Skip to content
Opens in a new window
Listen to this chapter • 4:37

[1] ಸೌಲನು ಅರಸನಾದಾಗ ಮೂವತ್ತು ವರ್ಷದವನಾಗಿದ್ದನು. ಅವನು ಇಸ್ರಾಯೇಲರನ್ನು ಎರಡು ವರ್ಷಗಳ ಕಾಲ ಆಳಿದನು.

[2] ಅವನು ಇಸ್ರಾಯೇಲರಿಂದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡನು, ಅವರಲ್ಲಿ ಎರಡು ಸಾವಿರ ಜನರು ಅವನೊಂದಿಗೆ ಮಿಕ್ಮಾಷಿನಲ್ಲಿಯೂ, ಬೇತೇಲಿನ ಗುಡ್ಡದಲ್ಲಿಯೂ ಇದ್ದರು. ಒಂದು ಸಾವಿರ ಜನರನ್ನು ಬೆನ್ಯಾಮೀನ್ಯರ ಗಿಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಉಳಿದ ಇಸ್ರಾಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು.

[3] ಯೋನಾತಾನನು ಗೆಬದಲ್ಲಿದ್ದ ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ನಾಶಮಾಡಿದನು. ಈ ವರ್ತಮಾನವು ಫಿಲಿಷ್ಟಿಯರಿಗೆ ಮುಟ್ಟಿತು. ಸೌಲನು “ಎಲ್ಲಾ ಇಬ್ರಿಯರು ಕೇಳಲಿ” ಎಂದು ದೇಶದಲ್ಲೆಲ್ಲಾ ತುತ್ತೂರಿ ಊದಿಸಿದನು.

[4] ಸೌಲನು ಫಿಲಿಷ್ಟಿಯರ ಕಾವಲುಪಡೆಯ ಪಾಳೆಯವನ್ನು ನಾಶಮಾಡಿದ್ದರಿಂದ ತಾವು ಅವರ ದ್ವೇಷಕ್ಕೆ ಗುರಿಯಾದೆವೆಂದು ಇಸ್ರಾಯೇಲರು ತಿಳಿದು ಗಿಲ್ಗಾಲಿಗೆ ಬಂದು ಸೌಲನನ್ನು ಕೂಡಿಕೊಂಡರು.

[5] ಆಗ ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೋಸ್ಕರ ಮೂವತ್ತು ಸಾವಿರ ರಥಬಲವನ್ನೂ, ಆರು ಸಾವಿರ ಅಶ್ವಬಲವನ್ನೂ, ಸಮುದ್ರದ ಮರಳಿನಷ್ಟು ಅಸಂಖ್ಯವಾದ ಕಾಲಾಳುಗಳನ್ನೂ ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡರು.

[6] ಇಸ್ರಾಯೇಲರಿಗೆ ಕೇಡು ಬಂದಿತು. ತಾವು ಇಕ್ಕಟ್ಟಿನಲ್ಲಿದ್ದೇವೆಂದು ಅವರು ತಿಳಿದು ಗವಿ, ಕಾಡು, ಬಂಡೆ, ನೆಲಮನೆ, ಗುಂಡಿ ಇವುಗಳಲ್ಲಿ ಅಡಗಿಕೊಂಡರು.

[7] ಕೆಲವರು ಯೊರ್ದನ್ ಹೊಳೆದಾಟಿ ಗಾದ್ಯರ ದೇಶಕ್ಕೂ, ಗಿಲ್ಯಾದ್ ಪ್ರಾಂತ್ಯಕ್ಕೂ ಹೊರಟುಹೋದರು. ಸೌಲನು ಇನ್ನೂ ಗಿಲ್ಗಾಲಿನಲ್ಲೇ ಇದ್ದನು. ಅವನ ಸಂಗಡ ಇದ್ದವರು ಭಯದಿಂದ ನಡುಗುತ್ತ ಅವನನ್ನು ಹಿಂಬಾಲಿಸಿದರು.

[8] ಸೌಲನು ಸಮುವೇಲನ ಆಜ್ಞೆಯಂತೆ ಗಿಲ್ಗಾಲಿನಲ್ಲೇ ಏಳು ದಿನ ಇದ್ದರೂ ಸಮುವೇಲನು ಬರಲಿಲ್ಲ; ಅಷ್ಟರಲ್ಲಿ ಜನರು ಚದರಿಹೋದರು.

[9] ಆಗ ಸೌಲನು ಜನರಿಂದ ಸರ್ವಾಂಗಹೋಮಕ್ಕೂ, ಸಮಾಧಾನ ಯಜ್ಞಕ್ಕೂ ಬೇಕಾದದ್ದನ್ನು ತರಿಸಿ ಸರ್ವಾಂಗಹೋಮವನ್ನು ಅರ್ಪಿಸಿದನು.

[10] ಅದು ಮುಗಿಯುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವುದಕ್ಕೋಸ್ಕರ ಎದುರಿಗೆ ಹೋಗಲು

[11] ಸಮುವೇಲನು ಅವನನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಅವನು, “ಜನರು ಚದರಿಹೋಗುವುದನ್ನೂ, ನೀನು ನಿಯಮಿತಕಾಲದಲ್ಲಿ ಬಾರದಿರುವುದನ್ನೂ, ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನೂ ನೋಡಿದೆನು.

[12] ಆಗ ನಾನು ‘ಫಿಲಿಷ್ಟಿಯರು ಗಿಲ್ಗಾಲಿನಲ್ಲಿರುವ ನನ್ನ ಬಳಿಗೆ ಬಂದು ನನ್ನ ಮೇಲೆ ಬಿದ್ದಾರು, ನಾನು ಯೆಹೋವನ ದಯೆಯನ್ನು ಬೇಡಿಕೊಳ್ಳಲಿಲ್ಲ’ ಎಂದು, ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವುದಕ್ಕೆ ಮುಂದಾದೆನು” ಅಂದನು.

[13] ಆಗ ಸಮುವೇಲನು, “ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು.

[14] ಈಗಲಾದರೋ ನಿನ್ನ ಅರಸುತನವು ನಿಲ್ಲುವುದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆ ಹೋದುದರಿಂದ ಆತನು ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇಮಿಸಿದ್ದಾನೆ” ಎಂದು ಹೇಳಿದನು.

[15] ಅನಂತರ ಸಮುವೇಲನು ಗಿಲ್ಗಾಲನ್ನು ಬಿಟ್ಟು ಬೆನ್ಯಾಮೀನ್ಯರ ಗಿಬೆಯಕ್ಕೆ ಹೋದನು.

[16] ಸೌಲನು ತನ್ನ ಜೊತೆಯಲ್ಲಿದ್ದ ಸೈನಿಕರನ್ನು ಲೆಕ್ಕಿಸಿದಾಗ ಆರು ನೂರು ಪುರುಷರಿದ್ದರು. ಅವರೊಡನೆ ಅವನೂ ಅವನ ಮಗನಾದ ಯೋನಾತಾನನೂ ಬೆನ್ಯಾಮೀನ್ಯರ ಗೆಬದಲ್ಲಿ ಇಳಿದುಕೊಂಡರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು.

[17] ಸುಲಿಗೆ ಮಾಡುವುದಕ್ಕೋಸ್ಕರ ಫಿಲಿಷ್ಟಿಯರ ಪಾಳೆಯದಿಂದ ಮೂರು ಗುಂಪುಗಳು ಹೊರಟು, ಒಂದು ಗುಂಪು ಒಫ್ರದ ಮಾರ್ಗವಾಗಿ ಶುವಲ್‌ ನಾಡಿಗೂ,

[18] ಇನ್ನೊಂದು ಗುಂಪು ಬೇತ್‌ಹೋರೋನಿನ ಕಡೆಗೂ, ಮತ್ತೊಂದು ಜೆಬೋಯೀಮಿನ ಕಣಿವೆಯ ಕೆಳಗಿರುವ ಅರಣ್ಯವನ್ನು ನೋಡಬಹುದಾದ ಸ್ಥಳಕ್ಕೂ ಹೋದವು.

[19] ಇಬ್ರಿಯರು ಈಟಿಕತ್ತಿಗಳನ್ನು ಮಾಡಿಕೊಳ್ಳಬಾರದೆಂದು ಫಿಲಿಷ್ಟಿಯರ ಆಜ್ಞೆಯಿದ್ದದರಿಂದ ಇಸ್ರಾಯೇಲ್‌ ದೇಶದಲ್ಲಿ ಅವುಗಳನ್ನು ಮಾಡುವ ಕಮ್ಮಾರರೇ ಇರಲಿಲ್ಲ.

[20] ಅವರು ತಮ್ಮ ನೇಗಿಲಿನ ಗುಳ, ಸಲಿಕೆ, ಕೊಡಲಿ, ಗುದ್ದಲಿ ಇವುಗಳನ್ನು ಹರಿತ ಮಾಡಿಸುವುದಕ್ಕೆ ಫಿಲಿಷ್ಟಿಯರ ಹತ್ತಿರವೇ ಹೋಗಬೇಕಿತ್ತು.

[21] ಗುದ್ದಲಿ, ಸಲಿಕೆ, ತ್ರಿಶೂಲ, ಕೊಡಲಿ, ಮುಳ್ಳುಗೋಲು ಇವುಗಳನ್ನು ಹದಮಾಡುವುದಕ್ಕೋಸ್ಕರ ಅವರಲ್ಲಿ ಹರಿತ ಮಾಡುವ ಕಲ್ಲು ಮಾತ್ರ ಇತ್ತು.

[22] ಹೀಗಿರುವುದರಿಂದ ಯುದ್ಧ ಪ್ರಾರಂಭಿಸಿದಾಗ ಸೌಲ ಮತ್ತು ಯೋನಾತಾನರ ಹೊರತು ಅವರ ಜೊತೆಯಲ್ಲಿದ್ದ ಜನರಲ್ಲಿ ಒಬ್ಬನ ಕೈಯಲ್ಲಾದರೂ, ಕತ್ತಿಯಾಗಲಿ ಬರ್ಜಿಯಾಗಲಿ ಇರಲಿಲ್ಲ.

[23] ಫಿಲಿಷ್ಟಿಯರ ಕಾವಲುದಂಡು ಮಿಕ್ಮಾಷಿನ ಕಣಿವೆಯ ಕಡೆಗೆ ಹೊರಟಿತು.

1 ಸಮುವೇಲನು — Chapters