[1] ಆ ಆಳು ಮುಂದೆ ಹೋದಾಗ ಸಮುವೇಲನು ತೈಲದ ಕೊಂಬಿನಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವನು ತನ್ನ ಸ್ವತ್ತನ್ನು ಅಳುವುದಕ್ಕೋಸ್ಕರ ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ.
[2] ಈ ಹೊತ್ತು ನೀನು ನನ್ನನ್ನು ಬಿಟ್ಟುಹೋದ ನಂತರ ಬೆನ್ಯಾಮೀನ್ಯರ ಮೇರೆಯೊಳಗಿರುವ ರಾಹೇಲಳ ಸಮಾಧಿಯ ಬಳಿಯಲ್ಲಿರುವಂಥ ಚೆಲ್ಚಹಿನಲ್ಲಿ ಇಬ್ಬರು ಮನುಷ್ಯರನ್ನು ಕಾಣುವಿ. ಅವರು ನಿನಗೆ, ‘ನೀನು ಹುಡುಕುತ್ತಿರುವ ಕತ್ತೆಗಳು ಸಿಕ್ಕಿದವು; ನಿನ್ನ ತಂದೆಯು ಕತ್ತೆಗಳ ಚಿಂತೆಬಿಟ್ಟು ನನ್ನ ಮಗನು ಎಲ್ಲಿ ಹೋದನು ಎಂಬುದಾಗಿ ನಿನಗೋಸ್ಕರ ಹಂಬಲಿಸುತ್ತಿರುತ್ತಾನೆ’ ಎಂದು ಹೇಳುವರು.
[3] ನೀನು ಅಲ್ಲಿಂದ ಮುಂದೆ ನಡೆದು ತಾಬೋರಿನ ಹತ್ತಿರವಿರುವ ಏಲೋನ್ ವೃಕ್ಷದ ಬಳಿಗೆ ಬಂದಾಗ ದೇವದರ್ಶನಕ್ಕಾಗಿ ಬೇತೇಲಿಗೆ ಹೋಗುವ ಮೂವರು ಜನರು ನಿನ್ನನ್ನು ಎದುರುಗೊಳ್ಳುವರು. ಅವರಲ್ಲೊಬ್ಬನು ಮೂರು ಹೋತಮರಿಗಳನ್ನೂ, ಮತ್ತೊಬ್ಬನು ಮೂರು ರೊಟ್ಟಿಗಳನ್ನೂ, ಇನ್ನೊಬ್ಬನು ದ್ರಾಕ್ಷಾರಸದ ಒಂದು ಬುದ್ದಲಿಯನ್ನೂ ಹೊತ್ತುಕೊಂಡಿರುವರು.
[4] ಅವರು ನಿನ್ನ ಕ್ಷೇಮಸಮಾಚಾರವನ್ನು ವಿಚಾರಿಸಿ ಎರಡು ರೊಟ್ಟಿಗಳನ್ನು ನಿನಗೆ ಕೊಡುವರು; ನೀನು ಅವುಗಳನ್ನು ತೆಗೆದುಕೊಳ್ಳಬೇಕು.
[5] ಅಲ್ಲಿಂದ ಫಿಲಿಷ್ಟಿಯರ ದಂಡು ಇರುವ ದೇವಗಿರಿಯನ್ನು ಮುಟ್ಟಿದಾಗ ಮುಂಭಾಗದಲ್ಲಿ ಸ್ವರಮಂಡಲ, ದಮ್ಮಡಿ, ಕೊಳಲು, ಕಿನ್ನರಿ ಈ ವಾದ್ಯಗಾರರೊಡನೆ ಗುಡ್ಡದಿಂದ ಇಳಿದು ಬರುತ್ತಿರುವ ಪ್ರವಾದಿಗಳ ಸಮೂಹವನ್ನು ಕಾಣುವಿ. ಅವರು ಪರವಶರಾಗಿ ಪ್ರವಾದಿಸುವರು.
[6] ಆಗ ಯೆಹೋವನ ಆತ್ಮವು ನಿನ್ನ ಮೇಲೆಯೂ ಬರುವುದರಿಂದ ನೀನೂ ಅವರೊಂದಿಗೆ ಪ್ರವಾದಿಸುವಿ. ನೀನು ಮಾರ್ಪಟ್ಟ ಮನುಷ್ಯನಾಗುವಿ.
[7] ಈ ಗುರುತುಗಳೆಲ್ಲಾ ಸಂಭವಿಸಿದಾಗ ನಿನಗೆ ಅನುಕೂಲವಿದ್ದ ಹಾಗೆ ಮಾಡು; ದೇವರು ನಿನ್ನ ಸಂಗಡ ಇದ್ದಾನೆ.
[8] ನೀನು ಮುಂದಾಗಿ ಗಿಲ್ಗಾಲಿಗೆ ಹೋಗು; ಏಳು ದಿನಗಳಾದ ನಂತರ ನಾನು ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವುದಕ್ಕೋಸ್ಕರ ಅಲ್ಲಿಗೆ ಬಂದು ನೀನು ಮಾಡಬೇಕಾದದ್ದನ್ನು ನಿನಗೆ ತಿಳಿಸುವೆನು; ಅಲ್ಲಿಯ ವರೆಗೆ ಕಾದುಕೊಂಡಿರು” ಎಂದು ಹೇಳಿದನು.
[9] ಸೌಲನು ಸಮುವೇಲನನ್ನು ಬಿಟ್ಟು ಹೊರಟ ಕೂಡಲೆ ದೇವರು ಅವನಿಗೆ ನೂತನ ಹೃದಯವನ್ನು ಕೊಟ್ಟನು. ಅದೇ ದಿನದಲ್ಲಿ ಆ ಎಲ್ಲಾ ಗುರುತುಗಳು ಸಂಭವಿಸಿದವು.
[10] ಅವನು ದೇವಗಿರಿಗೆ ಬಂದ ಕೂಡಲೆ ಪರವಶವಾದ ಪ್ರವಾದಿಸಮೂಹವು ತನ್ನೆದುರಿಗೆ ಬರುವುದನ್ನು ಕಂಡನು. ದೇವರ ಆತ್ಮವು ಸೌಲನ ಮೇಲೆ ಬಂದ್ದದರಿಂದ ಅವನೂ ಪರವಶನಾಗಿ ಅವರೊಂದಿಗೆ ಸೇರಿ ಪ್ರವಾದಿಸಿದನು.
[11] ಅವನು ಪರವಶನಾಗಿ ಮಾತನಾಡುವುದನ್ನು ಅವನ ಪರಿಚಿತರು ಕಂಡು ತಮ್ಮ ತಮ್ಮೊಳಗೆ, “ಕೀಷನ ಮಗನಿಗೆ ಏನಾಯಿತು? ಸೌಲನೂ ಪ್ರವಾದಿಗಳಲ್ಲಿ ಒಬ್ಬನೋ?” ಎಂದು ಮಾತನಾಡಿಕೊಳ್ಳುತ್ತಿದ್ದರು.
[12] ಆಗ ಆ ಸ್ಥಳದವನೊಬ್ಬನು, “ಹಾಗಾದರೆ ಇವರ ತಂದೆ ಯಾರು?” ಎಂದು ಕೇಳಿದನು. ಈ ಸಂಗತಿಯಿಂದ “ಸೌಲನು ಪ್ರವಾದಿಗಳಲ್ಲಿದ್ದಾನೆ” ಎಂಬ ವಿಷಯ ಹುಟ್ಟಿತು.
[13] ಅವನು ಪ್ರವಾದಿಸಿದ ನಂತರ ಬೆಟ್ಟದ ಮೇಲಿದ್ದ ಯಜ್ಞವೇದಿಯ ಬಳಿಗೆ ಬಂದನು.
[14] ಸೌಲನ ಚಿಕ್ಕಪ್ಪನು ಅವನನ್ನೂ ಅವನ ಸೇವಕನನ್ನೂ, “ನೀವು ಎಲ್ಲಿಗೆ ಹೋಗಿದ್ದಿರಿ?” ಎಂದು ಕೇಳಲು ಅವನು, “ಕತ್ತೆಗಳನ್ನು ಹುಡುಕುವುದಕ್ಕೆ ಹೋಗಿದ್ದೆವು. ಅವು ಸಿಕ್ಕಲಿಲ್ಲವಾದ್ದರಿಂದ ಸಮುವೇಲನ ಬಳಿಗೆ ಹೋದೆವು” ಅಂದನು.
[15] “ಸಮುವೇಲನು ಏನು ಹೇಳಿದನು?” ಎಂದು ಚಿಕ್ಕಪ್ಪನು ಕೇಳಲು
[16] ಸೌಲನು, “ಕತ್ತೆಗಳು ಸಿಕ್ಕಿವೇ ಎಂದು ತಿಳಿಸಿದನು” ಎಂಬುದಾಗಿ ಹೇಳಿದನೇ ಹೊರತು ಸಮುವೇಲನು ಹೇಳಿದ ರಾಜ್ಯಭಾರದ ಮಾತನ್ನು ತಿಳಿಸಲಿಲ್ಲ.
[17] ಸಮುವೇಲನು ಇಸ್ರಾಯೇಲ್ಯರನ್ನು ಮಿಚ್ಪೆಗೆ ಕರೆಯಿಸಿ ಯೆಹೋವನ ಸನ್ನಿಧಿಯಲ್ಲಿ ಸೇರಿಸಿಕೊಂಡನು.
[18] ಆತನು ಅವರಿಗೆ, ಇಸ್ರಾಯೇಲ್ ದೇವರಾದ ಯೆಹೋವನು ಹೇಳುವುದನ್ನು ಕೇಳಿರಿ, “ನೀವು ಐಗುಪ್ತರ ಕೈಗೆ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಅವರ ದೇಶದಿಂದ ಬಿಡಿಸಿದವನೂ, ಬಾಧಿಸುತ್ತಿದ್ದ ಬೇರೆ ಎಲ್ಲಾ ಜನಾಂಗಗಳಿಂದ ನಿಮ್ಮನ್ನು ರಕ್ಷಿಸಿದವನೂ ನಾನೇ.
[19] ನೀವಾದರೋ ನಿಮ್ಮನ್ನು ಕಷ್ಟಸಂಕಟಗಳಿಂದ ಬಿಡಿಸಿದ ನಿಮ್ಮ ದೇವರಾದ ನನ್ನನ್ನು ಈಗ ತಿರಸ್ಕರಿಸಿ, ನಮಗೊಬ್ಬ ಅರಸನನ್ನು ನೇಮಿಸೆಂದು ಹೇಳುತ್ತೀರಿ ಅನ್ನುತ್ತಾನೆ. ಆದುದರಿಂದ ನೀವು ಕುಲ ಕುಲವಾಗಿಯೂ ಗೋತ್ರಗೋತ್ರವಾಗಿಯೂ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಿರಿ” ಎಂದು ಅಪ್ಪಣೆ ಮಾಡಿದನು.
[20] ಸಮುವೇಲನು ಇಸ್ರಾಯೇಲ್ಯರ ಎಲ್ಲಾ ಕುಲಗಳನ್ನು ಸಮೀಪಕ್ಕೆ ಕರೆದಾಗ ಬೆನ್ಯಾಮೀನ್ ಕುಲಕ್ಕೆ ಚೀಟುಬಿದ್ದಿತು.
[21] ಆ ಕುಲದ ಗೋತ್ರಗಳನ್ನು ಬರಮಾಡಿದಾಗ ಮಟ್ರಿಯ ಗೋತ್ರದಲ್ಲಿ ಕೀಷನ ಮಗನಾದ ಸೌಲನಿಗೆ ಚೀಟುಬಿದ್ದಿತು. ಆದರೆ ಅವನನ್ನು ಹುಡುಕಲು ಅವನು ಸಿಕ್ಕಲಿಲ್ಲ.
[22] ಅವರು, “ಆ ಮನುಷ್ಯನು ಇಲ್ಲಿಗೆ ಬರುವನೋ” ಎಂದು ಯೆಹೋವನನ್ನು ವಿಚಾರಿಸಿದಾಗ ಆತನು, “ಬಂದಿದ್ದಾನೆ; ಇಗೋ, ಸಾಮಾನುಗಳ ಮಧ್ಯದಲ್ಲಿ ಅಡಗಿಕೊಂಡಿದ್ದಾನೆ” ಎಂದು ಉತ್ತರಕೊಟ್ಟನು.
[23] ಅವರು ತಟ್ಟನೆ ಹೋಗಿ ಅವನನ್ನು ಹಿಡಿದುಕೊಂಡು ಬಂದು ಜನರ ಮಧ್ಯದಲ್ಲಿ ನಿಲ್ಲಿಸಿದರು. ಗುಂಪಿನಲ್ಲಿದ್ದ ಎಲ್ಲಾ ಜನರಿಗಿಂತ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರವಾದ ಪುರುಷನಾಗಿದ್ದನು.
[24] ಆಗ ಸಮುವೇಲನು ಎಲ್ಲಾ ಜನರಿಗೆ, “ನೋಡಿದಿರಾ, ಯೆಹೋವನಿಂದ ಆರಿಸಲ್ಪಟ್ಟವನು ಇವನೇ; ಸರ್ವಜನರಲ್ಲಿ ಇವನಿಗೆ ಸಮಾನರು ಇಲ್ಲವೇ ಇಲ್ಲ” ಎನ್ನಲು ಜನರೆಲ್ಲರೂ, “ಅರಸನು ಚಿರಂಜೀವಿಯಾಗಿರಲಿ” ಎಂದು ಘೋಷಣೆಗಳನ್ನು ಕೂಗಿದರು.
[25] ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ, ಅದನ್ನು ಒಂದು ಪುಸ್ತಕದಲ್ಲಿ ಬರೆದು, ಯೆಹೋವನ ಸನ್ನಿಧಿಯಲ್ಲಿಟ್ಟನು. ಆ ಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.
[26] ಸೌಲನೂ ಗಿಬೆಯದಲ್ಲಿರುವ ತನ್ನ ಮನೆಗೆ ಹೋದನು; ಕೆಲವು ಮಂದಿ ಶೂರರು ದೇವರಿಂದ ಪ್ರೇರಿತರಾಗಿ ಅವನ ಜೊತೆಯಲ್ಲಿ ಹೋದರು.
[27] ಕೆಲವು ಮಂದಿ ಅಯೋಗ್ಯರು, “ಇವನು ನಮ್ಮನ್ನು ರಕ್ಷಿಸುವನೋ?” ಎಂದು ತಿರಸ್ಕರಿಸಿ ಕಾಣಿಕೆಗಳನ್ನು ತರಲಿಲ್ಲ. ಆದರೂ ಸೌಲನು ಸುಮ್ಮನಿದ್ದನು.