[1] “ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಕುರಿಹಟ್ಟಿಯೊಳಗೆ ಬಾಗಿಲಿನಿಂದ ಬಾರದೆ, ಬೇರೆ ಕಡೆಯಿಂದ ಹತ್ತಿ ಬರುವವನು ಕಳ್ಳನೂ, ದರೋಡೆಕೋರನೂ ಆಗಿದ್ದಾನೆ.
[2] ಆದರೆ ಬಾಗಿಲಿನ ಮೂಲಕ ಪ್ರವೇಶಿಸುವವನೇ ಆ ಕುರಿಗಳ ಕುರುಬನು.
[3] ಬಾಗಿಲು ಕಾಯುವವನು ಅವನಿಗೆ ಬಾಗಿಲನ್ನು ತೆರೆಯುತ್ತಾನೆ; ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಅವನು ತನ್ನ ಸ್ವಂತ ಕುರಿಗಳ ಹೆಸರು ಹೇಳಿ ಕರೆದು ಅವುಗಳನ್ನು ಹೊರಗೆ ಬಿಡುತ್ತಾನೆ.
[4] ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ಮೇಲೆ ತಾನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಸ್ವರವನ್ನು ತಿಳಿದಿರುವುದರಿಂದ ಅವನನ್ನು ಹಿಂಬಾಲಿಸುತ್ತವೆ.
[5] ಆದರೆ ಅವು ಅಪರಿಚಿತನನ್ನು ಹಿಂಬಾಲಿಸದೇ ಅವನ ಬಳಿಯಿಂದ ಓಡಿಹೋಗುವುದಿಲ್ಲ. ಏಕೆಂದರೆ ಅವು ಅಪರಿಚಿತರ ಸ್ವರವನ್ನು ಗುರುತಿಸುವುದಿಲ್ಲ” ಎಂದು ನಿಮಗೆ ಹೇಳುತ್ತೇನೆ.
[6] ಈ ಸಾಮ್ಯವನ್ನು ಯೇಸು ಅವರಿಗೆ ಹೇಳಿದನು. ಆದರೂ ಆತನು ಹೇಳಿದ ವಿಷಯಗಳ ಅರ್ಥ ಏನೆಂಬುದು ಅವರು ಗ್ರಹಿಸಲಿಲ್ಲ.
[7] ಆಗ ಯೇಸು ಪುನಃ ಅವರಿಗೆ, “ನಿಮಗೆ ನಿಜನಿಜವಾಗಿ ಹೇಳುತ್ತೇನೆ; ಕುರಿಗಳಿಗೆ ನಾನೇ ಬಾಗಿಲಾಗಿದ್ದೇನೆ,
[8] ನನಗಿಂತ ಮೊದಲು ಬಂದವರೆಲ್ಲರು ಕಳ್ಳರೂ, ದರೋಡೆಕೋರರೂ ಆಗಿದ್ದರು. ಆದರೆ ಕುರಿಗಳು ಅವರಿಗೆ ಕಿವಿಗೊಡಲಿಲ್ಲ.
[9] ನಾನೇ ಆ ಬಾಗಿಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಪ್ರವೇಶಿಸಿದರೆ ಅವನು ಸುರಕ್ಷಿತನಾಗಿದ್ದು ಒಳಗೆ ಹೋಗುವನು, ಹೊರಗೆ ಬರುವನು ಮತ್ತು ಮೇವನ್ನು ಕಂಡುಕೊಳ್ಳುವನು.
[10] ಕಳ್ಳನಾದರೋ ಕದ್ದುಕೊಳ್ಳುವುದಕ್ಕೂ, ಕೊಯ್ಯುವುದಕ್ಕೂ ಮತ್ತು ನಾಶಮಾಡುವುದಕ್ಕೂ ಬರುತ್ತಾನೆಯೇ ಹೊರತು ಮತ್ತಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.
[11] “ನಾನೇ ಒಳ್ಳೆಯ ಕುರುಬನು. ಒಳ್ಳೆಯ ಕುರುಬನು ತನ್ನ ಕುರಿಗಳಿಗೋಸ್ಕರ ತನ್ನ ಪ್ರಾಣವನ್ನು ಕೊಡುತ್ತಾನೆ.
[12] ಕೂಲಿಯಾಳು ಕುರಿಗಳ ಕುರುಬನೂ ಒಡೆಯನೂ ಆಗಿರದೆ, ಅವನು ತೋಳ ಬರುವುದನ್ನು ನೋಡುತ್ತಲೇ ಕುರಿಗಳನ್ನು ಬಿಟ್ಟು ಓಡಿ ಹೋಗುತ್ತಾನೆ. ಆಗ ತೋಳವು ಕುರಿಗಳನ್ನು ಹಿಡಿದುಕೊಂಡು ಮಂದೆಯನ್ನು ಚದರಿಸುತ್ತದೆ.
[13] ಅವನು ಕೇವಲ ಕೂಲಿಯಾಳಾಗಿರುವುದರಿಂದ, ಕುರಿಗಳ ಚಿಂತೆ ಅವನಿಗಿಲ್ಲದೆ ಓಡಿ ಹೋಗುತ್ತಾನೆ.
[14] ನಾನೇ ನಿಜವಾದ ಒಳ್ಳೆಯ ಕುರುಬನು. ನನ್ನ ಕುರಿಗಳನ್ನು ನಾನು ಬಲ್ಲವನಾಗಿದ್ದೇನೆ. ನನ್ನ ಕುರಿಗಳು ನನ್ನನ್ನು ಬಲ್ಲವು.
[15] ತಂದೆಯು ನನ್ನನ್ನು ತಿಳಿದಿರುವಂತೆಯೇ, ನಾನು ತಂದೆಯನ್ನು ತಿಳಿದಿದ್ದೇನೆ; ಮತ್ತು ನಾನು ಕುರಿಗಳಿಗೋಸ್ಕರ ನನ್ನ ಪ್ರಾಣವನ್ನೇ ಕೊಡುತ್ತೇನೆ.
[16] ಇದಲ್ಲದೆ ಈ ಮಂದೆಗೆ ಸೇರದಿರುವ ಇನ್ನೂ ಬೇರೆ ಕುರಿಗಳು ನನಗಿವೆ, ಅವುಗಳನ್ನೂ ಸಹ ನಾನು ಕರೆ ತರಬೇಕು. ಅವು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು ಮತ್ತು ಒಬ್ಬನೇ ಕುರುಬನು ಇರುವನು.
[17] ತಂದೆಯು ನನ್ನನ್ನು ಪ್ರೀತಿಸುತ್ತಾನೆ ಏಕೆಂದರೆ, ನಾನು ನನ್ನ ಪ್ರಾಣವನ್ನು ಮರಳಿ ಪಡೆದುಕೊಳ್ಳುವಂತೆ ಅದನ್ನು ಕೊಡುತ್ತಿದ್ದೇನೆ.
[18] ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆದುಕೊಳ್ಳುವುದಿಲ್ಲ. ಆದರೆ ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ. ಅದನ್ನು ಕೊಡುವುದಕ್ಕೆ ನನಗೆ ಅಧಿಕಾರ ಉಂಟು. ಅದನ್ನು ಪುನಃ ಪಡೆದುಕೊಳ್ಳುವುದಕ್ಕೂ ನನಗೆ ಅಧಿಕಾರವಿದೆ. ಈ ಆಜ್ಞೆಯನ್ನು ನಾನು ನನ್ನ ತಂದೆಯಿಂದ ಹೊಂದಿದ್ದೇನೆ” ಎಂದನು.
[19] ಈ ಮಾತುಗಳ ದೆಸೆಯಿಂದ ಯೆಹೂದ್ಯರ ಮಧ್ಯದಲ್ಲಿ ಪುನಃ ಬೇಧ ಉಂಟಾಯಿತು.
[20] ಅವರಲ್ಲಿ ಅನೇಕರು ಆತನಿಗೆ, “ದೆವ್ವ ಹಿಡಿದಿದೆ, ಹುಚ್ಚನಾಗಿದ್ದಾನೆ, ನೀವು ಏಕೆ ಆತನ ಮಾತುಗಳನ್ನು ಕೇಳುತ್ತೀರಿ?” ಎಂದರು.
[21] ಇನ್ನು ಕೆಲವರು, “ಇವು ದೆವ್ವಹಿಡಿದವನ ಮಾತುಗಳಲ್ಲ, ದೆವ್ವವು ಕುರುಡನ ಕಣ್ಣುಗಳನ್ನು ತೆರೆಯಲು ಸಾಧ್ಯವೇ?” ಎಂದರು.
[22] ಆನಂತರ ಯೆರೂಸಲೇಮಿನಲ್ಲಿ ದೇವಾಲಯದ ಪ್ರತಿಷ್ಠೆಯ ಹಬ್ಬವು ನಡೆಯಿತು. ಅದು ಚಳಿಗಾಲವಾಗಿತ್ತು.
[23] ಯೇಸು ದೇವಾಲಯದೊಳಗೆ ಸೊಲೊಮೋನನ ಮಂಟಪದಲ್ಲಿ ತಿರುಗಾಡುತ್ತಾ ಇರುವಾಗ,
[24] ಯೆಹೂದ್ಯರು ಆತನನ್ನು ಸುತ್ತುವರೆದು ಆತನಿಗೆ, “ಇನ್ನು ಎಷ್ಟು ಕಾಲ ನಮ್ಮನ್ನು ಸಂದಿಗ್ಧದಲ್ಲಿ ಇಡುತ್ತಿ? ನೀನು ಕ್ರಿಸ್ತನಾಗಿದ್ದರೆ ಅದನ್ನು ನಮಗೆ ಸ್ಪಷ್ಟವಾಗಿ ಹೇಳು” ಎಂದರು.
[25] ಅದಕ್ಕೆ ಯೇಸು, “ನಾನು ನಿಮಗೆ ಹೇಳಿದೆನು, ಆದರೆ ನೀವು ನಂಬುವುದಿಲ್ಲ. ನನ್ನ ತಂದೆಯ ಹೆಸರಿನಲ್ಲಿ ನಾನು ಮಾಡುವ ಕ್ರಿಯೆಗಳೇ ನನ್ನ ವಿಷಯವಾಗಿ ಸಾಕ್ಷಿಯಾಗಿವೆ.
[26] ಆದರೂ, ನೀವು ನಂಬದೆ ಇದ್ದೀರಿ, ಏಕೆಂದರೆ ನೀವು ನನ್ನ ಕುರಿಗಳಲ್ಲ.
[27] ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ನಾನು ಅವುಗಳನ್ನು ಬಲ್ಲೆನು. ಅವು ನನ್ನನ್ನು ಹಿಂಬಾಲಿಸುತ್ತವೆ.
[28] ನಾನು ಅವುಗಳಿಗೆ ನಿತ್ಯಜೀವವನ್ನು ಕೊಡುತ್ತೇನೆ. ಅವು ಎಂದೆಂದಿಗೂ ನಾಶವಾಗುವುದೇ ಇಲ್ಲ. ಅವುಗಳನ್ನು ಯಾರೂ ನನ್ನ ಕೈಯಿಂದ ಕಸಿದುಕೊಳ್ಳಲಾರರು.
[29] ಅವುಗಳನ್ನು ನನಗೆ ಕೊಟ್ಟ ನನ್ನ ತಂದೆಯು ಎಲ್ಲರಿಗಿಂತ ಮಹೋನ್ನತನು. ಅವುಗಳನ್ನು ನನ್ನ ತಂದೆಯ ಕೈಯಿಂದ ಯಾರೂ ಕಸಿದುಕೊಳ್ಳಲಾರರು.
[30] ನಾನೂ ಮತ್ತು ನನ್ನ ತಂದೆಯೂ ಒಂದಾಗಿದ್ದೇವೆ” ಎಂದನು.
[31] ಆಗ ಯೆಹೂದ್ಯರು ಆತನನ್ನು ಕೊಲ್ಲಬೇಕೆಂದು ತಿರುಗಿ ಕಲ್ಲುಗಳನ್ನು ತೆಗೆದುಕೊಂಡರು,
[32] ಯೇಸು ಅವರಿಗೆ, “ನನ್ನ ತಂದೆಯಿಂದ ಅನೇಕ ಒಳ್ಳೆಯ ಕ್ರಿಯೆಗಳನ್ನು ನಿಮಗೆ ತೋರಿಸಿದ್ದೇನೆ. ಅವುಗಳಲ್ಲಿ ಯಾವ ಕ್ರಿಯೆಗಳ ನಿಮಿತ್ತ ನೀವು ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದು ಕೇಳಿದ್ದಕ್ಕೆ,
[33] ಯೆಹೂದ್ಯರು, “ನಾವು ನಿನ್ನ ಮೇಲೆ ಕಲ್ಲೆಸೆಯುವುದು ಒಳ್ಳೆಯ ಕಾರ್ಯಗಳಿಗಾಗಿ ಅಲ್ಲ, ಆದರೆ ದೇವದೂಷಣೆಗಾಗಿಯೂ ಮತ್ತು ನೀನು ಮನುಷ್ಯನಾಗಿದ್ದು ನಿನ್ನನ್ನು ನೀನೇ ದೇವರನ್ನಾಗಿ ಮಾಡಿಕೊಳ್ಳುವುದಕ್ಕಾಗಿಯೂ ನಾವು ನಿನ್ನ ಮೇಲೆ ಕಲ್ಲೆಸೆಯುತ್ತೇವೆ” ಎಂದು ಉತ್ತರ ಕೊಟ್ಟರು.
[34] ಅದಕ್ಕೆ ಯೇಸು, “‘ನೀವು ದೇವರುಗಳೇ ಆಗಿದ್ದೀರಿ ಎಂದು ನಾನು ಹೇಳಿದೆನು’ ಎಂಬುದಾಗಿ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿಲ್ಲವೋ?
[35] ಧರ್ಮಶಾಸ್ತ್ರವು ನಿರರ್ಥಕವೇನೂ ಅಲ್ಲ. ದೇವರ ವಾಕ್ಯವನ್ನು ಹೊಂದಿರುವವರಿಗೆ ‘ದೇವರುಗಳೆಂದೂ,’ ಆತನು ಕರೆದಿರುವುದಾದರೆ
[36] ತಂದೆಯು ಪ್ರತಿಷ್ಠೆಮಾಡಿ ಲೋಕಕ್ಕೆ ಕಳುಹಿಸಿಕೊಟ್ಟವನಾದ ‘ನಾನು ದೇವರ ಮಗನಾಗಿದ್ದೇನೆಂದು’ ಹೇಳಿದ್ದಕ್ಕೆ ‘ನೀನು ದೇವದೂಷಣೆ ಮಾಡುತ್ತೀ ಎಂದು ನೀವು ನನಗೆ ಹೇಳುತ್ತಿರಲ್ಲಾ?’
[37] ನಾನು ನನ್ನ ತಂದೆಯ ಕ್ರಿಯೆಗಳನ್ನು ಮಾಡದಿದ್ದರೆ ನನ್ನನ್ನು ನಂಬಬೇಡಿರಿ
[38] ನಾನು ಮಾಡಿದ್ದರಿಂದ ನೀವು ನನ್ನನ್ನು ನಂಬದೆ ಇದ್ದರೂ, ಈ ಕಾರ್ಯಗಳನ್ನಾದರೂ ನಂಬಿರಿ. ಆಗ ನನ್ನಲ್ಲಿ ತಂದೆಯು ಇದ್ದಾನೆಂತಲೂ, ತಂದೆಯಲ್ಲಿ ನಾನು ಇದ್ದೇನೆಂತಲೂ ನಿಮಗೆ ತಿಳಿಯುವುದು ಮತ್ತು ಮನದಟ್ಟಾಗುವುದು” ಎಂದನು.
[39] ಅವರು ಪುನಃ ಆತನನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು, ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು ಹೋದನು.
[40] ಆ ಮೇಲೆ ಆತನು ಯೊರ್ದನ್ ಹೊಳೆಯನ್ನು ದಾಟಿ, ಯೋಹಾನನು ಮೊದಲು ದೀಕ್ಷಾಸ್ನಾನ ಮಾಡಿಸುತ್ತಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಉಳಿದು ಕೊಂಡನು.
[41] ಆಗ ಅನೇಕರು ಆತನ ಬಳಿಗೆ ಬಂದು, “ಯೋಹಾನನು ಒಂದು ಸೂಚಕಕಾರ್ಯವನ್ನೂ ಮಾಡಲಿಲ್ಲ, ಆದರೆ ಈತನ ವಿಷಯವಾಗಿ ಯೋಹಾನನು ಹೇಳಿದ್ದೆಲ್ಲಾ ಸತ್ಯವಾಗಿದೆ” ಎಂದು ಮಾತನಾಡುತ್ತಿದ್ದರು.
[42] ಅಲ್ಲಿ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.