Skip to content
Opens in a new window
Listen to this chapter • 5:04

[1] ನಾನು ಸ್ವತಂತ್ರನಲ್ಲವೋ? ನಾನು ಅಪೊಸ್ತಲನಲ್ಲವೋ? ನಮ್ಮ ಕರ್ತನಾದ ಯೇಸುವನ್ನು ನಾನು ಕಂಡವನಲ್ಲವೇ? ನಾನು ಕರ್ತನಲ್ಲಿ ಮಾಡಿದ ಸೇವೆಯ ಪ್ರತಿಫಲವು ನೀವೇ ಅಲ್ಲವೇ?

[2] ಇತರರಿಗೆ ನಾನು ಅಪೊಸ್ತಲನಲ್ಲದಿದ್ದರೂ ನಿಮಗಾದರೋ ಅಪೊಸ್ತಲನಾಗಿದ್ದೇನೆ. ನಾನು ಕರ್ತನ ಅಪೊಸ್ತಲನಾಗಿದ್ದೇನೆಂಬುದಕ್ಕೆ ನೀವೇ ನನ್ನ ಮುದ್ರೆಯಾಗಿದ್ದಿರಿ.

[3] ನನ್ನನ್ನು ವಿಮರ್ಶಿಸುವವರಿಗೆ ನನ್ನ ಪ್ರತ್ಯುತ್ತರವೇನೆಂದರೆ,

[4] ಅನ್ನ, ಪಾನಗಳಿಗೆ ನಮಗೆ ಹಕ್ಕಿಲ್ಲವೇ?

[5] ಕ್ರೈಸ್ತವಿಶ್ವಾಸಿಯಾದ ಹೆಂಡತಿಯನ್ನು ಕರೆದುಕೊಂಡು ಸಂಚರಿಸುವುದಕ್ಕೆ ಮಿಕ್ಕಾದ ಅಪೊಸ್ತಲರಂತೆಯೂ, ಕರ್ತನ ಸಹೋದರರಂತೆಯ, ಮತ್ತು ಕೇಫನಂತೆಯೂ ನಮಗೆ ಹಕ್ಕಿಲ್ಲವೇ?

[6] ಅಥವಾ, ದುಡಿಯದೆ ಜೀವಿಸುವುದಕ್ಕೆ ನನಗೂ ಬಾರ್ನಬನಿಗೂ ಹಕ್ಕಿಲ್ಲವೇ?

[7] ಯಾವ ಸಿಪಾಯಿಯಾದರೂ ಸ್ವಂತ ಖರ್ಚಿನಿಂದ ಸೇವೆ ಮಾಡುವುದುಂಟೋ? ದ್ರಾಕ್ಷಾತೋಟವನ್ನು ಮಾಡಿದವನು ಅದರ ಫಲವನ್ನು ತಿನ್ನದೇ ಇರುವುದುಂಟೋ? ತನ್ನ ಹಿಂಡನ್ನು ಸಾಕುವವನು ಅವುಗಳ ಹಾಲನ್ನು ಕುಡಿಯದೆ ಜೀವಿಸುವುದುಂಟೋ?

[8] ನಾನು ಹೇಳಿದ್ದು ಬರೀ ಲೋಕವಾಡಿಕೆಯ ಮಾತೋ? ಧರ್ಮಶಾಸ್ತ್ರವೂ ಇದನ್ನು ಹೇಳುವುದಿಲ್ಲವೋ?

[9] “ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದೆಂದು” ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿದೆ. ದೇವರು ಚಿಂತಿಸುವುದು ಎತ್ತುಗಳಿಗಾಗಿಯೋ?

[10] ಖಂಡಿತವಾಗಿ ನಮಗೋಸ್ಕರವಾಗಿಯೇ ಆತನು ಹೇಳುತ್ತಾನಲ್ಲವೇ? ಹೌದು, ನಮಗೋಸ್ಕರ ಬರೆಯಲ್ಪಟ್ಟಿದೆ. ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ ನಿರೀಕ್ಷೆಯಿಂದ ಉಳಬೇಕು, ಹಾಗೂ ಒಕ್ಕುವವನು ತನಗೆ ಸುಗ್ಗಿಯಲ್ಲಿ ಪಾಲು ದೊರಕುವುದೆಂದು ನಿರೀಕ್ಷೆಯಲ್ಲಿ ಒಕ್ಕಬೇಕು.

[11] ನಾವು ನಿಮ್ಮಲ್ಲಿ ಆತ್ಮೀಕವಾದ ಬೀಜವನ್ನು ಬಿತ್ತಿದ ಮೇಲೆ ನಿಮ್ಮಿಂದ ಭೌತಿಕವಾದ ಪೈರನ್ನು ಕೊಯ್ಯುವುದು ದೊಡ್ಡ ವಿಷಯವೋ?

[12] ಈ ಅಧಿಕಾರ ಇತರರಿಗೆ ನಿಮ್ಮ ಮೇಲೆ ಇದ್ದರೆ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ? ಆದರೂ ನಾವು ಆ ಅಧಿಕಾರವನ್ನು ಚಲಾಯಿಸಲಿಲ್ಲ, ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿಕೊಂಡೆವು.

[13] ದೇವಾಲಯದಲ್ಲಿ ಸೇವೆ ಸಲ್ಲಿಸುವವರು ದೇವಾಲಯದಿಂದ ತಮ್ಮ ಬದುಕನ್ನು ಸಾಗಿಸಬೇಕೆಂದೂ ಮತ್ತು ಯಜ್ಞವೇದಿಯ ಬಳಿ ಸೇವೆಮಾಡುವವರು ಆ ವೇದಿಗೆ ಬರುವ ಪದಾರ್ಥಗಳಲ್ಲಿ ಪಾಲುಹೊಂದುತ್ತಾರೆಂಬುದೂ ನಿಮಗೆ ತಿಳಿಯದೋ?

[14] ಅದೇ ರೀತಿಯಾಗಿ ಕರ್ತನು ಸಹ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ತಮ್ಮ ಜೀವನಮಾಡಬೇಕೆಂದು ಆಜ್ಞಾಪಿಸಿದ್ದಾನೆ.

[15] ನಾನಂತೂ ಇವುಗಳಲ್ಲಿ ಒಂದನ್ನೂ ಪಾಲಿಸಲಿಲ್ಲ. ನನಗೆ ಏನಾದರೂ ಸಿಕ್ಕಬೇಕೆಂಬ ಉದ್ದೇಶದಿಂದ ನಾನು ಇದನ್ನು ಬರೆಯುತ್ತಿಲ್ಲ. ಯಾರಾದರೂ ಈ ಹೊಗಳಿಕೆಯನ್ನು ವ್ಯರ್ಥಮಾಡುವುದಕ್ಕಿಂತ ಸಾಯುವುದೇ ನನಗೆ ಲೇಸು.

[16] ನಾನು ಸುವಾರ್ತೆಯನ್ನು ಸಾರಿದರೂ ಹೊಗಳಿಕೊಳ್ಳುವುದಕ್ಕೆ ನನಗೇನೂ ಆಸ್ಪದವಿಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲಿದೆ, ನಾನು ಸುವಾರ್ತೆಯನ್ನು ಸಾರದಿದ್ದರೆ ನನ್ನ ಗತಿಯನ್ನು ಏನೆಂದು ಹೇಳಲಿ!

[17] ನಾನು ಸ್ವಂತ ಇಷ್ಟದಿಂದ ಈ ಕೆಲಸವನ್ನು ಮಾಡಿದರೆ ನನಗೆ ಪ್ರತಿಫಲ ದೊರೆಯುವುದು; ಇಲ್ಲದಿದ್ದರೂ ಈ ಕರ್ತವ್ಯ ನನ್ನ ವಶಕ್ಕೆ ಒಪ್ಪಿಸಿಕೊಡಲ್ಪಟ್ಟಿದೆ.

[18] ಹಾಗಾದರೆ ನನಗೆ ಸಿಗುವ ಬಹುಮಾನವೇನು? ನಾನು ಸುವಾರ್ತೆಯನ್ನು ಸಾರುವಾಗ ಅದರಿಂದ ದೊರೆಯುವ ಪ್ರತಿಫಲವನ್ನು ಪಡೆಯದೇ ಅದನ್ನು ಉಚಿತವಾಗಿ ಸಾರುವುದೇ ನನಗೆ ದೊರೆಯುವ ಪ್ರತಿಫಲವಾಗಿದೆ.

[19] ನಾನು ಎಲ್ಲಾ ವಿಷಯಗಳಲ್ಲಿ ಸ್ವತಂತ್ರನಾಗಿದ್ದರೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳಬೇಕೆಂದು ನಾನು ಎಲ್ಲರಿಗೂ ದಾಸನಾದೆನು.

[20] ಯೆಹೂದ್ಯರನ್ನು ಸಂಪಾದಿಸಿಕೊಳ್ಳುವುದಕ್ಕೆ ಯೆಹೂದ್ಯರಿಗೆ ಯೆಹೂದ್ಯನಂತಾದೆನು. ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲದವನಾದರೂ, ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಅವರಿಗೋಸ್ಕರ ಧರ್ಮಶಾಸ್ತ್ರಕ್ಕೆ ಅಧೀನನಂತಾದೆನು.

[21] ನಾನು ದೇವರ ಧರ್ಮಶಾಸ್ತ್ರ ಇಲ್ಲದವನಲ್ಲ, ಕ್ರಿಸ್ತನ ನಿಯಮಕ್ಕೊಳಗಾದವನೇ; ಆದರೂ ಧರ್ಮಶಾಸ್ತ್ರಕ್ಕೆ ಹೊರತಾದವರನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಧರ್ಮಶಾಸ್ತ್ರ ಬಾಹಿರನಂತಾದೆನು.

[22] ಬಲವಿಲ್ಲದವರನ್ನು ಸಂಪಾದಿಸುವುದಕ್ಕಾಗಿ ನಾನೂ ಬಲವಿಲ್ಲದವನಾದೆನು. ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಎಲ್ಲರಿಗೂ ಎಲ್ಲರಂತಾದೆನು.

[23] ಇದೆಲ್ಲವನ್ನು ಸುವಾರ್ತೆಗೋಸ್ಕರವೇ ಮಾಡಿ, ನಾನು ಇತರರ ಸಂಗಡ ಸುವಾರ್ತೆಯ ಆಶೀರ್ವಾದದಲ್ಲಿ ಪಾಲುಗಾರನಾಗಬೇಕೆಂದು ಇದನ್ನು ಮಾಡುತ್ತಿದ್ದೇನೆ.

[24] ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಆದರೂ ಒಬ್ಬನು ಮಾತ್ರ ಜಯಮಾಲೆಯನ್ನು ಪಡೆಯುತ್ತಾನೆ ಎಂಬುದು ನಿಮಗೆ ತಿಳಿಯದೋ? ಅವರಂತೆ ನೀವೂ ಸಹ ಬಹುಮಾನವನ್ನು ಗೆಲ್ಲಬೇಕೆಂದು ಓಡಿರಿ.

[25] ಪ್ರತಿಯೊಬ್ಬ ಕ್ರೀಡಾಪಟುವು ತನ್ನ ತರಬೇತಿಯ ಎಲ್ಲಾ ವಿಷಯಗಳಲ್ಲಿ ಶಮೆದಮೆಯುಳ್ಳವನಾಗಿರುತ್ತಾನೆ. ಅವರು ಬಾಡಿ ಹೋಗುವ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುತ್ತಾರೆ; ನಾವಾದರೋ ಬಾಡಿಹೋಗದ ಜಯಮಾಲೆಯನ್ನು ಹೊಂದುವುದಕ್ಕೆ ಸಾಧನೆ ಮಾಡುವವರಾಗಿದ್ದೇವೆ.

[26] ಆದ್ದರಿಂದ ನಾನು ಸಹ ಗೊತ್ತುಗುರಿಯಿಲ್ಲದವನಂತೆ ಓಡುವುದಿಲ್ಲ; ಗಾಳಿಯೊಂದಿಗೆ ಗುದ್ದಾಡುವವನಂತೆ ಹೋರಾಡುವುದಿಲ್ಲ.

[27] ಇತರರಿಗೆ ಬೋಧಿಸಿದ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ ಸ್ವಾಧಿನದಲ್ಲಿಟ್ಟುಕೊಳ್ಳುತ್ತೇನೆ.

1 ಕೊರಿಂಥದವರಿಗೆ — Chapters