[1] ಸಮುವೇಲನು ಸೌಲನಿಗೆ, “ಯೆಹೋವನು ನಿನ್ನನ್ನು ತನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆ ಅರಸನನ್ನಾಗಿ ಅಭಿಷೇಕಿಸುವುದಕ್ಕೋಸ್ಕರ ನನ್ನನ್ನೇ ಕಳುಹಿಸಿದನಲ್ಲಾ; ಆತನು ಈಗ ಹೇಳುವುದನ್ನು ಕೇಳು.
[2] ಸೇನಾಧೀಶ್ವರನಾದ ಯೆಹೋವನು ನಿನಗೆ, ‘ಇಸ್ರಾಯೇಲರು ಐಗುಪ್ತದಿಂದ ಬರುತ್ತಿರುವಾಗ ದಾರಿಯಲ್ಲಿ ಅಮಾಲೇಕ್ಯರು ಅವರಿಗೆ ವಿರೋಧವಾಗಿ ನಿಂತು ತೊಂದರೆಪಡಿಸಿದ್ದನ್ನು ನೆನಪುಮಾಡಿಕೊಂಡು ನಾನು ಅವರಿಗೆ ಮುಯ್ಯಿತೀರಿಸುವೆನು.
[3] ಈಗ ನೀನು ಹೋಗಿ ಅವರನ್ನು ಸೋಲಿಸಿ ಅವರಿಗಿರುವುದನ್ನೆಲ್ಲಾ ಸಂಪೂರ್ಣವಾಗಿ ಹಾಳುಮಾಡು. ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಶಿಶುಗಳನ್ನೂ, ಎತ್ತು, ಕುರಿ, ಕತ್ತೆ, ಒಂಟೆ, ಇವುಗಳನ್ನೂ ಕನಿಕರವಿಲ್ಲದೆ ಕೊಂದುಹಾಕು ಎಂದು ಹೇಳುತ್ತಾನೆ’” ಅಂದನು.
[4] ಸೌಲನು ತೆಲಾಯೀಮಿನಲ್ಲಿ ಸೈನ್ಯವನ್ನು ಕೂಡಿಸಿ ಲೆಕ್ಕಿಸಲು ಎರಡು ಲಕ್ಷ ಕಾಲಾಳುಗಳು ಇದ್ದರು; ಯೆಹೂದ್ಯರು ಹತ್ತು ಸಾವಿರ ಜನರು ಇದ್ದರು.
[5] ಅವನು ಇವರೊಡನೆ ಅಮಾಲೇಕ್ಯರ ರಾಜಧಾನಿಯ ಬಳಿಗೆ ಹೋಗಿ ಅಲ್ಲಿನ ಒಂದು ತಗ್ಗಿನಲ್ಲಿ ಹೊಂಚುಹಾಕುತ್ತಿದ್ದನು.
[6] ಆದರೆ ಅವನು ಕೇನ್ಯರಿಗೆ, “ನೀವು ಅಮಾಲೇಕ್ಯರನ್ನು ಬಿಟ್ಟುಹೋಗಿರಿ; ಇಲ್ಲವಾದರೆ ನೀವೂ ಅವರೊಡನೆ ನಾಶವಾದೀರಿ. ಇಸ್ರಾಯೇಲರು ಐಗುಪ್ತದಿಂದ ಬರುತ್ತಿದ್ದಾಗ ನೀವು ಅವರಿಗೆ ದಯೆತೋರಿಸಿದಿರಲ್ಲಾ” ಎಂದು ಹೇಳಿಕಳುಹಿಸಿದನು. ಅದರಂತೆಯೇ ಅವರು ಅಮಾಲೇಕ್ಯರನ್ನು ಬಿಟ್ಟುಹೋದರು.
[7] ಆಗ ಸೌಲನು ಅಮಾಲೇಕ್ಯರನ್ನು ಹವೀಲಾ ಪ್ರಾಂತ್ಯದಿಂದ ಐಗುಪ್ತದ ಪೂರ್ವದಿಕ್ಕಿನಲ್ಲಿರುವ ಶೂರಿನವರೆಗೆ ಅವರನ್ನು ಸಂಹರಿಸುತ್ತಾ ಹೋದನು.
[8] ಅವರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದು, ಎಲ್ಲಾ ಜನರನ್ನು ಕತ್ತಿಯಿಂದ ಸಂಹರಿಸಿದನು.
[9] ಸೌಲನೂ ಮತ್ತು ಇಸ್ರಾಯೇಲರೂ ಅಗಾಗನನ್ನೂ, ಉತ್ತಮವಾದ ಕುರಿದನಗಳನ್ನೂ, ಕುರಿಮರಿಗಳನ್ನೂ, ಕೊಬ್ಬಿದ ಪಶುಗಳನ್ನೂ, ಶ್ರೇಷ್ಠವಾದ ಎಲ್ಲಾ ಪದಾರ್ಥಗಳನ್ನೂ ನಾಶಮಾಡಲು ಮನಸ್ಸಿಲ್ಲದೆ ಉಳಿಸಿ ಪ್ರಯೋಜನವಿಲ್ಲದಂಥ ಹೀನವಾದವುಗಳನ್ನೆಲ್ಲಾ ನಾಶಮಾಡಿಬಿಟ್ಟರು.
[10] ಯೆಹೋವನು ಸಮುವೇಲನಿಗೆ, “ಸೌಲನನ್ನು ಅರಸನನ್ನಾಗಿ ಮಾಡಿದ್ದಕ್ಕೆ ಈಗ ವಿಷಾದಿಸುತ್ತೇನೆ. ಅವನು ನನ್ನನ್ನು ಬಿಟ್ಟುಬಿಟ್ಟನು; ನನ್ನ ಆಜ್ಞೆಗಳನ್ನು ನೆರವೇರಿಸಲಿಲ್ಲ” ಎಂದು ಹೇಳಿದನು.
[11] ಸಮುವೇಲನು ಕೋಪಗೊಂಡು ರಾತ್ರಿಯೆಲ್ಲಾ ಯೆಹೋವನಿಗೆ ಮೊರೆಯಿಟ್ಟನು.
[12] ಸಮುವೇಲನು ಬೆಳಿಗ್ಗೆ ಎದ್ದು ಸೌಲನನ್ನು ನೋಡುವುದಕ್ಕೆ ಹೊರಟಾಗ ಅವನಿಗೆ, “ಸೌಲನು ಕರ್ಮೆಲಿಗೆ ಹೋಗಿ ಅಲ್ಲಿ ತನಗೋಸ್ಕರ ಒಂದು ಜ್ಞಾಪಕಸ್ತಂಭವನ್ನು ನಿಲ್ಲಿಸಿ, ಅಲ್ಲಿಂದ ಗಟ್ಟಾ ಇಳಿದು ಗಿಲ್ಗಾಲಿಗೆ ಹೋದನು” ಎಂಬ ವರ್ತಮಾನವು ಬಂದದ್ದರಿಂದ
[13] ಸಮುವೇಲನು ಅಲ್ಲಿಗೆ ಹೋದನು. ಸೌಲನು ಅವನನ್ನು ಕಂಡು, “ಯೆಹೋವನು ನಿನ್ನನ್ನು ಆಶೀರ್ವದಿಸಲಿ; ನಾನು ಆತನ ಅಪ್ಪಣೆಯನ್ನು ನೆರವೇರಿಸಿದೆನು” ಅಂದನು.
[14] ಅದಕ್ಕೆ ಸಮುವೇಲನು, “ಹಾಗಾದರೆ ಇದೇನು? ಕುರಿಗಳ ಕೂಗು ನನ್ನ ಕಿವಿಗೆ ಬೀಳುತ್ತದೆ, ದನಗಳ ಶಬ್ದವು ನನಗೆ ಕೇಳಿಸುತ್ತದೆ” ಎನ್ನಲು
[15] ಸೌಲನು, “ಜನರು ನಿನ್ನ ದೇವರಾದ ಯೆಹೋವನಿಗೆ ಯಜ್ಞವನ್ನು ಅರ್ಪಿಸುವುದಕ್ಕಾಗಿ ಅಮಾಲೇಕ್ಯರ ಕುರಿದನಗಳಲ್ಲಿ ಉತ್ತಮವಾದವುಗಳನ್ನು ಉಳಿಸಿ ತಂದಿದ್ದಾರೆ; ಮಿಕ್ಕಾದವುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿದೆವು” ಎಂದು ಉತ್ತರಕೊಟ್ಟನು.
[16] ಆಗ ಸಮುವೇಲನು ಅವನಿಗೆ, “ಅದಿರಲಿ; ಯೆಹೋವನು ಕಳೆದ ರಾತ್ರಿಯಲ್ಲಿ ನನಗೆ ಹೇಳಿದ್ದನ್ನು ತಿಳಿಸುತ್ತೇನೆ ಕೇಳು” ಎನ್ನಲು ಅವನು, “ಹೇಳು” ಅಂದನು.
[17] ಸಮುವೇಲನು, “ನೀನು ನಿನ್ನ ದೃಷ್ಟಿಯಲ್ಲಿ ಅಲ್ಪನಾಗಿದ್ದರೂ ಯೆಹೋವನು ನಿನಗೆ ಇಸ್ರಾಯೇಲ್ಯರಲ್ಲಿ ರಾಜ್ಯಾಭಿಷೇಕ ಮಾಡಿದ್ದರಿಂದ ನೀನು ಎಲ್ಲಾ ಕುಲಗಳಿಗೆ ಶಿರಸ್ಸನ್ನಾಗಿ ಮಾಡಿದನು.
[18] ಆತನು ನಿನಗೆ, ‘ಹೊರಟು ಹೋಗಿ ದುಷ್ಟರಾದ ಅಮಾಲೇಕ್ಯರೊಡನೆ ಯುದ್ಧಮಾಡಿ ಅವರೆಲ್ಲರನ್ನೂ ಸಂಪೂರ್ಣವಾಗಿ ನಾಶಮಾಡು’ ಎಂದು ಹೇಳಿದನು.
[19] ಆದರೆ ನೀನು ಯೆಹೋವನ ಮಾತನ್ನು ಕೇಳದೆ ಕೊಳ್ಳೆಗಾಗಿ ಮನಸೋತು ಆತನಿಗೆ ದ್ರೋಹಮಾಡಿದ್ದೇಕೆ?” ಅಂದನು.
[20] ಆಗ ಸೌಲನು ಸಮುವೇಲನಿಗೆ, “ಏನು? ನಾನು ಯೆಹೋವನ ಮಾತನ್ನು ಕೇಳಲಿಲ್ಲವೋ? ಆತನು ಕಳುಹಿಸಿದಲ್ಲಿಗೆ ಹೋಗಿ ಅಮಾಲೇಕ್ಯರನ್ನೆಲ್ಲಾ ಸಂಹರಿಸಿ ಅವರ ಅರಸನಾದ ಅಗಾಗನನ್ನು ಹಿಡಿದು ತಂದೆನು.
[21] ಆದರೆ ಜನರು ಸಂಪೂರ್ಣವಾಗಿ ಸಂಹರಿಸಬೇಕಾದ ಕೊಳ್ಳೆಯಲ್ಲಿ ಉತ್ತಮವಾದ ಕುರಿದನಗಳನ್ನು ನಿನ್ನ ದೇವರಾದ ಯೆಹೋವನಿಗೆ ಗಿಲ್ಗಾಲಿನಲ್ಲಿ ಯಜ್ಞಸಮರ್ಪಣೆಮಾಡುವುದಕ್ಕಾಗಿ ಉಳಿಸಿ ತಂದರು” ಎಂದು ಉತ್ತರಕೊಟ್ಟನು.
[22] ಅದಕ್ಕೆ ಸಮುವೇಲನು, “ಯೆಹೋವನು ವಿಧೇಯತ್ವವನ್ನು ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವುದಕ್ಕಿಂತ ಆತನ ಆಜ್ಞಾಪಾಲನೆ ಉತ್ತಮವಾಗಿದೆ; ಟಗರುಗಳ ಕೊಬ್ಬಿಗಿಂತ ವಿಧೇಯತೆ ವಿಶಿಷ್ಟವಾದುದು.
[23] ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವುದು. ಹಟವು ಮಿಥ್ಯಾಭಕ್ತಿಗೂ, ವಿಗ್ರಹಾರಾಧನೆಗೂ ಸಮಾನವಾಗಿರುವುದು. ನೀನು ಯೆಹೋವನ ಮಾತಿನಂತೆ ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಅರಸುತನದಿಂದ ನಿವಾರಿಸಿಬಿಟ್ಟಿದ್ದಾನೆ” ಎಂದು ಹೇಳಿದನು.
[24] ಸೌಲನು ಸಮುವೇಲನಿಗೆ, “ನಾನು ಯೆಹೋವನ ಮತ್ತು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿದ್ದೇನೆ; ಜನರಿಗೆ ಹೆದರಿ ಅವರ ಮಾತನ್ನು ಕೇಳಿದೆನು.
[25] ನೀನು ದಯವಿಟ್ಟು ನನ್ನ ಪಾಪವನ್ನು ಕ್ಷಮಿಸು; ನಾನು ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ” ಎಂದು ಅವನನ್ನು ಬೇಡಿಕೊಂಡನು.
[26] ಅದಕ್ಕೆ ಸಮುವೇಲನು, “ನಾನು ಹಿಂದಿರುಗಿ ನಿನ್ನ ಜೊತೆಯಲ್ಲಿ ಬರುವುದಿಲ್ಲ; ನೀನು ಯೆಹೋವನ ಮಾತನ್ನು ಅನುಸರಿಸಿ ನಡೆಯದೆ ಇದ್ದುದರಿಂದ ಆತನು ನಿನ್ನನ್ನು ಇಸ್ರಾಯೇಲರ ಅರಸುತನದಿಂದ ನಿವಾರಿಸಿದ್ದಾನೆ” ಎಂದು ಹೇಳಿ ತಿರುಗಿಕೊಂಡು ಹೊರಡಲು
[27] ಸೌಲನು ಅವನ ಮೇಲಂಗಿಯ ಅಂಚನ್ನು ಹಿಡಿದು ಎಳೆದನು; ಅದು ಹರಿದುಹೋಯಿತು.
[28] ಆಗ ಸಮುವೇಲನು ಅವನಿಗೆ, “ಯೆಹೋವನು ಈ ಹೊತ್ತು ಇಸ್ರಾಯೇಲಿನ ರಾಜ್ಯವನ್ನು ನಿನ್ನಿಂದ ಕಿತ್ತುಕೊಂಡು ನಿನಗಿಂತ ಉತ್ತಮನಾದ ಇನ್ನೊಬ್ಬನಿಗೆ ಕೊಟ್ಟಿದ್ದಾನೆ.
[29] ಇಸ್ರಾಯೇಲರ ನಿರಂತರ ಆಧಾರವಾಗಿ ಇರುವವನು ಸುಳ್ಳಾಡುವವನಲ್ಲ; ಪಶ್ಚಾತ್ತಾಪಪಡುವವನಲ್ಲ; ಏಕೆಂದರೆ ವಾಗ್ದಾನ ಮಾಡಿದ ಮಾತನ್ನು ನಡೆಸದೆ ಬಿಡುವವನಲ್ಲ” ಎಂದು ಹೇಳಿದನು.
[30] ಅದಕ್ಕೆ ಸೌಲನು, “ನಾನು ಪಾಪಮಾಡಿದ್ದೇನೆ; ದಯವಿಟ್ಟು ಇಸ್ರಾಯೇಲರ ಮುಂದೆಯೂ, ಜನರ ಮುಂದೆಯೂ ಹಿರಿಯರ ಮುಂದೆಯೂ ನನ್ನ ಮಾನವನ್ನುಳಿಸು. ನಾನು ನಿನ್ನ ದೇವರಾದ ಯೆಹೋವನನ್ನು ಆರಾಧಿಸುವಂತೆ ಹಿಂದಿರುಗಿ ನನ್ನ ಜೊತೆಯಲ್ಲಿ ಬಾ” ಎಂದು ಬೇಡಿಕೊಂಡನು.
[31] ಸಮುವೇಲನು ಹಿಂದಿರುಗಿ ಸೌಲನ ಜೊತೆಯಲ್ಲಿ ಹೋದನು. ಆಗ ಸೌಲನು ದೇವರನ್ನು ಆರಾಧಿಸಿದನು.
[32] ತರುವಾಯ ಸಮುವೇಲನು, “ಅಮಾಲೇಕ್ಯರ ಅರಸನಾದ ಅಗಾಗನನ್ನು ನನ್ನ ಬಳಿಗೆ ಕರೆತನ್ನಿರಿ” ಎಂದನು. ಅಗಾಗನು ಮರಣಭಯ ತಪ್ಪಿತೆಂದು ನೆನಪಿಸಿಕೊಂಡು ಸಂತೋಷದಿಂದ ಅವನ ಹತ್ತಿರ ಬಂದನು.
[33] ಆದರೆ ಸಮುವೇಲನು ಅವನಿಗೆ, “ನಿನ್ನ ಕತ್ತಿಯು ಅನೇಕ ಸ್ತ್ರೀಯರಿಗೆ ಪುತ್ರಶೋಕವನ್ನುಂಟುಮಾಡಿದೆ; ಅದರಂತೆ ನಿನ್ನ ತಾಯಿಯು ಎಲ್ಲರಿಗಿಂತಲೂ ಹೆಚ್ಚಾಗಿ ಪುತ್ರಶೋಕವನ್ನು ಅನುಭವಿಸಲಿ” ಎಂದು ಹೇಳಿ ಅವನನ್ನು ಗಿಲ್ಗಾಲಿನಲ್ಲಿ ಯೆಹೋವನ ಸನ್ನಿಧಿಯಲ್ಲೇ ಕಡಿದುಹಾಕಿದನು.
[34] ಅನಂತರ ಸಮುವೇಲನು ರಾಮಕ್ಕೆ ಹೋದನು; ಸೌಲನು ತನ್ನ ಊರಾದ ಗಿಬೆಯದಲ್ಲಿರುವ ಮನೆಗೆ ಹೋದನು.
[35] ಸಮುವೇಲನು ಜೀವದಿಂದ ಇರುವವರೆಗೂ ಸೌಲನನ್ನು ನೋಡಲಿಲ್ಲ; ಆದರೆ ಯೆಹೋವನು ಸೌಲನನ್ನು ಇಸ್ರಾಯೇಲರ ಅರಸನನ್ನಾಗಿ ಮಾಡಿದ್ದಕ್ಕಾಗಿ ವಿಷಾದಪಟ್ಟನು. ಸಮುವೇಲನು ಅವನ ಕುರಿತು ದುಃಖಪಡುತ್ತಿದ್ದನು.