Skip to content
Opens in a new window
Listen to this chapter • 2:22

[1] ಫಿಲಿಷ್ಟಿಯರು ದೇವರ ಮಂಜೂಷವನ್ನು ಎಬೆನೆಜೆರಿನಿಂದ ಅಷ್ಡೋದಿನಲ್ಲಿರುವ

[2] ದಾಗೋನನ ಗುಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ದಾಗೋನನ ಮಗ್ಗುಲಲ್ಲೇ ಇಟ್ಟರು.

[3] ಅಷ್ಡೋದಿನವರು ಮರುದಿನ ಬೆಳಿಗ್ಗೆ ಎದ್ದು ನೋಡಲಾಗಿ ದಾಗೋನ್ ವಿಗ್ರಹವು ಯೆಹೋವನ ಮಂಜೂಷದ ಮುಂದೆ ಬೋರಲಬಿದ್ದಿರುವುದನ್ನು ಕಂಡು ಅದನ್ನು ಎತ್ತಿ ತಿರುಗಿ ಅದರ ಸ್ಥಳದಲ್ಲಿಟ್ಟರು.

[4] ಮಾರನೆಯ ದಿನ ಬೆಳಿಗ್ಗೆ ನೋಡುವಾಗ ದಾಗೋನನ ತಲೆಯೂ, ಕೈಗಳೂ ಕಡಿಯಲ್ಪಟ್ಟು ಹೊಸ್ತಿಲಿನ ಮೇಲೆ ಬಿದ್ದಿದ್ದವು; ಮುಂಡ ಮಾತ್ರ ಯೆಹೋವನ ಮಂಜೂಷದ ಮುಂದೆ ಬಿದ್ದಿತ್ತು;

[5] ಆದ್ದರಿಂದ ಈ ದಿನದ ವರೆಗೂ ದಾಗೋನನ ಯಾಜಕರೂ ಮತ್ತು ದಾಗೋನನ ಮನೆಗೆ ಬರುವವರೆಲ್ಲರೂ ಅಷ್ಡೋದಿನ ಗುಡಿಯ ಹೊಸ್ತಿಲನ್ನು ಇಂದಿಗೂ ತುಳಿಯದಿರುವುದಕ್ಕೆ ಇದೇ ಕಾರಣ.

[6] ಯೆಹೋವನ ಹಸ್ತವು ಅಷ್ಡೋದಿನವರಿಗೆ ಬಾಧಕವಾಗಿತ್ತು; ಆತನು ಆ ನಗರದಲ್ಲಿಯೂ, ಅದರ ಗ್ರಾಮಗಳಲ್ಲಿಯೂ ಗಡ್ಡೆ ರೋಗವನ್ನು ಬರಮಾಡಿ ಅವರನ್ನು ನಾಶಮಾಡಿದನು.

[7] ಅಷ್ಡೋದಿನ ಜನರು ಅದನ್ನು ನೋಡಿ, “ಇಸ್ರಾಯೇಲಿನ ದೇವರ ಮಂಜೂಷವು ನಮ್ಮ ಬಳಿಯಲ್ಲಿ ಇರಬಾರದು; ಏಕೆಂದರೆ ಆತನ ಹಸ್ತವು ನಮಗೂ, ನಮ್ಮ ದೇವರಾದ ದಾಗೋನನಿಗೂ ಬಾಧಕವಾಗಿದೆ” ಎಂದು ಹೇಳಿ

[8] ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ, “ಇಸ್ರಾಯೇಲಿನ ದೇವರ ಮಂಜೂಷವನ್ನು ಏನು ಮಾಡೋಣ?” ಎಂದು ಕೇಳಲು ಅವರು, “ಅದನ್ನು ಗತ್ ಊರಿಗೆ ಕಳುಹಿಸಿ ಕೊಡಬೇಕೆಂದು ನಿರ್ಣಯಿಸಿದರು.” ಅವರು ಹಾಗೆಯೇ ಇಸ್ರಾಯೇಲಿನ ದೇವರ ಮಂಜೂಷವನ್ನು ಅಲ್ಲಿಗೆ ಕಳುಹಿಸಿದರು.

[9] ಮಂಜೂಷವು ಅಲ್ಲಿ ಹೋದ ಮೇಲೆ ಯೆಹೋವನ ಹಸ್ತವು ಆ ಊರಿನವರಿಗೂ ಬಾಧಕವಾದುದರಿಂದ ಅಲ್ಲಿ ದೊಡ್ಡ ಗದ್ದಲವಾಯಿತು. ಯೆಹೋವನು ಊರಿನ ಚಿಕ್ಕವರಲ್ಲಿಯೂ, ದೊಡ್ಡವರಲ್ಲಿಯೂ ಗಡ್ಡೆಗಳನ್ನು ಬರಮಾಡಿದನು.

[10] ಆದ್ದರಿಂದ ಅವರು ದೇವರ ಮಂಜೂಷವನ್ನು ಎಕ್ರೋನಿಗೆ ಕಳುಹಿಸಿದರು. ಅದು ಅಲ್ಲಿಗೆ ಬಂದಾಗ ಆ ಊರಿನವರು, “ನೋಡಿರಿ, ನಮ್ಮನ್ನೂ, ನಮಗೆ ಸೇರಿದವರನ್ನೂ ಕೊಲ್ಲುವುದಕ್ಕೋಸ್ಕರ ಇಸ್ರಾಯೇಲಿನ ದೇವರ ಮಂಜೂಷವನ್ನು ಇಲ್ಲಿಗೆ ಕಳುಹಿಸಿದ್ದಾರೆ” ಎಂದು ಕೂಗಿಕೊಂಡರು.

[11] ದೇವರ ಹಸ್ತವು ಅವರಿಗೂ ಬಾಧಕವಾಗಿದ್ದುದರಿಂದ ಅವರಿಗೆ ಮರಣಭಯವುಂಟಾಯಿತು. ಅವರು ಫಿಲಿಷ್ಟಿಯ ಪ್ರಭುಗಳೆಲ್ಲರನ್ನೂ ಕೂಡಿಸಿ ಅವರಿಗೆ, “ಇಸ್ರಾಯೇಲಿನ ದೇವರ ಮಂಜೂಷವನ್ನು ಹಾಗೆಯೇ ಅದರ ಸ್ಥಳಕ್ಕೆ ಕಳುಹಿಸಿಬಿಡಿರಿ” ಅಂದರು.

[12] ಸಾಯದೆ ಉಳಿದ ಜನರಿಗೂ ಗಡ್ಡೆರೋಗ ಬಂದಿತ್ತು. ಪಟ್ಟಣದ ಗೋಳಾಟವು ಆಕಾಶವನ್ನು ಮುಟ್ಟಿತು.

1 ಸಮುವೇಲನು — Chapters