Skip to content
Opens in a new window
Listen to this chapter • 5:38

[1] ಬೆನ್ಯಾಮೀನ್ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತ ಮತ್ತು ಪ್ರಭಾವಶಾಲಿಯಾದ ಮನುಷ್ಯನಿದ್ದನು. ಕೀಷನು ಅಬೀಯೇಲನ ಮಗ, ಅಬೀಯೇಲನು ಚೆರೋರನ ಮಗ, ಬೆಕೋರತನ ಮೊಮ್ಮಗ ಹಾಗೂ ಅಫೀಹನ ಮರಿಮಗನು.

[2] ಕೀಷನಿಗೆ ಸೌಲನೆಂಬ ಹೆಸರುಳ್ಳ ಒಬ್ಬ ಮಗನಿದ್ದನು. ಈ ಸೌಲನು ಯೌವನಸ್ಥನೂ, ಎಲ್ಲಾ ಇಸ್ರಾಯೇಲ್ಯರಲ್ಲಿ ಅತಿಸುಂದರನೂ ಆಗಿದ್ದನು. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾಗಿದ್ದನು.

[3] ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ತಪ್ಪಿಸಿಕೊಂಡು ಹೋದುದರಿಂದ ಅವನು ತನ್ನ ಮಗನಾದ ಸೌಲನಿಗೆ, “ನೀನೆದ್ದು ಆಳುಗಳಲ್ಲಿ ಒಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕುವುದಕ್ಕೆ ಹೋಗು” ಎಂದು ಹೇಳಿದನು.

[4] ಅದರಂತೆಯೇ ಅವನು ಹೊರಟು ಎಫ್ರಾಯೀಮ್ ಪರ್ವತಪ್ರಾಂತ್ಯ, ಶಾಲಿಷಾ ದೇಶ ಇವುಗಳಲ್ಲಿ ಸಂಚರಿಸಿ ಹುಡುಕಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾಮೀನ್ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ.

[5] ಕಡೆಗೆ ಅವರು ಚೂಫ್ ದೇಶಕ್ಕೆ ಬಂದಾಗ ಸೌಲನು ತನ್ನ ಆಳಿಗೆ, “ಹಿಂದಿರುಗಿ ಹೋಗೋಣ ನಡಿ; ನಮ್ಮ ತಂದೆಯು ಈಗ ಕತ್ತೆಗಳ ಚಿಂತೆ ಬಿಟ್ಟು ನಮ್ಮ ಚಿಂತೆಯಲ್ಲಿರಬಹುದು” ಅಂದನು

[6] ಆದರೆ ಆ ಆಳು, “ಇಗೋ, ಈ ಪಟ್ಟಣದಲ್ಲಿ ಗೌರವಸ್ಥನಾದ ಒಬ್ಬ ದೇವರ ಮನುಷ್ಯನಿರುತ್ತಾನೆ. ಅವನು ನುಡಿಯುವುದೆಲ್ಲಾ ನೆರವೇರುತ್ತದೆ; ಅಲ್ಲಿಗೆ ಹೋಗೋಣ; ಒಂದು ವೇಳೆ ಅವನು ನಾವು ಹೋಗತಕ್ಕ ಮಾರ್ಗವನ್ನು ತಿಳಿಸುವನು” ಎಂದನು.

[7] ಅದಕ್ಕೆ ಸೌಲನು, “ನಾವು ಅವನ ಬಳಿಗೆ ಹೋಗಬೇಕಾದರೆ ಏನಾದರೂ ತೆಗೆದುಕೊಂಡು ಹೋಗಬೇಕು; ನಾವು ತಂದಿದ್ದ ಆಹಾರಸಾಮಗ್ರಿಯು ಮುಗಿದುಹೋಯಿತು. ಆ ದೇವರ ಮನುಷ್ಯನಿಗೆ ಕೊಡತಕ್ಕ ಕಾಣಿಕೆ ನಮ್ಮಲ್ಲಿಲ್ಲವಲ್ಲಾ; ಏನು ಕೊಡಬೇಕು?” ಎನ್ನಲು

[8] ಆಳು, “ಇಗೋ, ನನ್ನ ಕೈಯಲ್ಲಿ ಒಂದು ಪಾವಲಿಯಿದೆ; ಇದನ್ನು ಅವನಿಗೆ ಕೊಡೋಣ; ಅವನು ನಮಗೆ ಮಾರ್ಗ ತೋರಿಸುವನು” ಎಂದು ಉತ್ತರಕೊಟ್ಟನು.

[9] (ಪೂರ್ವ ಕಾಲದಲ್ಲಿ ಇಸ್ರಾಯೇಲ್ಯರಲ್ಲಿ ಯಾವನಾದರೂ ದೈವೋತ್ತರ ಕೇಳಬೇಕಾದರೆ “ದೇವ ದರ್ಶಿಯ ಬಳಿಗೆ ಹೋಗೋಣ ಬನ್ನಿರಿ” ಎನ್ನುವರು. ಈ ಕಾಲದಲ್ಲಿ ಪ್ರವಾದಿಗಳೆನಿಸಿಕೊಳ್ಳುವವರನ್ನು, ಆ ಕಾಲದಲ್ಲಿ ದೇವದರ್ಶಿಗಳೆಂದು ಕರೆಯುತ್ತಿದ್ದರು.)

[10] ಆಗ ಸೌಲನು ಆಳಿಗೆ, “ನೀನು ಹೇಳುವುದು ಒಳ್ಳೆಯದು; ಹೋಗೋಣ ನಡಿ” ಅಂದನು.

[11] ಅವರಿಬ್ಬರೂ ಗುಡ್ಡವನ್ನು ಹತ್ತಿ ದೇವರ ಮನುಷ್ಯನಿದ್ದ ಪಟ್ಟಣವನ್ನು ಸಮೀಪಿಸಲು ನೀರು ಸೇದುವುದಕ್ಕೋಸ್ಕರ ಊರ ಹೊರಗೆ ಬಂದಿದ್ದ ಸ್ತ್ರೀಯರನ್ನು ಕಂಡು, “ದರ್ಶಿಯು ಊರಲ್ಲಿದ್ದಾನೋ” ಎಂದು ಕೇಳಿದರು. ಅವರು, “ಇದ್ದಾನೆ;

[12] ಈ ಹೊತ್ತು ನಮ್ಮ ಊರಿನವರು ಗುಡ್ಡದ ಮೇಲೆ ಯಜ್ಞವನ್ನು ಅರ್ಪಿಸುತ್ತಿರುವುದರಿಂದ ಅವನು ಈಗಲೇ ಇಲ್ಲಿಗೆ ಬಂದಿರುವನು; ಬೇಗನೆ ಹೋಗಿರಿ.

[13] ಅವನು ಯಜ್ಞಭೋಜನಕ್ಕೋಸ್ಕರ ಗುಡ್ಡಕ್ಕೆ ಹೋಗುವ ಮೊದಲು ನೀವು ಊರೊಳಕ್ಕೆ ಹೋದರೆ ಸಿಕ್ಕುವನು. ಅವನು ಅಲ್ಲಿಗೆ ಹೋಗುವ ವರೆಗೆ ಜನರು ಊಟಮಾಡುವುದಿಲ್ಲ. ಅವನು ಹೋಗಿ ಯಜ್ಞಾಹಾರವನ್ನು ಆಶೀರ್ವದಿಸುತ್ತಾನೆ. ಅನಂತರ ಕರೆಯಲ್ಪಟ್ಟವರು ಊಟಮಾಡುತ್ತಾರೆ. ಈಗಲೇ ಹೋಗಿರಿ. ಅವನು ಸಿಕ್ಕುವ ಸಮಯ ಇದೇ” ಅಂದರು.

[14] ಅವರು ಮೇಲೆ ಹತ್ತಿ ಊರಿಗೆ ಬಂದಾಗ ಸಮುವೇಲನು ಗುಡ್ಡಕ್ಕೆ ಹೋಗುವುದಕ್ಕೋಸ್ಕರ ಹೊರಟು ಅವರೆದುರಿಗೆ ಬಂದನು.

[15] ಸೌಲನು ಬರುವುದಕ್ಕೆ ಒಂದು ದಿನ ಮುಂದಾಗಿ ಯೆಹೋವನು ಸಮುವೇಲನಿಗೆ,

[16] “ನಾಳೆ ಇಷ್ಟು ಹೊತ್ತಿಗೆ ಬೆನ್ಯಾಮೀನ್ ದೇಶದ ಒಬ್ಬನನ್ನು ನಿನ್ನ ಬಳಿಗೆ ಬರಮಾಡುವೆನು. ನೀನು ಅವನನ್ನು ಇಸ್ರಾಯೇಲರ ನಾಯಕನನ್ನಾಗಿ ಅಭಿಷೇಕಿಸಬೇಕು. ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕಾಪಾಡುವನು. ಅವರ ಕೂಗು ನನಗೆ ಮುಟ್ಟಿತು; ಅವರನ್ನು ಕಟಾಕ್ಷಿಸಿದ್ದೇನೆ” ಎಂದು ತಿಳಿಸಿದ್ದನು.

[17] ಸಮುವೇಲನು ಸೌಲನನ್ನು ಕಂಡಾಗ ಯೆಹೋವನು ಅವನಿಗೆ, “ನಾನು ತಿಳಿಸಿದ್ದ ಮನುಷ್ಯನು ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು” ಎಂದು ಸೂಚಿಸಿದನು.

[18] ಊರಬಾಗಿಲಿಗೆ ಬಂದ ಸೌಲನು ತನ್ನ ಎದುರಿನಲ್ಲಿ ಸಮುವೇಲನನ್ನು ನೋಡಿ, “ದರ್ಶಿಯ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿಯೋ?” ಎನ್ನಲು ಸಮುವೇಲನು, “ನಾನೇ ಆ ದರ್ಶಿ.

[19] ನೀನು ನನ್ನ ಜೊತೆಯಲ್ಲಿ ಗುಡ್ಡಕ್ಕೆ ಬಾ; ನೀವು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಿಗ್ಗೆ ನಿನ್ನನ್ನು ಕಳುಹಿಸಿಕೊಡುವೆನು.

[20] ಮೂರು ದಿನಗಳ ಹಿಂದೆ ತಪ್ಪಿಸಿಕೊಂಡ ನಿನ್ನ ಕತ್ತೆಗಳಿಗೋಸ್ಕರ ಚಿಂತೆಮಾಡಬೇಡ; ಅವು ಸಿಕ್ಕಿವೆ. ಇಸ್ರಾಯೇಲರ ಅಭಿಲಾಷೆಯೆಲ್ಲಾ ಯಾರ ಮೇಲೆ ಇರುವುದು, ನಿನ್ನ ಮತ್ತು ನಿನ್ನ ತಂದೆಯ ಕುಟುಂಬದವರಿಗೂ ಸಲ್ಲುವುದು” ಎಂದು ಹೇಳಿದನು.

[21] ಅದಕ್ಕೆ ಸೌಲನು, “ನಾನು ಇಸ್ರಾಯೇಲ್ ಕುಲಗಳಲ್ಲಿ ಅಲ್ಪವಾಗಿರುವ ಬೆನ್ಯಾಮೀನ್ ಕುಲದವನಲ್ಲವೋ? ಬೆನ್ಯಾಮೀನ್ಯರ ಎಲ್ಲಾ ಕುಟುಂಬಗಳಲ್ಲಿ ನನ್ನದು ಕನಿಷ್ಠವಾದದ್ದು; ನನಗೆ ಇಂಥ ದೊಡ್ಡ ಮಾತನ್ನು ಯಾಕೆ ಹೇಳುತ್ತೀ?” ಎಂದನು.

[22] ಸಮುವೇಲನು ಸೌಲನನ್ನೂ ಅವನ ಸೇವಕನನ್ನೂ ಮಂಟಪಕ್ಕೆ ಕರೆದುಕೊಂಡು ಹೋದನು; ಭೋಜನಕ್ಕೆ ಬಂದಿದ್ದ ಸುಮಾರು ಮೂವತ್ತು ಜನರಲ್ಲಿ ಅವರಿಬ್ಬರಿಗೂ ಮುಖ್ಯಸ್ಥಾನವನ್ನು ಕೊಟ್ಟನು. ಅನಂತರ ಸಮುವೇಲನು ಅಡಿಗೆಯವನಿಗೆ,

[23] “ನಾನು ನಿನಗೆ ಹೇಳಿ ಪ್ರತ್ಯೇಕವಾಗಿ ಇಡಿಸಿದ್ದ ಮಾಂಸಭಾಗವನ್ನು ತಂದಿಡು” ಅಂದನು.

[24] ಅವನು ಒಂದು ತೊಡೆಯ ಮಾಂಸವನ್ನೂ ಅದರ ಸಂಗಡ ಇದ್ದದ್ದನ್ನೂ ತಂದು ಸೌಲನ ಮುಂದಿಟ್ಟನು. ಆಗ ಸಮುವೇಲನು, “ಇಗೋ, ಇದು ನಿನಗೋಸ್ಕರ ಪ್ರತ್ಯೇಕಿಸಿದ್ದು; ಇದನ್ನು ತಿನ್ನು, ಯಾಕೆಂದರೆ ಜನರನ್ನು ಭೋಜನಕ್ಕೆ ಕರೆದಾಗಿನಿಂದ ಇದು ನಿನಗೋಸ್ಕರವಾಗಿಯೇ ಇಡಲ್ಪಟ್ಟಿತ್ತು” ಎಂದು ಸೌಲನಿಗೆ ಹೇಳಿದನು. ಸೌಲನು ಆ ದಿನ ಸಮುವೇಲನ ಸಂಗಡ ಊಟಮಾಡಿದನು.

[25] ಅವರು ಗುಡ್ಡದಿಂದಿಳಿದು ಪಟ್ಟಣಕ್ಕೆ ಬಂದನಂತರ ಸಮುವೇಲನು ಸೌಲನನ್ನು ತನ್ನ ಮನೆಯ ಮಾಳಿಗೆಯ ಮೇಲೆ ಕರೆದುಕೊಂಡು ಹೋಗಿ ಅವನೊಡನೆ ಮಾತನಾಡಿದನು.

[26] ಮರುದಿನ ಬೆಳಿಗ್ಗೆ ಸಮುವೇಲನು ಮಾಳಿಗೆಯ ಮೇಲೆ ಮಲಗಿದ್ದ ಸೌಲನನ್ನು, “ಏಳು, ನಿನ್ನನ್ನು ಕಳುಹಿಸಿ ಕೊಡುತ್ತೇನೆ” ಎಂದು ಎಬ್ಬಿಸಲು ಅವನು ಎದ್ದನು. ತರುವಾಯ ಅವರಿಬ್ಬರೂ ಹೊರಟು ಊರ ಹೊರಗೆ ಬಂದಾಗ

[27] ಸಮುವೇಲನು ಸೌಲನಿಗೆ, “ನಿನ್ನ ಸೇವಕನನ್ನು ಮುಂದೆ ಕಳುಹಿಸಿ ನೀನು ಇಲ್ಲಿ ಸ್ವಲ್ಪ ನಿಲ್ಲು; ನಿನಗೆ ತಿಳಿಸಬೇಕಾದ ದೈವೋಕ್ತಿ ಒಂದುಂಟು” ಎಂದನು.

1 ಸಮುವೇಲನು — Chapters