[1] ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ಏನಾದರೂ ವಿವಾದವಿದ್ದರೆ ನ್ಯಾಯವಿಚಾರಣೆಗೆ ದೇವಜನರೆದುರು ತೆಗೆದುಕೊಂಡು ಹೋಗದೇ ಅನ್ಯಜನರ ಮುಂದೆ ತೆಗೆದುಕೊಂಡು ಹೋಗುವಿರೋ?
[2] ದೇವಜನರು ಲೋಕಕ್ಕೆ ತೀರ್ಪುಮಾಡುವರೆಂಬುದು ನಿಮಗೆ ತಿಳಿಯದೋ? ಲೋಕವು ನಿಮ್ಮಿಂದ ತೀರ್ಪನ್ನು ಹೊಂದಬೇಕಾಗಿರುವಲ್ಲಿ ಅತ್ಯಲ್ಪವಾದ ಸಂಗತಿಗಳನ್ನು ಕುರಿತು ತೀರ್ಪುಮಾಡುವುದಕ್ಕೆ ನೀವು ಅನರ್ಹರಾಗಿದ್ದೀರೋ?
[3] ನಾವು ದೇವದೂತರಿಗೂ ತೀರ್ಪುಮಾಡುವೆವೆಂಬುದು ನಿಮಗೆ ತಿಳಿಯದೋ? ಹಾಗಾದರೆ ಇಹಲೋಕ ಜೀವನದ ವಿಷಯಗಳ ಕುರಿತು ನಾವು ಎಷ್ಟೋ ಹೆಚ್ಚಾಗಿ ತೀರ್ಪುಮಾಡಬಹುದಲ್ಲವೇ?
[4] ಇಹಲೋಕ ಜೀವನಕ್ಕೆ ಸಂಬಂಧಪಟ್ಟ ವಿಷಯಗಳ ನ್ಯಾಯ ನಿರ್ಣಯಿಸುವುದಕ್ಕೆ ನಿಮ್ಮಲ್ಲಿದ್ದರೆ, ಇಂಥ ವಿಷಯಗಳನ್ನು ತೀರ್ಪು ಮಾಡುವುದಕ್ಕೆ ಸಭೆಯಲ್ಲಿ ಗಣನೆಗೆ ಬಾರದವರನ್ನು ಏಕೆ ನೇಮಿಸಿಕೊಳ್ಳುತ್ತೀರಿ?
[5] ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಹೇಳುತ್ತಿದ್ದೇನೆ. ತನ್ನ ಸಹೋದರರ ಮಧ್ಯದಲ್ಲಿ ನ್ಯಾಯವನ್ನು ಬಗೆಹರಿಸಬಲ್ಲವನಾದ ಬುದ್ಧಿವಂತನು ನಿಮ್ಮಲ್ಲಿ ಒಬ್ಬನಾದರೂ ಇಲ್ಲವೋ?
[6] ಆದರೆ ಅದಕ್ಕೆ ಬದಲಾಗಿ ಒಬ್ಬ ವಿಶ್ವಾಸಿಯು ಮತ್ತೊಬ್ಬ ವಿಶ್ವಾಸಿಯ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು ಅಲ್ಲದೆ ಅದನ್ನು ಅವಿಶ್ವಾಸಿಯ ಮುಂದೆ ತೆಗೆದುಕೊಂಡು ಹೋಗುವುದು ಸರಿಯೋ?
[7] ನಿಮ್ಮಲ್ಲಿ ವಿವಾದಗಳಿರುವುದಾದರೆ ನೀವು ಸೋತವರೆಂಬುದಕ್ಕೆ ಇದೇ ಗುರುತಾಗಿದೆ, ಅದಕ್ಕಿಂತ ಅನ್ಯಾಯವನ್ನು ಸಹಿಸುವುದೇ ಮೇಲು; ಮೋಸವನ್ನು ಅದರಿಂದಾದ ನಷ್ಟವನ್ನು ಯಾಕೆ ತಾಳಬಾರದು?
[8] ಆದರೆ ನೀವು ನಿಮ್ಮ ಸ್ವಂತ ಸಹೋದರರಿಗೆ ಅನ್ಯಾಯವನ್ನು ಮತ್ತು ಮೋಸವನ್ನು ಮಾಡಿದ್ದೀರಿ.
[9] ಅನೀತಿವಂತರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲವೆಂಬುದು ನಿಮಗೆ ತಿಳಿಯದೋ? ಸುಳ್ಳನ್ನು ನಂಬಬೇಡಿರಿ. ಜಾರರು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಪುರುಷಗಾಮಿಗಳು, ಕಳ್ಳರು,
[10] ಲೋಭಿಗಳು, ಕುಡುಕರು, ಜಗಳಮಾಡುವವರು, ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.
[11] ನಿಮ್ಮಲ್ಲಿ ಕೆಲವರು ಅಂಥವರಾಗಿದ್ದೀರಿ. ಆದರೆ ನೀವು ಕರ್ತನಾದ ಯೇಸು ಕ್ರಿಸ್ತನ ಹೆಸರಿನಿಂದಲೂ ಮತ್ತು ನಮ್ಮ ದೇವರ ಆತ್ಮದಿಂದಲೂ ತೊಳೆಯಲ್ಪಟ್ಟು, ಶುದ್ಧೀಕರಿಸಲ್ಪಟ್ಟಿದ್ದೀರಿ, ದೇವರಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದೀರಿ.
[12] “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು,” ಆದರೆ ಎಲ್ಲವು ಪ್ರಯೋಜನಕರವಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಹಕ್ಕುವುಂಟು” ಆದರೆ ನಾನು ಯಾವುದಕ್ಕೂ ಅಧೀನನಲ್ಲ.
[13] “ಭೋಜನ ಪದಾರ್ಥಗಳು ಹೊಟ್ಟೆಗಾಗಿಯೂ ಮತ್ತು ಹೊಟ್ಟೆಯು ಭೋಜನಪದಾರ್ಥಗಳಿಗಾಗಿಯೂ” ಇವೆ. ದೇವರು ಇವೆರಡನ್ನೂ ನಾಶಮಾಡುವನು. ಆದರೆ ದೇಹವು ಜಾರತ್ವಕೋಸ್ಕರ ಇರುವಂಥದಲ್ಲ. ಕರ್ತನಿಗೋಸ್ಕರ ಇರುವುದಾಗಿದೆ. ಕರ್ತನು ದೇಹಕೋಸ್ಕರ ಒದಗಿಸಿಕೊಡುತ್ತಾನೆ.
[14] ದೇವರು ಕರ್ತನನ್ನು ತನ್ನ ಶಕ್ತಿಯಿಂದ ಪುನರುತ್ಥಾನಗೊಳಿಸಿದ ಹಾಗೆಯೇ ನಮ್ಮನ್ನೂ ತನ್ನ ಶಕ್ತಿಯಿಂದ ಎಬ್ಬಿಸುವನು.
[15] ನಿಮ್ಮ ದೇಹಗಳು ಕ್ರಿಸ್ತನ ಅಂಗಗಳಾಗಿವೆ ಎಂಬುದು ನಿಮಗೆ ತಿಳಿಯದೋ? ಹೀಗಿರಲಾಗಿ ಕ್ರಿಸ್ತನ ಅಂಗಗಳಾಗಿರುವಂಥವುಗಳನ್ನು ತೆಗೆದು ವೇಶ್ಯೆಯ ಅಂಗಗಳೊಡನೆ ಸೇರಿಸುವುದು ಸರಿಯೋ? ಎಂದಿಗೂ ಹಾಗೆ ಮಾಡಬಾರದು
[16] ವೇಶ್ಯೆಯೊಂದಿಗೆ ಸೇರಿಕೊಂಡವನು ಅವಳೊಂದಿಗೆ ಒಂದೇ ದೇಹವಾಗಿದ್ದಾನೆಂಬುದು ನಿಮಗೆ ತಿಳಿಯದೋ? “ಇಬ್ಬರು ಒಂದೇ ಶರೀರವಾಗಿರುವರೆಂದು” ದೇವರವಾಕ್ಯ ಹೇಳುತ್ತದಲ್ಲಾ.
[17] ಆದರೆ ಕರ್ತನೊಂದಿಗೆ ಸೇರಿಕೊಂಡವನು ಆತನೊಂದಿಗೆ ಒಂದೇ ಆತ್ಮವಾಗಿದ್ದಾನೆ.
[18] ಜಾರತ್ವವನ್ನು ಬಿಟ್ಟು ದೂರ ಓಡಿಹೋಗಿರಿ. “ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹದ ಹೊರಗಿವೆ”, ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪ ಮಾಡುತ್ತಾನೆ.
[19] ನೀವು ನಿಮ್ಮ ಸ್ವಂತ ಸೊತ್ತಲ್ಲವೆಂದು ಮತ್ತು ದೇವರಿಂದ ದಾನವಾಗಿ ಲಭಿಸಿದ ಪವಿತ್ರಾತ್ಮನು ನಿಮ್ಮೊಳಗೆ ನೆಲೆಗೊಂಡಿರುವುದರಿಂದ ನಿಮ್ಮ ದೇಹವು ದೇವರ ಪವಿತ್ರಾಲಯವಾಗಿದೆಂಬುದು ನಿಮಗೆ ತಿಳಿಯದೋ?
[20] ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು ಆದಕಾರಣ ನಿಮ್ಮ ದೇಹದ ಮೂಲಕ ದೇವರನ್ನು ಮಹಿಮೆಪಡಿಸಿರಿ.