[1] ಪಸ್ಕ ಹಬ್ಬಕ್ಕೆ ಇನ್ನು ಆರು ದಿನಗಳು ಇರಲಾಗಿ ಯೇಸುವು, ಸತ್ತವರೊಳಗಿಂದ ಎಬ್ಬಿಸಿದ ಲಾಜರನು ವಾಸವಾಗಿದ್ದ ಬೇಥಾನ್ಯಕ್ಕೆ ಬಂದನು.
[2] ಯೇಸುವಿಗೆ ಅಲ್ಲಿ ಔತಣವನ್ನು ಏರ್ಪಡಿಸಿದ್ದರು. ಮಾರ್ಥಳು ಉಪಚಾರ ಮಾಡುತ್ತಿದ್ದಳು. ಲಾಜರನು ಆತನ ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಒಬ್ಬನಾಗಿದ್ದನು.
[3] ಆಗ ಮರಿಯಳು ಬಹು ಬೆಲೆಯುಳ್ಳ ಸ್ವಚ್ಛ ಜಟಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೆ ಕೂದಲಿನಿಂದ ಆತನ ಪಾದಗಳನ್ನು ಒರಸಿದಳು. ಆ ತೈಲದ ಪರಿಮಳವು ಮನೆಯಲ್ಲೆಲ್ಲಾ ತುಂಬಿಕೊಂಡಿತ್ತು.
[4] ಆಗ ಆತನ ಶಿಷ್ಯರಲ್ಲಿ ಒಬ್ಬನು ಅಂದರೆ, ಆತನನ್ನು ಹಿಡಿದುಕೊಡುವುದಕ್ಕಿದ್ದ ಇಸ್ಕರಿಯೋತ ಯೂದನೆಂಬುವನು,
[5] “ಈ ತೈಲವನ್ನು ಮುನ್ನೂರು ಬೆಳ್ಳಿನಾಣ್ಯಕ್ಕೆ ಮಾರಿ ಬಡವರಿಗೆ ಕೊಡಬಹುದಿತ್ತಲ್ಲಾ?” ಎಂದನು.
[6] ಅವನು ಬಡವರ ಮೇಲಿನ ಕನಿಕರದಿಂದ ಹೀಗೆ ಹೇಳಲಿಲ್ಲ. ಆದರೆ ಅವನು ಕಳ್ಳನಾಗಿದ್ದು ಹಣದ ಚೀಲವನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಿರಲಾಗಿ ಅದರಲ್ಲಿ ಹಾಕಿದ್ದನ್ನು ತನ್ನ ಸ್ವಂತ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತಿದ್ದನು, ಆದುದರಿಂದಲೇ ಹೀಗೆ ಹೇಳಿದನು.
[7] ಆಗ ಯೇಸುವು, “ಈಕೆಯನ್ನು ಬಿಟ್ಟುಬಿಡಿರಿ, ನನ್ನನ್ನು ಸಮಾಧಿ ಮಾಡುವ ದಿನಕ್ಕಾಗಿ ಈಕೆಯು ಇದನ್ನು ಇಟ್ಟುಕೊಂಡಿದ್ದಳು ಎಂದಿರಲಿ.
[8] ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲವಲ್ಲಾ” ಎಂದನು.
[9] ಯೆಹೂದ್ಯರ ಗುಂಪು ಆತನು ಅಲ್ಲಿ ಇದ್ದಾನೆಂದು ತಿಳಿದು, ಯೇಸುವನ್ನು ನೋಡುವುದಕ್ಕಾಗಿ ಮಾತ್ರವಲ್ಲದೆ, ಆತನು ಸತ್ತವರೊಳಗಿಂದ ಎಬ್ಬಿಸಿದ ಲಾಜರನನ್ನೂ ಸಹ ನೋಡಬೇಕೆಂಬುದಾಗಿ ಅಲ್ಲಿಗೆ ಬಂದರು.
[10] ಆದರೆ ಮುಖ್ಯಯಾಜಕರು ಲಾಜರನನ್ನೂ ಸಹ ಕೊಲ್ಲಬೇಕೆಂದು ಆಲೋಚಿಸಿದರು.
[11] ಏಕೆಂದರೆ ಅವನ ನಿಮಿತ್ತ ಅನೇಕ ಯೆಹೂದ್ಯರು ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು.
[12] ಮರುದಿನ ಹಬ್ಬಕ್ಕೆ ಬಂದಿದ್ದ ಜನರ ಗುಂಪು ಯೇಸು ಯೆರೂಸಲೇಮಿಗೆ ಬರುತ್ತಾನೆಂಬ ಸುದ್ದಿ ಕೇಳಿ
[13] ಖರ್ಜೂರದ ಗರಿಗಳನ್ನು ತೆಗೆದುಕೊಂಡು, ಆತನನ್ನು ಎದುರುಗೊಳ್ಳುವುದಕ್ಕೆ ಊರಿನಿಂದ ಹೊರಗೆ ಬಂದು, “ಹೊಸನ್ನ! ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; ಇಸ್ರಾಯೇಲಿನ ಅರಸನಿಗೆ ಶುಭವಾಗಲಿ” ಎಂದು ಆರ್ಭಟಿಸಿದರು.
[14] ಯೇಸು ದಾರಿಯಲ್ಲಿ ಪ್ರಾಯದ ಕತ್ತೆಯೊಂದನ್ನು ಕಂಡು ಅದರ ಮೇಲೆ ಕುಳಿತುಕೊಂಡನು.
[15] ಹೀಗೆ, “ಚೀಯೋನ್ ನಗರಿಯೇ, ಹೆದರಬೇಡ ಇಗೋ, ನಿನ್ನ ಅರಸನು ಕತ್ತೆಮರಿಯ ಮೇಲೆ ಕುಳಿತುಕೊಂಡು ಬರುತ್ತಿದ್ದಾನೆ” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು.
[16] ಇದು ಆತನ ಶಿಷ್ಯರಿಗೆ ಮೊದಲು ತಿಳಿಯಲಿಲ್ಲ. ಆದರೆ ಯೇಸು ತನ್ನ ಮಹಿಮೆಯನ್ನು ಹೊಂದಿದ ಮೇಲೆ ಇದು ಆತನ ವಿಷಯವಾಗಿ ಬರೆದಿರುವಂತೆಯೇ, ಇವುಗಳನ್ನು ಆತನಿಗೆ ಮಾಡಿದೆವೆಂದೂ ನೆನಪು ಮಾಡಿಕೊಂಡರು.
[17] ಇದಲ್ಲದೆ ಆತನು ಲಾಜರನನ್ನು ಸಮಾಧಿಯೊಳಗಿಂದ ಕರೆದು ಅವನನ್ನು ಸತ್ತವರೊಳಗಿಂದ ಎಬ್ಬಿಸಿದಾಗ ಆತನ ಸಂಗಡ ಇದ್ದ ಜನರೇ ಈ ವಿಷಯಕ್ಕೆ ಸಾಕ್ಷಿಕೊಡುತ್ತಿದ್ದರು.
[18] ಆತನು ಈ ಸೂಚಕಕಾರ್ಯವನ್ನು ಮಾಡಿದನೆಂದು ಕೇಳಿದ ಕಾರಣದಿಂದಲೂ ಜನರು ಆತನನ್ನು ಸಂಧಿಸಲು ಬಂದರು.
[19] ಹೀಗಿರಲಾಗಿ ಫರಿಸಾಯರು, “ನಮ್ಮ ಯತ್ನವೇನೂ ನಡೆಯಲಿಲ್ಲ ನೋಡಿರಿ, ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.
[20] ಇದಲ್ಲದೆ ಆರಾಧನೆ ಮಾಡಬೇಕೆಂದು ಹಬ್ಬಕ್ಕೆ ಬಂದವರಲ್ಲಿ ಕೆಲವು ಮಂದಿ ಗ್ರೀಕರಿದ್ದರು.
[21] ಇವರು ಗಲಿಲಾಯದಲ್ಲಿರುವ ಬೇತ್ಸಾಯಿದ ಊರಿನ ಫಿಲಿಪ್ಪನ ಬಳಿಗೆ ಬಂದು, “ಅಯ್ಯಾ, ನಾವು ಯೇಸುವನ್ನು ನೋಡಬೇಕೆಂದಿದ್ದೇವೆಂದು” ಅವನನ್ನು ಬೇಡಿಕೊಂಡರು.
[22] ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿದನು. ಅಂದ್ರೆಯನು ಹಾಗೂ ಫಿಲಿಪ್ಪನೂ ಬಂದು ಯೇಸುವಿಗೆ ಹೇಳಿದರು.
[23] ಆಗ ಯೇಸು ಅವರಿಗೆ, “ಮನುಷ್ಯಕುಮಾರನು ಮಹಿಮೆ ಹೊಂದುವ ಗಳಿಗೆಯು ಬಂದಿದೆ.
[24] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು. ಆದರೆ ಅದು ಸತ್ತರೆ ಬಹಳ ಫಲ ಕೊಡುವುದು
[25] ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುವನು. ಈ ಲೋಕದಲ್ಲಿ ತನ್ನ ಪ್ರಾಣವನ್ನು ಕಳೆದುಕೊಳ್ಳಲು ಹಿಂಜರಿಯದವನು ನಿತ್ಯಜೀವಕ್ಕಾಗಿ ಅದನ್ನು ಕಾಪಾಡಿಕೊಳ್ಳುವನು.
[26] ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನನ್ನು ಹಿಂಬಾಲಿಸಲಿ, ಮತ್ತು ಎಲ್ಲಿ ನಾನು ಇರುತ್ತೇನೋ ಅಲ್ಲಿ ನನ್ನ ಸೇವಕನೂ ಸಹ ಇರುವನು. ಯಾರಾದರೂ ನನ್ನ ಸೇವೆಯನ್ನು ಮಾಡುವವನಾದರೆ ನನ್ನ ತಂದೆಯು ಅವನನ್ನು ಸನ್ಮಾನಿಸುವನು.
[27] ಈಗ ನನ್ನ ಪ್ರಾಣವು ತತ್ತರಿಸುತ್ತಿದೆ. ನಾನೇನು ಹೇಳಲಿ? ‘ತಂದೆಯೇ, ಈ ಗಳಿಗೆಯಿಂದ ನನ್ನನ್ನು ತಪ್ಪಿಸು.’ ಆದರೆ ಈ ಕಾರಣಕ್ಕಾಗಿಯೇ ಈ ಗಳಿಗೆಗೆ ಬಂದಿದ್ದೇನಲ್ಲಾ?
[28] ತಂದೆಯೇ ನಿನ್ನ ಹೆಸರನ್ನು ಮಹಿಮೆಪಡಿಸಿಕೋ” ಎಂದನು. ಅದಕ್ಕೆ, “ಮಹಿಮೆಪಡಿಸಿದ್ದೇನೆ ತಿರುಗಿ ಮಹಿಮೆಪಡಿಸುವೆನು” ಎಂಬ ಸ್ವರವು ಪರಲೋಕದಿಂದ ಬಂದಿತು.
[29] ಆಗ ಅಲ್ಲಿ ನಿಂತುಕೊಂಡಿದ್ದ ಜನರು ಅದನ್ನು ಕೇಳಿ, “ಗುಡುಗಿತು” ಎಂದರು. ಇನ್ನು ಕೆಲವರು “ದೇವದೂತನು ಈತನ ಸಂಗಡ ಮಾತನಾಡಿದನು” ಎಂದರು.
[30] ಯೇಸು ಅವರಿಗೆ, “ಈ ಶಬ್ದವು ನನಗಾಗಿ ಆಗಲಿಲ್ಲ, ನಿಮಗಾಗಿಯೇ ಆಯಿತು.
[31] ಈಗ ಈ ಲೋಕಕ್ಕೆ ನ್ಯಾಯತೀರ್ಪು ಆಗುತ್ತದೆ. ಈಗ ಇಹಲೋಕಾಧಿಪತಿಯು ಹೊರಗೆ ನೂಕಲ್ಪಡುವನು
[32] ಆದರೆ ನಾನು ಭೂಮಿಯಿಂದ ಮೇಲಕ್ಕೆ ಎಬ್ಬಿಸಲ್ಪಟ್ಟ ನಂತರ ಎಲ್ಲರನ್ನೂ ನನ್ನ ಬಳಿಗೆ ಸೆಳೆದುಕೊಳ್ಳುವೆನು” ಎಂದು ಹೇಳಿದನು.
[33] ತಾನು ಎಂಥಾ ಮರಣವನ್ನು ಹೊಂದುತ್ತೇನೆಂದು ಸೂಚಿಸಿ ಇದನ್ನು ಹೇಳಿದನು.
[34] ಅದಕ್ಕೆ ಆ ಜನರು, “ಕ್ರಿಸ್ತನು ಸದಾಕಾಲ ಇರುತ್ತಾನೆಂದು ಧರ್ಮಶಾಸ್ತ್ರದಲ್ಲಿ ಕೇಳಿದ್ದೇವೆ. ಹಾಗಾದರೆ ಮನುಷ್ಯಕುಮಾರನು ಮೇಲಕ್ಕೆ ಎತ್ತಲ್ಪಡಬೇಕೆಂದು ನೀನು ಹೇಳುವುದು ಹೇಗೆ? ಈ ಮನುಷ್ಯಕುಮಾರನು ಯಾರು?” ಎಂದರು.
[35] ಆಗ ಯೇಸು ಅವರಿಗೆ, “ಇನ್ನು ಸ್ವಲ್ಪ ಕಾಲವೇ ಬೆಳಕು ನಿಮ್ಮಲ್ಲಿ ಇರುತ್ತದೆ. ಕತ್ತಲೆಯು ನಿಮ್ಮನ್ನು ಮುಸುಕಿಕೊಳ್ಳದಂತೆ ಬೆಳಕು ಇರುವಾಗಲೇ ನಡೆಯಿರಿ. ಕತ್ತಲಿನಲ್ಲಿ ಒಬ್ಬನು ತಾನು ಎಲ್ಲಿಗೆ ಹೋಗುತ್ತಾನೆಂದು ತಿಳಿಯನು.
[36] ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ. ನಂಬಿದರೆ ನೀವು ಬೆಳಕಿನ ಮಕ್ಕಳಾರಾಗುವಿರಿ” ಎಂದು ಹೇಳಿದನು. ಇದನ್ನು ಯೇಸು ಹೇಳಿದ ಮೇಲೆ ಅವರನ್ನು ಬಿಟ್ಟುಹೋಗಿ ಅಡಗಿಕೊಂಡನು.
[37] ಯೇಸು ಅನೇಕ ಸೂಚಕಕಾರ್ಯಗಳನ್ನು ಅವರ ಎದುರಿನಲ್ಲಿ ಮಾಡಿದರೂ ಅವರು ಆತನನ್ನು ನಂಬಲಿಲ್ಲ.
[38] ಇದರಿಂದ, ಪ್ರವಾದಿಯಾದ ಯೆಶಾಯನು ನುಡಿದ ಮಾತು ನೆರವೇರಿತು, ಅದೇನೆಂದರೆ, “ಕರ್ತನೇ, ನಮ್ಮ ಉಪದೇಶವನ್ನು ಯಾರು ನಂಬಿದರು? ಕರ್ತನ ಭುಜ ಬಲವು ಯಾರಿಗೆ ಗೋಚರವಾಯಿತು?” ಎಂಬುದೇ.
[39] ಅವರು ನಂಬಲಾರದೇ ಹೋದುದ್ದಕ್ಕೆ ಯೆಶಾಯನು ಮತ್ತೊಂದು ಮಾತಿನಲ್ಲಿ ಕಾರಣವನ್ನು ಸೂಚಿಸಿದ್ದಾನೆ, ಅದೇನೆಂದರೆ,
[40] “ಅವರು ಕಣ್ಣಿನಿಂದ ಕಾಣದೆ, ಹೃದಯದಿಂದ ಗ್ರಹಿಸದೆ ಮತ್ತು ತಿರುಗಿಕೊಂಡು ನನ್ನಿಂದ ಹೇಗೂ ಸ್ವಸ್ಥತೆಯನ್ನು ಹೊಂದದೆ ಇರುವಂತೆ, ಆತನು ಅವರ ಕಣ್ಣುಗಳನ್ನು ಕುರುಡುಮಾಡಿ ಅವರ ಹೃದಯವನ್ನು ಕಠಿಣಮಾಡಿದನು” ಎಂಬುದೇ.
[41] ಯೆಶಾಯನು ಯೇಸುವಿನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯವಾಗಿ ಈ ಮಾತನ್ನು ಹೇಳಿದನು.
[42] ಆದರೂ ಹಿರೀಸಭೆಯವರಲ್ಲಿಯೂ ಸಹ ಅನೇಕರು ಆತನನ್ನು ನಂಬಿದರು, ಆದರೆ ತಮಗೆ ಸಭೆಯಿಂದ ಬಹಿಷ್ಕಾರವಾದೀತೆಂದು, ಫರಿಸಾಯರ ನಿಮಿತ್ತ ಅವರು ಬಹಿರಂಗವಾಗಿ ಅದನ್ನು ಜನರ ಮುಂದೆ ಅರಿಕೆಮಾಡಿಕೊಳ್ಳಲಿಲ್ಲ.
[43] ಅವರು ದೇವರಿಂದ ಬರುವ ಹೊಗಳಿಕೆಗಿಂತ ಮನುಷ್ಯರಿಂದ ಬರುವ ಹೊಗಳಿಕೆ ಅವರಿಗೆ ಇಷ್ಟವಾಗಿತ್ತು.
[44] ಯೇಸು ಕೂಗಿ ಹೇಳಿದ ಮಾತೇನಂದರೆ, “ನನ್ನನ್ನು ನಂಬುವವನು ನನ್ನನ್ನೇ ನಂಬುವವನಲ್ಲದೇ ನನ್ನನ್ನು ಕಳುಹಿಸಿಕೊಟ್ಟಾತನನ್ನು ಸಹ ನಂಬುವವನಾಗಿದ್ದಾನೆ.
[45] ಮತ್ತು ನನ್ನನ್ನು ನೋಡುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನು ನೋಡುವವನಾಗಿದ್ದಾನೆ.
[46] ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು, ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ.
[47] ಯಾರಾದರೂ ನನ್ನ ಮಾತುಗಳನ್ನು ಕೇಳಿದರೂ ಅದನ್ನು ಕೈಕೊಂಡು ನಡೆಯದೆ ಹೋದರೆ, ನಾನು ಅವನಿಗೆ ತೀರ್ಪುಮಾಡುವುದಿಲ್ಲ. ಲೋಕಕ್ಕೆ ತೀರ್ಪುಮಾಡುವುದಕ್ಕಾಗಿ ನಾನು ಬಂದಿಲ್ಲ, ಆದರೆ ಲೋಕವನ್ನು ರಕ್ಷಿಸುವುದಕ್ಕಾಗಿ ಬಂದಿದ್ದೇನಷ್ಟೇ.
[48] ನನ್ನನ್ನು ತಿರಸ್ಕರಿಸಿ ನನ್ನ ಮಾತುಗಳನ್ನು ಸ್ವೀಕರಿಸದೆ ಇರುವವನಿಗೆ ತೀರ್ಪುಮಾಡುವಂಥದ್ದು ಒಂದು ಇದೆ. ಅದು ನಾನು ಆಡುವ ಮಾತೇ, ಕಡೆಯ ದಿನದಲ್ಲಿ ಅದೇ ಅವನಿಗೆ ತೀರ್ಪುಮಾಡುವುದು.
[49] ಏಕೆಂದರೆ ಇದನ್ನು ನನ್ನಷ್ಟಕ್ಕೆ ನಾನೇ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿ ಕೊಟ್ಟ ತಂದೆಯೇ, ನಾನು ಏನು ಹೇಳಬೇಕು ಮತ್ತು ಹೇಗೆ ಮಾತನಾಡಬೇಕು, ಎಂಬುದಾಗಿ ನನಗೆ ಆಜ್ಞಾಪಿಸಿದ್ದಾನೆ.
[50] ಆತನ ಆಜ್ಞೆಯು ನಿತ್ಯಜೀವವಾಗಿದೆ ಎಂದು ನಾನು ಬಲ್ಲೆನು; ಆದುದರಿಂದ ನಾನು ಮಾತನಾಡುವುದನ್ನೆಲ್ಲಾ ತಂದೆ ನನಗೆ ಹೇಳಿದ ಮೇರೆಗೆ ಮಾತನಾಡುತ್ತಿದ್ದೇನೆ” ಎಂದನು.