Skip to content
Opens in a new window
Listen to this chapter • 5:02

[1] ಸೌಲನು ದಾವೀದನನ್ನು ಕೊಲ್ಲಬೇಕೆಂದು ತನ್ನ ಮಗನಾದ ಯೋನಾತಾನನಿಗೂ, ಎಲ್ಲಾ ಪರಿವಾರದವರಿಗೂ ಆಜ್ಞಾಪಿಸಿದನು. ಆದರೆ ಯೋನಾತಾನನು ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದನು.

[2] ಆದ್ದರಿಂದ ಅವನು ದಾವೀದನಿಗೆ, “ನನ್ನ ತಂದೆಯಾದ ಸೌಲನು ನಿನ್ನನ್ನು ಕೊಲ್ಲಬೇಕೆಂದಿರುತ್ತಾನೆ. ನೀನು ಜಾಗರೂಕತೆಯಿಂದಿರು. ನಾಳೆ ಬೆಳಿಗ್ಗೆ ಒಂದು ಗುಪ್ತವಾದ ಸ್ಥಳದಲ್ಲಿ ಅಡಗಿಕೊಂಡಿರು.

[3] ನೀನು ಅಡಗಿಕೊಂಡಿರುವ ಹೊಲಕ್ಕೆ ನಾನು ಬಂದು, ನನ್ನ ತಂದೆಯ ಬಳಿಯಲ್ಲಿ ನಿಂತು, ನಿನ್ನ ವಿಷಯವನ್ನು ಮಾತನಾಡಿ, ಅವನಿಂದ ತಿಳಿದು ಬರುವ ವಿಚಾರವನ್ನು ನಿನಗೆ ತಿಳಿಸುವೆನು” ಎಂದು ಹೇಳಿದನು.

[4] ತರುವಾಯ ಅವನು ತನ್ನ ತಂದೆಯ ಮುಂದೆ ದಾವೀದನನ್ನು ಹೊಗಳಿ, “ಒಡೆಯನು ತನ್ನ ಸೇವಕನಾದ ದಾವೀದನಿಗೆ ಅನ್ಯಾಯ ಮಾಡದಿರಲಿ. ಅವನು ನಿನಗೆ ದ್ರೋಹ ಮಾಡಲಿಲ್ಲ. ಅವನು ಮಾಡಿದ್ದೆಲ್ಲವೂ ನಿನ್ನ ಹಿತಕ್ಕಾಗಿಯೇ.

[5] ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಿ ಫಿಲಿಷ್ಟಿಯನನ್ನು ಕೊಂದನು. ಯೆಹೋವನು ಇಸ್ರಾಯೇಲ್ಯರಿಗೆ ಮಹಾ ಜಯವನ್ನುಂಟುಮಾಡಿದನು. ನೀನು ಅದನ್ನು ನೋಡಿ ಸಂತೋಷಪಟ್ಟಿಯಲ್ಲಾ. ದಾವೀದನನ್ನು ನಿಷ್ಕರುಣೆಯಾಗಿ ಕೊಂದು, ನಿರಪರಾಧಿಯ ರಕ್ತವನ್ನು ಸುರಿಸಿ, ಅಪರಾಧಕ್ಕೆ ನೀನೇಕೆ ಗುರಿಯಾಗುತ್ತೀ?” ಅಂದನು.

[6] ಸೌಲನು ಯೋನಾತಾನನ ಮಾತುಗಳನ್ನು ಲಾಲಿಸಿ, “ಯೆಹೋವನಾಣೆ, ಅವನನ್ನು ಕೊಲ್ಲುವುದಿಲ್ಲ” ಎಂದು ಪ್ರಮಾಣಮಾಡಿದನು.

[7] ಆಗ ಯೋನಾತಾನನು ದಾವೀದನನ್ನು ಕರೆದು, ಅವನಿಗೆ ಈ ಮಾತುಗಳನ್ನು ತಿಳಿಸಿ, ಸೌಲನ ಬಳಿಗೆ ಕರೆದುಕೊಂಡು ಬಂದನು. ದಾವೀದನು ಮುಂಚಿನಂತೆ ಸೌಲನ ಸನ್ನಿಧಿಯಲ್ಲಿ ಇರುವವನಾದನು.

[8] ಫಿಲಿಷ್ಟಿಯರು ತಿರುಗಿ ಯುದ್ಧಕ್ಕೆ ಬಂದಾಗ ದಾವೀದನು ಹೋಗಿ ಅವರೊಡನೆ ಯುದ್ಧಮಾಡಿ ಅವರನ್ನು ಸಂಪೂರ್ಣವಾಗಿ ಸೋಲಿಸಿ, ಓಡಿಸಿಬಿಟ್ಟನು.

[9] ಒಂದು ದಿನ ಸೌಲನು ಕೈಯಲ್ಲಿ ಈಟಿಯನ್ನು ಹಿಡಿದುಕೊಂಡು ತನ್ನ ಮನೆಯಲ್ಲಿ ಕುಳಿತುಕೊಂಡಿದ್ದಾಗ ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ಅವನ ಮೇಲೆ ಬಂದಿತು.

[10] ಅವನು ಒಡನೆ ಕಿನ್ನರಿಯನ್ನು ನುಡಿಸುತ್ತಿದ್ದ ದಾವೀದನನ್ನು ಗೋಡೆಗೆ ಹತ್ತಿಕೊಳ್ಳುವಂತೆ ತಿವಿಯಬೇಕೆಂದು ತನ್ನ ಈಟಿಯನ್ನು ಎಸೆದನು. ಆದರೆ ದಾವೀದನು ಪಕ್ಕನೆ ಸೌಲನೆದುರಿನಿಂದ ಸರಿದುಕೊಂಡ ಕಾರಣ, ಅದು ಗೋಡೆಯೊಳಗೆ ನಾಟಿತು. ದಾವೀದನು ಆ ರಾತ್ರಿಯಲ್ಲೇ ತಪ್ಪಿಸಿಕೊಂಡು ಓಡಿಹೋದನು.

[11] ಸೌಲನು ಕೂಡಲೇ ದೂತರನ್ನು ಕರಿಸಿ ದಾವೀದನ ಮನೆಯ ಸುತ್ತಲೂ ಹೊಂಚುಹಾಕಿ ಅವನನ್ನು ಬೆಳಗಾಗುವಷ್ಟರಲ್ಲಿ ಕೊಂದುಹಾಕಬೇಕೆಂದು ಆಜ್ಞಾಪಿಸಿ ಕಳುಹಿಸಿದನು. ಮೀಕಲಳು ತನ್ನ ಗಂಡನಾದ ದಾವೀದನಿಗೆ, “ನೀನು ಈ ರಾತ್ರಿಯೇ ತಪ್ಪಿಸಿಕೊಳ್ಳದಿದ್ದರೆ ನಾಳೆ ಬೆಳಿಗ್ಗೆ ಹತನಾಗುವಿ” ಎಂದು ಹೇಳಿ

[12] ಅವನನ್ನು ಕಿಟಕಿಯಿಂದ ಕೆಳಕ್ಕಿಳಿಸಲು ಅವನು ಓಡಿಹೋಗಿ ತಪ್ಪಿಸಿಕೊಂಡನು.

[13] ಅನಂತರ ಆಕೆಯು ಮನೆಯಲ್ಲಿದ್ದ ಒಂದು ವಿಗ್ರಹವನ್ನು ತಂದು, ಹಾಸಿಗೆಯ ಮೇಲೆ ಮಲಗಿಸಿ, ಅದರ ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯನ್ನು ತಲೆದಿಂಬಿನ ಜಾಗದಲ್ಲಿ ಹಾಕಿ ಕಂಬಳಿಯನ್ನು ಹೊದಿಸಿದಳು.

[14] ಸೌಲನ ದೂತರು ದಾವೀದನನ್ನು ಹಿಡಿಯುವುದಕ್ಕೆ ಬಂದಾಗ ಅವಳು ಅವನಿಗೆ ಸ್ವಸ್ಥವಿಲ್ಲವೆಂದು ಹೇಳಿಕಳುಹಿಸಿದಳು.

[15] ಸೌಲನು ತಿರುಗಿ ತನ್ನ ಆಳುಗಳನ್ನು, “ನೀವು ಹೋಗಿ ನೋಡಿ ದಾವೀದನನ್ನು ಹಾಸಿಗೆಯೊಡನೆ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ, ಕೊಂದುಹಾಕುತ್ತೇನೆ” ಎಂದು ಆಜ್ಞಾಪಿಸಿದನು.

[16] ಅವರು ಹೋಗಿ ನೋಡಲು ಹಾಸಿಗೆಯ ಮೇಲಿರುವುದು ಮೇಕೆಕೂದಲಿನಿಂದ ಹೆಣೆದ ಜಾಲರಿಯ ಒಂದು ವಿಗ್ರಹ ಎಂದು ತಿಳಿದುಬಂತು.

[17] ಆಗ ಸೌಲನು ಮೀಕಲಳಿಗೆ, “ನೀನು ನನ್ನನ್ನು ವಂಚಿಸಿದ್ದೇಕೆ? ನನ್ನ ಶತ್ರುವನ್ನು ಕಳುಹಿಸಿ ಅವನು ತಪ್ಪಿಸಿಕೊಳ್ಳುವಂತೆ ಮಾಡಿದಿಯಲ್ಲಾ” ಎನ್ನಲು ಆಕೆಯು ಅವನಿಗೆ, “ನನ್ನನ್ನು ಕಳುಹಿಸದಿದ್ದರೆ ನಿನ್ನನ್ನು ಕೊಂದುಬಿಡುತ್ತೇನೆ ಎಂದು ಅವನು ನನಗೆ ಹೇಳಿದನು” ಅಂದಳು.

[18] ದಾವೀದನು ತಪ್ಪಿಸಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು ಸೌಲನು ತನಗೆ ಮಾಡಿದ್ದೆಲ್ಲವನ್ನು ತಿಳಿಸಿದನು. ಅವರಿಬ್ಬರೂ ಹೋಗಿ ಅಲ್ಲಿನ ನಯೋತ್ ಎಂಬ ಸ್ಥಳದಲ್ಲಿ ವಾಸವಾಗಿದ್ದರು.

[19] ದಾವೀದನು ರಾಮದ ನಯೋತಿನಲ್ಲಿರುವುದು ಸೌಲನಿಗೆ ಗೊತ್ತಾಗಲು,

[20] ಅವನು ದಾವೀದನನ್ನು ಹಿಡಿದು ತರುವುದಕ್ಕಾಗಿ ಆಳುಗಳನ್ನು ಕಳುಹಿಸಿದನು. ಅವರು ಹೋಗಿ ಅಲ್ಲಿನ ಪ್ರವಾದಿ ಸಮೂಹವು ಪ್ರವಾದಿಸುತ್ತಿರುವುದನ್ನೂ, ಸಮುವೇಲನು ಅವರ ನಾಯಕನಾಗಿ ನಿಂತಿರುವುದನ್ನು ಕಂಡಾಗ, ದೇವರ ಆತ್ಮವು ಅವರ ಮೇಲೆಯೂ ಬಂದಿತು. ಅವರೂ ಪ್ರವಾದಿಸಿದರು.

[21] ಸೌಲನಿಗೆ ಈ ವರ್ತಮಾನವು ಮುಟ್ಟಿದಾಗ ಅವನು ಬೇರೆ ಆಳುಗಳನ್ನು ಕಳುಹಿಸಿದನು. ಇವರೂ ಪ್ರವಾದಿಸಿದರು. ಅವನು ಮೂರನೆಯ ಸಾರಿ ಇನ್ನೂ ಕೆಲವು ಮಂದಿ ಆಳುಗಳನ್ನು ಕಳುಹಿಸಿದನು. ಅವರೂ ಪ್ರವಾದಿಸಿದರು.

[22] ಆಗ ಸೌಲನು ತಾನೇ ರಾಮಕ್ಕೆ ಹೋಗಬೇಕೆಂದು ಹೊರಟು, ಸೇಕೂವಿನಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದು, “ಸಮುವೇಲ ದಾವೀದರು ಎಲ್ಲಿರುತ್ತಾರೆ?” ಎಂದು ವಿಚಾರಿಸಿದನು. ಆಗ ಜನರು, “ರಾಮದ ನಯೋತಿನಲ್ಲಿ ಇರುತ್ತಾರೆ” ಎಂದು ಉತ್ತರಕೊಟ್ಟರು.

[23] ಅವನು ಅಲ್ಲಿಂದ ರಾಮದ ನಯೋತಿಗೆ ಹೋಗುವಾಗ ದೇವರ ಆತ್ಮವು ಅವನ ಮೇಲೆಯೂ ಬಂದಿತು. ಅವನು ಆ ಊರನ್ನು ಮುಟ್ಟುವ ತನಕ ಪ್ರವಾದಿಸುತ್ತಾ ಹೋದನು.

[24] ಅಲ್ಲಿಗೆ ಸೇರಿದ ಮೇಲೆ ಅವನು ತನ್ನ ಬಟ್ಟೆಗಳನ್ನು ತೆಗೆದುಹಾಕಿ, ಸಮುವೇಲನ ಮುಂದೆ ಪ್ರವಾದಿಸುತ್ತಾ, ಆ ದಿನ ಹಗಲಿರುಳು ಬೆತ್ತಲೆಯಾಗಿ ಬಿದ್ದುಕೊಂಡಿದ್ದನು. ಇದರಿಂದ “ಸೌಲನೂ ಕೂಡ ಪ್ರವಾದಿಗಳಲ್ಲಿ ಒಬ್ಬನಾಗಿದ್ದಾನೆಯೇ” ಎಂಬ ಮಾತು ಪ್ರಚಲಿತವಾಯಿತು.

1 ಸಮುವೇಲನು — Chapters