[1] ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಾಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು.
[2] ಅವನ ಮೊದಲನೆಯ ಮಗನ ಹೆಸರು ಯೋವೇಲ್, ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಸ್ಥಾಪಕರಾಗಿದ್ದರು.
[3] ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚತೆಗೆದುಕೊಂಡು, ನ್ಯಾಯವಿರುದ್ಧವಾದ ತೀರ್ಪು ಕೊಡುತ್ತಿದ್ದರು.
[4] ಆದ್ದರಿಂದ ಇಸ್ರಾಯೇಲರ ಹಿರಿಯರೆಲ್ಲರೂ ಸೇರಿಕೊಂಡು ರಾಮದಲ್ಲಿದ್ದ ಸಮುವೇಲನ ಬಳಿಗೆ ಬಂದು
[5] ಅವನಿಗೆ, “ನೀನಂತೂ ಮುದುಕನಾದಿ; ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಬೇರೆ ಎಲ್ಲಾ ಜನಾಂಗಗಳಿಗೆ ಇರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿಕೊಡು. ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ” ಅಂದರು.
[6] ನ್ಯಾಯಸ್ಥಾಪನೆಗೋಸ್ಕರ ನಮಗೊಬ್ಬ ಅರಸನನ್ನು ನೇಮಿಸಿಕೊಡು ಎಂಬ ಅವರ ಮಾತಿಗೆ ಸಮುವೇಲನು ದುಃಖಪಟ್ಟು ಯೆಹೋವನನ್ನು ಪ್ರಾರ್ಥಿಸಿದನು.
[7] ಆಗ ಯೆಹೋವನು ಸಮುವೇಲನಿಗೆ, “ಜನರು ಹೇಳಿದಂತೆಯೇ ಮಾಡು; ಅವರು ನಿನ್ನನ್ನಲ್ಲ, ನನ್ನನ್ನು ತಿರಸ್ಕರಿಸಿದ್ದಾರೆ. ನನ್ನ ಆಳ್ವಿಕೆಯನ್ನು ಬೇಡವೆನ್ನುತ್ತಿದ್ದಾರೆ.
[8] ನಾನು ಅವರನ್ನು ಐಗುಪ್ತದಿಂದ ಬಿಡಿಸಿದಂದಿನಿಂದ ಇಂದಿನ ವರೆಗೂ ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸಿದರು. ನನಗೆ ಹೇಗೆ ಮಾಡಿದರೋ, ಹಾಗೆಯೇ ನಿನಗೂ ಮಾಡುತ್ತಾರೆ.
[9] ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟೆಂಬುದನ್ನು ಅವರಿಗೆ ತಿಳಿಸಿ, ಎಚ್ಚರಿಸು” ಎಂದು ಹೇಳಿದನು.
[10] ಸಮುವೇಲನು ಅರಸನನ್ನು ನೇಮಿಸಿಕೊಡು ಎಂದು ಬೇಡಿಕೊಂಡ ಜನರಿಗೆ ಯೆಹೋವನ ಮಾತುಗಳನ್ನೆಲ್ಲಾ ತಿಳಿಸಿ ಅವರಿಗೆ,
[11] “ಅರಸನಿಗಿರುವ ಅಧಿಕಾರವೆಷ್ಟೆಂದು ಕೇಳಿರಿ, ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಗಳ ಮುಂದೆ ಓಡುವವರಾಗಬೇಕು.
[12] ಕೆಲವರನ್ನು ಸಹಸ್ರಾಧಿಪತಿಗಳನ್ನಾಗಿಯೂ, ಕೆಲವರನ್ನು ಪಂಚಶತಾಧಿಪತಿಗಳನ್ನಾಗಿಯೂ ನೇಮಿಸುವನು. ಇನ್ನು ಕೆಲವರು ಅವನ ಭೂಮಿಯನ್ನು ಉಳುವವರೂ, ಪೈರನ್ನು ಕೊಯ್ಯುವವರೂ, ಯುದ್ಧಕ್ಕೆ ಬೇಕಾದ ಆಯುಧ, ರಥಸಾಮಾಗ್ರಿಗಳನ್ನು ಮಾಡುವವರೂ ಆಗಬೇಕು.
[13] ಇದಲ್ಲದೆ ಅವನು ನಿಮ್ಮ ಹೆಣ್ಣುಮಕ್ಕಳನ್ನು ಸುಗಂಧದ್ರವ್ಯ ಮಾಡುವುದಕ್ಕೂ, ಅಡಿಗೆಮಾಡುವುದಕ್ಕೂ, ರೊಟ್ಟಿಸುಡುವುದಕ್ಕೂ ನೇಮಿಸಿಕೊಳ್ಳುವನು.
[14] ನಿಮ್ಮ ಉತ್ತಮವಾದ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ ಎಣ್ಣೇ ಮರದ ತೋಪುಗಳನ್ನೂ ಕಿತ್ತುಕೊಂಡು ತನ್ನ ಸೇವಕರಿಗೆ ಕೊಡುವನು.
[15] ನಿಮ್ಮ ಧಾನ್ಯ, ದ್ರಾಕ್ಷಿಗಳಲ್ಲಿ ಹತ್ತರಷ್ಟನ್ನು ತೆಗೆದುಕೊಂಡು ತನ್ನ ಪ್ರಧಾನರಿಗೂ, ಪರಿವಾರದವರಿಗೂ ಕೊಡುವನು.
[16] ನಿಮ್ಮ ದಾಸದಾಸಿಯರನ್ನೂ, ಉತ್ತಮವಾದ ಎತ್ತು ಕತ್ತೆಗಳನ್ನೂ ತನ್ನ ಕೆಲಸ ಮಾಡುವುದಕ್ಕಾಗಿ ತೆಗೆದುಕೊಳ್ಳುವನು.
[17] ಕುರಿಹಿಂಡುಗಳಲ್ಲಿ ಹತ್ತರಲ್ಲೊಂದು ಭಾಗವನ್ನು ತೆಗೆದುಕೊಳ್ಳುವನು. ನೀವು ಅವನಿಗೆ ದಾಸರಾಗಿರಬೇಕು.
[18] ಆಗ ನೀವು ಆರಿಸಿಕೊಂಡ ಅರಸನ ದೆಸೆಯಿಂದ ಆ ದಿನದಲ್ಲಿ ಬೇಸತ್ತು ಯೆಹೋವನಿಗೆ ಮೊರೆಯಿಡುವಿರಿ. ಆಗ ಆತನು ನಿಮ್ಮನ್ನು ಲಕ್ಷಿಸುವುದಿಲ್ಲ” ಅಂದನು.
[19] ಸಮುವೇಲನು ಎಷ್ಟು ಹೇಳಿದರೂ ಜನರು ಅವನ ಮಾತುಗಳನ್ನು ಕೇಳಲೊಲ್ಲದೆ, “ಇಲ್ಲ; ನಮಗೆ ಅರಸನನ್ನು ನೇಮಿಸಿಕೊಡು;
[20] ನಾವು ಇತರ ಜನಾಂಗಗಳಂತೆ ಆಗಬೇಕು. ನಮ್ಮ ನ್ಯಾಯಗಳನ್ನು ತೀರಿಸಿ ನಮಗೆ ಮುಂದಾಗಿ ಹೊರಟು ನಮಗೋಸ್ಕರ ಯುದ್ಧಮಾಡುವ ಒಬ್ಬ ಅರಸನು ಬೇಕು” ಎಂದು ಹೇಳಿದರು.
[21] ಸಮುವೇಲನು ಜನರ ಈ ಎಲ್ಲಾ ಮಾತುಗಳನ್ನು ಯೆಹೋವನಿಗೆ ತಿಳಿಸಲಾಗಿ
[22] ಆತನು ಅವನಿಗೆ, “ಅವರ ಇಷ್ಟದಂತೆ ಅವರಿಗೊಬ್ಬ ಅರಸನನ್ನು ನೇಮಿಸು” ಎಂದನು. ಆಗ ಸಮುವೇಲನು ಇಸ್ರಾಯೇಲರಿಗೆ, “ನಿಮ್ಮ ನಿಮ್ಮ ಊರುಗಳಿಗೆ ಹೋಗಿರಿ” ಎಂದು ಅಪ್ಪಣೆಕೊಟ್ಟನು.