Skip to content
Opens in a new window
Listen to this chapter • 3:14

[1] ಸಹೋದರರೇ, ನಾನು ಗುಪ್ತವಾಗಿದ್ದ ದೇವರ ಸತ್ಯಾರ್ಥಗಳನ್ನು ತಿಳಿಸುವವನಾಗಿ ನಿಮ್ಮ ಬಳಿಗೆ ಬಂದಾಗ ವಾಕ್ಚಾತುರ್ಯದಿಂದಾಗಲಿ, ಜ್ಞಾನದಿಂದಾಗಲಿ ಬರಲಿಲ್ಲ.

[2] ನಾನು ಶಿಲುಬೆಗೆ ಹಾಕಲ್ಪಟ್ಟ ಯೇಸು ಕ್ರಿಸ್ತನನ್ನೇ ಹೊರತು ಬೇರೆ ಯಾವುದನ್ನೂ ತಿಳಿಯದವನಾಗಿ ನಿಮ್ಮಲ್ಲಿ ಇರುವೆನೆಂದು ತೀರ್ಮಾನಿಸಿಕೊಂಡೆನು.

[3] ಇದಲ್ಲದೆ ನಾನು ನಿಮ್ಮಲ್ಲಿಗೆ ಬಂದಾಗ ನಿಮ್ಮ ಬಳಿಯಲ್ಲಿ ಬಲಹೀನನೂ, ಭಯಪಡುವವನೂ, ಬಹು ನಡುಗುವವನೂ ಆಗಿದ್ದೆನು.

[4] ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಳ್ಳದೆ ದೇವರ ಶಕ್ತಿಯನ್ನು ಆಧಾರಮಾಡಿಕೊಳ್ಳಬೇಕೆಂದು ನನ್ನ ಬೋಧನೆಯಲ್ಲಿಯೂ, ಪ್ರಸಂಗದಲ್ಲಿಯೂ ಮನವೊಲಿಸುವ ಜ್ಞಾನವಾಕ್ಯಗಳನ್ನು ನಾನು ಪ್ರಯೋಗಿಸದೇ ದೇವರಾತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು.

[6] ಆದರೆ ಪರಿಪಕ್ವತೆಯುಳ್ಳವರ ಮಧ್ಯದಲ್ಲಿ ಜ್ಞಾನವನ್ನೇ ಹೇಳುತ್ತೇವೆ. ಅದು ಇಹಲೋಕದ ಜ್ಞಾನವಲ್ಲ, ಗತಿಸಿ ಹೋಗುವ ಇಹಲೋಕಾಧಿಕಾರಿಗಳ ಜ್ಞಾನವೂ ಅಲ್ಲ.

[7] ಇದುವರೆಗೆ ಗುಪ್ತವಾಗಿದ್ದ ಸತ್ಯಾರ್ಥವನ್ನು ತಿಳಿಸುವಲ್ಲಿ ದೇವರ ಜ್ಞಾನವನ್ನೇ ಹೇಳುತ್ತೇವೆ. ಅದು ಯಾವುದೆಂದರೆ ದೇವರು ನಮ್ಮ ಮಹಿಮೆಗಾಗಿ ಲೋಕೋತ್ಪತ್ತಿಗಿಂತ ಮೊದಲೇ ನೇಮಿಸಿ ಮರೆಮಾಡಿದ್ದ ದೇವರ ಜ್ಞಾನದ ಮರ್ಮವೇ ಆಗಿದೆ.

[8] ಇದನ್ನು ಇಹಲೋಕಾಧಿಕಾರಿಗಳಲ್ಲಿ ಯಾರೂ ಅರಿತಿರಲಿಲ್ಲ; ಅರಿತಿದ್ದರೆ ಅವರು ಮಹಿಮೆಯುಳ್ಳ ಕರ್ತನನ್ನು ಶಿಲುಬೆಗೆ ಹಾಕಿಸುತ್ತಿರಲಿಲ್ಲ;

[9] ಆದರೆ ದೇವರ ವಾಕ್ಯಗಳಲ್ಲಿ ಬರೆದಿರುವ ಪ್ರಕಾರ, “ದೇವರು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಅದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ.”

[10] ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಪಡಿಸಿದನು. ಆ ಆತ್ಮನು ಎಲ್ಲಾ ವಿಷಯಗಳನ್ನು, ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ.

[11] ಮನುಷ್ಯನೊಳಗಿನ ಆಲೋಚನೆಗಳು ಅವನಲ್ಲಿರುವ ಮನುಷ್ಯತ್ಮನಿಗಲ್ಲದೆ ಮತ್ತಾರಿಗೆ ತಿಳಿಯುವುದು? ಹಾಗೆಯೇ ದೇವರಾಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರಿಂದಲೂ ಗ್ರಹಿಸಲು ಸಾಧ್ಯವಿಲ್ಲ.

[12] ನಾವು ಇಹಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದವರಾಗಿದ್ದೇವೆ.

[13] ಇವುಗಳನ್ನು ಮನುಷ್ಯ ಜ್ಞಾನವು ಕಲಿಸಿದ ಮಾತುಗಳಿಂದ ಹೇಳದೆ ಪವಿತ್ರಾತ್ಮನೇ ಕಲಿಸಿಕೊಟ್ಟ ಮಾತುಗಳಿಂದ ಹೇಳಿ ಆತ್ಮೀಕವಾದವುಗಳನ್ನು ಆತ್ಮೀಕರಾದವರಿಗೆ ಯುಕ್ತವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತೇವೆ.

[14] ಪ್ರಾಪಂಚಿಕನಾದವನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತನಾಗಿ ತೋರುತ್ತವೆ; ಅವು ಆಧ್ಯಾತ್ಮದ ಮೂಲಕ ತಿಳಿದುಕೊಳ್ಳ ಬೇಕಾಗಿರುವುದರಿಂದ ಅವನು ಅವುಗಳನ್ನು ಗ್ರಹಿಸಲಾರನು.

[15] ಪವಿತ್ರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿವೇಚಿಸಿ ತಿಳಿದುಕೊಳ್ಳುತ್ತಾನೆ; ಆದರೆ ಅವನಿಗೆ ಯಾರೂ ವಿವೇಚಿಸಿ ತಿಳಿಸಿಕೊಡಬೇಕಾಗಿಲ್ಲ.

[16] “ಕರ್ತನ ಮನಸ್ಸನ್ನು ತಿಳಿದುಕೊಂಡು ಆತನಿಗೆ ಉಪದೇಶಿಸುವವನಾರು?” ಎಂದು ಬರೆದಿದೆಯಲ್ಲಾ. ನಾವಾದರೋ ಕ್ರಿಸ್ತನ ಮನಸ್ಸನ್ನು ಹೊಂದಿದವರಾಗಿದ್ದೇವೆ.

1 ಕೊರಿಂಥದವರಿಗೆ — Chapters