮಗನು ಅಸ್ವಸ್ಥನಾಗಿದ್ದನು.
[47] ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಸುದ್ದಿಯನ್ನು ಆ ಅಧಿಕಾರಿಯು ಕೇಳಿದಾಗ ತನ್ನ ಮಗನು ಸಾಯುವ ಸ್ಥಿತಿಯಲ್ಲಿದುದ್ದರಿಂದ ಯೇಸುವಿನ ಬಳಿಗೆ ಹೋಗಿ, “ನೀನು ಬಂದು ನನ್ನ ಮಗನನ್ನು ಸ್ವಸ್ಥಮಾಡು” ಎಂದು ಬೇಡಿಕೊಂಡನು.
[48] ಯೇಸು ಅವನಿಗೆ “ನೀವು ಸೂಚಕ ಕಾರ್ಯಗಳನ್ನೂ ಮತ್ತು ಅದ್ಭುತ ಕಾರ್ಯಗಳನ್ನೂ ನೋಡದಿದ್ದರೆ ನಂಬುವುದೇ ಇಲ್ಲ” ಎಂದು ಹೇಳಿದನು.
[49] ಆ ಅರಮನೆಯ ಅಧಿಕಾರಿಯು “ಆಯ್ಯಾ, ನನ್ನ ಮಗನು ಸಾಯುವುದಕ್ಕೆ ಮುಂಚೆ ನೀನು ಬರಬೇಕು” ಅನ್ನಲು
[50] ಯೇಸು ಅವನಿಗೆ “ಹೋಗು ನಿನ್ನ ಮಗನು ಬದುಕುತ್ತಾನೆ” ಎಂದು ಹೇಳಿದನು. ಆ ಮನುಷ್ಯನು ಯೇಸು ತನಗೆ ಹೇಳಿದ ಮಾತನ್ನು ನಂಬಿ ಹೊರಟು ಹೋದನು.
[51] ಅವನು ಇನ್ನೂ ಘಟ್ಟಾ ಇಳಿದು ಹೋಗುತ್ತಿರುವಾಗಲೇ ಅವನ ಆಳುಗಳು ಅವನೆದುರಿಗೆ ಬಂದು ಅವನ ಮಗನು ಬದುಕಿರುವುದಾಗಿ ಅವನಿಗೆ ಹೇಳಿದರು.
[52] ಅವನು ಎಷ್ಟು ಘಂಟೆಯಲ್ಲಿ ಚೇತರಿಸಿಕೊಂಡನು ಎಂದು ಅವರನ್ನು ಕೇಳಿದಾಗ ಅವರು, “ನಿನ್ನೆ ಮಧ್ಯಾಹ್ನ ಒಂದು ಘಂಟೆಗೆ ಜ್ವರವು ಅವನನ್ನು ಬಿಟ್ಟಿತು” ಎಂದರು.
[53] ಆಗ “ನಿನ್ನ ಮಗನು ಬದುಕುತ್ತಾನೆ” ಎಂದು ಯೇಸು ತನಗೆ ಹೇಳಿದ ತಾಸಿನಲ್ಲಿಯೇ ಅದು ಸಂಭವಿಸಿತೆಂದು ಆ ತಂದೆಯು ತಿಳಿದುಕೊಂಡದ್ದರಿಂದ ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ನಂಬಿದರು.
[54] ಇದು ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯ.