Skip to content
Opens in a new window
Listen to this chapter • 2:42

[1] ದಾವೀದನು ತನ್ನ ಮನಸ್ಸಿನಲ್ಲಿ, “ನಾನು ಇಲ್ಲೇ ಇದ್ದರೆ ಹೇಗೂ ಒಂದು ದಿನ ಸೌಲನ ಕೈಯಿಂದ ಸಾಯಲೇಬೇಕು ಆದ್ದರಿಂದ ಫಿಲಿಷ್ಟಿಯರ ದೇಶಕ್ಕೆ ಹೋಗಿ ತಪ್ಪಿಸಿಕೊಳ್ಳುವುದೇ ಉತ್ತಮ. ಆ ಮೇಲೆ ಸೌಲನು ಇಸ್ರಾಯೇಲ್ಯರ ಪ್ರಾಂತ್ಯಗಳಲ್ಲಿ ನನ್ನನ್ನು ಹುಡುಕದೆ ಬಿಟ್ಟುಬಿಡುವನು. ನಾನು ಅವನ ಕೈಗೆ ತಪ್ಪಿಸಿಕೊಂಡವನಾಗಿರುವೆನು” ಅಂದುಕೊಂಡನು.

[2] ಅವನು ತನ್ನ ಆರುನೂರು ಜನರೊಡನೆ ಗತ್ ಊರಿನ ಅರಸನೂ ಮಾವೋಕನ ಮಗನೂ ಆದ ಆಕೀಷನ ಬಳಿಗೆ ಹೋದನು.

[3] ಅವನೂ, ಅವನ ಜನರೂ ತಮ್ಮ ತಮ್ಮ ಕುಟುಂಬ ಸಹಿತವಾಗಿ ಆಕೀಷನ ಊರಾದ ಗತ್ ಊರಿನಲ್ಲಿ ವಾಸಮಾಡಿದರು. ದಾವೀದನ ಹೆಂಡತಿಯರಾಗಿರುವ ಇಜ್ರೇಲ್ಯಳಾದ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳೂ ಅವನ ಸಂಗಡ ಇದ್ದರು.

[4] ದಾವೀದನು ತಪ್ಪಿಸಿಕೊಂಡು ಗತ್ ಊರಿಗೆ ಹೋದನೆಂಬ ವರ್ತಮಾನವನ್ನು ಸೌಲನು ಕೇಳಿದ ಮೇಲೆ ಅವನನ್ನು ಹುಡುಕಲೇ ಇಲ್ಲ.

[5] ಒಂದು ದಿನ ದಾವೀದನು ಆಕೀಷನಿಗೆ, “ನಿನ್ನ ಸೇವಕನಾದ ನಾನು ನಿನ್ನ ಸಂಗಡ ರಾಜಧಾನಿಯಲ್ಲೇಕೆ ವಾಸಿಸಬೇಕು? ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದಾದರೆ ಯಾವುದಾದರು ಒಂದು ಪಟ್ಟಣದಲ್ಲಿ ನನಗೆ ಸ್ಥಳಕೊಡು. ನಾನು ಅಲ್ಲಿ ವಾಸಮಾಡುವೆನು” ಅಂದನು.

[6] ಆಕೀಷನು ಕೂಡಲೇ ಅವನಿಗೆ ಚಿಕ್ಲಗ್ ಊರನ್ನು ಕೊಟ್ಟುಬಿಟ್ಟನು. ಆದ್ದರಿಂದ ಚಿಕ್ಲಗ್ ಎಂಬುದು ಇಂದಿನವರೆಗೂ ಯೆಹೂದ ರಾಜರಿಗೆ ಸೇರಿದೆ.

[7] ದಾವೀದನು ಫಿಲಿಷ್ಟಿಯರ ದೇಶದಲ್ಲಿ ಒಂದು ವರ್ಷ ನಾಲ್ಕು ತಿಂಗಳೂ ವಾಸವಾಗಿದ್ದನು.

[8] ಆ ಕಾಲದಲ್ಲಿ ಅವನೂ, ಅವನ ಜನರೂ ತೇಲಾಮಿನಿಂದ ಶೂರಿನವರೆಗೂ, ಐಗುಪ್ತ ದೇಶದವರೆಗೂ ವಿಸ್ತರಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ವಾಸಿಸುತ್ತಿರುವ ಗೆಷೂರ್ಯರು, ಗಿಜ್ರೀಯರು, ಅಮಾಲೇಕ್ಯರು ಇವರ ಮೇಲೆ ಆಕ್ರಮಣ ಮಾಡಿ ಸುಲಿದುಕೊಳ್ಳುತ್ತಿದ್ದರು.

[9] ದಾವೀದನು ಸ್ತ್ರೀಪುರುಷರಲ್ಲಿ ಒಬ್ಬರನ್ನೂ ಉಳಿಸದೆ ದೇಶದ ಎಲ್ಲಾ ನಿವಾಸಿಗಳನ್ನು ಕೊಂದು, ಕುರಿ, ದನ, ಕತ್ತೆ, ಒಂಟೆ, ಉಡುಗೊರೆ ಇವುಗಳನ್ನು ತೆಗೆದುಕೊಂಡು ಆಕೀಷನ ಬಳಿಗೆ ಹೋಗುತ್ತಿದ್ದನು.

[10] ಆಕೀಷನು ಅವನನ್ನು “ಈ ಹೊತ್ತು ಯಾವ ಪ್ರಾಂತ್ಯದವರನ್ನು ಸೂರೆಮಾಡಿಕೊಂಡು ಬಂದಿರಿ” ಎಂದು ಕೇಳುವನು. ದಾವೀದನು ಅವನಿಗೆ “ದಕ್ಷಿಣ ಪ್ರಾಂತ್ಯದಲ್ಲಿರುವ ಯೆಹೂದ್ಯರು, ಎರಹ್ಮೇಲ್ಯರು ಕೇನ್ಯರು ಇವರಲ್ಲಿ ಯಾರ ಹೆಸರನ್ನಾದರೂ” ಹೇಳುವರು.

[11] ದಾವೀದನು ತನ್ನ ಕೃತ್ಯವನ್ನು ಜನರು ಹೇಳಾರೆಂದು ನೆನಸಿ, ಅವನು ಯಾರನ್ನೂ ಗತ್ ಊರಿಗೆ ತಾರದೆ, ಎಲ್ಲಾ ಸ್ತ್ರೀಪುರುಷರನ್ನು ಅಲ್ಲೇ ಕೊಂದುಹಾಕುತ್ತಿದ್ದನು. ಅವನು ಫಿಲಿಷ್ಟಿಯರ ದೇಶದಲ್ಲಿ ವಾಸವಾಗಿದ್ದ ಕಾಲದಲ್ಲೆಲ್ಲಾ ಇದೇ ರೀತಿ ಮಾಡುತ್ತಿದ್ದನು.

[12] ದಾವೀದನ ಹೆಸರು ಸ್ವಜನರಾದ ಇಸ್ರಾಯೇಲರಲ್ಲಿ ತನ್ನ ಹೆಸರನ್ನು ಕೆಡಿಸಿಕೊಂಡಿದ್ದರಿಂದ ಇವನು ತನ್ನ ನಿತ್ಯ ದಾಸನಾಗಿರುವನೆಂದು ಆಕೀಷನು ನಂಬಿಕೊಂಡನು.

1 ಸಮುವೇಲನು — Chapters