Skip to content
Opens in a new window
Listen to this chapter • 7:17

[1] ಯೇಸು ಈ ಮಾತುಗಳನ್ನಾಡಿದ ಮೇಲೆ ತನ್ನ ಶಿಷ್ಯರ ಜೊತೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಆತನೂ, ಆತನ ಶಿಷ್ಯರೂ ಅಲ್ಲಿದ್ದ ಒಂದು ತೋಟದೊಳಗೆ ಪ್ರವೇಶಿಸಿದರು.

[2] ಆತನನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು ಏಕೆಂದರೆ, ಆಗಾಗ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಸೇರಿಬರುತ್ತಿದ್ದರು.

[3] ಹೀಗಿರಲಾಗಿ ಯೂದನು ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಸೈನಿಕರ ಗುಂಪನ್ನೂ, ಕಾವಲಾಳುಗಳನ್ನೂ ಕರೆದುಕೊಂಡು ದೀಪಗಳನ್ನೂ, ಪಂಜುಗಳನ್ನೂ ಮತ್ತು ಆಯುಧಗಳನ್ನೂ ಹಿಡಿದುಕೊಂಡು ಅಲ್ಲಿಗೆ ಬಂದನು.

[4] ಆಗ ಯೇಸು ತನಗೆ ಸಂಭವಿಸಲಿರುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಿದನು.

[5] ಅದಕ್ಕೆ ಅವರು, “ನಜರೇತಿನ ಯೇಸುವನ್ನು ಹುಡುಕುತ್ತಿದ್ದೇವೆ” ಎಂದರು. ಯೇಸು ಅವರಿಗೆ “ನಾನೇ ಆತನು” ಎಂದು ಹೇಳಿದನು. ಆತನನ್ನು ಹಿಡಿದು ಕೊಡುವ ಯೂದನು ಸಹ ಅವರ ಜೊತೆಯಲ್ಲಿ ನಿಂತಿದ್ದನು.

[6] ಆತನು ಅವರಿಗೆ “ನಾನೇ ಆತನು” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.

[7] ಆಗ ಆತನು ಪುನಃ ಅವರಿಗೆ “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, ಅವರು, “ನಜರೇತಿನ ಯೇಸುವನ್ನು ಹುಡುಕುತ್ತೇವೆ” ಎಂದರು.

[8] ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಹೋಗಲುಬಿಡಿರಿ” ಎಂದನು.

[9] ಹೀಗೆ “ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳೆದುಕೊಳ್ಳಲಿಲ್ಲ” ಎಂದು ತಾನೇ ಹೇಳಿದ ಮಾತು ನೆರವೇರಿತು.

[10] ಸೀಮೋನ್ ಪೇತ್ರನ ಬಳಿಯಲ್ಲಿ ಒಂದು ಕತ್ತಿ ಇತ್ತು; ಆಗ ಅದನ್ನು ಅವನು ಹೊರಕ್ಕೆ ಎಳೆದುಕೊಂಡು, ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಆಳಿನ ಹೆಸರು ಮಲ್ಕನು.

[11] ಆಗ ಯೇಸು ಪೇತ್ರನಿಗೆ, “ಕತ್ತಿಯನ್ನು ಒರೆಯಲ್ಲಿ ಹಾಕು. ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೋ?” ಎಂದು ಹೇಳಿದನು.

[12] ಆಮೇಲೆ ಆ ಸೈನಿಕರ ಗುಂಪು ಮತ್ತು ಸಹಸ್ರಾಧಿಪತಿಯೂ, ಯೆಹೂದ್ಯರ ಓಲೇಕಾರರೂ ಯೇಸುವನ್ನು ಹಿಡಿದು ಕಟ್ಟಿದರು.

[13] ಆತನನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.

[14] ಆ ಕಾಯಫನೇ, ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟವನು.

[15] ಸೀಮೋನ್ ಪೇತ್ರನೂ ಮತ್ತು ಇನ್ನೊಬ್ಬ ಶಿಷ್ಯನೂ ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನಿಗೆ ಮಹಾಯಾಜಕನ ಪರಿಚಯವಿದ್ದುದರಿಂದ ಯೇಸುವಿನ ಜೊತೆ ಮಹಾಯಾಜಕನ ಅಂಗಳದೊಳಗೆ ಹೋದನು.

[16] ಆದರೆ ಪೇತ್ರನು ಹೊರಗೆ ಬಾಗಿಲಿನ ಬಳಿಯಲ್ಲಿ ನಿಂತಿದ್ದನು. ಮಹಾಯಾಜಕನ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.

[17] ಆಗ ದ್ವಾರಪಾಲಕಿಯು, “ನೀನು ಸಹ ಆ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಪೇತ್ರನನ್ನು ಕೇಳಲು, ಅವನು, “ನಾನಲ್ಲ” ಎಂದನು.

[18] ಚಳಿಯಿದ್ದುದರಿಂದ ಆಳುಗಳೂ, ಓಲೇಕಾರರೂ ಇದ್ದಲಿನ ಬೆಂಕಿ ಮಾಡಿ ಚಳಿ ಕಾಯಿಸಿಕೊಳ್ಳುತ್ತಾ ನಿಂತಿರಲಾಗಿ; ಪೇತ್ರನೂ ಅವರ ಜೊತೆಯಲ್ಲಿ ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದನು.

[19] ಅಷ್ಟರೊಳಗೆ ಮಹಾಯಾಜಕನು ಯೇಸುವನ್ನು ಆತನ ಶಿಷ್ಯರ ವಿಷಯವಾಗಿಯೂ ಆತನ ಉಪದೇಶದ ವಿಷಯವಾಗಿಯೂ ವಿಚಾರಿಸಿದನು.

[20] ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿ ಬರುವ ಸಭಾಮಂದಿರಗಳಲ್ಲಿಯೂ, ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸಿದ್ದೇನೆ, ಗುಪ್ತವಾಗಿ ಯಾವುದನ್ನೂ ನಾನು ಮಾತನಾಡಲಿಲ್ಲ.

[21] ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಏನೇನು ಮಾತನಾಡಿದೆನೋ ಅದನ್ನು ಕೇಳಿದವರನ್ನೇ ವಿಚಾರಿಸು. ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ” ಎಂದು ಉತ್ತರಕೊಟ್ಟನು.

[22] ಯೇಸು ಈ ಮಾತನ್ನು ಹೇಳಿದಾಗ ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ತನ್ನ ಕೈಯಿಂದ ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು.

[23] ಯೇಸು ಅವನಿಗೆ “ನಾನು ಏನಾದರೂ ತಪ್ಪನ್ನು ಮಾತನಾಡಿದ್ದರೆ, ಆ ತಪ್ಪಿನ ವಿಷಯವಾಗಿ ಸಾಕ್ಷಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುತ್ತೀ?” ಎಂದು ಕೇಳಿದನು.

[24] ಆಗ ಅನ್ನನು ಆತನನ್ನು ಇನ್ನೂ ಕಟ್ಟಿರಲಾಗಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

[25] ಇತ್ತ, ಸೀಮೋನ್ ಪೇತ್ರನು ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಾ ಇದ್ದನು. ಆಗ ಅಲ್ಲಿದ್ದವರು ಅವನನ್ನು, “ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು, ಅವನು ಅದನ್ನು ನಿರಾಕರಿಸಿ, “ನಾನಲ್ಲ” ಎಂದನು.

[26] ಮಹಾಯಾಜಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು, ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಜೊತೆಯಲ್ಲಿ ನೋಡಿದೆನಲ್ಲವೇ?” ಎಂದನು.

[27] ಅದಕ್ಕೆ ಪೇತ್ರನು ಪುನಃ ನಿರಾಕರಿಸಿ “ನಾನಲ್ಲ” ಎಂದನು. ಆಗ ಕೂಡಲೇ ಕೋಳಿ ಕೂಗಿತು.

[28] ಮುಂಜಾನೆ ಅವರು ಯೇಸುವನ್ನು ಕಾಯಫನ ಬಳಿಯಿಂದ ಅರಮನೆಗೆ ಕರೆದುಕೊಂಡು ಹೋದರು. ಅವರು ತಮಗೆ ಮೈಲಿಗೆಯಾಗಿ ಪಸ್ಕದ ಊಟ ಮಾಡುವುದಕ್ಕೆ ಅಡ್ಡಿಯಾದೀತೆಂದು ಅರಮನೆಯ ಒಳಗೆ ಹೋಗಲಿಲ್ಲ.

[29] ಹೀಗಿರಲಾಗಿ ಪಿಲಾತನು ಹೊರಗೆ ಅವರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದನು.

[30] ಯೆಹೂದ್ಯರು ಅವನಿಗೆ, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿ ಕೊಡುತ್ತಿರಲಿಲ್ಲ” ಎಂದು ಉತ್ತರಕೊಟ್ಟರು.

[31] ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಆತನಿಗೆ ತೀರ್ಪು ಮಾಡಿರಿ” ಎಂದು ಹೇಳಿದನು. ಅದಕ್ಕೆ ಯೆಹೂದ್ಯರು, “ಮರಣ ದಂಡನೆಯನ್ನು ವಿಧಿಸುವ ಅಧಿಕಾರವು ನಮಗೆ ಇಲ್ಲ” ಎಂದರು.

[32] ಇದರಿಂದ ಯೇಸು ತಾನು ಎಂಥಾ ಮರಣವನ್ನು ಹೊಂದುವನೆಂದು ಸೂಚಿಸಿ ಹೇಳಿದ ಮಾತು ನೆರವೇರಿತು.

[33] ಆಗ ಪಿಲಾತನು ಪುನಃ ಅರಮನೆಯೊಳಗೆ ಹೋಗಿ ಯೇಸುವನ್ನು ಕರೆದು ಆತನಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು.

[34] ಯೇಸು, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೇ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿದ್ದಾರೋ?” ಎಂದನು.

[35] ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ, ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದ್ದಕ್ಕೆ,

[36] ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರ ಕೈಗೆ ಒಪ್ಪಿಸಲ್ಪಡದಂತೆ ನನ್ನ ಸೇವಕರು ನನ್ನ ಪರವಾಗಿ ಹೋರಾಡುತ್ತಿದ್ದರು, ಆದರೆ ನನ್ನ ರಾಜ್ಯವು ಇಲ್ಲಿಯದಲ್ಲ” ಎಂದು ಉತ್ತರಕೊಟ್ಟನು.

[37] ಅದಕ್ಕೆ ಪಿಲಾತನು, “ಹಾಗಾದರೆ ನೀನು ಅರಸನೋ?” ಎಂದನು. ಯೇಸು, “ನನ್ನನ್ನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯದ ವಿಷಯದಲ್ಲಿ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿದವನು, ಇದಕ್ಕಾಗಿಯೇ ಲೋಕಕ್ಕೆ ಬಂದಿದ್ದೇನೆ. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನು ನನ್ನ ಸ್ವರವನ್ನು ಕೇಳುತ್ತಾನೆ” ಎಂದು ಉತ್ತರಕೊಟ್ಟನು.

[38] ಪಿಲಾತನು, “ಸತ್ಯ ಎಂದರೇನು?” ಎಂದನು. ಇದನ್ನು ಹೇಳಿ ಪಿಲಾತನು ಪುನಃ ಯೆಹೂದ್ಯರ ಬಳಿ ಹೊರಗೆ ಬಂದು, “ನನಗೆ ಈತನಲ್ಲಿ ಯಾವ ಅಪರಾಧವೂ ಕಾಣುತ್ತಿಲ್ಲ.

[39] ಆದರೆ ಪಸ್ಕ ಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟು ಕೊಡುವ ಪದ್ಧತಿ ಉಂಟಷ್ಟೆ. ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟು ಕೊಡುವುದು ನಿಮಗೆ ಇಷ್ಟವೋ?” ಎಂದು ಅವರನ್ನು ಕೇಳಿದನು.

[40] ಅದಕ್ಕೆ ಅವರೆಲ್ಲರೂ, “ಆತನನ್ನು ಬೇಡ ನಮಗೆ ಬರಬ್ಬನನ್ನು ಬಿಟ್ಟುಕೊಡಬೇಕು” ಎಂದು ಪುನಃ ಕೂಗಿಕೊಂಡರು. ಈ ಬರಬ್ಬನು ದರೋಡೆಗಾರನಾಗಿದ್ದನು.

ಯೋಹಾನನು — Chapters