[1] ಜನರು ನಮ್ಮನ್ನು ಕ್ರಿಸ್ತನ ಸೇವಕರೆಂತಲೂ ದೇವರ ಗುಪ್ತವಾಗಿದ್ದ ಸತ್ಯಾರ್ಥಗಳ ವಿಷಯದಲ್ಲಿ ದೇವರ ಮನೆವಾರ್ತೆಯವರೆಂತಲೂ ಪರಿಗಣಿಸಲಿ.
[2] ಹೀಗಿರಲು ನಿರ್ವಾಹಕರು ನಂಬಿಗಸ್ತರಾಗಿ ಕಂಡುಬರುವದು ಅಗತ್ಯವಲ್ಲವೇ.
[3] ನನಗಾದರೂ ನಿಮ್ಮಿಂದಾಗಲಿ ಅಥವಾ ಮನುಷ್ಯರು ಮಾಡುವ ವಿಚಾರಣೆಯಾಗಲಿ ತೀರಾ ಲಘುವೆನಿಸಿದೆ. ನಾನೂ ನನ್ನನ್ನು ನ್ಯಾಯತೀರ್ಪು ಮಾಡಿಕೊಳ್ಳುವುದಿಲ್ಲ.
[4] ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಿಗೆ ತೋರುವುದಿಲ್ಲವಾದರೂ ನಾನು ನಿರ್ದೋಷಿಯೆಂದು ನಿರ್ಣಯಿಸುವಂತಿಲ್ಲ. ನನ್ನನ್ನು ನ್ಯಾಯವಿಚಾರಣೆ ಮಾಡುವವನು ಕರ್ತನೇ.
[5] ಆದ್ದರಿಂದ ಕರ್ತನು ಬರುವ ಕಾಲಕ್ಕಿಂತ ಮುಂಚೆ ಯಾವುದನ್ನು ಕುರಿತು ನ್ಯಾಯತೀರ್ಪುಮಾಡಬೇಡಿರಿ. ಆತನು ಕತ್ತಲೆಯಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು. ಹೃದಯದ ಆಲೋಚನೆಗಳನ್ನು ಪ್ರಕಟಪಡಿಸುವನು. ಆ ಕಾಲದಲ್ಲಿ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ದೊರಕುವುದು.
[6] ಪ್ರಿಯರೇ, ನಾನು ನಿಮಗೋಸ್ಕರವಾಗಿ ನನ್ನಗೂ ಅಪೊಲ್ಲೋಸನಿಗೂ ಈ ನಿಯಮಗಳನ್ನೆಲ್ಲಾ ಅನ್ವಯಿಸಿಕೊಂಡು ಹೇಳಿದ್ದೇನೆ. ಆದ್ದರಿಂದ ನೀವು “ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಬಾರದು,” ಎಂಬ ಈ ವಾಕ್ಯದ ಅರ್ಥವನ್ನು ನಮ್ಮಿಂದ ಕಲಿತುಕೊಂಡು, ನಿಮ್ಮಲ್ಲಿ ಯಾವನಾದರೂ ಒಬ್ಬನನ್ನು ವಿರೋಧಿಸಿ ಮತ್ತೊಬ್ಬನ ಪಕ್ಷವನ್ನು ಹಿಡಿದು ಉಬ್ಬಿಕೊಳ್ಳಬಾರದು ಎಂಬುದಕ್ಕಾಗಿದೆ.
[7] ನಿನ್ನನ್ನು ಇತರರಿಗಿಂತಲೂ ಶ್ರೇಷ್ಠನನ್ನಾಗಿ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದಿದ್ದಲ್ಲವೆಂಬಂತೆ ಯಾಕೆ ಕೊಚ್ಚಿಕೊಳ್ಳುತ್ತೀ?
[8] ಇಷ್ಟು ಬೇಗನೆ ನೀವು ತೃಪ್ತರಾದಿರಿ. ಇಷ್ಟುಬೇಗನೆ ಐಶ್ವರ್ಯವಂತರಾದಿರಿ. ನಮ್ಮ ಸಹಾಯವಿಲ್ಲದೆ ಅರಸರಂತೆ ಆದಿರಿ. ನೀವು ನಿಜವಾಗಿ ಆಳುವವರಾಗಿದ್ದರೇ ನನಗೆ ಆನಂದವಾಗುತ್ತಿತ್ತು. ಆಗ ನಾವು ಸಹ ನಿಮ್ಮೊಂದಿಗೆ ಆಳುತ್ತಿದ್ದೇವು.
[9] ಹಾಗಾಗದೆ ದೇವರು ಅಪೊಸ್ತಲರಾದ ನಮ್ಮನ್ನು ಮರಣದ ತೀರ್ಪು ಹೊಂದಿದವರಂತೆ ಕಡೆಯವರಾಗಿ ತೋರಿಸಿದ್ದಾನೆಂದು ನನಗೆ ತೋಚುತ್ತದೆ. ನಾವು ಲೋಕದಲ್ಲಿ ದೇವದೂತರಿಗೂ, ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ಹಾಸ್ಯಾಸ್ಪದವಾದ ನೋಟವಾದೆವು.
[10] ನಾವಂತೂ ಕ್ರಿಸ್ತನ ನಿಮಿತ್ತ ಮೂರ್ಖರಾಗಿದ್ದೇವೆ. ನೀವೋ ಕ್ರಿಸ್ತನಲ್ಲಿ ಬುದ್ಧಿವಂತರಾಗಿದ್ದೀರಿ. ನಾವು ಬಲಹೀನರು, ನೀವು ಬಲಿಷ್ಠರು, ನೀವು ಗೌರವವುಳ್ಳವರು, ನಾವು ನಿಂದಿಸಲ್ಪಟ್ಟವರು.
[11] ಈ ಗಳಿಗೆಯವರೆಗೂ ನಾವು ಹಸಿದವರೂ, ಬಾಯಾರಿಕೆಯುಳ್ಳವರೂ, ವಸ್ತ್ರವಿಲ್ಲದವರೂ, ಪೆಟ್ಟು ತಿನ್ನುವವರೂ ಮನೆಯಿಲ್ಲದವರೂ,
[12] ಸ್ವಂತ ಕೈಗಳಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸುವವರನ್ನು ಆಶೀರ್ವದಿಸುತ್ತೇವೆ. ಜನರು ಹಿಂಸಿಸುವಾಗ ಸಹಿಸಿಕೊಳ್ಳುತ್ತೇವೆ.
[13] ಅಪವಾದ ಹೊರಿಸುವವರನ್ನು ಕನಿಕರದಿಂದ ಮಾತನಾಡಿಸುತ್ತೇವೆ. ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದಕ್ಕಿಂತಲೂ ಹೀನವೋ ಎಂಬಂತೆ ಆಗಿದ್ದೇವೆ.
[14] ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ ನನ್ನ ಪ್ರಿಯ ಮಕ್ಕಳೆಂದು ಭಾವಿಸಿ ನಿಮಗೆ ಬುದ್ಧಿ ಹೇಳುವುದಕ್ಕಾಗಿಯೇ ಈ ಮಾತುಗಳನ್ನು ಬರೆದಿದ್ದೇನೆ.
[15] ನಿಮಗೆ ಕ್ರಿಸ್ತನಲ್ಲಿ ಬೋಧಕರು ಸಾವಿರಾರು ಮಂದಿ ಇದ್ದರೂ ತಂದೆಗಳು ಬಹು ಮಂದಿ ಇಲ್ಲ ನಾನೇ ನಿಮ್ಮನ್ನು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ಪಡೆದ ತಂದೆಯಾಗಿದ್ದೇನೆ.
[16] ಆದ್ದರಿಂದ ನನ್ನನ್ನು ಅನುಸರಿಸುವವರಾಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
[17] ಈ ಕಾರಣದಿಂದ ಕರ್ತನಲ್ಲಿ ನನ್ನ ಪ್ರಿಯ ಮತ್ತು ನಂಬಿಗಸ್ತ ಮಗನಾದ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ನಾನು ಪ್ರತಿಯೊಂದು ಸಭೆಗಳಲ್ಲಿಯೂ, ಎಲ್ಲೆಲ್ಲಿಯೂ ಬೋಧಿಸುವ ಹಾಗೆ ಕ್ರಿಸ್ತನಲ್ಲಿರುವ ನನ್ನ ನಡವಳಿಕೆಗಳನ್ನು ಅವನು ನಿಮ್ಮ ನೆನಪಿಗೆ ತರುವನು.
[18] ನಿಮ್ಮಲ್ಲಿ ಕೆಲವರು ಪೌಲನು ನಮ್ಮ ಬಳಿಗೆ ಬರುವುದಿಲ್ಲವೆಂದು ತಿಳಿದು ಉಬ್ಬಿಕೊಂಡಿದ್ದಾರೆ.
[19] ಆದರೆ ಕರ್ತನ ಚಿತ್ತವಾದರೆ ನಾನು ಬೇಗನೆ ನಿಮ್ಮ ಬಳಿಗೆ ಬಂದು ಉಬ್ಬಿಕೊಂಡಿರುವವರ ಮಾತನ್ನು ಮಾತ್ರವಲ್ಲ ಅವರ ಬಲವನ್ನು ಕಂಡುಹಿಡಿಯುತ್ತೇನೆ.
[20] ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಅಡಗಿದೆ.
[21] ನಿಮ್ಮ ಇಷ್ಟವೇನು? ಬೆತ್ತ ತೆಗೆದುಕೊಂಡು ನಿಮ್ಮ ಬಳಿಗೆ ಬರಲೋ? ಪ್ರೀತಿಯಿಂದಲೂ ಸೌಮ್ಯದ ಆತ್ಮದಿಂದಲೂ ಕೂಡಿದವನಾಗಿ ಬರಲೋ?