Skip to content
Opens in a new window
Listen to this chapter • 6:10

[1] ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆ ಮತ್ತು ಬೇಥಾನ್ಯಕ್ಕೂ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ,

[2] “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ನೀವು ಅದರೊಳಗೆ ಪ್ರವೇಶಿಸಿದ ಕೂಡಲೇ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.

[3] ಯಾವನಾದರೂ ನಿಮಗೆ, ‘ಏಕೆ ಹೀಗೆ ಮಾಡುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತದೇವರಿಗೆ ಅವಶ್ಯವಾಗಿದೆ, ಆತನು ಕೂಡಲೇ ಇದನ್ನು ಹಿಂದಕ್ಕೆ ಕಳುಹಿಸುವನು,’ ” ಎಂದು ಹೇಳಿರಿ ಎಂದರು.

[4] ಆಗ ಅವರು ಹೊರಟುಹೋಗಿ ಬೀದಿಯಲ್ಲಿದ್ದ ಒಂದು ಮನೆಯ ಬಾಗಿಲಿನ ಹತ್ತಿರ ಕಟ್ಟಿದ್ದ ಕತ್ತೆಮರಿಯನ್ನು ಕಂಡರು. ಅವರು ಅದನ್ನು ಬಿಚ್ಚುತ್ತಿರುವಾಗ,

[5] ಅಲ್ಲಿ ನಿಂತಿದ್ದ ಕೆಲವರು ಅವರಿಗೆ, “ಆ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಕೇಳಿದರು.

[6] ಅದಕ್ಕೆ ಅವರು ಯೇಸು ತಮಗೆ ಹೇಳಿದ ಪ್ರಕಾರ ಉತ್ತರ ಕೊಡಲು, ಅವರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟರು.

[7] ಶಿಷ್ಯರು ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದಾಗ ಯೇಸು ಅದರ ಮೇಲೆ ಕುಳಿತುಕೊಂಡರು.

[8] ಅನೇಕರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ತೋಟಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.

[9] ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗುತ್ತಾ, “ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”

[10] “ಬರಲಿರುವ ನಮ್ಮ ತಂದೆಯಾದ ದಾವೀದನ ರಾಜ್ಯವು ಆಶೀರ್ವಾದ ಹೊಂದಲಿ!” “ಉನ್ನತದಲ್ಲಿ ಹೊಸನ್ನ!” ಎಂದು ಹೇಳಿದರು.

[11] ಯೇಸು ಯೆರೂಸಲೇಮಿಗೆ ಹೋಗಿ ದೇವಾಲಯವನ್ನು ಪ್ರವೇಶಿಸಿದಾಗ ಸುತ್ತಲಿದ್ದ ಎಲ್ಲವುಗಳನ್ನು ನೋಡಿದರು. ಆಗ ಸಂಜೆಯಾಗಿದ್ದುದರಿಂದ ಯೇಸು ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದರು.

[12] ಮರುದಿನ ಅವರು ಬೇಥಾನ್ಯದಿಂದ ಬರುತ್ತಿರುವಾಗ ಯೇಸುವಿಗೆ ಹಸಿವಾಯಿತು.

[13] ಯೇಸು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ಕಂಡು ಒಂದು ವೇಳೆ ಅದರಲ್ಲಿ ಹಣ್ಣು ಏನಾದರೂ ಸಿಕ್ಕೀತೆಂದುಕೊಂಡರು. ಆದರೆ ಯೇಸು ಅದರ ಹತ್ತಿರ ಬಂದಾಗ ಎಲೆಗಳನ್ನು ಹೊರತು ಮತ್ತೇನೂ ಕಾಣಲಿಲ್ಲ. ಅದು ಅಂಜೂರ ಫಲದ ಕಾಲವಾಗಿರಲಿಲ್ಲ.

[14] ಯೇಸು ಅದಕ್ಕೆ, “ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,” ಎಂದರು. ಅದನ್ನು ಅವರ ಶಿಷ್ಯರು ಕೇಳಿಸಿಕೊಂಡರು.

[15] ತರುವಾಯ ಅವರು ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ, ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು.

[16] ಯಾರೂ ದೇವಾಲಯದ ಮಾರ್ಗವಾಗಿ ಯಾವುದನ್ನೂ ತೆಗೆದುಕೊಂಡು ಹೋಗದಂತೆ ತಡೆದರು.

[17] ಯೇಸು ಅವರಿಗೆ ಬೋಧಿಸುತ್ತಾ, “ನನ್ನ ಮನೆಯು ಎಲ್ಲಾ ಜನಾಂಗಗಳಿಗೂ ‘ಪ್ರಾರ್ಥನೆಯ ಮನೆ’ ಎಂದು ಕರೆಯಿಸಿಕೊಳ್ಳುವುದೆಂದು ಬರೆದಿದೆಯಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ,” ಎಂದು ಹೇಳಿದರು.

[18] ಮುಖ್ಯಯಾಜಕರೂ ನಿಯಮ ಬೋಧಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಯೇಸುವಿನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಯೇಸುವಿಗೆ ಭಯಪಟ್ಟರು.

[19] ಸಂಜೆಯಾದಾಗ ಯೇಸು ಮತ್ತು ಅವರ ಶಿಷ್ಯರು ಪಟ್ಟಣದ ಹೊರಗೆ ಹೋದರು.

[20] ಬೆಳಿಗ್ಗೆ ಅವರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರ ಮರವು ಬೇರುಸಹಿತವಾಗಿ ಒಣಗಿರುವುದನ್ನು ಕಂಡರು.

[21] ಆಗ ಪೇತ್ರನು ಜ್ಞಾಪಕಮಾಡಿಕೊಂಡು ಯೇಸುವಿಗೆ, “ಗುರುವೇ, ಇಗೋ! ನೀನು ಶಪಿಸಿದ ಅಂಜೂರದ ಮರವು ಒಣಗಿಹೋಗಿದೆ!” ಎಂದು ಹೇಳಿದನು.

[22] ಯೇಸು ಉತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ, “ದೇವರ ನಂಬಿಕೆ ನಿಮಗಿರಲಿ.

[23] ಏಕೆಂದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ಹೇಳಿ ತಮ್ಮ ಹೃದಯದಲ್ಲಿ ಸಂಶಯಪಡದೆ ತಾವು ಹೇಳಿದಂತೆಯೇ ಆಗುವುದೆಂದು ನಂಬಿದರೆ ಅವರು ಹೇಳಿದಂತೆಯೇ ಅವರಿಗೆ ಆಗುವುದು.

[24] ಆದಕಾರಣ, ನೀವು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಎಲ್ಲವೂ ನಿಮಗೆ ಸಿಕ್ಕಿವೆಯೆಂದು ನಂಬಿರಿ. ಅವು ನಿಮಗೆ ಲಭಿಸುವವು.

[25] ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರಿಗಾದರೂ ವಿರೋಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು.

[26] ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.

[27] ಯೇಸು ಮತ್ತು ಶಿಷ್ಯರು ಪುನಃ ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿರುವಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವಿನ ಬಳಿಗೆ ಬಂದು

[28] ಯೇಸುವಿಗೆ, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರ ಕೊಟ್ಟವರು ಯಾರು?” ಎಂದು ಕೇಳಿದರು.

[29] ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.

[30] ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ? ನನಗೆ ಉತ್ತರಕೊಡಿರಿ,” ಎಂದರು.

[31] ಆಗ ಅವರು, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.

[32] ಆದರೆ ನಾವು, ‘ಮನುಷ್ಯರಿಂದ ಬಂತು’ ಎಂದು ಹೇಳುವುದಾದರೆ, ನಮಗೆ ಜನರ ಭಯವಿದೆ. ಏಕೆಂದರೆ ಯೋಹಾನನು ನಿಜವಾಗಿಯೂ ಪ್ರವಾದಿ ಎಂದು ಎಲ್ಲರೂ ಎಣಿಸಿಕೊಂಡಿರುವರು,” ಎಂದು ತಮ್ಮಲ್ಲಿ ಚರ್ಚಿಸಿಕೊಂಡರು.

[33] ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದು ಅವರಿಗೆ ಉತ್ತರಕೊಟ್ಟರು.

ಮಾರ್ಕ — Chapters