Skip to content
Opens in a new window
Listen to this chapter • 2:39

[1] ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳ ವಿಷಯವನ್ನು ಕುರಿತಾದರೋ. “ನಮ್ಮೆಲ್ಲರಿಗೆ ಜ್ಞಾನವುಂಟೆಂದು” ನಾವು ಬಲ್ಲೆವು. ತಿಳಿವಳಿಕೆಯು ಉಬ್ಬಿಸುತ್ತದೆ, ಆದರೆ ಪ್ರೀತಿಯು ಭಕ್ತಿಯನ್ನು ಬೆಳೆಸುತ್ತದೆ.

[2] ಒಬ್ಬನು ತಾನು ಏನಾದರೂ ತಿಳಿದುಕೊಂಡಿದ್ದೇನೆಂದು ಭಾವಿಸುವುದಾದರೆ ಅವನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳಿದುಕೊಂಡಿರುವುದಿಲ್ಲ.

[3] ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ದೇವರು ಅವನನ್ನು ತಿಳಿದುಕೊಂಡಿದ್ದಾನೆ.

[4] ಆದ್ದರಿಂದ ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದರ ವಿಷಯದಲ್ಲಿ, “ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದು” ನಮಗೆ ತಿಳಿದಿದೆ ಮತ್ತು “ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ” ಬಲ್ಲೆವು.

[5] ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವಂಥವುಗಳು ಅನೇಕವಿದ್ದರೂ, “ದೇವರುಗಳೆಂದೂ ಕರ್ತರೆಂದೂ ಪೂಜಿಸುವಂಥವುಗಳು” ಬಹಳವಿದ್ದರೂ,

[6] “ನಮಗಾದರೋ ಒಬ್ಬನೇ ತಂದೆಯಾದ ದೇವರು; ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. ನಾವೂ ಆತನ ಮುಖಾಂತರ ಉಂಟಾದೆವು.”

[7] ಆದಾಗ್ಯೂ, ಈ ತಿಳಿವಳಿಕೆಯು ಎಲ್ಲರಲ್ಲಿಯೂ ಇಲ್ಲ. ಪ್ರತಿಯಾಗಿ, ಕೆಲವರು ಈ ವರೆಗೂ ವಿಗ್ರಹಗಳ ಬಳಿಗೆ ಹೋಗುವ ರೂಢಿಯಲ್ಲಿದರಿಂದ ತಾವು ತಿನ್ನುವ ಈ ಆಹಾರವು ವಿಗ್ರಹಕ್ಕೆ ಅರ್ಪಿಸಿದ್ದೆಂದು ತಿನ್ನುತ್ತಾರೆ; ಅವರ ಮನಸ್ಸಾಕ್ಷಿಯು ಬಲಹೀನವಾದ್ದದರಿಂದ ಕಲುಷಿತವಾಗಿ ಹೋಗಿದೆ.

[8] ಆದರೆ ನಾವು ತಿನ್ನುವ ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ.

[9] ಆದರೆ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲಹೀನನಾದವನಿಗೆ ಅಡ್ಡಿಯಾಗದಂತೆ ಎಚ್ಚರವಾಗಿರಿ.

[10] ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ.

[11] ಹೀಗೆ ಈ ನಿನ್ನ ಜ್ಞಾನದಿಂದ ಆ ಬಲಹೀನ ಸಹೋದರನು ನಾಶವಾಗುತ್ತಾನೆ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ.

[12] ಹೀಗಿರಲಾಗಿ ನೀವು ಸಹೋದರರ ವಿರುದ್ಧ ಪಾಪ ಮಾಡಿ ಅವರ ದುರ್ಬಲವಾದ ಮನಸ್ಸಾಕ್ಷಿಯನ್ನು ನೋಯಿಸಿದರೆ ನೀವು ಕ್ರಿಸ್ತನ ವಿರುದ್ಧ ಪಾಪಮಾಡುವವರಾಗುತ್ತೀರಿ.

[13] ಆದ್ದರಿಂದ ಆಹಾರಪದಾರ್ಥವು ನನ್ನ ಸಹೋದರನಿಗೆ ಅಡ್ಡಿಯಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ; ನಾನು ನನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವುದಿಲ್ಲಾ.

1 ಕೊರಿಂಥದವರಿಗೆ — Chapters