Skip to content
Opens in a new window
Listen to this chapter • 3:48

[1] ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ದೈವೋಕ್ತಿಗಳು ವಿರಳವಾಗಿದ್ದವು; ದೇವದರ್ಶನಗಳು ಅಪರೂಪವಾಗಿದ್ದವು.

[2] ಏಲಿಯ ಕಣ್ಣುಗಳು ದಿನದಿನಕ್ಕೆ ಮೊಬ್ಬಾಗುತ್ತಾ ಬಂದು ಸರಿಯಾಗಿ ಕಾಣಿಸದೆಹೋಗಿದ್ದವು. ಅವನು ಒಂದು ರಾತ್ರಿ ತನ್ನ ಸ್ಥಳದಲ್ಲಿ ಮಲಗಿದ್ದನು;

[3] ಸಮುವೇಲನು ಯೆಹೋವನ ಮಂದಿರದಲ್ಲಿ ದೇವರ ಮಂಜೂಷವಿದ್ದ ಸ್ಥಳದಲ್ಲಿ ಮಲಗಿದ್ದನು. ಆಗ ದೇವದೀಪವು ಇನ್ನೂ ಉರಿಯುತ್ತಿತ್ತು.

[4] ಯೆಹೋವನು ಸಮುವೇಲನನ್ನು ಕರೆದನು; ಸಮುವೇಲನು “ಇಗೋ ಬಂದೆ” ಎಂದು ಉತ್ತರಕೊಟ್ಟು ಒಡನೆ ಏಲಿಯ ಬಳಿಗೆ ಹೋಗಿ,

[5] “ಇಗೋ ಬಂದಿದ್ದೇನೆ; ನೀನು ನನ್ನನ್ನು ಕರೆದೆಯಲ್ಲವೇ?” ಅಂದನು. ಆಗ ಏಲಿಯು, “ನಾನು ನಿನ್ನನ್ನು ಕರೆಯಲಿಲ್ಲ, ಹೋಗಿ ಮಲಗಿಕೋ” ಅಂದನು. ಸಮುವೇಲನು ಹೋಗಿ ಮಲಗಿದನು.

[6] ಯೆಹೋವನು ತಿರುಗಿ, “ಸಮುವೇಲನೇ” ಎಂದು ಕರೆದನು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ, ಬಂದಿದ್ದೇನೆ; ನೀನು ನನ್ನನ್ನು ಕರೆದೆಯಲ್ಲಾ” ಅನ್ನಲು ಅವನು, “ನನ್ನ ಮಗನೇ, ನಾನು ನಿನ್ನನ್ನು ಕರೆಯಲಿಲ್ಲಾ, ಹೋಗಿ ಮಲಗಿಕೋ” ಎಂದನು.

[7] ಆವರೆಗೂ ಸಮುವೇಲನಿಗೆ ಯೆಹೋವನ ಅನುಭವವಿರಲಿಲ್ಲ; ಅವನು ದೈವೋಕ್ತಿಗಳನ್ನು ಹೊಂದಿರಲಿಲ್ಲ.

[8] ಯೆಹೋವನು ಸಮುವೇಲನನ್ನು ಮೂರನೆಯ ಸಾರಿ ಕರೆದನು. ಅವನು ತಟ್ಟನೆ ಏಲಿಯ ಹತ್ತಿರ ಹೋಗಿ, “ಇಗೋ, ಬಂದಿದ್ದೇನೆ, ನನ್ನನ್ನು ಕರೆದಿಯಲ್ಲಾ” ಅನ್ನಲು, ಹುಡುಗನನ್ನು ಕರೆದವನು ಯೆಹೋವನೇ ಎಂದು ಏಲಿಯು ತಿಳಿದು ಅವನಿಗೆ, “ಹೋಗಿ ಮಲಗಿಕೋ;

[9] ಪುನಃ ಆತನು ನಿನ್ನನ್ನು ಕರೆದರೆ ಯೆಹೋವನೇ, ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದು ಹೇಳು ಅಂದನು. ಸಮುವೇಲನು ತಿರುಗಿ ಹೋಗಿ ತನ್ನ ಸ್ಥಳದಲ್ಲಿ ಮಲಗಿಕೊಂಡನು.

[10] ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆಯೇ “ಸಮುವೇಲನೇ, ಸಮುವೇಲನೇ” ಅಂದನು. ಸಮುವೇಲನು, “ಅಪ್ಪಣೆಯಾಗಲಿ, ನಿನ್ನ ದಾಸನು ಕೇಳಿಸಿಕೊಳ್ಳುತ್ತಿದ್ದಾನೆ” ಎಂದನು.

[11] ಯೆಹೋವನು ಸಮುವೇಲನಿಗೆ “ನಾನು ಇಸ್ರಾಯೇಲ್ಯರಲ್ಲಿ ಒಂದು ವಿಶೇಷಕಾರ್ಯವನ್ನು ನಡೆಸುವೆನು; ಅದರ ವಿಷಯ ಕೇಳುವವರ ಎರಡು ಕಿವಿಗಳೂ ನಿಮಿರುವುವು.

[12] ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನದಲ್ಲಿ ತಪ್ಪದೆ ನೆರವೇರಿಸುವೆನು.

[13] ಅವನ ಮಕ್ಕಳು ಶಾಪಗ್ರಸ್ತರಾದರೆಂದು ಅವನಿಗೆ ತಿಳಿದು ಬಂದರೂ ಅವನು ಅವರನ್ನು ಗದರಿಸಲಿಲ್ಲ. ಈ ಪಾಪದ ನಿಮಿತ್ತವಾಗಿ ಅವನ ಮನೆಯನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು.

[14] ಏಲಿಯ ಮನೆಯವರ ಅಪರಾಧಕ್ಕೆ ಯಜ್ಞ ಅಥವಾ ನೈವೇದ್ಯಗಳಿಂದ ಎಂದಿಗೂ ಪ್ರಾಯಶ್ಚಿತ್ತವಾಗುವುದಿಲ್ಲ ಎಂಬುದಾಗಿ ಆಣೆಯಿಟ್ಟಿದ್ದೇನೆ” ಎಂದು ಹೇಳಿದನು.

[15] ಅನಂತರ ಸಮುವೇಲನು ಮಲಗಿ ಮುಂಜಾನೆಯಲ್ಲೇ ಎದ್ದು ಯೆಹೋವನ ಮಂದಿರದ ಬಾಗಿಲುಗಳನ್ನು ತೆರೆದನು. ಅವನು ತಾನು ಕಂಡದ್ದನ್ನು ಏಲಿಗೆ ತಿಳಿಸುವುದಕ್ಕೆ ಭಯಪಟ್ಟನು.

[16] ಆದರೆ ಏಲಿಯು, “ನನ್ನ ಮಗನೇ, ಸಮುವೇಲನೇ” ಎಂದು ಕರೆಯಲು ಅವನು, “ಇಗೋ, ಇದ್ದೇನೆ” ಎಂದನು.

[17] ಆಗ ಏಲಿಯು ಅವನಿಗೆ, “ಯೆಹೋವನು ನಿನಗೆ ತಿಳಿಸಿದ್ದೇನು? ಆತನ ಮಾತುಗಳಲ್ಲಿ ಒಂದನ್ನಾದರೂ ಮುಚ್ಚಿಡಬೇಡ; ಮುಚ್ಚಿಟ್ಟರೆ ಆತನು ಬೇಕಾದ ಹಾಗೆ ನಿನ್ನನ್ನು ದಂಡಿಸಲಿ” ಎಂದು ಹೇಳಲು

[18] ಸಮುವೇಲನು ಮುಚ್ಚುಮರೆಯಿಲ್ಲದೆ ಎಲ್ಲವನ್ನು ತಿಳಿಸಿದನು. ಏಲಿಯು ಅದನ್ನು ಕೇಳಿ, “ಆತನು ಯೆಹೋವನು; ತನಗೆ ಸರಿಕಾಣುವುದನ್ನು ಮಾಡಲಿ” ಎಂದನು.

[19] ಸಮುವೇಲನು ದೊಡ್ಡವನಾಗುತ್ತಾ ಬಂದನು. ಯೆಹೋವನು ಅವನೊಡನೆ ಇದ್ದುದ್ದರಿಂದ ಅವನ ಪ್ರವಾದನೆಗಳಲ್ಲಿ ಒಂದೂ ಬಿದ್ದುಹೋಗಲಿಲ್ಲ.

[20] ಯೆಹೋವನು ಅವನನ್ನು ತನ್ನ ಪ್ರವಾದಿಯನ್ನಾಗಿ ನೇಮಿಸಿಕೊಂಡದ್ದು ದಾನ್ ಊರಿನಿಂದ ಬೇರ್ಷೆಬದವರೆಗಿದ್ದ ಎಲ್ಲಾ ಇಸ್ರಾಯೇಲರಿಗೆ ಗೊತ್ತಾಯಿತು.

[21] ಯೆಹೋವನು ಶೀಲೋವಿನಲ್ಲಿ ದರ್ಶನಕೊಡುವುದಕ್ಕೆ ಪ್ರಾರಂಭಿಸಿ ತನ್ನ ವಾಕ್ಯದಿಂದ ಸಮುವೇಲನಿಗೆ ತನ್ನನ್ನು ಪ್ರಕಟಿಸಿಕೊಳ್ಳುತ್ತಾ ಬಂದನು. ಸಮುವೇಲನು ಇಸ್ರಾಯೇಲರೆಲ್ಲರಿಗೆ ದೈವೋತ್ತರಗಳನ್ನು ತಿಳಿಸುತ್ತಿದ್ದನು.

1 ಸಮುವೇಲನು — Chapters