[1] ಈಗ ದೇವಜನರಿಗೋಸ್ಕರ ಹಣ ಸಂಗ್ರಹಣೆ ವಿಚಾರದ ಕುರಿತು, ನಾನು ಗಲಾತ್ಯ ಪ್ರಾಂತ್ಯದ ಸಭೆಗಳಿಗೆ ಹೇಳಿಕೊಟ್ಟಿರುವ ಕ್ರಮದಂತೆ ನೀವೂ ಮಾಡಿರಿ.
[2] ನಿಮ್ಮಲ್ಲಿ ಪ್ರತಿಯೊಬ್ಬನು ತನಗೆ ಬಂದಂಥ ಸಂಪಾದನೆಯಲ್ಲಿ ಸಾಧ್ಯವಾದಷ್ಟನ್ನು ವಾರದ ಮೊದಲನೆಯ ದಿನದಲ್ಲಿ ಸಂಗ್ರಹಿಸಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು. ಇದರಿಂದ ನಾನು ಬಂದಾಗ ಹಣ ಸಂಗ್ರಹಣೆ ಮಾಡುವ ಅಗತ್ಯವಿರುವುದಿಲ್ಲ.
[3] ಮತ್ತು ನಾನು ಬಂದ ಮೇಲೆ ನೀವು ಯಾರನ್ನು ಪ್ರಾಮಾಣಿಕರೆಂದು ಸೂಚಿಸುವಿರೋ, ಅವರೊಂದಿಗೆ ನಿಮ್ಮ ಕೊಡುಗೆಯನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗುವುದಕ್ಕೆ ಪತ್ರಗಳನ್ನು ಕೊಟ್ಟು ಕಳುಹಿಸುವೆನು.
[4] ಮತ್ತೆ ನಾನು ಸಹ ಹೋಗುವುದು ಯುಕ್ತವಾಗಿ ತೋರಿದರೆ ಅವರು ನನ್ನ ಜೊತೆಯಲ್ಲಿ ಬರಬಹುದು.
[5] ನಾನು ಹಾದುಹೋಗಬೇಕೆಂದಿರುವ ಮಕೆದೋನ್ಯ ಸೀಮೆಯನ್ನು ದಾಟುವಾಗ ನಿಮ್ಮ ಬಳಿಗೆ ಬಂದು ಬಹುಶಃ ನಿಮ್ಮ ಬಳಿಯಲ್ಲೇ ಉಳಿದುಕೊಳ್ಳುವೆನು.
[6] ಅಥವಾ ನಿಮ್ಮಲ್ಲಿ ಹಿಮಕಾಲವನ್ನಾದರೂ ಕಳೆಯುವೆನು; ಹಾಗೆಯೇ ನಾನು ಹೋಗಬೇಕಾದ ಸ್ಥಳಕ್ಕೆ ನೀವು ನನ್ನನ್ನು ಸಾಗಕಳುಹಿಸಲು ಸಹಾಯಮಾಡಬಹುದು.
[7] ನಾನು ಹಾದುಹೋಗುವ ಈ ಸ್ವಲ್ಪ ಸಮಯದಲ್ಲಿ ನಿಮ್ಮನ್ನು ನೋಡಲು ಬಯಸುವುದಿಲ್ಲ. ಕರ್ತನ ಅಪ್ಪಣೆಯಾದರೆ ನಿಮ್ಮ ಬಳಿಯಲ್ಲಿ ಕೆಲವು ಕಾಲ ತಂಗಲು ಬಯಸುತ್ತೇನೆ.
[8] ಪಂಚಾಶತ್ತಮ ದಿನ ಹಬ್ಬದ ತನಕ ಎಫೆಸದಲ್ಲಿರುವೆನು;
[9] ಯಾಕೆಂದರೆ ಸೇವೆಗೆ ಅನುಕೂಲವೂ, ಸಫಲವೂ ಆಗಿರುವ ಹೆಬ್ಬಾಗಿಲೊಂದು ನನಗಾಗಿ ತೆರೆಯಲ್ಪಟ್ಟಿದೆ. ಹಾಗೆಯೇ ವಿರೋಧಿಗಳೂ ಅನೇಕರಿದ್ದಾರೆ.
[10] ತಿಮೊಥೆಯನು ಬಂದರೆ ಅವನು ನಿಮ್ಮಲ್ಲಿ ನಿರ್ಭಯನಾಗಿರುವಂತೆ ನೋಡಿಕೊಳ್ಳಿರಿ; ಅವನು ಸಹ ನನ್ನ ಹಾಗೆಯೇ ಕರ್ತನ ಸೇವೆಯನ್ನು ಮಾಡುತ್ತಿದ್ದಾನಲ್ಲಾ.
[11] ಆದ್ದರಿಂದ ಯಾರೂ ಅವನನ್ನು ತಿರಸ್ಕರಿಸಬಾರದು. ಅವನು ನನ್ನ ಬಳಿಗೆ ಬರುವಂತೆ ಅವನನ್ನು ಸಮಾಧಾನದಿಂದ ಕಳುಹಿಸಿರಿ; ಅವನು ಸಹೋದರರೊಂದಿಗೆ ಬರುವುದನ್ನು ಎದುರುನೋಡುತ್ತಾ ಇದ್ದೇನೆ.
[12] ಸಹೋದರ ಅಪೊಲ್ಲೋಸನ ಕುರಿತು; ಅವನು ಸಹೋದರರೊಂದಿಗೆ ನಿಮ್ಮನ್ನು ಭೇಟಿಮಾಡಬೇಕೆಂದು ನಾನು ಬಹಳವಾಗಿ ಅವನನ್ನು ಪ್ರೋತ್ಸಾಹಿಸಿದೆನು. ಆದರೆ ಅವನು ಈಗ ಬರುವುದಿಲ್ಲ ಎಂದು ನಿರ್ಧರಿಸಿದನು. ಆದರೆ ಒಳ್ಳೆ ಅವಕಾಶ ಸಿಕ್ಕಿದಾಗ ಬರುವನು.
[13] ಎಚ್ಚರವಾಗಿರಿ, ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಲ್ಲಿರಿ. ಧೈರ್ಯವಂತರಾಗಿರಿ, ಬಲಗೊಳ್ಳಿರಿ.
[14] ನೀವು ಮಾಡುವುದನ್ನೆಲ್ಲಾ ಪ್ರೀತಿಯಿಂದ ಮಾಡಿರಿ.
[15] ಸ್ತೆಫನನ ಮನೆಯವರು ಅಖಾಯದಲ್ಲಿನ ಪ್ರಥಮಫಲವೆಂದು ಹಾಗೂ ಅವರು ದೇವಜನರ ಸೇವೆಗೋಸ್ಕರ ತಮ್ಮನ್ನು ಅರ್ಪಿಸಿದ್ದಾರೆಂದು ನೀವು ಬಲ್ಲವರಾಗಿದ್ದೀರಿ.
[16] ನಾನು ನಿಮ್ಮಲ್ಲಿ ಬೇಡುವುದೇನಂದರೆ, ಸೇವೆಯಲ್ಲಿ ನಮಗೆ ಸಹಾಯಮಾಡುವ ಹಾಗೂ ಪ್ರಯಾಸಪಡುವವರೆಲ್ಲರಿಗೂ ನೀವು ಅಧೀನರಾಗಿರಬೇಕು.
[17] ಸ್ತೆಫನನೂ, ಪೊರ್ತುನಾತೊಸನೂ, ಅಖಾಯಿಕನೂ ಬಂದದ್ದು ನನಗೆ ಸಂತೋಷವನ್ನುಂಟುಮಾಡಿದೆ. ನಿಮ್ಮಿಂದ ಆಗಿರುವ ಕೊರತೆಯನ್ನು ಅವರು ನೀಗಿಸಿರುವರು.
[18] ಅವರು ನನ್ನ ಆತ್ಮವನ್ನೂ ಮತ್ತು ನಿಮ್ಮ ಆತ್ಮಗಳನ್ನೂ ಚೈತನ್ಯಗೊಳಿಸಿದರಲ್ಲ. ಹೀಗಿರುವುದರಿಂದ ಇಂಥವರನ್ನು ಸನ್ಮಾನಿಸಿರಿ.
[19] ಆಸ್ಯಸೀಮೆಯ ಸಭೆಗಳವರು ನಿಮ್ಮನ್ನು ವಂದಿಸುತ್ತಾರೆ. ಅಕ್ವಿಲನೂ ಮತ್ತು ಪ್ರಿಸ್ಕಿಲ್ಲಳೂ ತಮ್ಮ ಮನೆಯಲ್ಲಿ ಕೂಡಿ ಬರುವ ಸಭೆಯವರೊಂದಿಗೆ ಕರ್ತನ ಹೆಸರಿನಲ್ಲಿ ಬಹಳವಾಗಿ ನಿಮ್ಮನ್ನು ವಂದಿಸುತ್ತಿದ್ದಾರೆ.
[20] ಸಹೋದರರೆಲ್ಲರೂ ನಿಮಗೆ ವಂದನೆ ಹೇಳುತ್ತಿದ್ದಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.
[21] ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ.
[22] ಯಾವನಾದರೂ ಕರ್ತನನ್ನು ಪ್ರೀತಿಸದಿದ್ದರೆ ಅವನು ಶಾಪಗ್ರಸ್ತನಾಗಲಿ. ನಮ್ಮ ಕರ್ತನೇ ಬಾ!
[23] ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೊಂದಿಗಿರಲಿ
[24] ಕ್ರಿಸ್ತ ಯೇಸುವಿನಲ್ಲಿ ನನ್ನ ಪ್ರೀತಿಯು ನಿಮ್ಮೆಲ್ಲರೊಂದಿಗೆ ಇರಲಿ. ಅಮೆನ್.