Skip to content
Opens in a new window
Listen to this chapter • 4:28

[1] ಯೆಹೋವನ ಮಂಜೂಷವು ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳ ಕಾಲ ಇತ್ತು.

[2] ನಂತರ ಫಿಲಿಷ್ಟಿಯರು ಪೂಜಾರಿಗಳನ್ನೂ, ಕಣಿಹೇಳುವವರನ್ನೂ ಕರೆದು ಅವರಿಗೆ, “ಯೆಹೋವನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಪುನಃ ಅದರ ಸ್ಥಳಕ್ಕೆ ಹೇಗೆ ಕಳುಹಿಸಬೇಕು ತಿಳಿಸಿರಿ” ಅನ್ನಲು

[3] ಅವರು, “ನೀವು ಇಸ್ರಾಯೇಲಿನ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು. ಪ್ರಾಯಶ್ಚಿತ್ತದ್ರವ್ಯದೊಡನೆ ಕಳುಹಿಸಿದರೆ ಮಾತ್ರ ಗುಣಹೊಂದುವಿರಿ. ಆತನ ಶಿಕ್ಷಾಹಸ್ತವು ನಿಮ್ಮನ್ನು ಬಾಧಿಸುತ್ತಿರುವುದಕ್ಕೆ ಕಾರಣವು ಗೊತ್ತಾಗುವುದು” ಎಂದು ಹೇಳಿದರು.

[4] ಜನರು, “ನಾವು ಪ್ರಾಯಶ್ಚಿತ್ತಾರ್ಥವಾಗಿ ಏನು ಕಳುಹಿಸಬೇಕು?” ಎಂದು ಕೇಳಲು ಅವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ಪ್ರಭುಗಳ ಸಂಖ್ಯೆಗೆ ಸರಿಯಾಗಿ ಬಂಗಾರದ ಐದು ಗಡ್ಡೆಗಳನ್ನೂ, ಬಂಗಾರದ ಐದು ಇಲಿಗಳನ್ನು ಮಾಡಿಸಬೇಕು.

[5] ನೀವು ನಿಮ್ಮ ದೇಶನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಗಡ್ಡೆ ಮತ್ತು ಇಲಿ ಇವುಗಳ ಸ್ವರೂಪಗಳನ್ನು ಚಿನ್ನದಿಂದ ಮಾಡಿಸಿ, ಇಸ್ರಾಯೇಲಿನ ದೇವರಿಗೆ ಅದನ್ನು ಅರ್ಪಿಸಿ ಮಹಿಮೆಯನ್ನು ಸಲ್ಲಿಸಿದರೆ, ಆತನ ಶಿಕ್ಷಾಹಸ್ತವು ನಿಮ್ಮನ್ನೂ, ನಿಮ್ಮ ದೇವತೆಗಳನ್ನೂ, ಪ್ರಾಂತ್ಯಗಳನ್ನೂ ಬಿಟ್ಟುಹೋದೀತು.

[6] ಐಗುಪ್ತರಂತೆಯೂ ಫರೋಹನಂತೆಯೂ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳುವುದೇಕೆ? ಇಸ್ರಾಯೇಲ್ಯರನ್ನು ಕಳುಹಿಸಲೊಲ್ಲದ ಇವರನ್ನು ಯೆಹೋವನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲಾ.

[7] ಈಗ ನೀವು ಒಂದು ಹೊಸ ಬಂಡಿಯನ್ನು ಮಾಡಿಸಿರಿ. ಅದಕ್ಕೆ ಹಾಲು ಕರೆಯುವ ಮತ್ತು ಎಂದೂ ನೊಗಹೊರದ ಎರಡು ಹಸುಗಳನ್ನು ಹೂಡಿಸಿರಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿರಿ

[8] ಆ ಬಂಡಿಯ ಮೇಲೆ ಯೆಹೋವನ ಮಂಜೂಷವನ್ನೂ, ನೀವು ಪ್ರಾಯಶ್ಚಿತ್ತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಟ್ಟು ಕಳುಹಿಸಿಬಿಡಿರಿ.

[9] ಅ ಹಸುಗಳು ತಾವಾಗಿ ಸ್ವದೇಶದ ದಾರಿ ಹಿಡಿದು ಬೇತ್ ಷೆಮೆಷಿನ ಕಡೆಗೆ ಹೋದರೆ ಈ ದೊಡ್ಡ ಕೇಡನ್ನು ಬರಮಾಡಿದವನು ಯೆಹೋವನೇ ಎಂದೂ, ಆ ಮಾರ್ಗವನ್ನು ಹಿಡಿಯದಿದ್ದರೆ ಆತನ ಹಸ್ತವು ನಮ್ಮನ್ನು ಬಾಧಿಸಲ್ಲಿಲ್ಲ ಇದು ಆಕಸ್ಮಿಕವಾಗಿ ಬಂದಿದೆ ಎಂದು, ತಿಳಿದುಕೊಳ್ಳಿರಿ” ಅಂದರು.

[10] ಅದೇ ಪ್ರಕಾರ ಫಿಲಿಷ್ಟಿಯರು ಹಾಲುಕರೆಯುವ ಎರಡು ಹಸುಗಳನ್ನು ಹಿಡಿದುಕೊಂಡು ಬಂಡಿಗೆ ಹೂಡಿ ಅವುಗಳ ಕರುಗಳನ್ನು ಮನೆಯಲ್ಲಿ ಕಟ್ಟಿಹಾಕಿದರು.

[11] ಯೆಹೋವನ ಮಂಜೂಷವನ್ನೂ, ಚಿನ್ನದ ಇಲಿಗಳೂ, ಗಡ್ಡೆಗಳೂ ಇದ್ದ ಚಿಕ್ಕ ಪೆಟ್ಟಿಗೆಯನ್ನೂ ಬಂಡಿಯ ಮೇಲಿಟ್ಟರು.

[12] ಕೂಡಲೆ ಆ ಹಸುಗಳು ಬೇತ್ ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಕೂಗುತ್ತಾ ನೆಟ್ಟಗೆ ಮುಂದೆ ನಡೆದವು; ಎಡಬಲಕ್ಕೆ ತಿರುಗಲಿಲ್ಲ. ಫಿಲಿಷ್ಟಿಯ ಪ್ರಭುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆ ಹೋದರು.

[13] ಬೇತ್ ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ಯೆಹೋವನ ಮಂಜೂಷವನ್ನು ನೋಡಿ ಬಹು ಸಂತೋಷಪಟ್ಟರು.

[14] ಬಂಡಿಯು ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ದೊಡ್ಡ ಕಲ್ಲಿನ ಬಳಿಯಲ್ಲಿ ಬಂದು ನಿಂತಿತು. ಆಗ ಅವರು ಹೋಗಿ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಆ ಹಸುಗಳನ್ನು ಯೆಹೋವನಿಗೆ ಯಜ್ಞಮಾಡಿದರು.

[15] ಲೇವಿಯರು ಯೆಹೋವನ ಮಂಜೂಷವನ್ನೂ, ಚಿನ್ನದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್ ಷೆಮೆಷಿನವರು ಅದೇ ದಿನ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಮತ್ತು ಯಜ್ಞಗಳನ್ನೂ ಸಮರ್ಪಿಸಿದರು.

[16] ಇದನ್ನೆಲ್ಲಾ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ಪ್ರಭುಗಳು ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.

[17] ಫಿಲಿಷ್ಟಿಯರು ಯೆಹೋವನಿಗೆ ಸಮರ್ಪಿಸಿದ ಚಿನ್ನದ ಗಡ್ಡೆಗಳು ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ ಊರು, ಎಕ್ರೋನ್ ಎಂಬ ಅವರ ಸಂಸ್ಥಾನಗಳ ಸಂಖ್ಯೆಗಳಿಗೂ

[18] ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅರಸುಗಳ ಅಧೀನದಲ್ಲಿದ್ದ ಎಲ್ಲಾ ಗ್ರಾಮ ನಗರಗಳ ಸಂಖ್ಯೆಗಳಿಗೂ ಸರಿಯಾಗಿದ್ದವು. ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಇರುವ ಯೆಹೋವನ ಮಂಜೂಷವೂ ಇಡಲ್ಪಟ್ಟ ಆ ದೊಡ್ಡ ಕಲ್ಲೇ ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಇದೆ.

[19] ಬೇತ್ ಷೆಮೆಷಿನವರು ಯೆಹೋವನ ಮಂಜೂಷದಲ್ಲಿ ಇಣಕಿ ನೋಡಿದ್ದರಿಂದ ಯೆಹೋವನು ಅವರಲ್ಲಿ ಎಪ್ಪತ್ತು ಮಂದಿಯನ್ನು ಸಾಯಿಸಿದನು. ಯೆಹೋವನು ತಮ್ಮಲ್ಲಿ ಮಹಾನಾಶನವನ್ನು ಉಂಟುಮಾಡಿದ್ದರಿಂದ ಬೇತ್ ಷೆಮೆಷಿನವರು ಗೋಳಾಡಿದರು.

[20] ಪರಿಶುದ್ಧ ದೇವರಾದ ಯೆಹೋವನ ಮುಂದೆ ಯಾರು ನಿಂತಾರು? ನಮ್ಮನ್ನು ಬಿಟ್ಟು ಈತನು ಹೋಗತಕ್ಕ ಸ್ಥಳ ಯಾವುದು ಎಂದು ಮಾತನಾಡಿಕೊಂಡು

[21] ಕಿರ್ಯತ್ಯಾರೀಮಿನವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ಫಿಲಿಷ್ಟಿಯರು ಯೆಹೋವನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿರಿ” ಎಂದು ಹೇಳಿದರು.

1 ಸಮುವೇಲನು — Chapters