Skip to content
Opens in a new window
Listen to this chapter • 2:21

[1] ನಾನು ಮನುಷ್ಯರ ಭಾಷೆಗಳನ್ನೂ, ದೇವದೂತರ ಭಾಷೆಗಳನ್ನೂ ಮಾತನಾಡುವವನಾದರೂ ಪ್ರೀತಿಯಿಲ್ಲದವನಾಗಿದ್ದರೆ ನಾದಕೊಡುವ ಕಂಚಿನ ಜಾಗಟೆ, ಗಣಗಣಿಸುವ ಘಂಟೆ ಆಗಿದ್ದೇನೆ.

[2] ನನಗೆ ಪ್ರವಾದನ ವರವಿದ್ದರೂ, ಎಲ್ಲಾ ರಹಸ್ಯಗಳೂ, ಸಕಲ ವಿಧವಾದ ವಿದ್ಯೆಗಳನ್ನು ತಿಳಿದ್ದರೂ, ಬೆಟ್ಟಗಳನ್ನೂ ತೆಗೆದಿಡುವುಷ್ಟು ನಂಬಿಕೆಯಿದ್ದರೂ, ಪ್ರೀತಿಯಿಲ್ಲದವನಾಗಿದ್ದರೆ ನಾನು ಏನೂ ಅಲ್ಲದವನಾಗಿದ್ದೇನೆ.

[3] ನನಗಿರುವುದೆಲ್ಲವನ್ನು ಬಡವರಿಗೆ ಅನ್ನದಾನಮಾಡಿದರೂ, ನನ್ನ ದೇಹವನ್ನು ಸುಡುವುದಕ್ಕೆ ಒಪ್ಪಿಸಿದರೂ, ಪ್ರೀತಿಯು ನನಗಿಲ್ಲದಿದ್ದರೆ ನನಗೇನು ಪ್ರಯೋಜನವಿಲ್ಲ. ನಾನು ಬರಿದಾಗಿರುವನು.

[4] ಪ್ರೀತಿಯು ಬಹು ತಾಳ್ಮೆಯುಳ್ಳದ್ದು, ದಯೆಯುಳ್ಳದ್ದು. ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ. ಅದು ಗರ್ವಪಡುವುದಿಲ್ಲ, ಅಸಭ್ಯವಾಗಿ ನಡೆಯುವುದಿಲ್ಲ.

[5] ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ. ಬೇಗ ಸಿಟ್ಟುಗೊಳ್ಳುವುದಿಲ್ಲ. ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ.

[6] ಅನ್ಯಾಯದಲ್ಲಿ ಸಂತೋಷಪಡುವುದಿಲ್ಲ ಆದರೆ ಸತ್ಯದಲ್ಲಿ ಸಂತೋಷಪಡುತ್ತದೆ.

[7] ಎಲ್ಲವನ್ನು ತಾಳಿಕೊಳ್ಳುತ್ತದೆ. ಎಲ್ಲವನ್ನು ನಂಬುತ್ತದೆ. ಎಲ್ಲವನ್ನು ನಿರೀಕ್ಷಿಸುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತದೆ.

[8] ಪ್ರೀತಿಯು ಎಂದಿಗೂ ನಿಂತುಹೋಗುವುದಿಲ್ಲ. ಪ್ರವಾದನೆಗಳಾದರೂ ಇಲ್ಲದಂತಾಗುವವು. ಅನ್ಯಭಾಷೆಗಳೋ ನಿಂತುಹೋಗುವವು. ತಿಳಿವಳಿಕೆಯೋ ಇಲ್ಲದಂತಾಗುವುದು.

[9] ಅಪೂರ್ಣವಾಗಿ ತಿಳಿದುಕೊಳ್ಳುತ್ತೇವೆ; ಅಪೂರ್ಣವಾಗಿ ಪ್ರವಾದಿಸುತ್ತೇವೆ.

[10] ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವುದು.

[11] ನಾನು ಬಾಲಕನಾಗಿದ್ದಾಗ ಬಾಲಕನ ರೀತಿಯಲ್ಲಿ ಮಾತನಾಡಿದೆನು. ಬಾಲಕನ ಹಾಗೆ ಯೋಚಿಸಿದೆನು. ಬಾಲಕನಂತೆ ವಿವೇಚಿಸಿದೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.

[12] ಈಗ ಕನ್ನಡಿಯಲ್ಲಿ ಕಾಣಿಸುವಂತೆ ದೇವರ ಮುಖವು ನಮಗೆ ಮೊಬ್ಬಾಗಿ ಕಾಣಿಸುತ್ತದೆ, ಆದರೆ ಆಗ ನೇರವಾಗಿ ಮುಖಾಮುಖಿಯಾಗಿ ಆತನನ್ನು ನೋಡುವೆವು. ಈಗ ಅಪೂರ್ಣವಾಗಿ ನನಗೆ ತಿಳಿದಿದೆ. ಆದರೆ ಆಗ ದೇವರು ನನ್ನನ್ನು ಸಂಪೂರ್ಣವಾಗಿ ತಿಳಿದುಕೊಂಡಂತೆ ನಾನು ಸಂಪೂರ್ಣವಾಗಿ ತಿಳಿದುಕೊಳ್ಳುವೆನು.

[13] ಹೀಗಿರುವುದರಿಂದ, ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತದೆ. ಇವುಗಳಲ್ಲಿ ದೊಡ್ಡದು ಪ್ರೀತಿಯೇ.

1 ಕೊರಿಂಥದವರಿಗೆ — Chapters