[1] ಅಮ್ಮೋನಿಯನಾದ ನಾಹಾಷನು ಹೊರಟು ಬಂದು ಯಾಬೇಷ್ ಗಿಲ್ಯಾದಿಗೆ ಮುತ್ತಿಗೆ ಹಾಕಲು, ಯಾಬೇಷಿನವರು ಅವನನ್ನು, “ನೀನು ನಮ್ಮ ಸಂಗಡ ಒಡಂಬಡಿಕೆ ಮಾಡಿಕೋ; ನಾವು ನಿನ್ನನ್ನು ಸೇವಿಸುವೆವು” ಎಂದು ಬೇಡಿಕೊಂಡರು.
[2] ಅದಕ್ಕೆ ಅವನು, “ಎಲ್ಲಾ ಇಸ್ರಾಯೇಲರನ್ನು ಅವಮಾನಪಡಿಸುವುದಕ್ಕಾಗಿ ನಾನು ಮೊದಲು ನಿಮ್ಮಲ್ಲಿ ಪ್ರತಿಯೊಬ್ಬರ ಬಲಗಣ್ಣನ್ನು ಕಿತ್ತುಹಾಕುತ್ತೇನೆ. ಇದಕ್ಕೆ ನೀವು ಒಪ್ಪುವುದಾದರೆ ನಿಮ್ಮ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ” ಎಂದು ಉತ್ತರಕೊಟ್ಟನು.
[3] ಆಗ ಯಾಬೇಷಿನ ಹಿರಿಯರು ಅವನಿಗೆ, “ಏಳು ದಿನಗಳವರೆಗೆ ಸಮಯ ಕೊಡು; ಅಷ್ಟರೊಳಗೆ ನಾವು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ದೂತರನ್ನು ಕಳುಹಿಸುತ್ತೇವೆ. ನಮ್ಮನ್ನು ಯಾರೂ ರಕ್ಷಿಸದಿದ್ದರೆ, ನಾವು ನಿನ್ನ ಬಳಿಗೆ ಹೊರಟು ಬಂದು ನಿನಗೆ ಅಧೀನರಾಗುತ್ತೇವೆ” ಎಂದು ತಿಳಿಸಿದರು.
[4] ದೂತರು ಸೌಲನು ವಾಸವಾಗಿದ್ದ ಗಿಬೆಯಕ್ಕೆ ಬಂದು ಅಲ್ಲಿನವರಿಗೆ ವರ್ತಮಾನವನ್ನು ತಿಳಿಸಲು ಎಲ್ಲರೂ ಅಳತೊಡಗಿದರು.
[5] ಅಷ್ಟರಲ್ಲಿ ಸೌಲನು ಹೊಲದಿಂದ ದನಗಳನ್ನು ಹೊಡೆದುಕೊಂಡು ಬಂದನು. ಅವನು, “ಜನರು ಗೋಳಾಡುವುದಕ್ಕೆ ಕಾರಣವೇನು?” ಎಂದು ಕೇಳಲು ಅವರು ಅವನಿಗೆ ಯಾಬೇಷಿನವರ ವರ್ತಮಾನವನ್ನು ತಿಳಿಸಿದರು.
[6] ಆಗ ಯೆಹೋವನ ಆತ್ಮವು ಅವನ ಮೇಲೆ ಬಂದಿತು. ಅವನು ಬಹಳ ಕೋಪಗೊಂಡು, ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ತುಂಡು ತುಂಡು ಮಾಡಿದನು.
[7] ಆ ತುಂಡುಗಳನ್ನು ದೂತರ ಮುಖಾಂತರ ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿ, “ಯಾರು ಸೌಲ, ಸಮುವೇಲರನ್ನು ಹಿಂಬಾಲಿಸುವುದಿಲ್ಲವೋ ಅವರ ಎತ್ತುಗಳು ಹೀಗೆಯೇ ಕಡಿಯಲ್ಪಡುವವು” ಎಂದು ಹೇಳಿ ಕಳುಹಿಸಿದನು. ಯೆಹೋವನಿಗೆ ಭಯಪಟ್ಟು ಜನರೆಲ್ಲರೂ ಏಕಮನಸ್ಸಿನಿಂದ ಬೆಜೆಕಿನಲ್ಲಿ ಕೂಡಿಬಂದರು.
[8] ಅವರನ್ನು ಬೆಜೆಕಿನಲ್ಲಿ ಕ್ರಮಪಡಿಸಿ ಲೆಕ್ಕಿಸಿದಾಗ ಇಸ್ರಾಯೇಲರಲ್ಲಿ ಮೂರು ಲಕ್ಷ ಸೈನಿಕರೂ ಯೆಹೂದ್ಯರಲ್ಲಿ ಮೂವತ್ತು ಸಾವಿರ ಸೈನಿಕರೂ ಇದ್ದರು.
[9] ಅವರು ಬಂದಿದ್ದ ದೂತರಿಗೆ, “ನಾಳೆ ಮಧ್ಯಾಹ್ನದಲ್ಲಿ ನಿಮಗೆ ಸಹಾಯ ಸಿಕ್ಕುವುದೆಂದು ಯಾಬೇಷ್ ಗಿಲ್ಯಾದಿನವರಿಗೆ ತಿಳಿಸಿರಿ” ಎಂದು ಹೇಳಿ ಅವರನ್ನು ಕಳುಹಿಸಿದರು.
[10] ದೂತರು ಹೋಗಿ ಈ ವರ್ತಮಾನವನ್ನು ತಿಳಿಸಲು ಯಾಬೇಷಿನವರು ಬಹಳವಾಗಿ ಸಂತೋಷಪಟ್ಟು ಅಮ್ಮೋನಿಯರಿಗೆ, “ನಾವು ನಾಳೆ ನಿಮ್ಮ ಬಳಿಗೆ ಬರುವೆವು; ನಿಮಗೆ ಸರಿ ಕಾಣುವ ಪ್ರಕಾರ ಮಾಡಿರಿ” ಎಂದು ಹೇಳಿದರು.
[11] ಸೌಲನು ಬೆಳಗಿನ ಜಾವದಲ್ಲಿ ತನ್ನ ಜನರನ್ನು ಮೂರು ಗುಂಪನ್ನಾಗಿ ಮಾಡಿ ಅಮ್ಮೋನಿಯರ ಪಾಳೆಯದೊಳಗೆ ನುಗ್ಗಿ ಅವರನ್ನು ಮಧ್ಯಾಹ್ನದ ವರೆಗೆ ಹತ್ಯೆಮಾಡಿದನು. ಉಳಿದವರನ್ನು ಒಟ್ಟಾಗಿ ಸೇರಿಸಿಕೊಳ್ಳದ ಹಾಗೆ ಚದರಿಸಿಬಿಟ್ಟನು.
[12] ತರುವಾಯ ಜನರು ಸಮುವೇಲನಿಗೆ, “ಸೌಲನು ನಮಗೆ ಅರಸನಾಗಬಾರದು ಎಂದು ಹೇಳಿದವರು ಯಾರು? ಅವರನ್ನು ನಮಗೆ ಒಪ್ಪಿಸಿರಿ; ನಾವು ಕೊಂದುಹಾಕುತ್ತೇವೆ” ಎಂದರು.
[13] ಸೌಲನು ಅವರಿಗೆ, “ಯೆಹೋವನು ಈ ದಿನ ಇಸ್ರಾಯೇಲ್ಯರಿಗೆ ಜಯವನ್ನು ಉಂಟುಮಾಡಿರುವುದರಿಂದ ಯಾರನ್ನೂ ಕೊಲ್ಲಬಾರದು” ಎಂದು ಹೇಳಿದನು.
[14] ಸಮುವೇಲನು ಜನರಿಗೆ, “ಬನ್ನಿರಿ; ಗಿಲ್ಗಾಲಿಗೆ ಹೋಗಿ ಸೌಲನ ಅರಸುತನವನ್ನು ಸ್ಥಿರಪಡಿಸೋಣ” ಅನ್ನಲು
[15] ಅವರೆಲ್ಲರೂ ಅಲ್ಲಿಗೆ ಹೋಗಿ ಯೆಹೋವನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಸ್ಥಿರಪಡಿಸಿ, ಯೆಹೋವನಿಗೆ ಸಮಾಧಾನ ಯಜ್ಞಗಳನ್ನು ಸಮರ್ಪಿಸಿ, ಸೌಲನೊಡನೆ ಬಹಳವಾಗಿ ಆನಂದಿಸಿದರು.