[1] ಸಹೋದರರೇ, ನಾನು ನಿಮಗೆ ತಿಳಿಸಲು ಅಪೇಕ್ಷಿಸುವ ಸಂಗತಿ ಏನೆಂದರೆ, ನಮ್ಮ ಪೂರ್ವಿಕರೆಲ್ಲರೂ ಮೇಘದ ಅಡಿಯಲ್ಲಿದ್ದು ಸಮುದ್ರವನ್ನು ದಾಟಿಹೋದರು.
[2] ಅವರೆಲ್ಲರೂ ಮೋಶೆಯನ್ನು ಹಿಂಬಾಲಿಸುವುದಕ್ಕಾಗಿ ಮೇಘದಲ್ಲಿಯೂ ಸಮುದ್ರದಲ್ಲಿಯೂ ದೀಕ್ಷಾಸ್ನಾನವನ್ನು ಹೊಂದಿದರು.
[3] ಅವರೆಲ್ಲರೂ ಆತ್ಮೀಕವಾದ ಒಂದೇ ಆಹಾರವನ್ನು ತಿಂದರು.
[4] ಅವರೆಲ್ಲರೂ ದೈವಿಕವಾದ ಒಂದೇ ನೀರನ್ನು ಕುಡಿದರು. ಹೇಗೆಂದರೆ ಅವರನ್ನು ಹಿಂಬಾಲಿಸುತ್ತಿದ್ದ ದೈವಿಕವಾದ ಬಂಡೆಯೊಳಗಿಂದ ಬಂದ ನೀರನ್ನು ಕುಡಿಯುತ್ತಿದ್ದರು. ಆ ಬಂಡೆ ಕ್ರಿಸ್ತನೇ.
[5] ಆದರೂ ಅವರಲ್ಲಿ ಬಹು ಮಂದಿಯನ್ನು ದೇವರು ಮೆಚ್ಚಲಿಲ್ಲ. ಆದ್ದರಿಂದ ಅವರು ಸಂಹರಿಸಲ್ಪಟ್ಟರು ಮತ್ತು ಅವರ ಶವಗಳು ಅಡವಿಯಲ್ಲೆಲ್ಲ ಬಿದ್ದವು.
[6] ಅವರು ಕೆಟ್ಟ ವಿಷಯಗಳನ್ನು ಮೋಹಿಸದಂತೆ ನಾವು ಮೋಹಿಸುವವರಾಗಬಾರದೆಂಬುದಕ್ಕಾಗಿ ಈ ಸಂಗತಿಗಳು ನಮಗೆ ನಿದರ್ಶನಗಳಾಗಿವೆ.
[7] ಅವರಲ್ಲಿ ಕೆಲವರು ವಿಗ್ರಹಾರಾಧಕರಾಗಿದ್ದರು, “ಜನರು ತಿನ್ನುವುದಕ್ಕೂ, ಕುಡಿಯುವುದಕ್ಕೂ ಕುಳಿತುಕೊಂಡರು. ಕಾಮಾಭಿಲಾಷೆಯಿಂದ ಕುಣಿದಾಡುವುದಕ್ಕೆ ಎದ್ದರು” ಎಂದು ಬರೆದಿದೆಯಲ್ಲಾ. ನೀವು ಅವರ ಹಾಗೆ ವಿಗ್ರಹಾರಾಧಕರಾಗಬೇಡಿರಿ.
[8] ಅವರಲ್ಲಿ ಕೆಲವರು ಜಾರತ್ವ ಮಾಡಿ ಒಂದೇ ದಿನದಲ್ಲಿ ಇಪ್ಪತ್ತು ಮೂರು ಸಾವಿರ ಜನರು ಸಾವನ್ನಪ್ಪಿದರು. ಅವರ ಹಾಗೆ ನಾವು ಜಾರತ್ವ ಮಾಡದೆ ಇರೋಣ.
[9] ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು. ನಾವು ಪರೀಕ್ಷಿಸದೆ ಇರೋಣ.
[10] ಇದಲ್ಲದೆ ಅವರಲ್ಲಿ ಕೆಲವರು ಗೊಣಗುಟ್ಟಿ ಸಂಹಾರಕ ದೂತನ ಕೈಯಿಂದ ನಾಶವಾದರು. ನೀವು ಗುಣಗುಟ್ಟಬೇಡಿರಿ.
[11] ಅವರಿಗೆ ಸಂಭವಿಸಿದ ಈ ಸಂಗತಿಗಳು ನಿದರ್ಶನರೂಪವಾಗಿವೆ. ಮತ್ತು ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಇದು ಎಚ್ಚರಿಕೆಯ ಮಾತುಗಳಾಗಿ ಬರೆದಿವೆ.
[12] ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.
[13] ಮನುಷ್ಯರಿಗೆ ಸಾಧಾರಣವಾಗಿ ಬರುವ ಶೋಧನೆಯೇ ಹೊರತು ಬೇರೆ ಯಾವುದೂ ನಿಮಗೆ ಸಂಭವಿಸಲಿಲ್ಲವಲ್ಲ. ದೇವರು ನಂಬಿಗಸ್ತನು. ನಿಮ್ಮ ಶಕ್ತಿಗೆ ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವುದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.
[14] ಆದ್ದರಿಂದ ಪ್ರಿಯರೇ, ವಿಗ್ರಹಾರಾಧನೆಯನ್ನು ಬಿಟ್ಟು ದೂರವಾಗಿರಿ.
[15] ನೀವು ವಿವೇಕಿಗಳೆಂದು ಇದನ್ನು ಹೇಳುತ್ತೇನೆ. ನಾನು ಹೇಳುವುದನ್ನು ನೀವೇ ಯೋಚಿಸಿರಿ.
[16] ನಾವು ದೇವರ ಸ್ತೋತ್ರಮಾಡಿ ಪಾನಪಾತ್ರೆಯಲ್ಲಿ ಪಾನ ಮಾಡುವುದು ಕ್ರಿಸ್ತನ ರಕ್ತದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ? ನಾವು ರೊಟ್ಟಿಯನ್ನು ಮುರಿದು ತಿನ್ನುವುದು ಕ್ರಿಸ್ತನ ದೇಹದಲ್ಲಿ ಪಾಲುಗಾರರಾಗಿದ್ದೇವೆಂಬುದನ್ನು ಸೂಚಿಸುತ್ತದಲ್ಲವೇ?
[17] ರೊಟ್ಟಿ ಒಂದೇ ಆಗಿರುವ ಹಾಗೆ ಅನೇಕರಾಗಿರುವ ನಾವೆಲ್ಲರು ಒಂದೇ ದೇಹದಂತಿದ್ದೇವೆ. ಯಾಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಪಾಲು ತೆಗೆದುಕೊಂಡು ತಿನ್ನುತ್ತೇವೆ.
[18] ಇಸ್ರಾಯೇಲ್ಯ ಜನರ ಕುರಿತು ಯೋಚಿಸಿರಿ. ಯಜ್ಞಮಾಡಿದ್ದನ್ನು ತಿನ್ನುವವರು ಯಜ್ಞವೇದಿಯೊಡನೆ ಪಾಲುಗಾರರಾಗಿದ್ದಾರಲ್ಲವೇ.
[19] ಹಾಗಾದರೆ ನಾನು ಏನು ಹೇಳಿದ ಹಾಗಾಯಿತು? ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥವು ವಾಸ್ತವವೆಂದೋ ಅಥವಾ ವಿಗ್ರಹವು ವಾಸ್ತವವೆಂದು ನನ್ನ ಅಭಿಪ್ರಾಯವೋ? ಅಲ್ಲ,
[20] ಆದರೆ ಅನ್ಯಜನರು ತಾವು ಅರ್ಪಿಸುವ ಬಲಿಗಳನ್ನು ದೇವರಿಗಲ್ಲ, ದೆವ್ವಗಳಿಗೆ ಅರ್ಪಿಸುತ್ತಾರೆಂಬುದು ನನ್ನ ಅಭಿಪ್ರಾಯವು. ನೀವು ದೆವ್ವಗಳೊಡನೆ ಪಾಲುಗಾರರಾಗಿರಬೇಕೆಂಬುದು ನನ್ನ ಇಷ್ಟವಲ್ಲ.
[21] ನೀವು ಕರ್ತನ ಪಾನಪಾತ್ರೆಯಲ್ಲಿಯೂ ಹಾಗೂ ದೆವ್ವಗಳ ಪಾನಪಾತ್ರೆಯಲ್ಲಿಯೂ ಕುಡಿಯಲಾರಿರಿ. ಕರ್ತನ ಪಂಕ್ತಿಯಲ್ಲಿಯೂ ಮತ್ತು ದೆವ್ವಗಳ ಪಂಕ್ತಿಯಲ್ಲಿಯೂ ಊಟಮಾಡಲಾರಿರಿ.
[22] ಕರ್ತನಿಗೆ ಕೋಪವನ್ನುಂಟುಮಾಡಿ ರೇಗಿಸಬೇಕೆಂದಿದ್ದೇವೋ? ಆತನಿಗಿಂತಲೂ ನಾವು ಬಲಿಷ್ಠರೋ?
[23] “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಅಧಿಕಾರವುಂಟು.” ಆದರೆ ಎಲ್ಲವೂ ಪ್ರಯೋಜನಕರವಾಗಿರುವುದಿಲ್ಲ. “ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೆ ಅಧಿಕಾರವುಂಟು” ಆದರೆ ಎಲ್ಲವೂ ಜನರನ್ನು ಭಕ್ತಿಯಲ್ಲಿ ಬೆಳೆಸುವುದಿಲ್ಲ.
[24] ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೇ ಪರಹಿತವನ್ನು ಚಿಂತಿಸಲಿ.
[25] ಮಾಂಸದ ಅಂಗಡಿಯಲ್ಲಿ ಮಾರುವಂಥದ್ದು ಏನಿದ್ದರೂ ಅದನ್ನು ಮನಸ್ಸಾಕ್ಷಿಯಲ್ಲಿ ಸಂಶಯ ಹುಟ್ಟಿಸುವಂತೆ ವಿಚಾರ ಮಾಡದೇ ತಿನ್ನಿರಿ.
[26] “ಭೂಮಿಯು ಅದರಲ್ಲಿರುವ ಸಮಸ್ತವೂ ಕರ್ತನದಲ್ಲವೇ.”
[27] ಕ್ರಿಸ್ತನನ್ನು ನಂಬದವರಲ್ಲಿ ಒಬ್ಬನು ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವುದಕ್ಕೆ ನಿಮಗಿಷ್ಟವಿದ್ದರೆ ನಿಮಗೇನು ಬಡಿಸಿದರೂ ಮನಸ್ಸಾಕ್ಷಿಯನ್ನು ಪ್ರಶ್ನಿಸದೇ ಅದನ್ನು ತಿನ್ನಿರಿ.
[28] ಆದರೆ ಒಬ್ಬನು ನಿಮಗೆ “ಇದು ವಿಗ್ರಹಾಲಯದಲ್ಲಿ ಬಲಿಕೊಟ್ಟದ್ದು” ಎಂದು ಹೇಳಿದರೆ ಈ ಸಂಗತಿಯನ್ನು ತಿಳಿಸಿದವನ ನಿಮಿತ್ತವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ಅದನ್ನು ತಿನ್ನಬೇಡಿರಿ.
[29] ಅದು ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ; ಮತ್ತೊಬ್ಬನ ಮನಸ್ಸಾಕ್ಷಿಗಾಗಿಯೇ ಹೇಳಲಾಗಿದೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?
[30] ನಾನು ಕೃತಜ್ಞತೆಯೊಡನೆ ಊಟಮಾಡಿ ದೇವರನ್ನು ಸ್ತುತಿಸಿದ ಮೇಲೆ ಆ ಪದಾರ್ಥಗಳ ನಿಮಿತ್ತ ನನಗೆ ಯಾಕೆ ದೂಷಣೆಯಾಗಬೇಕು?
[31] ಹೀಗಿರಲಾಗಿ ನೀವು ತಿಂದರೂ, ಕುಡಿದರೂ, ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿರಿ.
[32] ಯೆಹೂದ್ಯರಿಗಾಗಲಿ ಗ್ರೀಕರಿಗಾಗಲಿ ದೇವರ ಸಭೆಗಾಗಲಿ ವಿಘ್ನವಾಗಬೇಡಿರಿ.
[33] ನಾನಂತೂ ಸ್ವಪ್ರಯೋಜನಕ್ಕಾಗಿ ಚಿಂತಿಸದೇ ಮನುಷ್ಯರೆಲ್ಲರು ರಕ್ಷಣೆ ಹೊಂದಬೇಕೆಂದು ಅವರ ಪ್ರಯೋಜನಕ್ಕಾಗಿ ಚಿಂತಿಸಿ, ಎಲ್ಲರನ್ನು ಎಲ್ಲಾ ವಿಷಯಗಳಲ್ಲಿ ಮೆಚ್ಚಿಸುವವನಾಗಿದ್ದೇನೆ.