Skip to content
Opens in a new window
Listen to this chapter • 4:51

[1] ಸಹೋದರರೇ ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಕುರಿತು ನಿಮಗೆ ತಿಳಿವಳಿಕೆಯಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

[2] ನೀವು ಅನ್ಯಜನರಾಗಿದ್ದಾಗ ಮೂಕ ವಿಗ್ರಹಗಳು ನಿಮ್ಮನ್ನು ನಡೆಸಿದ ಹಾಗೆ ನೀವು ಅವುಗಳ ಬಳಿಗೆ ಹೋಗುತ್ತಿದ್ದಿರೆಂದು ಬಲ್ಲಿರಿ.

[3] ಹೀಗಿರುವುದರಿಂದ ನಾನು ನಿಮಗೆ ತಿಳಿಸುವುದನ್ನು ಕೇಳಿರಿ. ದೇವರಾತ್ಮನ ಪ್ರೇರಣೆಯಿಂದ ಮಾತನಾಡುವ ಯಾವ ಮನುಷ್ಯನಾದರೂ “ಯೇಸುವನ್ನು ಶಾಪಗ್ರಸ್ತನೆಂದು” ಹೇಳುವುದಿಲ್ಲ. ಮತ್ತು ಪವಿತ್ರಾತ್ಮನ ಪ್ರೇರಣೆಯಿಂದಲೇ ಹೊರತು ಯಾವ ಮನುಷ್ಯನಾದರೂ “ಯೇಸುವನ್ನು ಕರ್ತನೆಂದು” ಹೇಳಲಾರನು.

[4] ವರಗಳಲ್ಲಿ ಬೇರೆ ಬೇರೆ ವಿಧಗಳುಂಟು. ಆದರೆ ದೇವರಾತ್ಮನು ಒಬ್ಬನೇ.

[5] ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಕರ್ತನು ಒಬ್ಬನೇ.

[6] ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು ಆದರೆ ಸರ್ವರಲ್ಲಿಯೂ ಸರ್ವ ಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ.

[7] ಆದರೆ ಪ್ರತಿಯೊಬ್ಬನಲ್ಲಿ ತೋರಿಬರುವ ದೇವರಾತ್ಮನ ವರಗಳು ಸರ್ವರ ಪ್ರಯೋಜನಕ್ಕಾಗಿ ಕೊಡಲ್ಪಟ್ಟಿವೆ.

[8] ಒಬ್ಬನಿಗೆ ದೇವರಾತ್ಮನ ಮೂಲಕ ಜ್ಞಾನವಾಕ್ಯವು ಮತ್ತೊಬ್ಬನಿಗೆ ಆ ಆತ್ಮನಿಂದಲೇ ತಿಳಿವಳಿಕೆಯ ವಾಕ್ಯವು

[9] ಒಬ್ಬನಿಗೆ ಆ ಆತ್ಮನಿಂದಲೇ ನಂಬಿಕೆಯು ಮತ್ತೊಬ್ಬನಿಗೆ ಆ ಒಬ್ಬ ಆತ್ಮನಿಂದಲೇ ನಾನಾ ರೋಗಗಳನ್ನು ವಾಸಿಮಾಡುವ ವರವು,

[10] ಮತ್ತೊಬ್ಬನಿಗೆ ಮಹತ್ಕಾರ್ಯಗಳನ್ನು ಮಾಡುವ ವರವು, ಇನ್ನೊಬ್ಬನಿಗೆ ಪ್ರವಾದನೆಯ ವರವು, ಒಬ್ಬನಿಗೆ ಆತ್ಮವನ್ನು ವಿವೇಚಿಸುವ ವರವು, ಮತ್ತೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ವರವು, ಒಬ್ಬನಿಗೆ ಭಾಷೆಗಳ ಅರ್ಥವನ್ನು ಬಿಡಿಸಿ ಹೇಳುವ ವರವು ಕೊಡಲ್ಪಡುತ್ತದೆ.

[11] ಆದರೆ ಈ ಎಲ್ಲವುಗಳಲ್ಲಿ ಕಾರ್ಯ ಮಾಡುವ ಆ ಒಬ್ಬ ಆತ್ಮನೇ ವರಗಳನ್ನೆಲ್ಲಾ ತನ್ನ ಚಿತ್ತಾನುಸಾರವಾಗಿ ಒಬ್ಬೊಬ್ಬನಿಗೆ ಹಂಚಿಕೊಡುವವನಾಗಿದ್ದಾನೆ.

[12] ಹೇಗೆ ದೇಹವು ಒಂದಾಗಿದ್ದರೂ ಅದಕ್ಕಿರುವ ಅಂಗಗಳು ಅನೇಕವಾಗಿವೆಯೋ, ಹೇಗೆ ದೇಹದ ಅಂಗಗಳೆಲ್ಲವೂ ಅನೇಕವಾಗಿದ್ದು ಒಂದೇ ದೇಹವಾಗಿದೆಯೋ, ಹಾಗೆಯೇ ಕ್ರಿಸ್ತನು ಇದ್ದಾನೆ.

[13] ಯೆಹೂದ್ಯರಾಗಲಿ, ಗ್ರೀಕರಾಗಲಿ, ದಾಸರಾಗಲಿ, ಸ್ವತಂತ್ರರಾಗಲಿ ನಾವೆಲ್ಲರೂ ಒಂದೇ ದೇಹವಾಗುವುದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು. ಒಂದೇ ಆತ್ಮವು ನಮ್ಮೆಲ್ಲರಿಗೆ ಪಾನವಾಗಿ ಕೊಡಲ್ಪಟ್ಟಿತು.

[14] ದೇಹವು ಒಂದೇ ಅಂಗವಲ್ಲ. ಅನೇಕ ಅಂಗಗಳುಳ್ಳದ್ದಾಗಿದೆ.

[15] ಕಾಲು “ನಾನು ಕೈಯಲ್ಲದ ಕಾರಣ ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?

[16] ಕಿವಿ “ನಾನು ಕಣ್ಣಲ್ಲದ ಕಾರಣ ನಾನು ದೇಹಕ್ಕೆ ಸೇರಿಲ್ಲವೆಂದು” ಹೇಳಿದರೂ ಅದು ದೇಹಕ್ಕೆ ಸೇರದೆ ಇರುವುದೋ?

[17] ದೇಹವೆಲ್ಲಾ ಕಣ್ಣಾದರೆ ನೀವು ಏನೂ ಕೇಳಲಾಗುತ್ತಿರಲಿಲ್ಲ. ದೇಹವೆಲ್ಲಾ ಕಿವಿಯಾದರೆ ನೀವು ಯಾವ ವಾಸನೆಯನ್ನು ಮೂಸಲಾಗುತ್ತಿರಲಿಲ್ಲ.

[18] ಆದರೆ ದೇವರು ಆ ಅಂಗಗಳಲ್ಲಿ ಪ್ರತಿಯೊಂದನ್ನು ತನಗೆ ಸರಿಯಾಗಿ ತೋಚಿದ ಪ್ರಕಾರ ದೇಹದೊಳಗೆ ಇಟ್ಟಿದ್ದಾನೆ.

[19] ಅವೆಲ್ಲವೂ ಒಂದೇ ಅಂಗವಾಗಿದ್ದರೆ ದೇಹವೆಲ್ಲಿರುವುದು?

[20] ಆದರೆ ಅಂಗಗಳು ಅನೇಕವಾಗಿದೆ ಆದರೆ ದೇಹವು ಒಂದೇ.

[21] ಕಣ್ಣು ಕೈಗೆ, “ನೀನು ನನಗೆ ಅವಶ್ಯವಿಲ್ಲವೆಂದೂ,” ತಲೆಯು “ಪಾದಗಳಿಗೆ ನೀವು ನನಗೆ ಅವಶ್ಯವಿಲ್ಲವೆಂದೂ” ಹೇಳುವುದಕ್ಕಾಗುವುದಿಲ್ಲ.

[22] ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ?

[23] ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳು ಎಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವುದುಂಟಲ್ಲಾ. ಹೀಗೆ ಮಾನವಿಲ್ಲದ ಅಂಗಗಳಿಗೆ ಹೆಚ್ಚಾದ ಮಾನವುಂಟಾಗುತ್ತದೆ.

[24] ಮಾನವುಳ್ಳ ಅಂಗಗಳಿಗೆ ಏನೂ ಅವಶ್ಯವಿಲ್ಲ. ದೇಹದಲ್ಲಿ ಭೇದವೇನೂ ಇರದೇ ಅಂಗಗಳು ಒಂದಕ್ಕೊಂದರ ಹಿತವನ್ನು ಚಿಂತಿಸುವ ಹಾಗೆ ದೇವರು ಕೊರತೆಯುಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಜೋಡಿಸಿದ್ದಾನೆ.

[26] ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ. ಒಂದು ಅಂಗ ಗೌರವಿಸಲ್ಪಟ್ಟರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.

[27] ನೀವು ಕ್ರಿಸ್ತನ ದೇಹವು ಮತ್ತು ಒಬ್ಬೊಬ್ಬರಾಗಿ ಅದಕ್ಕೆ ಅಂಗಗಳಾಗಿದ್ದೀರಿ.

[28] ದೇವರು ತನ್ನ ಸಭೆಯಲ್ಲಿ ಮೊದಲನೆಯದಾಗಿ ಅಪೊಸ್ತಲರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ಇಟ್ಟಿದ್ದಾನೆ. ಆ ಮೇಲೆ ಮಹತ್ಕಾರ್ಯ ಮಾಡುವ ಶಕ್ತಿಯನ್ನು, ನಾನಾ ರೋಗಗಳನ್ನು ವಾಸಿಮಾಡುವ ವರವನ್ನೂ, ಪರಸಹಾಯ ಮಾಡುವ ಗುಣವನ್ನೂ, ಕಾರ್ಯಗಳನ್ನು ನಿರ್ವಹಿಸುವ ಜ್ಞಾನವನ್ನು ಮತ್ತು ವಿವಿಧ ಭಾಷೆಗಳನ್ನಾಡುವ ವರವನ್ನೂ ಅವರವರಿಗೆ ಬೇರೆ ಬೇರೆಯಾಗಿ ಕೊಟ್ಟಿದ್ದಾನೆ.

[29] ಎಲ್ಲರು ಅಪೊಸ್ತಲರೋ? ಎಲ್ಲರು ಪ್ರವಾದಿಗಳೋ? ಎಲ್ಲರೂ ಬೋಧಕರೋ? ಎಲ್ಲರೂ ಮಹತ್ಕಾರ್ಯಗಳನ್ನು ಮಾಡುವವರೋ?

[30] ರೋಗ ವಾಸಿಮಾಡುವ ವರಗಳು ಎಲ್ಲರಿಗೂ ಉಂಟೋ? ಎಲ್ಲರೂ ಅನ್ಯಭಾಷೆಗಳನ್ನಾಡುವರೋ? ಅನ್ಯಭಾಷೆಗಳ ಅರ್ಥವನ್ನು ಹೇಳುವುದಕ್ಕೆ ಎಲ್ಲರಿಗೂ ಶಕ್ತಿಯುಂಟೋ?

[31] ಇವುಗಳಲ್ಲಿ ಶ್ರೇಷ್ಠ ವರಗಳನ್ನು ಆಸಕ್ತಿಯಿಂದ ಅಪೇಕ್ಷಿಸಿರಿ. ಇನ್ನೂ ಸರ್ವೋತ್ತಮವಾದ ಮಾರ್ಗವೊಂದನ್ನು ನಿಮಗೆ ತೋರಿಸುತ್ತೇನೆ.

1 ಕೊರಿಂಥದವರಿಗೆ — Chapters