[1] ದಾವೀದನೂ ಅವನ ಜನರೂ ಮೂರನೆಯ ದಿನ ಚಿಕ್ಲಗ್ ಊರನ್ನು ಮುಟ್ಟಿದರು. ಅಷ್ಟರೊಳಗೆ ಅಮಾಲೇಕ್ಯರು ದಂಡೆತ್ತಿ ದಕ್ಷಿಣ ಪ್ರಾಂತ್ಯಕ್ಕೂ ಚಿಕ್ಲಗ್ ಊರಿಗೂ ಬಂದು ಚಿಕ್ಲಗ್ ಊರನ್ನು ಸುಟ್ಟು ಹಾಳುಮಾಡಿ,
[2] ಆ ಊರಿನಲ್ಲಿದ್ದ ಎಲ್ಲಾ ಹೆಂಗಸರನ್ನೂ ಚಿಕ್ಕವರನ್ನೂ ದೊಡ್ಡವರನ್ನೂ ಸೆರೆಹಿಡಿದುಕೊಂಡು ಹೋಗಿದ್ದರು.
[3] ಆದರೆ ಯಾರನ್ನೂ ಕೊಂದಿರಲಿಲ್ಲ. ದಾವೀದನೂ ಅವನ ಜನರೂ ತಮ್ಮ ಊರಿಗೆ ಬಂದಾಗ ಅದು ಸುಡಲ್ಪಟ್ಟಿರುವುದನ್ನೂ, ತಮ್ಮ ಹೆಂಡತಿಯರೂ ಗಂಡುಮಕ್ಕಳೂ ಸೆರೆಯಾಗಿ ಒಯ್ಯಲ್ಪಟ್ಟಿರುವುದನ್ನೂ ಕಂಡು
[4] ಅವರು ತಮ್ಮಿಂದಾಗುವಷ್ಟು ಕಾಲ ಅತ್ತರು.
[5] ದಾವೀದನ ಇಬ್ಬರು ಹೆಂಡತಿಯರಾದ ಇಜ್ರೇಲಿನವಳಾದ ಅಹೀನೋವಮಳೂ, ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಸೆರೆಯಾಗಿ ಹೋಗಿದ್ದರು.
[6] ಇದಲ್ಲದೆ ಜನರು ತಮ್ಮ ಗಂಡು ಹೆಣ್ಣು ಮಕ್ಕಳಿಗಾಗಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡು, ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದುದರಿಂದ ಅವನು ಬಲು ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ಅವನು ತನ್ನ ದೇವರಾದ ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡು
[7] ಅಹೀಮೆಲೆಕನ ಮಗನಾದ ಎಬ್ಯಾತಾರನಿಗೆ, “ದಯವಿಟ್ಟು ಏಫೋದನ್ನು ಇಲ್ಲಿಗೆ ತೆಗೆದುಕೊಂಡು ಬಾ” ಎಂದು ಹೇಳಲು ಅವನು ತಂದನು.
[8] ಆಗ ದಾವೀದನು ಯೆಹೋವನನ್ನು, “ನಾನು ಆ ಗುಂಪನ್ನು ಹಿಂದಟ್ಟಬಹುದೋ, ಅದು ನನಗೆ ಸಿಕ್ಕುವುದೋ?” ಎಂದು ಕೇಳಲು ಆತನು, “ಹಿಂದಟ್ಟು, ಅದು ನಿನಗೆ ಸಿಕ್ಕುವುದು, ನೀನು ಎಲ್ಲರನ್ನೂ ಬಿಡಿಸಿಕೊಂಡು ಬರುವಿ” ಎಂದು ಉತ್ತರಕೊಟ್ಟನು.
[9] ದಾವೀದನೂ ಅವನ ಸಂಗಡ ಇದ್ದ ಆರುನೂರು ಮಂದಿ ಸೈನಿಕರೂ ಹೊರಟು ಬೆಸೋರ್ ಹಳ್ಳಕ್ಕೆ ಬಂದ ಮೇಲೆ ಆ ಹಳ್ಳದಿಂದ ಮೇಲೆ ಹತ್ತಲಾರದಷ್ಟು
[10] ಆಯಾಸಗೊಂಡ ಇನ್ನೂರು ಜನರು ಅಲ್ಲೇ ನಿಂತುಬಿಟ್ಟದ್ದರಿಂದ, ದಾವೀದನು ಉಳಿದ ನಾನೂರು ಜನರನ್ನೇ ಕರೆದುಕೊಂಡು ಮುಂದೆ ನಡೆದನು.
[11] ಅವನ ಜನರು ಅಡವಿಯಲ್ಲಿ ಒಬ್ಬ ಐಗುಪ್ತನು ಬಿದ್ದಿರುವುದನ್ನು ಕಂಡು, ಅವನನ್ನು ದಾವೀದನ ಬಳಿಗೆ ತಂದು, ಅವನಿಗೆ ರೊಟ್ಟಿ ತಿನ್ನಿಸಿ, ನೀರು ಕುಡಿಸಿ,
[12] ಅಂಜೂರ ಹಣ್ಣಿನ ಉಂಡೆಯನ್ನೂ ಎರಡು ದ್ರಾಕ್ಷಿ ಗೊಂಚಲುಗಳನ್ನು ಕೊಟ್ಟರು. ಮೂರು ದಿನ ಹಗಲಿರುಳು ಅನ್ನಪಾನವಿಲ್ಲದೆ ಬಹಳವಾಗಿ ಬಳಲಿಹೋಗಿದ್ದ ಇವನು ಅವುಗಳನ್ನು ತಿನ್ನುತ್ತಲೇ ಚೇತರಿಸಿಕೊಂಡನು.
[13] ಆಗ ದಾವೀದನು ಅವನನ್ನು, “ನೀನು ಯಾರ ಕಡೆಯವನು, ಎಲ್ಲಿಯವನು?” ಎಂದು ಕೇಳಿದನು. ಅವನು “ನಾನು ಐಗುಪ್ತನು, ಒಬ್ಬ ಅಮಾಲೇಕ್ಯನ ದಾಸನು. ನಾನು ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಮಲಗಿಕೊಂಡಿದ್ದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
[14] ನಾವು ಕೆರೇತ್ಯರೂ ಯೆಹೂದ್ಯರೂ ಕಾಲೇಬ್ಯರೂ ಇರುವ ದಕ್ಷಿಣ ಪ್ರಾಂತ್ಯವನ್ನು ಸೂರೆಮಾಡಿ ಚಿಕ್ಲಗ್ ಊರನ್ನು ಸುಟ್ಟುಬಿಟ್ಟು ಬಂದೆವು” ಎಂದು ಉತ್ತರ ಕೊಟ್ಟನು.
[15] ಅನಂತರ ದಾವೀದನು, “ನೀನು ನನ್ನನ್ನು ಆ ಗುಂಪು ಇರುವ ಸ್ಥಳಕ್ಕೆ ಕರೆದುಕೊಂಡು ಹೋಗುವಿಯೋ?” ಎಂದು ಕೇಳಿದ್ದಕ್ಕೆ ಅವನು, “ನೀನು ನನ್ನನ್ನು ಕೊಲ್ಲುವುದಿಲ್ಲವೆಂದೂ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರೆ ನಿನ್ನನ್ನು ಆ ಗುಂಪಿನವರ ಬಳಿಗೆ ಕರಕೊಂಡು ಹೋಗುವೆನು” ಅಂದನು.
[16] ಅವರು ಅಲ್ಲಿಗೆ ಹೋದಾಗ ಆ ಗುಂಪಿನವರು ತಮಗೆ ಫಿಲಿಷ್ಟಿಯ ಮತ್ತು ಯೆಹೂದ ಪ್ರಾಂತ್ಯಗಳಲ್ಲಿ ದೊರಕಿದ ದೊಡ್ಡ ಕೊಳ್ಳೆಯ ನಿಮಿತ್ತವಾಗಿ ಸಂತೋಷಿಸಿ, ಉಂಡು ಕುಡಿದು, ಕುಣಿದಾಡುತ್ತಾ ಅಲ್ಲಿನ ಬೈಲಿನಲ್ಲಿ ವ್ಯಾಪಿಸಿಕೊಂಡಿದ್ದರು.
[17] ದಾವೀದನು ಮರುದಿನ ಹೊತ್ತಾರೆಯಿಂದ ಸೂರ್ಯಸ್ತಮಾನದವರೆಗೂ ಅವರನ್ನು ಸಂಹರಿಸಿದನು. ಒಂಟೆಗಳನ್ನು ಹತ್ತಿ ಓಡಿಹೋದ ನಾನೂರು ಮಂದಿ ಪ್ರಾಯಸ್ಥರ ಹೊರತು ಬೇರೆ ಯಾರೂ ತಪ್ಪಿಸಿಕೊಳ್ಳಲಿಲ್ಲ.
[18] ದಾವೀದನು ತನ್ನ ಇಬ್ಬರು ಹೆಂಡತಿಯರನ್ನೂ ಅಮಾಲೇಕ್ಯರು ಒಯ್ದಿದ್ದ ಎಲ್ಲಾ ಕೊಳ್ಳೆಯನ್ನೂ ಬಿಡಿಸಿಕೊಂಡನು.
[19] ಅಮಾಲೇಕ್ಯರು ಒಯ್ದಿದ್ದ ಚಿಕ್ಕ ದೊಡ್ಡ ಒಡವೆಗಳಾಗಲಿ, ಗಂಡು ಹೆಣ್ಣು ಮಕ್ಕಳಾಗಲಿ ಒಂದನ್ನೂ ಬಿಡದೆ ಎಲ್ಲವನ್ನೂ ತಿರುಗಿ ತೆಗೆದುಕೊಂಡು ಬಂದನು.
[20] ಇದಲ್ಲದೆ ದಾವೀದನು ಶತ್ರುಗಳ ದನಕುರಿಗಳನ್ನೂ ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ದನಗಳ ಮುಂದಾಗಿ ಹೊಡೆದುಕೊಂಡು ಬಂದರು.
[21] ಅನಂತರ ದಾವೀದನು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋಗುತ್ತಿರುವಾಗ, ಅವರು ಅವನನ್ನೂ ಅವನೊಂದಿಗಿದ್ದ ಜನರನ್ನೂ ಸಂಧಿಸಿ, ಅವರ ಕ್ಷೇಮಸಮಾಚಾರವನ್ನು ವಿಚಾರಿಸಿದರು.
[22] ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮೂರ್ಖರೂ ಆದ ಕೆಲವು ಮಂದಿ, “ಇವರು ನಮ್ಮ ಸಂಗಡ ಬಾರದ್ದರಿಂದ, ನಾವು ತೆಗೆದುಕೊಂಡು ಬಂದಿರುವ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವುದಿಲ್ಲ. ತಮ್ಮ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡಲಿ” ಎಂದರು.
[23] ಆಗ ದಾವೀದನು ಅವರಿಗೆ, “ಸಹೋದರರೇ, ಯೆಹೋವನು ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ ನಮಗೆ ಇಷ್ಟನ್ನೆಲ್ಲಾ ಕೊಟ್ಟ ಮೇಲೆ ನೀವು ಹೀಗೆ ಮಾಡಬಾರದು.
[24] ಈ ವಿಷಯದಲ್ಲಿ ನಿಮ್ಮ ಮಾತನ್ನು ಯಾರು ಕೇಳುವರು? ಯುದ್ಧಮಾಡಿದವನಿಗೆ ಸಿಕ್ಕುವಷ್ಟು ಪಾಲು ಸಾಮಾನು ಕಾಯುವವನಿಗೂ ಸಿಕ್ಕಬೇಕು. ಉಭಯರಿಗೂ ಸಮಭಾಗವಾಗಬೇಕು” ಎಂದು ಉತ್ತರಕೊಟ್ಟನು.
[25] ದಾವೀದನು ಇಸ್ರಾಯೇಲರಲ್ಲಿ ಇದನ್ನು ಕಟ್ಟಳೆಯಾಗಿ ನೇಮಿಸಿದ್ದರಿಂದ ಇಂದಿನವರೆಗೂ ಹಾಗೆಯೇ ನಡೆಯುತ್ತಾ ಬಂದಿದೆ.
[26] ದಾವೀದನು ಚಿಕ್ಲಗ್ ಊರಿಗೆ ಬಂದನಂತರ ತನ್ನ ಸ್ನೇಹಿತರಾದ ಯೆಹೂದದ ಹಿರಿಯರಿಗೆ ಕೊಳ್ಳೆಯ ಒಂದು ಭಾಗವನ್ನು ಕಳುಹಿಸಿ, “ಇಗೋ ಯೆಹೋವನ ಶತ್ರುಗಳನ್ನು ಸೂರೆಮಾಡಿ ತಂದವುಗಳಲ್ಲಿ ಇದು ನಿಮಗೆ ಬಹುಮಾನವಾಗಿರಲಿ” ಎಂದು ಹೇಳಿದನು.
[27] ಬಹುಮಾನ ಹೊಂದಿದವರು ಯಾರೆಂದರೆ: ಬೇತೇಲಿನವರು, ದಕ್ಷಿಣ ಪ್ರಾಂತ್ಯದ ರಾಮೋತಿನವರು, ಯತ್ತೀರಿನವರು,
[28] ಅರೋಯೇರಿನವರು ಸಿಪ್ಮೋತಿನವರು ಎಷ್ಟೆಮೋವದವರು,
[29] ರಾಕಾಲಿನವರು, ಎರಹ್ಮೇಲ್ಯರು, ಕೇನ್ಯರು,
[30] ಹೊರ್ಮದವರು, ಬೋರಾಷಾನಿನವರು, ಅತಾಕಿನವರು,
[31] ಹೆಬ್ರೋನಿನವರು ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳಗಳವರು ಇವರೇ.