[1] ಪಸ್ಕಹಬ್ಬದ ಹಿಂದಿನ ದಿನ ಯೇಸು, ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆ ಬಂದಿತೆಂದು ತಿಳಿದುಕೊಂಡು, ಈ ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ, ಅವರನ್ನು ಕೊನೆಯವರೆಗೂ ಪ್ರೀತಿಸುತ್ತಾ ಬಂದನು.
[2] ಅವರು ಭೋಜನಕ್ಕೆ ಕುಳಿತುಕೊಂಡಿದ್ದರು, ಅಷ್ಟರೊಳಗೆ ಸೈತಾನನು ಸೀಮೋನನ ಮಗನಾದ ಇಸ್ಕರಿಯೋತ ಯೂದನ ಹೃದಯದಲ್ಲಿ ಯೇಸುವನ್ನು ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಹುಟ್ಟಿಸಿದನು.
[3] ತಂದೆಯು ತನ್ನ ಕೈಯಲ್ಲಿ ಎಲ್ಲದರ ಮೇಲೆ ಅಧಿಕಾರ ಕೊಟ್ಟಿದ್ದಾನೆಂದೂ, ತಾನು ದೇವರ ಬಳಿಯಿಂದ ಬಂದು, ತಿರುಗಿ ದೇವರ ಬಳಿಗೆ ಹೋಗುತ್ತೇನೆಂದೂ ಯೇಸುವಿಗೆ ತಿಳಿದಿತ್ತು.
[4] ಆತನು ಊಟದಿಂದ ಎದ್ದು ತನ್ನ ಮೇಲುಹೊದಿಕೆಯನ್ನು ತೆಗೆದಿಟ್ಟು ಅಂಗ ವಸ್ತ್ರವನ್ನು ತೆಗೆದುಕೊಂಡು ನಡುವಿಗೆ ಕಟ್ಟಿಕೊಂಡನು.
[5] ಅನಂತರ ಬೋಗುಣಿಯಲ್ಲಿ ನೀರು ಹಾಕಿಕೊಂಡು ಶಿಷ್ಯರ ಪಾದಗಳನ್ನು ತೊಳೆಯುತ್ತಾ, ತಾನು ಸೊಂಟಕ್ಕೆ ಕಟ್ಟಿಕೊಂಡ ಅಂಗವಸ್ತ್ರದಿಂದ ಪಾದಗಳನ್ನು ಒರಸುವುದಕ್ಕೂ ಪ್ರಾರಂಭಿಸಿದನು.
[6] ಹೀಗೆ ಆತನು ಸೀಮೋನ ಪೇತ್ರನ ಬಳಿಗೆ ಬಂದಾಗ ಅವನು ಆತನಿಗೆ, “ಕರ್ತನೇ, ನೀನು ನನ್ನ ಪಾದಗಳನ್ನು ತೊಳೆಯುತ್ತೀಯೋ?” ಎಂದು ಹೇಳಿದನು.
[7] ಅದಕ್ಕೆ ಯೇಸು “ನಾನು ಮಾಡುವುದು ಏನೆಂದು ಈಗ ನಿನಗೆ ತಿಳಿಯುವುದಿಲ್ಲ. ಆನಂತರ ನಿನಗೆ ತಿಳಿಯುವುದು” ಎಂದನು.
[8] ಪೇತ್ರನು ಆತನಿಗೆ, “ನೀನು ನನ್ನ ಪಾದಗಳನ್ನು ಎಂದಿಗೂ ತೊಳೆಯಬಾರದು” ಎಂದು ಹೇಳಿದ್ದಕ್ಕೆ, ಯೇಸು, “ನಾನು ನಿನ್ನನ್ನು ತೊಳೆಯದಿದ್ದರೆ ನನ್ನೊಂದಿಗೆ ನಿನಗೆ ಪಾಲು ಇರುವುದಿಲ್ಲ” ಎಂದನು.
[9] ಸೀಮೋನ ಪೇತ್ರನು, “ಕರ್ತನೇ, ನನ್ನ ಪಾದಗಳನ್ನು ಮಾತ್ರವಲ್ಲದೆ, ಕೈಗಳನ್ನೂ, ತಲೆಯನ್ನೂ ಸಹ ತೊಳೆ” ಎಂದನು.
[10] ಯೇಸು ಅವನಿಗೆ, “ಸ್ನಾನಮಾಡಿಕೊಂಡವನಿಗೆ ತನ್ನ ಪಾದಗಳನ್ನು ಮಾತ್ರ ತೊಳೆದುಕೊಂಡರೆ ಸಾಕು, ಅವನು ಸಂಪೂರ್ಣವಾಗಿ ಶುದ್ಧನಾಗಿದ್ದಾನೆ. ನೀವೂ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದನು.
[11] ಯೇಸು ತನ್ನನ್ನು ಹಿಡಿದು ಕೊಡುವವನು ಯಾರೆಂದು ತಿಳಿದಿದ್ದರಿಂದ, “ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ” ಎಂದು ಹೇಳಿದ್ದನು.
[12] ಆತನು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲುಹೊದಿಕೆಯನ್ನು ಹಾಕಿಕೊಂಡು, ಪುನಃ ಕುಳಿತುಕೊಂಡು ಅವರಿಗೆ ಹೇಳಿದ್ದೇನಂದರೆ, “ನಾನು ನಿಮಗೆ ಮಾಡಿದ್ದು ಏನೆಂದು ತಿಳಿಯಿತೋ?
[13] ನೀವು ನನ್ನನ್ನು ಗುರುವೆಂದೂ ಮತ್ತು ಕರ್ತನೆಂದೂ ಕರೆಯುತ್ತೀರಿ. ನೀವು ಹೇಳುವುದು ಸರಿ. ಹೌದು, ನಾನು ಅಂಥವನೇ ಆಗಿದ್ದೇನೆ.
[14] ಹಾಗಾದರೆ ಕರ್ತನೂ, ಗುರುವೂ ಆಗಿರುವ ನಾನೇ ನಿಮ್ಮ ಪಾದಗಳನ್ನು ತೊಳೆದಿರುವಾಗ, ನೀವು ಸಹ ಒಬ್ಬರ ಪಾದಗಳನ್ನೊಬ್ಬರು ತೊಳೆಯಬೇಕು.
[15] ನಾನು ನಿಮಗೆ ಮಾಡಿದಂತೆಯೇ ನೀವು ಸಹ ಮಾಡಬೇಕೆಂದು ನಾನು ನಿಮಗೆ ಮಾದರಿಯನ್ನು ತೋರಿಸಿದ್ದೇನೆ.
[16] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ತನ್ನ ದಣಿಗಿಂತ ಆಳು ದೊಡ್ಡವನಲ್ಲ. ಹಾಗೆಯೇ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ.
[17] ನೀವು ಇವುಗಳನ್ನು ತಿಳಿದುಕೊಂಡು ಇದರಂತೆ ಮಾಡಿದರೆ ನೀವು ಧನ್ಯರು.
[18] ನಾನು ನಿಮ್ಮೆಲ್ಲರನ್ನು ಕುರಿತು ಈ ಮಾತನ್ನು ಹೇಳಲಿಲ್ಲ. ನಾನು ಆರಿಸಿಕೊಂಡವರೆಲ್ಲರನ್ನು ನಾನು ಬಲ್ಲೆನು. ಆದರೆ ನನ್ನ ಜೊತೆಯಲ್ಲಿ ಊಟಮಾಡುವವನೇ, ನನಗೆ ದ್ರೋಹ ಬಗೆದನು, ಎಂಬ ಶಾಸ್ತ್ರದ ಮಾತು ನೆರವೇರಬೇಕಾಗಿದೆ.
[19] ಅದು ನಡೆಯುವಾಗ ನಾನೇ ಆತನು ಎಂದು ನೀವು ನಂಬುವಂತೆ, ಅದು ಸಂಭವಿಸುವುದಕ್ಕಿಂತ ಮೊದಲೇ ಅದನ್ನು ಈಗ ನಿಮಗೆ ಹೇಳುತ್ತಿದ್ದೇನೆ.
[20] ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಾನು ಕಳುಹಿಸಿದಾತನನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುತ್ತಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸುತ್ತಾನೆ.”
[21] ಇದನ್ನು ಹೇಳುತ್ತಾ ಯೇಸು ಆತ್ಮದಲ್ಲಿ ನೊಂದುಕೊಂಡವನಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ; ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದು ಕೊಡುತ್ತಾನೆ” ಎಂದು ಸಾಕ್ಷಿ ಹೇಳಿದನು.
[22] ಆಗ ಈತನು ಯಾರ ವಿಷಯವಾಗಿ ಈ ಮಾತನ್ನು ಹೇಳುತ್ತಾನೆಂದು ಶಿಷ್ಯರು ಗಲಿಬಿಲಿಗೊಂಡು ಒಬ್ಬರನೊಬ್ಬರು ನೋಡಿಕೊಂಡರು.
[23] ಶಿಷ್ಯರೊಳಗೆ ಯೇಸುವಿಗೆ ಪ್ರಿಯನಾಗಿದ್ದ ಒಬ್ಬ ಶಿಷ್ಯನು ಆತನ ಎದೆಗೆ ಒರಗಿಕೊಂಡಿದ್ದನು.
[24] ಅವನಿಗೆ ಸೀಮೋನ ಪೇತ್ರನು ಸನ್ನೆಮಾಡಿ, “ಆತನು ಯಾರ ವಿಷಯವಾಗಿ ಮಾತನಾಡಿದನು ಎಂದು ಕೇಳು” ಅಂದನು.
[25] ಆ ಶಿಷ್ಯನು ಹಾಗೆಯೇ ಯೇಸುವಿನ ಎದೆಗೆ ಒರಗಿಕೊಂಡವನಾಗಿ, “ಕರ್ತನೇ, ಅವನು ಯಾರು?” ಎಂದು ಆತನನ್ನು ಕೇಳಿದನು.
[26] ಅದಕ್ಕೆ ಯೇಸು, “ನಾನು ಈ ರೊಟ್ಟಿಯ ತುಂಡನ್ನು ಅದ್ದಿ ಯಾರಿಗೆ ಕೊಡುತ್ತೇನೋ ಅವನೇ!” ಎಂದು ಉತ್ತರಿಸಿ ಆ ರೊಟ್ಟಿಯ ತುಂಡನ್ನು ಅದ್ದಿ, ತೆಗೆದು, ಸೀಮೋನ್ ಇಸ್ಕರಿಯೋತನ ಮಗನಾದ ಯೂದನಿಗೆ ಕೊಟ್ಟನು.
[27] ಅವನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಆಗ ಯೇಸು ಅವನಿಗೆ, “ನೀನು ಮಾಡುವುದನ್ನು ಬೇಗನೇ ಮಾಡು” ಎಂದು ಹೇಳಿದನು.
[28] ಆದರೆ ಆತನು ಅವನಿಗೆ ಇದನ್ನು ಏಕೆ ಹೇಳಿದನೆಂದು ಊಟದ ಮೇಜಿನಲ್ಲಿ ಕುಳಿತವರಲ್ಲಿ ಯಾರಿಗೂ ತಿಳಿಯಲಿಲ್ಲ.
[29] ಅವರಲ್ಲಿ ಕೆಲವರು, ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ ಯೇಸು ಅವನಿಗೆ “ಹಬ್ಬಕ್ಕೆ ನಮಗೆ ಅಗತ್ಯವಾದವುಗಳನ್ನು ಕೊಂಡುಕೋ ಎಂದೋ, ಅಥವಾ ಬಡವರಿಗೆ ಏನಾದರೂ ಕೊಡು ಎಂದೋ, ಯೇಸು ಅವನಿಗೆ ಹೇಳುತ್ತಾನೆ” ಎಂದು ಅಂದುಕೊಂಡರು.
[30] ಇಸ್ಕರಿಯೋತ ಯೂದನು ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ, ಅಲ್ಲಿಂದ ಎದ್ದು ಹೊರಗೆ ಹೋದನು. ಆಗ ರಾತ್ರಿಯಾಗಿತ್ತು.
[31] ಅವನು ಹೊರಗೆ ಹೋದ ಮೇಲೆ ಯೇಸುವು, “ಈಗ ಮನುಷ್ಯಕುಮಾರನು ಮಹಿಮೆ ಹೊಂದುತ್ತಾನೆ, ಮತ್ತು ದೇವರು ಆತನಲ್ಲಿ ಮಹಿಮೆ ಹೊಂದಿದ್ದಾನೆ.
[32] ದೇವರು ಆತನಲ್ಲಿ ಮಹಿಮೆ ಹೊಂದಿರುವುದರಿಂದ, ದೇವರು ಸಹ ಮನುಷ್ಯಕುಮಾರನನ್ನು ತನ್ನಲ್ಲಿ ಮಹಿಮೆಪಡಿಸುವನು. ತಕ್ಷಣವೇ ಮಹಿಮೆಪಡಿಸುವನು.
[33] ನನ್ನ ಮಕ್ಕಳೇ, ಇನ್ನು ಸ್ವಲ್ಪ ಕಾಲವೇ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ. ನೀವು ನನ್ನನ್ನು ಹುಡುಕುವಿರಿ ಆದರೆ ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಈಗ ಹೇಳುತ್ತೇನೆ.
[34] ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಏನೆಂದರೆ, ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದ ಹಾಗೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು, ಎಂಬುದೇ.
[35] ನಿಮ್ಮೊಳಗೆ ಪರಸ್ಪರ ಪ್ರೀತಿಯಿರುವುದಾದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳಿದುಕೊಳ್ಳುವರು” ಎಂದನು.
[36] ಸೀಮೋನ್ ಪೇತ್ರನು ಆತನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ?” ಎಂದು ಕೇಳಿದ್ದಕ್ಕೆ ಯೇಸು ಅವನಿಗೆ, “ನಾನು ಹೋಗುವ ಕಡೆಗೆ, ಈಗ ನೀನು ನನ್ನನ್ನು ಹಿಂಬಾಲಿಸಲಾರೆ. ಅನಂತರ ನೀನು ನನ್ನನ್ನು ಹಿಂಬಾಲಿಸುವೆ” ಎಂದನು.
[37] ಪೇತ್ರನು ಆತನಿಗೆ, “ಕರ್ತನೇ, ನಾನು ಈಗ ನಿನ್ನನ್ನು ಏಕೆ ಹಿಂಬಾಲಿಸಲಾರೆನು? ನಿನಗಾಗಿ ನನ್ನ ಪ್ರಾಣವನ್ನೇ ಕೊಡುವೆನು” ಎಂದು ಹೇಳಿದನು.
[38] ಆಗ ಯೇಸು ಅವನಿಗೆ, “ನೀನು ನನಗಾಗಿ ಪ್ರಾಣವನ್ನೇ ಕೊಡುವೆಯಾ? ನಿನಗೆ ನಿಜನಿಜವಾಗಿ ಹೇಳುತ್ತೇನೆ: ನೀನು ನನ್ನನ್ನು ಮೂರು ಸಾರಿ ನಿರಾಕರಿಸುವ ತನಕ ಕೋಳಿಯು ಕೂಗುವುದೇ ಇಲ್ಲ” ಎಂದನು.