[1] ಪ್ರತಿನಿತ್ಯ ಪ್ರೀತಿಯಿಂದ ಜೀವಿಸಲು ಆಶಿಸಿರಿ ಮತ್ತು ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅದರೊಳಗೂ ವಿಶೇಷವಾಗಿ ಪ್ರವಾದನಾ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ.
[2] ಅನ್ಯಭಾಷೆಗಳನ್ನಾಡುವವನು ದೇವರ ಸಂಗಡ ಮಾತನಾಡುತ್ತಾನೆಯೇ ಹೊರತು ಮನುಷ್ಯರ ಸಂಗಡ ಅಲ್ಲ. ಅವನು ಆತ್ಮ ಪ್ರೇರಿತನಾಗಿ ಗುಪ್ತ ವಿಷಯಗಳನ್ನಾಡುತ್ತಾನೆ. ಅವನು ಮಾತನಾಡುವ ಮಾತುಗಳನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ.
[3] ಆದರೆ ಪ್ರವಾದಿಸುವವನಾದರೋ, ಅವನ ಮಾತುಗಳಿಂದ ಭಕ್ತಿವೃದ್ಧಿಯನ್ನೂ, ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟುಮಾಡುವವು.
[4] ಅನ್ಯಭಾಷೆಗಳನ್ನಾಡುವವನು ತನಗೆ ತಾನೇ ಆತ್ಮೀಕ ವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ, ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟು ಮಾಡುತ್ತಾನೆ.
[5] ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ನಾನು ಅಪೇಕ್ಷಿಸಿದರೂ, ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬುದೆ ನನ್ನಿಷ್ಟವಾಗಿದೆ. ಅನ್ಯಭಾಷೆಗಳನ್ನಾಡುವವನು ಸಭೆಯು ಅಭಿವೃದ್ಧಿಯಾಗುವುದಕ್ಕಾಗಿ ಆ ಅನ್ಯಭಾಷೆಯ ಅರ್ಥವನ್ನು ವಿವೇಚಿಸಿ ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠನು.
[6] ಆದರೆ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರು ತಿಳಿಸಿದ್ದನ್ನು ಪ್ರಕಟಿಸದೆ, ಜ್ಞಾನವಾಕ್ಯಗಳನ್ನಾಡದೆ, ಪ್ರವಾದನೆಯನ್ನು ಹೇಳದೆ, ಉಪದೇಶಮಾಡದೆ, ಅನ್ಯಭಾಷೆಗಳನ್ನು ಮಾತ್ರ ಮಾತನಾಡುವವನಾಗಿದ್ದರೆ ನನ್ನಿಂದ ನಿಮಗೇನು ಪ್ರಯೋಜನವಾದೀತು?
[7] ಕೊಳಲು, ವೀಣೆ ಮೊದಲಾದ ನಿರ್ಜೀವವಾದ್ಯಗಳು ನಾದಗಳಲ್ಲಿ ಯಾವ ವ್ಯತ್ಯಾಸವನ್ನೂ ತೋರಿಸದಿದ್ದರೆ; ನುಡಿಸಿದ ವಾದ್ಯ ಇಂಥದ್ದೇ ಎಂದು ಹೇಗೆ ತಿಳಿಯುವುದು?
[8] ತುತ್ತೂರಿಯು ಅಸ್ಪಷ್ಟ ಶಬ್ದವನ್ನು ಮೊಳಗಿಸಿದರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು?
[9] ಹಾಗೆಯೇ ನೀವೂ ಸಹ ಸ್ಪಷ್ಟವಾದ ಭಾಷೆಯನ್ನು ನಿಮ್ಮ ಬಾಯಿಂದ ಮಾತನಾಡದೆ ಹೋದರೆ, ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿದುಕೊಳ್ಳಲು ಸಾಧ್ಯ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.
[10] ಲೋಕದಲ್ಲಿ ಅನೇಕ ಭಾಷೆಗಳಿವೆ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದವುಗಳಿಲ್ಲ.
[11] ಭಾಷೆಯ ಅರ್ಥವು ನನಗೆ ತಿಳಿಯದಿದ್ದರೆ ಮಾತನಾಡುವವನಿಗೆ ನಾನು ಪರದೇಶದವನಂತಿರುವೆನು; ಮಾತನಾಡುವವನು ನನಗೆ ಪರದೇಶಿಯವನಂತಿರುತ್ತಾನೆ.
[12] ಹಾಗೆಯೇ ನೀವು ಆತ್ಮೀಕವಾದ ವರಗಳಿಗಾಗಿ ಅತ್ಯಾಸಕ್ತಿಯುಳ್ಳವರಾಗಿರುವುದರಿಂದ ಸಭೆಗೆ ಹೆಚ್ಚಿನ ಅಭಿವೃದ್ಧಿ ಉಂಟಾಗುವ ಹಾಗೆ ತವಕಪಡಿರಿ.
[13] ಆದ್ದರಿಂದ ಅನ್ಯಭಾಷೆಯನ್ನಾಡುವವನು ತನಗೆ ಅದರ ಅರ್ಥವನ್ನು ವಿವೇಚಿಸಿ ಹೇಳುವ ವರಕ್ಕಾಗಿ ದೇವರನ್ನು ಪ್ರಾರ್ಥಿಸಲಿ.
[14] ಯಾಕೆಂದರೆ ನಾನು ಅನ್ಯಭಾಷೆಯಲ್ಲಿ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುತ್ತಿರುತ್ತದೆ. ಆದರೆ ನನ್ನ ಬುದ್ಧಿಯು ನಿಷ್ಫಲವಾಗಿರುವುದು.
[15] ಆದ್ದರಿಂದ ನಾನಾದರೋ ಆತ್ಮನಿಂದಲೂ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು; ಆತ್ಮನಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು.
[16] ನೀನು ಆತ್ಮನಿಂದ ಮಾತ್ರ ದೇವರ ಸ್ತೋತ್ರ ಮಾಡಿದರೆ ನೀನು ಹೇಳಿದ್ದು ತಿಳಿಯದೆ ಇರುವ ಇನ್ನೊಬ್ಬನು ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು “ಆಮೆನ್” ಎಂದು ಹೇಗೆ ಹೇಳಬಲ್ಲನು? ನೀನು ಮಾತನಾಡಿದು ಅವನಿಗೆ ತಿಳಿಯುವುದಿಲ್ಲವಲ್ಲಾ?
[17] ನೀನು ಎಷ್ಟು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡಿದರೂ, ಆದರಿಂದ ಬೇರೊಬ್ಬನು ಭಕ್ತಿವೃದ್ಧಿಹೊಂದುವುದಿಲ್ಲ.
[18] ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರನ್ನು ಕೊಂಡಾಡುತ್ತೇನೆ.
[19] ಆದರೂ ಸಭೆಯಲ್ಲಿ ಅನ್ಯಭಾಷೆಯಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ ಇತರರಿಗೆ ಉಪದೇಶಮಾಡುವುದು ನನಗೆ ಉತ್ತಮವೆನಿಸುತ್ತದೆ.
[20] ಸಹೋದರರೇ, ಬಾಲಕರಂತೆ ಆಲೋಚಿಸಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಂತಿರಿ; ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಿ.
[21] “ಅನ್ಯಭಾಷೆಯವರ ಮೂಲಕವಾಗಿಯೂ ಅನ್ಯದೇಶಸ್ಥರ ಬಾಯಿಂದಲೂ ನಾನು ಈ ಜನರ ಸಂಗಡ ಮಾತನಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಗೊಡುವುದಿಲ್ಲವೆಂದು ಕರ್ತನು ಹೇಳುತ್ತಾನೆಂಬುದಾಗಿ” ಧರ್ಮಶಾಸ್ತ್ರದಲ್ಲಿ ಬರೆದಿದೆ.
[22] ಆದ್ದರಿಂದ ಅನ್ಯಭಾಷೆಗಳನ್ನಾಡುವುದು ಯೇಸುವನ್ನು ನಂಬದವರಿಗೆ ಸೂಚನೆಯಾಗಿದೆಯೇ ಹೊರತು ಯೇಸುವನ್ನು ನಂಬುವವರಿಗೆ ಸೂಚನೆಯಲ್ಲವೆಂದು ನಾವು ತಿಳಿದುಕೊಳ್ಳಬೇಕು. ಆದರೆ ಪ್ರವಾದನೆಯು ಯೇಸುವನ್ನು ನಂಬದವರಿಗಾಗಿಯಲ್ಲ ನಂಬುವವರಿಗಾಗಿಯೇ ಇದೆ.
[23] ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಸೇರಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ ಈ ಭಾಷೆಯನ್ನು ತಿಳಿಯದ ಬೇರೆಯವರು ಅಥವಾ ಕ್ರಿಸ್ತ ನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ, ನಿಮಗೆ ಹುಚ್ಚು ಹಿಡಿದಿದೆ ಎಂದು ಹೇಳುವುದಿಲ್ಲವೋ?
[24] ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತ ನಂಬಿಕೆಯಿಲ್ಲದವನಾಗಲಿ, ಅಪರಿಚಿತನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು,
[25] ಅವನ ಹೃದಯದ ರಹಸ್ಯಗಳು ಬಯಲಾಗುವವು; ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬುದನ್ನು ಘೋಷಿಸುವನು.
[26] ಹಾಗಾದರೇನು, ಸಹೋದರರೇ? ನೀವು ಸಭೆಯಲ್ಲಿ ಸೇರಿಬರುವಾಗ ಒಬ್ಬನು ಹಾಡುವುದೂ, ಒಬ್ಬನು ಉಪದೇಶಮಾಡುವುದೂ, ಒಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವುದೂ, ಇನ್ನೂ ಒಬ್ಬನು ಅನ್ಯಭಾಷೆಯನ್ನಾಡುವುದೂ, ಒಬ್ಬನು ಅದರ ಅರ್ಥವನ್ನು ಹೇಳುವುದುಂಟು. ನೀವು ಏನು ಮಾಡಿದರೂ ಸಭೆಯ ಭಕ್ತಿವೃದ್ಧಿಗಾಗಿಯೇ ಮಾಡಿರಿ.
[27] ಅನ್ಯಭಾಷೆಗಳನ್ನಾಡುವುದಾದರೆ ಇಬ್ಬರು ಅಥವಾ ಅವಶ್ಯವಿದ್ದರೆ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತನಾಡಬೇಕು;
[28] ಮತ್ತು ಒಬ್ಬನು ಅದರ ಅರ್ಥವನ್ನು ಹೇಳಬೇಕು. ಅರ್ಥವನ್ನು ಹೇಳುವವನಿಲ್ಲದಿದ್ದರೆ ಅನ್ಯಭಾಷೆಗಳನ್ನಾಡುವವನು ಸಭೆಯಲ್ಲಿ ಸುಮ್ಮನಿರಲಿ; ತನ್ನೊಂದಿಗೂ ಮತ್ತು ದೇವರೊಂದಿಗೂ ಮಾತನಾಡಿಕೊಳ್ಳಲಿ.
[29] ಇಬ್ಬರು ಮೂವರು ಪ್ರವಾದಿಗಳು ಮಾತನಾಡಲಿ, ಮಿಕ್ಕಾದವರು ವಿವೇಚನೆಯಿಂದ ಕೇಳಲಿ.
[30] ಕುಳಿತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮನಾಗಲಿ
[31] ನೀವೆಲ್ಲರೂ ಒಬ್ಬೊಬ್ಬರಾಗಿ ಪ್ರವಾದಿಸಿದರೆ ಎಲ್ಲರೂ ಕಲಿತುಕೊಳ್ಳುವರು, ಎಲ್ಲರೂ ಪ್ರೋತ್ಸಾಹ ಹೊಂದುವರು.
[32] ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿರುತ್ತವೆ.
[33] ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.
[34] ದೇವಜನರ ಎಲ್ಲಾ ಸಭೆಗಳಲ್ಲಿರುವ ಪ್ರಕಾರ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಬೇಕು; ಮಾತನಾಡಲು ಅವರಿಗೆ ಅವಕಾಶವಿಲ್ಲ; ಅವರು ಅಧೀನರಾಗಿರಬೇಕು; ಧರ್ಮಶಾಸ್ತ್ರದಲ್ಲಿಯೂ ಹೀಗೆ ಹೇಳಿದೆಯಲ್ಲಾ.
[35] ಅವರು ಏನಾದರೂ ತಿಳಿದು ಕೊಳ್ಳುವುದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಿಕೊಳ್ಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ಅಪಮಾನಕರವಾದದ್ದು.
[36] ದೇವರ ವಾಕ್ಯವು ನಿಮ್ಮಿಂದಲೇ ಹೊರಟಿತೋ? ನಿಮಗೆ ಮಾತ್ರವೇ ಬಂದಿತೋ?
[37] ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ ಆತ್ಮೀಕನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವುದೆಲ್ಲಾ ಕರ್ತನ ಆಜ್ಞೆ ಎಂದು ಚೆನ್ನಾಗಿ ತಿಳಿದುಕೊಳ್ಳಲಿ.
[38] ಯಾವನಾದರೂ ತನಗೆ ಇದು ಗೊತ್ತಿಲ್ಲವೆಂದರೆ ಅವನು ಗುರುತಿಲ್ಲದವನಂತೆ ಇರಲಿ.
[39] ಆದಕಾರಣ ನನ್ನ ಸಹೋದರರೇ, ಪ್ರವಾದನಾವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ, ಮತ್ತು ಅನ್ಯಭಾಷೆಗಳನ್ನಾಡುವವರಿಗೆ ಅಡ್ಡಿಮಾಡಬೇಡಿರಿ.
[40] ಆದರೆ ಎಲ್ಲವೂ ಯೋಗ್ಯವಾಗಿಯೂ ಹಾಗೂ ಕ್ರಮದಿಂದಲೂ ನಡೆಯಲಿ.