Skip to content
Opens in a new window
Listen to this chapter • 8:30

[1] ಮಾರ್ಥಳು ಮತ್ತು ಆಕೆಯ ಸಹೋದರಿಯಾದ, ಮರಿಯಳ ಊರಾದ, ಬೇಥಾನ್ಯದಲ್ಲಿ ಲಾಜರನೆಂಬುವನೊಬ್ಬನು ಅಸ್ವಸ್ಥನಾಗಿದ್ದನು.

[2] ಈ ಮರಿಯಳು ಕರ್ತನಿಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆ ಕೂದಲಿನಿಂದ ಒರಸಿದವಳು. ಈಕೆಯ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.

[3] ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.

[4] ಯೇಸು ಇದನ್ನು ಕೇಳಿ, “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು” ಎಂದು ಹೇಳಿದನು.

[5] ಮಾರ್ಥಳನ್ನು ಆಕೆಯ ತಂಗಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದನು.

[6] ಲಾಜರನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿದ ಮೇಲೆಯೂ ಎರಡು ದಿನ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡನು.

[7] ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಪುನಃ ಯೂದಾಯಕ್ಕೆ ಹೋಗೋಣ” ಎಂದು ಹೇಳಿದನು.

[8] ಆತನ ಶಿಷ್ಯರು ಆತನಿಗೆ, “ಗುರುವೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ, ಪುನಃ ನೀನು ಅಲ್ಲಿಗೆ ಹೋಗಬೇಕೆಂದಿರುವಿಯಾ?” ಎಂದರು.

[9] ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಉಂಟಲ್ಲವೇ? ಒಬ್ಬನು ಹಗಲಿನಲ್ಲಿ ನಡೆದರೆ, ಈ ಲೋಕದ ಬೆಳಕು ಕಾಣಿಸುವುದರಿಂದ ಅವನು ಎಡವುದಿಲ್ಲ.

[10] ರಾತ್ರಿಯಲ್ಲಿ ನಡೆದರೆ ತನ್ನಲ್ಲಿ ಬೆಳಕಿಲ್ಲದ್ದರಿಂದ ಅವನು ಎಡವುತ್ತಾನೆ” ಎಂದು ಉತ್ತರಕೊಟ್ಟನು.

[11] ಇದನ್ನು ಹೇಳಿದ ಮೇಲೆ ಆತನು ಅವರಿಗೆ, “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ಆದುದರಿಂದ ನಾನು ಹೋಗಿ ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ” ಎಂದು ಹೇಳಿದನು.

[12] ಅದಕ್ಕೆ ಶಿಷ್ಯರು, “ಅವನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು” ಎಂದರು.

[13] ಯೇಸು ಅವನ ಮರಣವನ್ನು ಕುರಿತು ಅದನ್ನು ಹೇಳಿದ್ದನು, ಆದರೆ ಅವರು ವಿಶ್ರಾಂತಿಗಾಗಿ ಮಲಗಿದ್ದಾನೆಂಬುದಾಗಿ ಹೇಳಿದನೆಂದು ಯೋಚಿಸಿದರು.

[14] ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತು ಹೋಗಿದ್ದಾನೆ.

[15] ನಾನು ಅಲ್ಲಿ ಇಲ್ಲದೆ ಹೋದದ್ದು ಒಳ್ಳೆಯದೇ, ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಬನ್ನಿ, ನಾವು ಅವನ ಬಳಿಗೆ ಹೋಗೋಣ” ಎಂದು ಹೇಳಿದನು

[16] ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಸಾಯುವುದಕ್ಕೆ ಹೋಗೋಣ” ಎಂದು ಹೇಳಿದನು.

[17] ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿನಗಳಾಯಿತೆಂದು ಆತನಿಗೆ ತಿಳಿದು ಬಂದಿತು.

[18] ಬೇಥಾನ್ಯವು ಯೆರೂಸಲೇಮಿಗೆ ಸಮೀಪವಾಗಿತ್ತು. ಯೆರುಸಲೇಮಿನಿಂದ ಸುಮಾರು ಒಂದು ಹರಿದಾರಿಯಷ್ಟು ಅಂತರವಿತ್ತು.

[19] ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು.

[20] ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು.

[21] ಆಗ ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.

[22] ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು.

[23] ಯೇಸು ಆಕೆಗೆ, “ನಿನ್ನ ತಮ್ಮನು ಪುನಃ ಎದ್ದು ಬರುವನು” ಎಂದು ಹೇಳಿದನು.

[24] ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು.

[25] ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು,

[26] ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ,

[27] ಆಕೆಯು ಆತನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು.

[28] ಇದನ್ನು ಹೇಳಿ ಆಕೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಗುಪ್ತವಾಗಿ ಕರೆದು, “ಗುರುವು ಬಂದಿದ್ದಾರೆ, ನಿನ್ನನ್ನು ಕರೆಯುತ್ತಿದ್ದಾರೆ” ಎಂದಳು.

[29] ಮರಿಯಳು ಇದನ್ನು ಕೇಳಿದಾಗ ತಟ್ಟನೆ ಎದ್ದು ಆತನ ಬಳಿಗೆ ಹೋದಳು.

[30] ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.

[31] ಮರಿಯಳೊಂದಿಗೆ ಮನೆಯಲ್ಲಿ ಇದ್ದುಕೊಂಡು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯ ಹಿಂದೆ ಹೋದರು.

[32] ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಗಳಿಗೆ ಅಡ್ಡಬಿದ್ದು ಆತನಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು.

[33] ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರು ಅಳುವುದನ್ನು ಯೇಸು ನೋಡಿದಾಗ ಯೇಸುವು ಆತ್ಮದಲ್ಲಿ ವ್ಯಸನಪಟ್ಟು ನೊಂದುಕೊಂಡು,

[34] “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದನು. ಅವರು ಆತನಿಗೆ, “ಕರ್ತನೇ, ಬಂದು ನೋಡು” ಎಂದರು.

[35] ಯೇಸು ಕಣ್ಣೀರಿಟ್ಟನು.

[36] ಅದಕ್ಕೆ ಯೆಹೂದ್ಯರು, “ಆಹಾ! ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದಾನೆ” ಎಂದರು.

[37] ಅವರಲ್ಲಿ ಕೆಲವರು, “ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ, ಈ ಮನುಷ್ಯನನ್ನು ಸಾಯದ ಹಾಗೆ ಮಾಡಬಹುದಿತ್ತಲ್ಲಾ?” ಎಂದರು.

[38] ಯೇಸು ತಿರುಗಿ ತನ್ನ ಮನದಲ್ಲಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಒಂದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಿಡಲಾಗಿತ್ತು.

[39] ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು.

[40] ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು

[41] ಆಗ ಅವರು ಕಲ್ಲನ್ನು ತೆಗೆದು ಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

[42] ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ” ಎಂದು ಹೇಳಿದನು.

[43] ಆತನು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.

[44] ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವ ವಸ್ತ್ರಗಳಿಂದ ಸುತ್ತಿದ್ದವು. ಅವನ ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಡಿಸಿರಿ, ಅವನು ಹೋಗಲಿ” ಎಂದು ಹೇಳಿದನು.

[45] ಆದುದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯವನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.

[46] ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕಾರ್ಯಗಳನ್ನು ಅವರಿಗೆ ಹೇಳಿದರು.

[47] ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.

[48] ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಆತನ್ನನ್ನೇ ನಂಬುವರು. ರೋಮನ್ನರು ಬಂದು ನಮ್ಮ ಸ್ಥಳವನ್ನೂ ಮತ್ತು ರಾಷ್ಟ್ರವನ್ನೂ ವಶ ಮಾಡಿಕೊಂಡಾರು” ಎಂದರು.

[49] ಆಗ ಅವರಲ್ಲಿ ಆ ವರ್ಷಕ್ಕೆ ಮಹಾಯಾಜಕನಾಗಿದ್ದ ಕಾಯಫನೆಂಬುವನು ಅವರಿಗೆ, “ನಿಮಗೇನೂ ತಿಳಿಯುತ್ತಿಲ್ಲ.

[50] ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ” ಎಂಬುದಾಗಿ ಹೇಳಿದನು.

[51] ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ, ಆದರೆ ತಾನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ, ಯೇಸು ಆ ಜನರಿಗೋಸ್ಕರ ಹಾಗೂ

[52] ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು

[53] ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.

[54] ಹೀಗಿರಲಾಗಿ ಯೇಸು ಇನ್ನೂ ಯೆಹೂದ್ಯರೊಳಗೆ ಬಹಿರಂಗವಾಗಿ ತಿರುಗಾಡದೆ, ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ ಹೋಗಿ, ಎಫ್ರಾಯೀಮ್ ಎಂಬ ಊರಲ್ಲಿ ತನ್ನ ಶಿಷ್ಯರ ಜೊತೆ ಇದ್ದನು.

[55] ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ, ಬಹು ಜನರು ತಮ್ಮನ್ನು ಶುದ್ಧ ಮಾಡಿಕೊಳ್ಳುವುದಕ್ಕಾಗಿ ಹಬ್ಬಕ್ಕಿಂತ ಮೊದಲೇ ಹಳ್ಳಿಗಳಿಂದ ಯೆರೂಸಲೇಮಿಗೆ ಬಂದರು.

[56] ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಅವನು ಹಬ್ಬಕ್ಕೆ ಬಾರದೇ ಇದ್ದಾನೋ? ನಿಮಗೆ ಹೇಗೆ ತೋರುತ್ತದೆ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಇದ್ದರು.

[57] ಆಗ ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಹಿಡಿಯಬೇಕೆಂಬುದಾಗಿ ಯೋಚಿಸಿ, ಅವನಿರುವ ಸ್ಥಳವು ಯಾರಿಗಾದರೂ ಗೊತ್ತಾದರೆ ಅದನ್ನು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.

ಯೋಹಾನನು — Chapters