[1] ಯೇಸು ದೇವಾಲಯದೊಳಗಿಂದ ಹೊರಗೆ ಹೋಗುತ್ತಿದ್ದಾಗ ಅವರ ಶಿಷ್ಯರಲ್ಲಿ ಒಬ್ಬನು ಯೇಸುವಿಗೆ, “ಬೋಧಕರೇ, ಇಲ್ಲಿ ಎಂಥಾ ಭಾರಿ ಕಲ್ಲುಗಳು ಮತ್ತು ಎಂಥಾ ಮಹಾ ಕಟ್ಟಡಗಳು ಇವೆ ನೋಡಿರಿ!” ಎಂದನು.
[2] ಯೇಸು ಅವನಿಗೆ ಉತ್ತರವಾಗಿ, “ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು,” ಎಂದರು.
[3] ಯೇಸು ಓಲಿವ್ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕುಳಿತುಕೊಂಡಿದ್ದಾಗ ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ ಇವರು ಪ್ರತ್ಯೇಕವಾಗಿ ಯೇಸುವಿಗೆ,
[4] “ಇವೆಲ್ಲಾ ಯಾವಾಗ ಆಗುವವು? ಇವೆಲ್ಲವೂ ನೆರವೇರುವುದಕ್ಕೆ ಸೂಚನೆ ಏನು? ನಮಗೆ ಹೇಳು,” ಎಂದು ಕೇಳಿದರು.
[5] ಯೇಸು ಅವರಿಗೆ ಹೀಗೆಂದನು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.
[6] ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.
[7] ಇದಲ್ಲದೆ ಯುದ್ಧಗಳನ್ನೂ, ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.
[8] ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಬರಗಾಲಗಳು ಉಂಟಾಗುವವು, ಇವು ಪ್ರಸವವೇದನೆಯ ಪ್ರಾರಂಭ ಮಾತ್ರ.
[9] “ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಜನರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು. ನನ್ನ ನಿಮಿತ್ತವಾಗಿ ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಿಸುವರು. ಹೀಗೆ ಇದು ಅವರಿಗೆ ಸಾಕ್ಷಿಯಾಗಿರುವುದು.
[10] ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರುವುದು ಅಗತ್ಯವಾಗಿದೆ.
[11] ಅವರು ನಿಮ್ಮನ್ನು ಬಂಧಿಸಿ ಒಪ್ಪಿಸುವುದಕ್ಕಾಗಿ ತೆಗೆದುಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬುದನ್ನು ಮುಂಚಿತವಾಗಿಯೇ ಚಿಂತಿಸಬೇಡಿರಿ. ಆ ಗಳಿಗೆಯಲ್ಲಿ ನಿಮ್ಮ ಮನಸ್ಸಿನಲ್ಲಿ ನಿಮಗೆ ಯಾವುದು ಕೊಡಲಾಗುವುದೋ ಅದನ್ನೇ ಮಾತನಾಡಿರಿ. ಏಕೆಂದರೆ ಮಾತನಾಡುವವರು ನೀವಲ್ಲ, ಪವಿತ್ರಾತ್ಮನೇ.
[12] “ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
[13] ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
[14] “ಆದರೆ ‘ಅಸಹ್ಯ ವಸ್ತು’ ನಿಲ್ಲಬಾರದ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ ಓದುವವನು ತಿಳಿದುಕೊಳ್ಳಲಿ. ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.
[15] ಮಾಳಿಗೆಯ ಮೇಲಿದ್ದವರು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದಿರಲಿ; ತಮ್ಮ ಮನೆಯೊಳಗೆ ಪ್ರವೇಶಿಸಿ ಅದರೊಳಗಿಂದ ಏನನ್ನೂ ತೆಗೆದುಕೊಳ್ಳದಿರಲಿ.
[16] ಹೊಲದಲ್ಲಿರುವವರು ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.
[17] ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!
[18] ಈ ಸಂಕಟ ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ.
[19] ಆ ದಿವಸಗಳಲ್ಲಿ ಮಹಾ ಸಂಕಟವಿರುವುದು, ದೇವರು ಜಗತ್ತನ್ನು ಸೃಷ್ಟಿಸಿದ ದಿನದಿಂದ ಮೊದಲುಗೊಂಡು ಈ ಸಮಯದವರೆಗೂ ಅಂಥ ಸಂಕಟವು ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.
[20] “ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾರೂ ತಪ್ಪಿಹೋಗುವುದಿಲ್ಲ. ಆದರೆ ತಾನು ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿದ್ದಾರೆ.
[21] ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತನು ಇಲ್ಲಿದ್ದಾನೆ, ಅಗೋ, ಆತನು ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿರಿ.
[22] ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು, ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.
[23] ಆದರೆ ನೀವು ಜಾಗರೂಕರಾಗಿರಿ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿಯೆ ಹೇಳಿದ್ದೇನೆ.
[24] “ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ, “ ‘ಸೂರ್ಯನಿಗೆ ಕತ್ತಲು ಮುಸುಕುವುದು; ಚಂದ್ರನು ಕಾಂತಿಹೀನನಾಗುವನು.
[25] ಆಕಾಶದಿಂದ ನಕ್ಷತ್ರಗಳು ಬೀಳುವವು ಮತ್ತು ಆಕಾಶದ ಶಕ್ತಿಗಳು ಕದಲುವವು.’
[26] “ಆಗ ಮನುಷ್ಯಪುತ್ರನಾದ ನಾನು ಬಹು ಶಕ್ತಿಯಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವುದನ್ನು ಅವರು ಕಾಣುವರು.
[27] ನಾನು ನನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯವರೆಗೆ ನಾನು ಆರಿಸಿಕೊಂಡವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವೆನು.
[28] “ಅಂಜೂರದ ಮರದ ಸಾಮ್ಯದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.
[29] ಅದೇ ಪ್ರಕಾರ ಇವೆಲ್ಲವೂ ಸಂಭವಿಸುವುದನ್ನು ನೀವು ಕಾಣುವಾಗ, ಮನುಷ್ಯಪುತ್ರನಾದ ನಾನು ಬಾಗಿಲ ಹತ್ತಿರದಲ್ಲಿಯೇ ಇದ್ದೇನೆ ಎಂದು ತಿಳಿದುಕೊಳ್ಳಿರಿ.
[30] ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
[31] ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.
[32] “ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಪುತ್ರನಿಗಾಗಲಿ ತಿಳಿಯದು.
[33] ನೀವು ಎಚ್ಚರವಾಗಿರಿ, ಜಾಗರೂಕರಾಗಿರಿ. ಏಕೆಂದರೆ ಆ ಕಾಲವು ಬರುವುದು ಯಾವಾಗ ಎಂದು ನಿಮಗೆ ತಿಳಿಯದು.
[34] ಅದು ಒಬ್ಬ ಮನುಷ್ಯನು ದೂರ ಪ್ರಯಾಣಕ್ಕಾಗಿ ತನ್ನ ಮನೆಯನ್ನು ಬಿಟ್ಟು, ತನ್ನ ಸೇವಕರಿಗೆ ಅಧಿಕಾರವನ್ನೂ ಪ್ರತಿಯೊಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಿಲು ಕಾಯುವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇರುತ್ತದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ.
[35] “ಆದ್ದರಿಂದ ಜಾಗರೂಕರಾಗಿರಿ. ಮನೆಯಜಮಾನನು ಸಂಜೆಯಲ್ಲಿಯೋ ಮಧ್ಯರಾತ್ರಿಯಲ್ಲಿಯೋ ಹುಂಜ ಕೂಗುವಾಗಲೋ ಬೆಳಕಾಗುವಾಗಲೋ, ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ.
[36] ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವುದನ್ನು ಕಂಡಾನು.
[37] ನಿಮಗೆ ಹೇಳುವುದನ್ನು ನಾನು ಎಲ್ಲರಿಗೂ ಹೇಳುತ್ತೇನೆ: ‘ಎಚ್ಚರವಾಗಿರಿ,’ ” ಎಂದರು.