[1] ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು.
[2] ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ,
[3] ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು.
[4] ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು.
[5] ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು.
[6] ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು.
[7] ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು.
[8] ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು,
[9] ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ.
[10] ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು.
[11] ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು.
[12] ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು.
[13] ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು.
[14] ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು.
[15] ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು.
[16] ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು.
[17] ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ.
[18] ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು.
[19] ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು.
[20] ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು.
[21] ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು.
[22] ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು.
[23] ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು.
[24] ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು.
[25] ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು.
[26] ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು.
[27] ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು.
[28] ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು.
[29] ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು.
[30] ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು.
[31] ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು.
[32] ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು.
[33] ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ.
[34] ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು.
[35] ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ.
[36] ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು.
[37] “ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ.
[38] ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು.
[39] ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು.
[40] ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು.
[41] ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ.
[42] ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.