Skip to content
Opens in a new window
Listen to this chapter • 5:21

[1] ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.

[2] ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು.

[3] ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು.

[4] ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು.

[5] ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡೆಸುತ್ತಿದ್ದನು. ಸೌಲನು ಇವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇದು ಅವನ ಸೇವಕರಿಗೂ, ಎಲ್ಲಾ ಜನರಿಗೂ ಮೆಚ್ಚಿಗೆಯಾಯಿತು.

[6] ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ, ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರೂ ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸನಾದ ಸೌಲನನ್ನು ಎದುರುಗೊಂಡರು.

[7] ಅವರು ಹಾಡುತ್ತಾ, ಕೊಂಡಾಡುತ್ತಾ, “ಸೌಲನು ಸಾವಿರ ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು.

[8] ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು

[9] ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು.

[10] ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು.

[11] ಆಗ ಸೌಲನು ದಾವೀದನನ್ನು ಗೋಡೆಗೆ ಸೇರಿಕೊಳ್ಳುವ ಹಾಗೆ ತಿವಿಯುವೆನು ಎಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು.

[12] ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು,

[13] ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು.

[14] ಯೆಹೋವನು ಅವನ ಸಂಗಡ ಇದ್ದದರಿಂದ ದಾವೀದನು ಎಲ್ಲಾ ಕಾರ್ಯಗಳನ್ನು ವಿವೇಕದಿಂದ ನಡೆಸುತ್ತಿದ್ದನು.

[15] ಇದನ್ನು ನೋಡಿ ಸೌಲನು ದಾವೀದನಿಗೆ ಬಹಳವಾಗಿ ಹೆದರಿಕೊಂಡನು.

[16] ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು.

[17] ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು.

[18] ಅದಕ್ಕೆ ದಾವೀದನು “ಅರಸನ ಅಳಿಯನಾಗುವುದಕ್ಕೆ ನಾನು ಎಷ್ಟರವನು? ಇಸ್ರಾಯೇಲರಲ್ಲಿ ನನ್ನ ತಂದೆಯ ಕುಟುಂಬವೂ ಸಮಾನವೇ?” ಎಂದನು.

[19] ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು.

[20] ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು.

[21] ಅವಳು ದಾವೀದನಿಗೆ ಉರಲಾಗಿರುವಂತೆಯೂ, ಅವನು ಫಿಲಿಷ್ಟಿಯರ ಕೈಗೆ ಸಿಕ್ಕಿಬೀಳುವಂತೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡು ಅವನಿಗೆ, “ನೀನು ನನ್ನ ಅಳಿಯನಾಗುವುದಕ್ಕೆ ಈಗ ಎರಡನೆಯ ಸಂದರ್ಭವುಂಟಾಯಿತು” ಎಂದು ಹೇಳಿದನು.

[22] ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು.

[23] ಆ ಸೇವಕರು ದಾವೀದನಿಗೆ ಹಾಗೆಯೇ ಹೇಳಿದಾಗ ಅವನು, “ಅರಸನ ಅಳಿಯನಾಗುವುದು ಸಾಧಾರಣವಾದ ಸಂಗತಿಯೆಂದು ನೆನಸುತ್ತೀರೋ? ನಾನು ದರಿದ್ರನೂ, ಅಲ್ಪನೂ ಆಗಿರುತ್ತೆನಲ್ಲಾ” ಎಂದು ಉತ್ತರ ಕೊಟ್ಟನು.

[24] ಸೇವಕರು ದಾವೀದನ ಮಾತುಗಳನ್ನು ಸೌಲನಿಗೆ ತಿಳಿಸಿದರು.

[25] ಆಗ ಅವನು ಅವರಿಗೆ, “ನೀವು ಹೋಗಿ ದಾವೀದನಿಗೆ, ‘ಅರಸನು ತೆರವನ್ನು ಅಪೇಕ್ಷಿಸುವುದಿಲ್ಲ. ತನ್ನ ಶತ್ರುಗಳಾದ ಫಿಲಿಷ್ಟಿಯರಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರು ಮಂದಿಯ ಮುಂದೊಗಲನ್ನು ತಂದುಕೊಡಬೇಕು ಅನ್ನುತ್ತಾನೆ’ ಎಂದು ಹೇಳಿರಿ” ಎಂದು ಆಜ್ಞಾಪಿಸಿದನು. ದಾವೀದನನ್ನು ಫಿಲಿಷ್ಟಿಯರಿಂದ ಕೊಲ್ಲಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು.

[26] ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅವನು ಅರಸನ ಅಳಿಯನಾಗುವುದಕ್ಕೆ ಒಪ್ಪಿದನು. ನೇಮಕವಾದ ದಿನಗಳು ಮುಗಿಯುವ ಮೊದಲೇ,

[27] ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.

[28] ಮೀಕಲಳು ಅವನನ್ನು ಬಹಳವಾಗಿ ಪ್ರೀತಿಸುವವಳಾದಳು. ಯೆಹೋವನು ದಾವೀದನ ಸಂಗಡ ಇದ್ದಾನೆಂದು,

[29] ಸೌಲನು ತಿಳಿದು ಅವನಿಗೆ ಮತ್ತಷ್ಟು ಹೆದರುವವನಾಗಿ ಅವನ ನಿತ್ಯವೈರಿಯಾದನು.

[30] ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು.

1 ಸಮುವೇಲನು — Chapters