[1] ಆದರೆ ಸಹೋದರರೇ ನಾನಂತೂ ಆತ್ಮೀಕರೊಂದಿಗೆ ಮಾತನಾಡುವಂತೆ ನಿಮ್ಮ ಸಂಗಡ ಮಾತನಾಡದೆ ಪ್ರಾಪಂಚಿಕರೂ ಕ್ರಿಸ್ತನ ವಿಷಯದಲ್ಲಿ ಎಳೆಗೂಸುಗಳೂ ಆಗಿರುವವರ ಹಾಗೆ ನಿಮ್ಮ ಸಂಗಡ ಮಾತನಾಡಬೇಕಾಯಿತು.
[2] ನಿಮಗೆ ಹಾಲು ಕುಡಿಸಿದೆನು ಆಹಾರ ಕೊಡಲಿಲ್ಲ. ಆಹಾರವನ್ನು ತಿನ್ನುವುದಕ್ಕೆ ನೀವು ಇನ್ನೂ ಸಮರ್ಥರಾಗಿರಲಿಲ್ಲ. ಈಗಲೂ ನೀವು ಸಮರ್ಥರಾಗಿಲ್ಲ.
[3] ಯಾಕೆಂದರೆ ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮಲ್ಲಿ ಹೊಟ್ಟೆಕಿಚ್ಚು ಜಗಳಗಳು ಇರುವಲ್ಲಿ, ನೀವು ಪ್ರಾಪಂಚಿಕರಾಗಿದ್ದು ಕೇವಲ ಬೇರೆ ಮನುಷ್ಯರಂತೆ ನಡೆಯುತ್ತೀರಲ್ಲವೆ?
[4] ಒಬ್ಬನು, “ನಾನು ಪೌಲನವನು” ಎಂದು, ಮತ್ತೊಬ್ಬನು, “ನಾನು ಅಪೊಲ್ಲೋಸನವನು” ಎಂದು ಹೇಳುತ್ತಿರುವಾಗ ನೀವು ಇನ್ನೂ ಕೇವಲ ಸಾಮಾನ್ಯ ಮನುಷ್ಯರೇ ಆಗಿದ್ದೀರಲ್ಲವೇ?
[5] ಹಾಗಾದರೆ ಅಪೊಲ್ಲೋಸನು ಯಾರು? ಪೌಲನು ಯಾರು? ಅವರ ಸೇವೆಯ ಮುಖಾಂತರ ನೀವು ಕ್ರಿಸ್ತನನ್ನು ನಂಬುವವರಾದಿರಿ ಕರ್ತನು ಪ್ರತಿಯೊಬ್ಬನಿಗೆ ದಯಪಾಲಿಸಿದ ಪ್ರಕಾರ ಅವರು ಸೇವೆಮಾಡುವವರಾಗಿದ್ದಾರೆ.
[6] ನಾನು ಸಸಿಯನ್ನು ನೆಟ್ಟೆನು. ಅಪೊಲ್ಲೋಸನು ನೀರನ್ನು ಹೊಯ್ಯಿದನು. ಆದರೆ ಅದನ್ನು ಬೆಳೆಸಿದವನು ದೇವರೇ.
[7] ಹೀಗಿರಲಾಗಿ ನೆಡುವವನಾಗಲಿ, ನೀರುಹೊಯ್ಯುವವನಾಗಲಿ ಮುಖ್ಯವಾದವನಲ್ಲ. ಬೆಳೆಸುವ ದೇವರೇ ಪ್ರಾಮುಖ್ಯವಾದಾತನು.
[8] ನೆಡುವವನೂ, ನೀರು ಹೊಯ್ಯುವವನೂ ಸರಿಸಮಾನರೇ ಆಗಿದ್ದಾರೆ. ಆದರೆ ಪ್ರತಿಯೊಬ್ಬನಿಗೆ ಅವನವನ ಶಮ್ರಕ್ಕೆ ತಕ್ಕಂತೆ ಕೂಲಿಯು ದೊರೆಯುವುದು.
[9] ನಾವು ದೇವರ ಜೊತೆಕೆಲಸದವರು. ನೀವು ದೇವರ ಹೊಲವೂ. ದೇವರ ಮಂದಿರವೂ ಆಗಿದ್ದೀರಿ.
[10] ದೇವರು ನನಗೆ ಕೊಟ್ಟ ಕೃಪೆಯ ಪ್ರಕಾರ ನಾನು ಜಾಣ್ಮೆಯುಳ್ಳ ಪ್ರವೀಣನಾದ ಶಿಲ್ಪಿಯಂತೆ ಅಸ್ತಿವಾರ ಹಾಕಿದೆನು. ಮತ್ತೊಬ್ಬನು ಅದರ ಮೇಲೆ ಕಟ್ಟುತ್ತಾನೆ. ಆದರೆ ತಾನು ಅದರ ಮೇಲೆ ಹೇಗೆ ಕಟ್ಟುತ್ತಿದ್ದೇನೆಂದು ಪ್ರತಿಯೊಬ್ಬನು ಎಚ್ಚರಿಕೆಯಿಂದಿರಬೇಕು.
[11] ಯೇಸು ಕ್ರಿಸ್ತನೆಂಬ ಅಸ್ತಿವಾರವನ್ನಲ್ಲದೆ ಮತ್ತೊಂದು ಅಸ್ತಿವಾರವನ್ನು ಯಾರೂ ಹಾಕಲಾರರಷ್ಟೆ.
[12] ಆ ಅಸ್ತಿವಾರದ ಮೇಲೆ ಚಿನ್ನ, ಬೆಳ್ಳಿ, ರತ್ನಗಳು, ಕಟ್ಟಿಗೆ, ಹುಲ್ಲು, ಆಪು ಮುಂತಾದವುಗಳಲ್ಲಿ ಯಾವುದರಿಂದ ಕಟ್ಟಿದರೂ,
[13] ಅವನವನ ಕೆಲಸವು ಪ್ರಕಟವಾಗುವುದು. ಕ್ರಿಸ್ತನು ಬರುವ ದಿನವು ಬೆಂಕಿಯೊಡನೆ ಉದಯವಾಗಿ ಆ ಕೆಲಸವನ್ನು ಸ್ಪಷ್ಟವಾಗಿ ತೋರಿಸುವುದು. ಅವನವನ ಕೆಲಸವೆಂಥದೆಂಬುದನ್ನು ಆ ಬೆಂಕಿ ಶೋಧಿಸುವುದು.
[14] ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಪ್ರತಿಫಲ ಸಿಕ್ಕುವುದು.
[15] ಒಬ್ಬನು ಕಟ್ಟಿದ್ದು ಸುಟ್ಟು ಹೋದರೆ ಅವನಿಗೆ ನಷ್ಟವಾಗುವುದು. ತಾನಾದರೋ ರಕ್ಷಣೆ ಹೊಂದುವನು. ಆದರೆ ಬೆಂಕಿಯೊಳಗಿಂದ ತಪ್ಪಿಸಿಕೊಂಡವನ ಹಾಗಿರುವನು.
[16] ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?
[17] ಯಾವನಾದರೂ ದೇವರ ಆಲಯವನ್ನು ನಾಶಪಡಿಸಿದರೆ ದೇವರು ಅವನನ್ನು ನಾಶಪಡಿಸುವನು. ಯಾಕೆಂದರೆ ದೇವರ ಆಲಯವು ಪವಿತ್ರವಾದದ್ದು ಆ ಆಲಯವು ನೀವೇ ಆಗಿದ್ದೀರಿ.
[18] ಯಾವನೂ ತನ್ನನ್ನು ತಾನೇ ಮೋಸಗೊಳಿಸಿಕೊಳ್ಳದಿರಲಿ ನಿಮ್ಮಲ್ಲಿ ಯಾವನಾದರೂ ಲೋಕಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿಕೊಳ್ಳುವುದಾದರೆ ಅವನು ಜ್ಞಾನಿಯಾಗುವುದಕ್ಕಾಗಿ “ಮೂರ್ಖನಾಗಲಿ”
[19] ಯಾಕೆಂದರೆ ಇಹಲೋಕದ ಜ್ಞಾನವು ದೇವರ ಮುಂದೆ ಮೂರ್ಖತನವಾಗಿದೆ. “ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೆ ಹಿಡಿದುಕೊಳ್ಳುತ್ತಾನೆಂತಲೂ,”
[20] “ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು ತಿಳಿದುಕೊಳ್ಳುತ್ತಾನೆಂತಲೂ” ಬರೆದದೆಯಲ್ಲಾ
[21] ಆದಕಾರಣ ಮನುಷ್ಯಮಾತ್ರದವರ ವಿಷಯದಲ್ಲಿ ಯಾರೂ ಹೊಗಳಿಕೊಳ್ಳದಿರಲಿ. ಯಾಕೆಂದರೆ ಸಮಸ್ತವೂ ನಿಮಗಾಗಿಯೇ ಇದೆ.
[22] ಪೌಲನಾಗಲಿ, ಅಪೊಲ್ಲೋಸನಾಗಲಿ, ಕೇಫನಾಗಲಿ ಲೋಕವಾಗಲಿ, ಜೀವವಾಗಲಿ ಮರಣವಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಸಮಸ್ತವೂ ನಿಮ್ಮದೇ.
[23] ನೀವಂತೂ ಕ್ರಿಸ್ತನವರು, ಕ್ರಿಸ್ತನು ದೇವರಿನವನು.