[1] ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ಸಹೋದರನಾದ ತಿಮೊಥೆಯನೂ ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಅಖಾಯ ಸೀಮೆಯಲ್ಲಿ ಇರುವ ದೇವಜನರೆಲ್ಲರಿಗೂ ಬರೆಯುವುದೇನಂದರೆ,
[2] ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು, ಶಾಂತಿಯು ಉಂಟಾಗಲಿ.
[3] ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕನಿಕರವುಳ್ಳ ತಂದೆಯೂ ಸಕಲ ವಿಧವಾಗಿ ಸಂತೈಸುವ ದೇವರೂ ಆಗಿದ್ದು,
[4] ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುವವನಾಗಿದ್ದಾನೆ. ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವುದಕ್ಕೆ ಶಕ್ತರಾಗುತ್ತೇವೆ.
[5] ಏಕೆಂದರೆ ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಕ್ರಿಸ್ತನ ಮೂಲಕವಾಗಿ ಹೆಚ್ಚಾದ ಆದರಣೆಯೂ ನಮಗೆ ದೊರೆಯುತ್ತದೆ.
[6] ನಾವು ಕಷ್ಟಗಳನ್ನನುಭವಿಸುವುದರಿಂದ ನಿಮಗೆ ಆದರಣೆಯೂ, ರಕ್ಷಣೆಯೂ ಉಂಟಾಗುತ್ತದೆ. ನಾವು ಸಮಾಧಾನದಿಂದಿರುವುದಾದರೆ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ.
[7] ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರವೇ ಆದರಣೆಯೂ ಪಾಲುಗಾರರಾಗಿದ್ದೀರೆಂದು ತಿಳಿದಿರುವುದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ.
[8] ಸಹೋದರರೇ, ಆಸ್ಯ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು.
[9] ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು.
[10] ಆತನು ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ತಪ್ಪಿಸುವನು. ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು.
[12] ನಾವು ಕೇವಲ ಮನುಷ್ಯಜ್ಞಾನವನ್ನು ಬಳಸದೇ ದೇವರ ಕೃಪೆಯನ್ನು ಆಶ್ರಯಿಸಿ ಪರಿಶುದ್ಧರಾಗಿಯೂ, ಪ್ರಾಮಾಣಿಕರಾಗಿಯೂ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆದುಕೊಂಡೆವೆಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಇದೇ ನಮಗಿರುವ ಹೆಮ್ಮೆ.
[13] ನೀವು ನಮ್ಮ ಪತ್ರಿಕೆಗಳಲ್ಲಿ ಓದಿ ಅರ್ಥಮಾಡಿಕೊಂಡ ಸಂಗತಿಗಳನ್ನೇ ಹೊರತು ಬೇರೆ ಯಾವುದನ್ನು ನಾವು ನಿಮಗೆ ಬರೆಯಲಿಲ್ಲ.
[14] ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನೀವು ನಮ್ಮ ಅಭಿಮಾನಕ್ಕೆ ಕಾರಣವಾದಂತೆ ನಾವು ನಿಮ್ಮ ಅಭಿಮಾನಕ್ಕೆ ಕಾರಣರಾಗಿರುವೆವು ಎಂದು ನೀವು ಒಪ್ಪಿಕೊಳ್ಳುತ್ತೀರಿ.
[15] ನಾನು ಇಂಥ ಭರವಸವುಳ್ಳವನಾಗಿದ್ದರಿಂದ ನೀವು ಎರಡನೆಯ ಸಾರಿ ಕೃಪಾರ್ಶೀವಾದವನ್ನು ಪಡೆದುಕೊಳ್ಳುವಂತೆ ನಿಮ್ಮ ಬಳಿಗೆ ಮೊದಲೇ ಬರಬೇಕೆಂದಿದ್ದೆನು.
[16] ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು.
[17] ಹೀಗೆ ಯೋಚಿಸಿದ್ದರಿಂದ ನಾನು ಚಂಚಲಚಿತ್ತನಾಗಿದ್ದೇನೋ? ಕೇವಲ ಪ್ರಾಪಂಚಿಕ ಗುಣಮಟ್ಟಕ್ಕೆ ಯೋಚಿಸಿ ಈ ಕ್ಷಣ “ಹೌದು” ಮರು ಕ್ಷಣ “ಇಲ್ಲ” ಎಂದು ಹೇಳುವವನಂತಿದ್ದೇನೋ? ಎಂದಿಗೂ ಇಲ್ಲ.
[18] ದೇವರು ನಂಬಿಗಸ್ತನಾಗಿರುವಂತೆ ನಾವು ನಿಮಗೆ ಹೇಳುವ ಮಾತು ಒಂದು ಸಾರಿ “ಹೌದೆಂದು” ಮತ್ತೊಂದು ಸಾರಿ “ಇಲ್ಲವೆಂದು” ಆಗಿರಲು ಸಾಧ್ಯವಿಲ್ಲ. ಅದಕ್ಕೆ ನಂಬಿಗಸ್ತನಾದ ದೇವರೇ ಸಾಕ್ಷಿಯಾಗಿದ್ದಾನೆ.
[19] ನಾನೂ, ಸಿಲ್ವಾನನೂ, ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಈ ಕ್ಷಣ “ಹೌದು” ಮರುಕ್ಷಣ “ಇಲ್ಲ” ಎಂದು ಹೇಳುವವನಲ್ಲ. ಆತನಲ್ಲಿ ಹೌದೆಂಬುದೇ ನೆಲೆಗೊಂಡಿದೆ.
[20] ಆದ್ದರಿಂದ ದೇವರ ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತನಲ್ಲಿ “ಹೌದು” ಎಂಬುದೇ ಆಗಿದೆ. ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ಆತನ ಮೂಲಕವಾಗಿ ನಾವು “ಆಮೆನ್” ಎಂದು ಹೇಳುತ್ತೇವೆ.
[21] ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ.
[22] ಆತನು ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಖಾತರಿಯಾಗಿ ಅನುಗ್ರಹಿಸಿದ್ದಾನೆ.
[23] ನಿಮಗೆ ತೊಂದರೆ ಆಗಬಾರದೆಂದೇ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ.
[24] ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ.