Skip to content
Opens in a new window
Listen to this chapter • 4:59

[1] ಯೆಹೋವನು ಸಮುವೇಲನಿಗೆ, “ನಾನು ಸೌಲನನ್ನು ಇಸ್ರಾಯೇಲರ ಅರಸನಾಗಿರುವುದಕ್ಕೆ ಯೋಗ್ಯನಲ್ಲವೆಂದು ತಳ್ಳಿಬಿಟ್ಟಿದ್ದೇನಲ್ಲಾ; ನೀನು ಅವನಿಗೋಸ್ಕರ ಎಷ್ಟರವರೆಗೆ ದುಃಖಿಸುತ್ತಿರುವಿ? ಕೊಂಬಿನಲ್ಲಿ ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ” ಎಂದು ಹೇಳಿದನು.

[2] ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ” ಎಂದನು. ಅದಕ್ಕೆ ಯೆಹೋವನು, “ನೀನು ಒಂದು ಕರುವನ್ನು ತೆಗೆದುಕೊಂಡು ಹೋಗಿ ಯೆಹೋವನಿಗೋಸ್ಕರ ಯಜ್ಞಮಾಡುವುದಕ್ಕೆ ಬಂದಿದ್ದೇನೆಂದು ಹೇಳಿ ಇಷಯನನ್ನು ಅದಕ್ಕಾಗಿ ಕರೆ.

[3] ಆ ನಂತರ ನೀನು ಮಾಡಬೇಕಾದದ್ದನ್ನು ನಾನೇ ನಿನಗೆ ತಿಳಿಸುತ್ತೇನೆ. ನಾನು ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ಅಭಿಷೇಕಿಸಬೇಕು” ಎಂದನು.

[4] ಯೆಹೋವನು ಹೇಳಿದಂತೆಯೇ ಸಮುವೇಲನು ಬೇತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುಗುತ್ತಾ ಬಂದು ಅವನನ್ನು ಎದುರುಗೊಂಡು “ನಿನ್ನ ಆಗಮನವು ನಮಗೆ ಶುಭಕರವಾಗಿದೆಯೇ?” ಎಂದು ಕೇಳಲು

[5] ಅವನು, “ಹೌದು, ಶುಭಕರವಾಗಿದೆ; ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ನನ್ನ ಜೊತೆಯಲ್ಲಿ ಯಜ್ಞಕ್ಕೆ ಬನ್ನಿರಿ” ಎಂದು ಹೇಳಿ ಇಷಯನನ್ನೂ, ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಯಜ್ಞಕ್ಕೆ ಕರೆದನು.

[6] ಅವರು ಬರಲು ಅವನು ಎಲೀಯಾಬನನ್ನು ನೋಡಿ, ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು.

[7] ಆದರೆ ಯೆಹೋವನು ಸಮುವೇಲನಿಗೆ, “ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು.

[8] ಇಷಯನು ಅಬೀನಾದಾಬನನ್ನು ಸಮುವೇಲನ ಬಳಿಗೆ ಬರಮಾಡಲು ಸಮುವೇಲನು, “ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ” ಎಂದನು.

[9] ತರುವಾಯ ಇಷಯನು ಶಮ್ಮನನ್ನು ಬರಮಾಡಲು ಸಮುವೇಲನು, “ಯೆಹೋವನು ಇವನನ್ನೂ ಆರಿಸಿಕೊಳ್ಳಲಿಲ್ಲ” ಎಂದು ಹೇಳಿದನು.

[10] ಹೀಗೆ ಇಷಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನು ಸಮುವೇಲನ ಬಳಿಗೆ ಬರಮಾಡಿದರೂ ಅವನು, “ಯೆಹೋವನು ಇವರನ್ನು ಆರಿಸಿಕೊಳ್ಳಲಿಲ್ಲ” ಎಂದು ನುಡಿದನು.

[11] ಅನಂತರ ಸಮುವೇಲನು ಇಷಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ” ಎಂದು ಕೇಳಲು ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಕರೆದುಕೊಂಡು ಬರಲು ತಿಳಿಸು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು” ಎಂದು ಹೇಳಲು ಇಷಯನು ಅವನನ್ನು ಕರೆದು ಕರೆದುಕೊಂಡು ಬರಲು ತಿಳಿಸಿದನು.

[12] ಅವನು ಕೆಂಪುಬಣ್ಣದವನೂ, ಸುಂದರನೇತ್ರನೂ, ನೋಡುವುದಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ” ಎಂದು ಆಜ್ಞಾಪಿಸಲು

[13] ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು, ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಕ್ಕೆ ಹೊರಟುಹೋದನು.

[14] ಯೆಹೋವನ ಆತ್ಮವು ಸೌಲನನ್ನು ಬಿಟ್ಟು ಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದರಿಂದ

[15] ಅವನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಪೀಡಿಸುತ್ತಾ ಇದೆ.

[16] ಸ್ವಾಮೀ, ಅಪ್ಪಣೆಯಾಗಲಿ; ನಿನ್ನ ಸನ್ನಿಧಿಯಲ್ಲಿ ನಿಂತಿರುವ ನಿನ್ನ ಸೇವಕರಾದ ನಾವು ಹೋಗಿ ಕಿನ್ನರಿ ನುಡಿಸುವುದರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇನೆ. ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ನಿನ್ನ ಮೇಲೆ ಬರುವಾಗ ಅವನು ಕಿನ್ನರಿ ನುಡಿಸಿದರೆ ನಿನಗೆ ಉಪಶಮನವಾಗುವುದು” ಎಂದು ಹೇಳಿದರು.

[17] ಸೌಲನು ಅವರಿಗೆ, “ಚೆನ್ನಾಗಿ ನುಡಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ಹುಡುಕಿ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.

[18] ಸೇವಕರಲ್ಲೊಬ್ಬನು ಅವನಿಗೆ, “ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಕಿನ್ನರಿ ನುಡಿಸಬಲ್ಲವನೂ, ಪರಾಕ್ರಮಶಾಲಿಯೂ, ಯುದ್ಧ ನಿಪುಣನೂ, ವಾಕ್ಚತುರನೂ, ಸುಂದರನೂ, ಯೆಹೋವನ ಅನುಗ್ರಹವನ್ನು ಹೊಂದಿದವನೂ ಆಗಿದ್ದಾನೆ” ಎಂದು ತಿಳಿಸಿದನು.

[19] ಕೂಡಲೆ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ಕುರಿಗಳನ್ನು ಮೇಯಿಸುತ್ತಿರುವ ನಿನ್ನ ಮಗನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳಿಸಿದನು.

[20] ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಹೋತಮರಿಯನ್ನೂ, ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು.

[21] ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಅವನನ್ನು ಬಹಳವಾಗಿ ಪ್ರೀತಿಸಿ ತನ್ನ ಆಯುಧಗಳನ್ನು ಹೊರುವುದಕ್ಕೆ ನೇಮಿಸಿಕೊಂಡನು.

[22] ತರುವಾಯ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲಿ ಸೇವೆಮಾಡಲಿ” ಎಂದು ತಿಳಿಸಿದನು.

[23] ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ನುಡಿಸುವನು; ಅದರಿಂದ ದುರಾತ್ಮವು ಸೌಲನನ್ನು ಬಿಟ್ಟುಹೋಗುವುದು; ಅವನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.

1 ಸಮುವೇಲನು — Chapters