[1] ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿ, ಅದರಲ್ಲಿ ನಿಂತಿದ್ದೀರಿ.
[2] ನಾನು ನಿಮಗೆ ಸಾರಿದ ಸುವಾರ್ತೆಯನ್ನು ನೀವು ದೃಢವಾಗಿ ಹಿಡಿದುಕೊಂಡರೆ ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ ನಿಮ್ಮ ನಂಬಿಕೆಯು ನಿರರ್ಥಕವಾಗುತ್ತದೆ.
[3] ನಾನು ಸಹ ಕಲಿತುಕೊಂಡ ಮೊದಲನೆಯ ಸಂಗತಿಗಳೊಳಗೆ ಪ್ರಮುಖವಾದ ಸಂಗತಿಯನ್ನೇ ನಿಮಗೆ ತಿಳಿಸಿದ್ದೇನೆ ಅದೇನೆಂದರೆ ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು;
[4] ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.
[5] ಅನಂತರ ಕೇಫನಿಗೂ ತರುವಾಯ ಆತನು ಹನ್ನೆರಡು ಜನ ಅಪೊಸ್ತಲರಿಗೂ ಕಾಣಿಸಿಕೊಂಡನು.
[6] ತರುವಾಯ ಒಂದೇ ಸಮಯದಲ್ಲಿ ಐನೂರಕ್ಕಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನವರೆಗೂ ಜೀವಿಸುತ್ತಿದ್ದಾರೆ, ಆದರೆ ಕೆಲವರು ನಿದ್ರೆ ಹೋಗಿದ್ದಾರೆ.
[7] ತರುವಾಯ ಆತನು ಯಾಕೋಬನಿಗೂ ಅನಂತರ ಎಲ್ಲಾ ಅಪೊಸ್ತಲರಿಗೂ ಕಾಣಿಸಿಕೊಂಡನು.
[8] ಕಟ್ಟಕಡೆಗೆ, ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.
[9] ನಾನಂತೂ ಅಪೊಸ್ತಲರಲ್ಲಿ ಕನಿಷ್ಠನು; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ.
[10] ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.
[11] ಆದ್ದರಿಂದ ನಾನಾದರೇನು ಅಥವಾ ಅವರಾದರೇನು, ಈ ರೀತಿಯಾಗಿ ನಾವೆಲ್ಲರೂ ಸುರ್ವಾತೆಯನ್ನು ಸಾರಿದ್ದೇವೆ; ಅದನ್ನು ನೀವು ನಂಬಿದಿರಿ.
[12] ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರುತ್ತಿರುವಲ್ಲಿ, ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವುದಾದರೂ ಹೇಗೆ?
[13] ಸತ್ತವರಿಗೆ ಪುನರುತ್ಥಾನವಿಲ್ಲವೆಂಬುದು ನಿಜವಾಗಿದ್ದರೆ ಕ್ರಿಸ್ತನು ಸಹ ಎದ್ದುಬರಲಿಲ್ಲ.
[14] ಕ್ರಿಸ್ತನೂ ಎದ್ದುಬರಲಿಲ್ಲವಾದರೆ ನಮ್ಮ ಬೋಧನೆಯು ವ್ಯರ್ಥ ಮತ್ತು ನಿಮ್ಮ ನಂಬಿಕೆಯು ಸಹ ವ್ಯರ್ಥವಾದದ್ದು.
[15] ಇದಲ್ಲದೆ ಸತ್ತವರು ಎದ್ದುಬರುವುದಿಲ್ಲವೆಂಬುದು ನಿಜವಾಗಿದ್ದ ಪಕ್ಷದಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ; ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೆವು.
[16] ಸತ್ತವರು ಎದ್ದು ಬರುವುದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ.
[17] ಕ್ರಿಸ್ತನು ಎದ್ದುಬರಲಿಲ್ಲವಾದರೆ ನಿಮ್ಮ ನಂಬಿಕೆಯು ನಿರರ್ಥಕವಾಗಿದೆ, ಹಾಗೂ ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.
[18] ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆಹೋದವರು ನಾಶವಾದರು ಎಂದರ್ಥ.
[19] ಕ್ರಿಸ್ತನಲ್ಲಿ ನಮಗಿರುವ ನಿರೀಕ್ಷೆಯು ಕೇವಲ ಈ ಬದುಕಿಗೆ ಮಾತ್ರ ಸೀಮಿತವಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ಹೀನರಾಗುತ್ತೇವೆ.
[20] ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ ಪ್ರಥಮಫಲವಾದನು.
[21] ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ.
[22] ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು.
[23] ಆದರೆ ಪ್ರತಿಯೊಬ್ಬನು ತನ್ನ ಕ್ರಮದಲ್ಲಿ ಎದ್ದುಬರುವನು. ಕ್ರಿಸ್ತನು ಪ್ರಥಮಫಲವಾದನು; ತರುವಾಯ ಕ್ರಿಸ್ತನಿಗೆ ಸೇರಿದವರು ಆತನ ಬರೋಣದಲ್ಲಿ ಜೀವವುಳ್ಳವರಾಗಿ ಎದ್ದು ಬರುವರು.
[24] ಅನಂತರ ಆತನು ಎಲ್ಲಾ ದೊರೆತನವನ್ನೂ, ಎಲ್ಲಾ ಅಧಿಕಾರವನ್ನೂ ಮತ್ತು ಬಲವನ್ನೂ ನಿರ್ಮೂಲಗೊಳಿಸಿ ತಂದೆ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.
[25] ಯಾಕೆಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ.
[26] ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ.
[27] “ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನಮಾಡಿದ್ದಾನೆ.” ಆದರೆ “ಸಮಸ್ತವೂ ಆತನಿಗೆ ಅಧೀನಮಾಡಲ್ಪಟ್ಟಿದೆ” ಎಂದು ಹೇಳುವಾಗ ಸಮಸ್ತವನ್ನು ಅಧೀನಮಾಡಿಕೊಟ್ಟಾತನು ಅದರಲ್ಲಿ ಸೇರಲಿಲ್ಲವೆಂಬುದು ಸ್ಪಷ್ಟವಾಗಿದೆ.
[28] ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿ ಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.
[29] ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವುದೇ ಇಲ್ಲ ಎನ್ನುವುದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.
[30] ನಾವು ಸಹ ಯಾಕೆ ಪ್ರತಿ ಗಳಿಗೆಯಲ್ಲಿಯೂ ಭಯದಲ್ಲಿದ್ದೇವೆ?
[31] ಪ್ರಿಯರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತಾಗಿ ನನಗಿರುವ ಹೆಮ್ಮೆಯ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.
[32] ನಾನು ಎಫೆಸದಲ್ಲಿ ಮೃಗ ಯುದ್ಧ ಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವುದಿಲ್ಲವಾದರೆ, ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.
[33] ಮೋಸಹೋಗಬೇಡಿರಿ; “ಕೆಟ್ಟ ಸಹವಾಸವು ಸದಾಚಾರವನ್ನು ಕೆಡಿಸುತ್ತವೆ.”
[34] ಗಂಭೀರವಾಗಿ ಯೋಚಿಸಿರಿ! ನೀತಿವಂತರಾಗಿ ಎಚ್ಚರದಿಂದಿರಿ. ಪಾಪಮಾಡಬೇಡಿರಿ. ಕೆಲವರಿಗೆ ದೇವರ ಕುರಿತಾಗಿ ಜ್ಞಾನವೇ ಇಲ್ಲ; ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ.
[35] “ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಎಂಥ ದೇಹದಿಂದ ಎದ್ದುಬರುತ್ತಾರೆ?” ಎಂದು ಯಾರಾದರೂ ಪ್ರಶ್ನಿಸಬಹುದು.
[36] ಮೂರ್ಖನೇ; ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ.
[37] ನೋಡು; ಒಂದು ವೇಳೆ ಗೋದಿಯಕಾಳನ್ನಾಗಲಿ ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಬೆಳೆಯಬೇಕಾದ ಗಿಡವನ್ನು ಬಿತ್ತುವುದಿಲ್ಲ.
[38] ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೂ ಅದಕ್ಕೆ ತಕ್ಕ ದೇಹವನ್ನು ಕೊಡುತ್ತಾನೆ.
[39] ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.
[40] ಇದಲ್ಲದೆ ಸ್ವರ್ಗೀಯ ಶರೀರಗಳುಂಟು, ಭೂಲೋಕದ ಶರೀರಗಳುಂಟು, ಆದರೆ ಪರಲೋಕದ ಶರೀರಗಳ ಮಹಿಮೆ ಬೇರೆ, ಭೂಲೋಕದ ಶರೀರಗಳ ಮಹಿಮೆ ಬೇರೆ.
[41] ಸೂರ್ಯನ ತೇಜಸ್ಸು ಒಂದು ವಿಧವಾದರೆ, ಚಂದ್ರನ ಪ್ರಕಾಶವೇ ಮತ್ತೊಂದು ವಿಧ, ಹಾಗೆಯೇ ನಕ್ಷತ್ರ ನಕ್ಷತ್ರಗಳ ಪ್ರಕಾಶವು ಸಹ ವೈವಿಧ್ಯವಾದುದು.
[42] ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು.
[43] ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಪುನರುತ್ಥಾನಹೊಂದುವುದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಹೊಂದಿ ಪುನರುತ್ಥಾನಹೊಂದುವುದು;
[44] ಬಿತ್ತಿದ್ದು ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಪುನರುತ್ಥಾನಹೊಂದುವಂಥದ್ದು ಆತ್ಮೀಕ ದೇಹ. ಪ್ರಾಕೃತದೇಹ ಇರುವುದಾದರೆ ಆತ್ಮೀಕ ದೇಹವೂ ಇರುವುದು ಸತ್ಯ.
[45] “ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. ಕಡೆ ಆದಾಮನಾದರೋ ಜೀವ ಕೊಡುವ ಆತ್ಮನಾದನು.
[46] ಆತ್ಮೀಕವಾದದ್ದು ಮೊದಲು ಬಂದದ್ದಲ್ಲಾ, ಪ್ರಾಕೃತವಾದದ್ದು ಮೊದಲನೆಯದು; ಅನಂತರ ಆತ್ಮೀಕವಾದದ್ದು.
[47] ಮೊದಲನೆಯ ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.
[48] ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ.
[49] ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು.
[50] ಸಹೋದರರೇ, ನಾನು ಹೇಳುವುದೇನಂದರೆ, ರಕ್ತ ಮಾಂಸಗಳು ದೇವರ ರಾಜ್ಯವನ್ನು ವಶಪಡಿಸಿಕೊಳ್ಳಲಾರದು; ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.
[51] ನೋಡಿರಿ! ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ, ನಾವೆಲ್ಲರೂ ಸಾಯುವುದಿಲ್ಲ, ಮಾರ್ಪಡುವೆವು.
[52] ಕಡೆ ತುತ್ತೂರಿಯ ಧ್ವನಿಯು ಮೊಳಗುವಲ್ಲಿ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರೊಳಗಾಗಿ ನಾವೆಲ್ಲರೂ ಮಾರ್ಪಡುವೆವು. ಹೌದು, ತುತ್ತೂರಿಯು ಮೊಳಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ರೂಪಾಂತರ ಹೊಂದುವೆವು.
[53] ನಶಿಸುವಂಥ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವುದೂ, ಮರಣಕ್ಕೆ ಅಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದೂ ಅಗತ್ಯವಾಗಿದೆ.
[54] ನಶಿಸಿಹೋಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವುದು.
[55] “ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?”
[56] ಸಾವಿನ ವಿಷಕೊಂಡಿ ಪಾಪವೇ; ಪಾಪದ ಶಕ್ತಿಯ ಆಧಾರವು ಧರ್ಮಶಾಸ್ತ್ರವಿಧಿಗಳೇ.
[57] ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸದಾಕಾಲ ಮಹಿಮೆಯುಂಟಾಗಲಿ.
[58] ಆದ್ದರಿಂದ, ನನ್ನ ಸಹೋದರರೇ, ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿರಿ. ಯಾಕೆಂದರೆ ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ. ಅದನ್ನು ತಿಳಿದು ಕರ್ತನ ಕೆಲಸವನ್ನು ಸದಾ ಅತ್ಯಾಸಕ್ತಿಯಿಂದಲೂ ಮತ್ತು ನಿರಂತರ ಶ್ರದ್ಧೆಯುಳ್ಳವರಾಗಿಯೂ ಮಾಡುವವರಾಗಿರಿ.