Skip to content
Opens in a new window
Listen to this chapter • 4:08

[1] ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು.

[2] ಯೇಸುವನ್ನೂ ಆತನ ಶಿಷ್ಯರನ್ನೂ ಸಹ ಮದುವೆಗೆ ಕರೆದಿದ್ದರು.

[3] ಅಲ್ಲಿ ದ್ರಾಕ್ಷಾರಸವು ಸಾಲದೆ ಹೋದಾಗ, ಯೇಸುವಿನ ತಾಯಿಯು ಆತನಿಗೆ “ಅವರಲ್ಲಿ ದ್ರಾಕ್ಷಾರಸವು ಮುಗಿದುಹೋಗಿದೆ” ಎಂದು ತಿಳಿದಳು.

[4] ಯೇಸು ಆಕೆಗೆ “ಅಮ್ಮಾ, ಅದಕ್ಕೆ ನಾನೇನು ಮಾಡಲಿ? ನನ್ನ ಸಮಯವು ಇನ್ನೂ ಬಂದಿಲ್ಲ” ಎಂದು ಉತ್ತರಕೊಟ್ಟನು.

[5] ಆತನ ತಾಯಿಯು ಸೇವಕರಿಗೆ “ಆತನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದಳು.

[6] ಯೆಹೂದ್ಯರ ಶುದ್ಧಾಚಾರ ಪದ್ಧತಿಯ ಪ್ರಕಾರ ಅಲ್ಲಿ ಆರು ಕಲ್ಲಿನ ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಳಗ ನೀರು ಹಿಡಿಯುವ ಅಳತೆಯುಳ್ಳದ್ದಾಗಿತ್ತು.

[7] ಯೇಸು ಅವರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ” ಎಂದನು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.

[8] ಅನಂತರ ಆತನು ಸೇವಕರಿಗೆ, “ಈಗ ಇದನ್ನು ತೆಗೆದುಕೊಂಡು ಹೋಗಿ ಔತಣದ ಮೇಲ್ವಿಚಾರಕನಿಗೆ ಕೊಡಿರಿ” ಎಂದು ಹೇಳಿದಾಗ, ಅವರು ತೆಗೆದುಕೊಂಡು ಹೋಗಿ ಕೊಟ್ಟರು.

[9] ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿ ಮಾರ್ಪಟ್ಟಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂದಿತೆಂದು ಅವನಿಗೆ ತಿಳಿದಿರಲಿಲ್ಲ, ಆದರೆ ನೀರನ್ನು ತೋಡಿಕೊಂಡು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು,

[10] “ಎಲ್ಲರೂ ಉತ್ತಮವಾದ ದ್ರಾಕ್ಷಾರಸವನ್ನು ಮೊದಲು ಕೊಟ್ಟು ಅಮಲೇರಿದ ಮೇಲೆ ಸಾಧಾರಣವಾದ ದ್ರಾಕ್ಷಾರಸವನ್ನು ಕೊಡುತ್ತಾರೆ. ನೀನಾದರೋ ಉತ್ತಮವಾದ ದ್ರಾಕ್ಷಾರಸವನ್ನು ಇದುವರೆಗೂ ಇಟ್ಟುಕೊಂಡಿರುವೆ” ಎಂದನು.

[11] ಯೇಸು ಈ ಮೊದಲನೆಯ ಸೂಚಕ ಕಾರ್ಯವನ್ನು ಗಲಿಲಾಯದ ಕಾನಾ ಊರಿನಲ್ಲಿ ಮಾಡಿ, ತನ್ನ ಮಹಿಮೆಯನ್ನು ತೋರ್ಪಡಿಸಿದನು. ಇದರಿಂದ ಆತನ ಶಿಷ್ಯರು ಆತನಲ್ಲಿ ನಂಬಿಕೆಯಿಟ್ಟರು.

[12] ಇದಾದ ಮೇಲೆ ಯೇಸುವೂ, ಆತನ ತಾಯಿಯೂ, ತಮ್ಮಂದಿರೂ ಮತ್ತು ಆತನ ಶಿಷ್ಯರೂ ಘಟ್ಟಾ ಇಳಿದು ಕಪೆರ್ನೌಮಿಗೆ ಹೋಗಿ ಅಲ್ಲಿ ಅವರು ಕೆಲವು ದಿನ ಇದ್ದರು.

[13] ಆಗ ಯೆಹೂದ್ಯರ ಪಸ್ಕ ಹಬ್ಬವು ಹತ್ತಿರ ಬಂದುದರಿಂದ ಯೇಸು ಯೆರೂಸಲೇಮಿಗೆ ಹೋದನು.

[14] ಆತನು ದೇವಾಲಯದಲ್ಲಿ ದನ, ಕುರಿ, ಪಾರಿವಾಳಗಳನ್ನು ಮಾರುವವರೂ, ನಾಣ್ಯ ವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿರುವುದನ್ನು ಕಂಡನು.

[15] ಆತನು ಹಗ್ಗದಿಂದ ಚಾವಟಿ ಮಾಡಿ ಕುರಿ, ದನ ಸಹಿತ ಎಲ್ಲವನ್ನೂ, ದೇವಾಲಯದ ಹೊರಕ್ಕೆ ಅಟ್ಟಿ, ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಉರುಳಿಸಿ, ನಾಣ್ಯಗಳನೆಲ್ಲ ಚೆಲ್ಲಿದನು.

[16] ಪಾರಿವಾಳ ಮಾರುವವರಿಗೆ ಸಿಟ್ಟಿನಿಂದ “ಇವುಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿರಿ. ನನ್ನ ತಂದೆಯ ಮನೆಯನ್ನು ವ್ಯಾಪಾರದ ಸ್ಥಳವನ್ನಾಗಿ ಮಾಡುವುದನ್ನು ನಿಲ್ಲಿಸಿರಿ” ಎಂದು ಗದರಿಸಿದನು.

[17] ಆಗ “ನಿನ್ನ ಆಲಯದ ಮೇಲಿನ ಅಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತಿದೆ” ಎಂದು ಬರೆದಿರುವುದನ್ನು ಆತನ ಶಿಷ್ಯರು ನೆನಪುಮಾಡಿಕೊಂಡರು.

[18] ಆಗ ಅಲ್ಲಿದ್ದ ಯೆಹೂದ್ಯರು ಆತನಿಗೆ “ಇದನ್ನೆಲ್ಲಾ ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.

[19] ಅದಕ್ಕೆ ಯೇಸು “ಈ ದೇವಾಲಯವನ್ನು ಕೆಡವಿರಿ, ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು” ಎಂದು ಉತ್ತರಕೊಟ್ಟನು.

[20] ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳು ಹಿಡಿದವು. ನೀನು ಮೂರು ದಿನಗಳಲ್ಲಿ ಇದನ್ನು ಎಬ್ಬಿಸುವಿಯೋ?” ಎಂದರು.

[21] ಆದರೆ ಆತನು ತನ್ನ ದೇಹವೆಂಬ ದೇವಾಲಯದ ಕುರಿತು ಆ ಮಾತನ್ನು ಹೇಳಿದನು.

[22] ಆದುದರಿಂದ ಆತನು ಸತ್ತವರೊಳಗಿಂದ ಎದ್ದ ಮೇಲೆ ಈ ಮಾತು ಆತನ ಶಿಷ್ಯರ ನೆನಪಿಗೆ ಬಂದು ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನೂ, ಮತ್ತು ಯೇಸು ತಮಗೆ ಹೇಳಿದ ಮಾತನ್ನೂ ಅವರು ನಂಬಿದರು.

[23] ಆತನು ಪಸ್ಕಹಬ್ಬದ ಜಾತ್ರೆಯಲ್ಲಿ ಯೆರೂಸಲೇಮಿನಲ್ಲಿ ಇದ್ದಾಗ ಬಹು ಜನರು ಆತನು ಮಾಡಿದ ಸೂಚಕಕಾರ್ಯಗಳನ್ನು ನೋಡಿ ಆತನ ಹೆಸರಿನಲ್ಲಿ ನಂಬಿಕೆ ಇಟ್ಟರು.

[24] ಆದರೆ ಯೇಸು ಎಲ್ಲವನ್ನೂ ಬಲ್ಲವನಾದುದರಿಂದ ಅವರಿಗೆ ವಶವಾಗಲಿಲ್ಲ,

[25] ಆತನು ಪ್ರತಿ ಮನುಷ್ಯನ ಆಂತರ್ಯವನ್ನು ತಿಳಿದವನಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅಗತ್ಯವಿರಲಿಲ್ಲ.

ಯೋಹಾನನು — Chapters