Skip to content
Opens in a new window
Listen to this chapter • 10:35

[1] ಯೇಸು ಅಲ್ಲಿಂದ ಹೊರಟು ಶಿಷ್ಯರೊಡನೆ ತಮ್ಮ ಸ್ವಂತ ಊರಿಗೆ ಬಂದರು.

[2] ಸಬ್ಬತ್ ದಿನ ಬಂದಾಗ, ಯೇಸು ಸಭಾಮಂದಿರದಲ್ಲಿ ಬೋಧಿಸಲಾರಂಭಿಸಿದರು. ಅದನ್ನು ಕೇಳಿದ ಅನೇಕರು ವಿಸ್ಮಯಗೊಂಡು, “ಈತನು ಇವೆಲ್ಲವನ್ನು ಎಲ್ಲಿಂದ ಪಡೆದಿದ್ದಾನೆ? ಈತನ ಕೈಗಳಿಂದ ಇಂಥ ಅದ್ಭುತಕಾರ್ಯಗಳನ್ನು ಮಾಡುವ ಜ್ಞಾನವು ಈತನಿಗೆ ಎಲ್ಲಿಂದ ಬಂತು?

[3] ಈತನು ಬಡಗಿಯಲ್ಲವೇ? ಈತನು ಮರಿಯಳ ಮಗನಲ್ಲವೇ? ಈತನು ಯಾಕೋಬ, ಯೋಸೆ, ಯೂದ ಮತ್ತು ಸೀಮೋನರ ಅಣ್ಣನಲ್ಲವೇ? ಈತನ ತಂಗಿಯರು ನಮ್ಮಲ್ಲಿ ಇದ್ದಾರಲ್ಲವೇ?” ಎಂದು ಹೇಳಿ, ಯೇಸುವಿನ ವಿಷಯವಾಗಿ ಬೇಸರಗೊಂಡರು.

[4] ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ, ತನ್ನ ಸಂಬಂಧಿಕರ ನಡುವೆ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು.

[5] ಅಲ್ಲಿ ಯೇಸು ಕೆಲವು ರೋಗಿಗಳ ಮೇಲೆ ಕೈಗಳನ್ನಿಟ್ಟು ಅವರನ್ನು ಗುಣಪಡಿಸಿದ್ದಲ್ಲದೆ ಬೇರೆ ಯಾವ ಅದ್ಭುತಗಳನ್ನೂ ಮಾಡಲಿಲ್ಲ.

[6] ಯೇಸು ಅವರ ಅಪನಂಬಿಕೆಯನ್ನು ಕಂಡು ಆಶ್ಚರ್ಯಪಟ್ಟರು. ಆಮೇಲೆ ಯೇಸು ಸುತ್ತಮುತ್ತಲಿನ ಊರುಗಳಲ್ಲಿ ಬೋಧಿಸಿದರು.

[7] ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಕರೆದು, ಅವರಿಗೆ ಅಶುದ್ಧಾತ್ಮಗಳನ್ನು ಹೊರಗಟ್ಟುವ ಅಧಿಕಾರವನ್ನು ಕೊಟ್ಟು ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು.

[8] ಯೇಸು ಅವರಿಗೆ, “ಪ್ರಯಾಣಕ್ಕಾಗಿ ಕೇವಲ ಕೋಲು ಒಂದನ್ನು ಬಿಟ್ಟು, ರೊಟ್ಟಿ, ಚೀಲ ಅಥವಾ ಜೇಬಿನಲ್ಲಿ ಹಣವನ್ನು ತೆಗೆದುಕೊಳ್ಳಬೇಡಿರಿ.

[9] ಪಾದರಕ್ಷೆಗಳನ್ನು ಮೆಟ್ಟಿಕೊಳ್ಳಿರಿ. ಆದರೆ ಹೆಚ್ಚು ಅಂಗಿಗಳನ್ನು ತೆಗೆದುಕೊಳ್ಳಬೇಡಿರಿ,” ಎಂದು ಆಜ್ಞಾಪಿಸಿದರು.

[10] ಇದಲ್ಲದೆ ಯೇಸು ಅವರಿಗೆ, “ನೀವು ಯಾವುದಾದರೊಂದು ಮನೆಗೆ ಹೋದಾಗ, ಅಲ್ಲೇ ಇದ್ದು ಆ ಪಟ್ಟಣದಿಂದ ಹೋಗುವವರೆಗೆ ಆ ಮನೆಯಲ್ಲೇ ವಾಸವಾಗಿದ್ದು, ಅಲ್ಲಿಂದಲೇ ಹೊರಡಿರಿ.

[11] ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಅಥವಾ ನಿಮ್ಮ ಮಾತುಗಳನ್ನು ಕೇಳದಿದ್ದರೆ, ನೀವು ಹೊರಡುತ್ತಿರುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. ಅದು ಅವರ ವಿರುದ್ಧ ಸಾಕ್ಷಿಯಾಗಿರಲಿ,” ಎಂದರು.

[12] ಶಿಷ್ಯರು ಹೊರಟುಹೋಗಿ ಜನರಿಗೆ ದೇವರ ಕಡೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳಿದರು.

[13] ಅವರು ಅನೇಕರಿಂದ ದೆವ್ವಗಳನ್ನೋಡಿಸಿ, ಅನೇಕ ರೋಗಿಗಳಿಗೆ ಎಣ್ಣೆ ಹಚ್ಚಿ ಅವರನ್ನು ಗುಣಪಡಿಸಿದರು.

[14] ಯೇಸುವಿನ ಹೆಸರು ಪ್ರಸಿದ್ಧಿಗೆ ಬಂದಿದ್ದರಿಂದ ಅರಸನಾದ ಹೆರೋದನಿಗೆ ಈ ವಿಷಯ ತಿಳಿಯಿತು. “ಈತನು ಸ್ನಾನಿಕನಾದ ಯೋಹಾನನೇ, ಸತ್ತವರೊಳಗಿಂದ ಅವನು ತಿರುಗಿ ಬದುಕಿ ಬಂದಿದ್ದಾನೆ. ಆದ್ದರಿಂದಲೇ ಈತನಲ್ಲಿ ಅದ್ಭುತಕಾರ್ಯಗಳನ್ನು ನಡೆಸುವ ಶಕ್ತಿಗಳಿವೆ,” ಎಂದು ಕೆಲವರು ಹೇಳುತ್ತಿದ್ದರು.

[15] ಇನ್ನು ಕೆಲವರು, “ಈತನು ಎಲೀಯನು,” ಎಂದರು. ಮತ್ತೆ ಕೆಲವರು, “ಈತನು ಹಿಂದಿನ ಕಾಲದ ಪ್ರವಾದಿಗಳಂತೆ ಒಬ್ಬ ಪ್ರವಾದಿಯಾಗಿರಬೇಕು,” ಎಂದರು.

[16] ಆದರೆ ಹೆರೋದನು ಇದನ್ನು ಕೇಳಿ, “ನಾನು ಶಿರಚ್ಛೇದನ ಮಾಡಿದ ಯೋಹಾನನೇ, ತಿರುಗಿ ಜೀವಂತವಾಗಿ ಬಂದಿದ್ದಾನೆ,” ಎಂದು ಹೇಳಿದನು.

[17] ಏಕೆಂದರೆ, ಯೋಹಾನನನ್ನು ಬಂಧಿಸಿ ಸೆರೆಮನೆಗೆ ಹಾಕಬೇಕೆಂದು ಹೆರೋದನು ತಾನೇ ಕಳುಹಿಸಿದ್ದನು. ತನ್ನ ಸಹೋದರನಾದ ಫಿಲಿಪ್ಪನ ಹೆಂಡತಿ ಹೆರೋದ್ಯಳನ್ನು ಮದುವೆ ಮಾಡಿಕೊಂಡದ್ದರಿಂದ ಅವನು ಹೀಗೆ ಮಾಡಿದ್ದನು.

[18] ಏಕೆಂದರೆ ಯೋಹಾನನು ಹೆರೋದನಿಗೆ, “ನೀನು ನಿನ್ನ ಸಹೋದರನ ಹೆಂಡತಿಯನ್ನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಹೇಳುತ್ತಿದ್ದನು.

[19] ಇದರಿಂದ ಹೆರೋದ್ಯಳು ಯೋಹಾನನ ಮೇಲೆ ಹಗೆಯಿಟ್ಟುಕೊಂಡು, ಅವನನ್ನು ಕೊಲ್ಲಿಸಬೇಕೆಂದಿದ್ದರೂ ಸಾಧ್ಯವಾಗಲಿಲ್ಲ.

[20] ಏಕೆಂದರೆ, ಯೋಹಾನನು ನೀತಿವಂತನು ಮತ್ತು ಪವಿತ್ರ ಮನುಷ್ಯನು ಎಂದು ತಿಳಿದು ಹೆರೋದನು ಭಯಪಟ್ಟು ಅವನನ್ನು ಸುರಕ್ಷಿತವಾಗಿಟ್ಟಿದ್ದನು. ಯೋಹಾನನು ಹೇಳಿದ್ದನ್ನು ಹೆರೋದನು ಕೇಳಿದಾಗಲೆಲ್ಲಾ ಅವನಿಗೆ ಗಲಿಬಿಲಿಯಾಗುತ್ತಿತ್ತು. ಆದರೂ ಅವನ ಮಾತನ್ನು ಕೇಳಲು ಇಷ್ಟಪಡುತ್ತಿದ್ದನು.

[21] ಕೊನೆಗೆ ಅನುಕೂಲವಾದ ಸಮಯ ಸಿಕ್ಕಿತು. ತನ್ನ ಜನ್ಮ ದಿನದಂದು ಹೆರೋದನು ತನ್ನ ಉನ್ನತ ಅಧಿಕಾರಿಗಳಿಗೆ, ಸೇನಾಧಿಪತಿಗಳಿಗೆ ಹಾಗೂ ಗಲಿಲಾಯದ ಪ್ರಮುಖರಿಗೆ ಔತಣವನ್ನು ಏರ್ಪಡಿಸಿದನು.

[22] ಹೆರೋದ್ಯಳ ಮಗಳು ಒಳಗೆ ಬಂದು ನೃತ್ಯ ಮಾಡಿ, ಹೆರೋದನನ್ನೂ ಊಟಕ್ಕೆ ಬಂದ ಅವನ ಅತಿಥಿಗಳನ್ನೂ ಸಂತೋಷಪಡಿಸಿದಳು. ರಾಜನು ಆ ಹುಡುಗಿಗೆ, “ನಿನಗೆ ಏನು ಬೇಕಾದರೂ ಕೇಳು, ನಾನು ಕೊಡುತ್ತೇನೆ,” ಎಂದು ಹೇಳಿ,

[23] “ನೀನೇನು ಕೇಳಿದರೂ ಕೊಡುತ್ತೇನೆ, ನನ್ನ ರಾಜ್ಯದಲ್ಲಿ ಅರ್ಧದಷ್ಟು ಕೇಳಿಕೊಂಡರೂ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು.

[24] ಆಕೆ ತನ್ನ ತಾಯಿಯ ಬಳಿಗೆ ಹೋಗಿ, “ನಾನು ಏನನ್ನು ಕೇಳಲಿ?” ಎಂದು ಕೇಳಲು, ಆಕೆಯು, “ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳು,” ಎಂದು ಉತ್ತರಕೊಟ್ಟಳು.

[25] ಕೂಡಲೇ ಆ ಹುಡುಗಿ ಅವಸರವಾಗಿ ರಾಜನ ಮುಂದೆ ಬಂದು, “ನನಗೆ ಈಗಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಒಂದು ತಟ್ಟೆಯಲ್ಲಿ ತರಿಸಿ ಕೊಡಬೇಕು,” ಎಂದು ಕೇಳಿಕೊಂಡಳು.

[26] ಇದರಿಂದ ಅರಸನಿಗೆ ಬಹಳ ದುಃಖವಾದರೂ ತನ್ನ ಪ್ರಮಾಣದ ನಿಮಿತ್ತವಾಗಿ ಮತ್ತು ಭೋಜನಕ್ಕೆ ಬಂದ ಅತಿಥಿಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ.

[27] ಕೂಡಲೇ ಅರಸನು ಯೋಹಾನನ ತಲೆಯನ್ನು ತರಬೇಕೆಂದು ಒಬ್ಬ ಕಾವಲುಗಾರನಿಗೆ ಅಪ್ಪಣೆಕೊಟ್ಟು ಕಳುಹಿಸಿದನು. ಅವನು ಹೋಗಿ ಸೆರೆಮನೆಯಲ್ಲಿದ್ದ ಯೋಹಾನನ ಶಿರಚ್ಛೇದನ ಮಾಡಿದನು.

[28] ಅವನ ತಲೆಯನ್ನು ತಟ್ಟೆಯಲ್ಲಿಟ್ಟುಕೊಂಡು ಬಂದು ಅದನ್ನು ಆ ಹುಡುಗಿಗೆ ಕೊಟ್ಟನು. ಆಕೆಯು ಅದನ್ನು ತನ್ನ ತಾಯಿಗೆ ಕೊಟ್ಟಳು.

[29] ಇದನ್ನು ಕೇಳಿ ಯೋಹಾನನ ಶಿಷ್ಯರು ಬಂದು ಅವನ ಶವವನ್ನು ತೆಗೆದುಕೊಂಡುಹೋಗಿ ಸಮಾಧಿಯಲ್ಲಿ ಇಟ್ಟರು.

[30] ಅಪೊಸ್ತಲರು ಹಿಂದಿರುಗಿ ಯೇಸುವಿನ ಬಳಿಗೆ ಬಂದು ತಾವು ಮಾಡಿದ್ದನ್ನೂ ಬೋಧಿಸಿದ ಎಲ್ಲವನ್ನೂ ಕುರಿತು ಅವರಿಗೆ ವರದಿಮಾಡಿದರು.

[31] ಬಹಳ ಜನರು ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಅವರಿಗೆ ಊಟಮಾಡುವುದಕ್ಕೂ ಸಮಯವಿರಲಿಲ್ಲ. ಯೇಸು ಅವರಿಗೆ, “ನೀವು ಏಕಾಂತವಾದ ಸ್ಥಳಕ್ಕೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ,” ಎಂದು ಹೇಳಿದರು.

[32] ಆಗ ಅವರು ದೋಣಿಯಲ್ಲಿ ಏಕಾಂತ ಸ್ಥಳಕ್ಕೆ ಹೋದರು.

[33] ಆದರೆ ಅವರು ಹೋಗುವುದನ್ನು ಕಂಡ ಅನೇಕರು ಅವರನ್ನು ಗುರುತಿಸಿ ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ಓಡಿ ಅವರಿಗಿಂತ ಮುಂಚೆ ಅಲ್ಲಿ ಸೇರಿದ್ದರು.

[34] ಯೇಸು ದೋಣಿಯಿಂದ ಇಳಿದಾಗ ದೊಡ್ಡ ಜನಸಮೂಹವನ್ನು ಕಂಡು ಅವರ ಮೇಲೆ ಕನಿಕರಪಟ್ಟರು. ಏಕೆಂದರೆ ಅವರು ಕುರುಬನಿಲ್ಲದ ಕುರಿಗಳಂತಿದ್ದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಕುರಿತು ಬೋಧಿಸಲಾರಂಭಿಸಿದರು.

[35] ಅಷ್ಟರೊಳಗೆ ಸಂಜೆಯಾಯಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, “ಇದು ನಿರ್ಜನಪ್ರದೇಶ, ಈಗಲೇ ಹೊತ್ತು ಮೀರಿದೆ,

[36] ಈ ಜನರು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ತಿನ್ನುವುದಕ್ಕಾಗಿ ಏನಾದರೂ ಕೊಂಡುಕೊಳ್ಳುವಂತೆ ಇವರನ್ನು ಕಳುಹಿಸಿಬಿಡು,” ಎಂದು ಹೇಳಿದರು.

[37] ಆದರೆ ಯೇಸು, “ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ,” ಎಂದರು. ಶಿಷ್ಯರು, “ನಾವು ಹೋಗಿ ಅವರಿಗೆ ಊಟಕ್ಕಾಗಿ ಆರು ತಿಂಗಳ ಸಂಬಳದಷ್ಟು ಖರ್ಚುಮಾಡಿ, ಆಹಾರವನ್ನು ಕೊಂಡುಕೊಂಡು ಬರಬೇಕೆ?” ಎಂದು ಕೇಳಿದರು.

[38] ಯೇಸು ಅವರಿಗೆ, “ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿರಿ,” ಎಂದು ಕೇಳಿದರು. ಅವರು ವಿಚಾರಿಸಿ, “ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ,” ಎಂದು ಉತ್ತರಕೊಟ್ಟರು.

[39] ಆಮೇಲೆ ಯೇಸು ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳುವಂತೆ ಜನರಿಗೆ ಆಜ್ಞಾಪಿಸಿದರು.

[40] ಅವರು ನೂರರಂತೆ, ಐವತ್ತರಂತೆ ಸಾಲಾಗಿ ಕುಳಿತರು.

[41] ಯೇಸು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ತಮ್ಮ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸಿದರು. ಅದರಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚಿಸಿದರು.

[42] ಅವರೆಲ್ಲರೂ ತಿಂದು ತೃಪ್ತರಾದರು.

[43] ಶಿಷ್ಯರು ಉಳಿದ ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ಕೂಡಿಸಲು ಹನ್ನೆರಡು ಬುಟ್ಟಿ ತುಂಬಿದವು.

[44] ಊಟಮಾಡಿದವರಲ್ಲಿ ಐದು ಸಾವಿರ ಮಂದಿ ಗಂಡಸರಿದ್ದರು.

[45] ಇದಾದ ಕೂಡಲೇ ಯೇಸು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ, ತಮ್ಮ ಶಿಷ್ಯರು ದೋಣಿಯನ್ನು ಹತ್ತಿ ತಮಗಿಂತ ಮುಂದಾಗಿ ಬೇತ್ಸಾಯಿದಕ್ಕೆ ಹೋಗಬೇಕೆಂದು ಆಜ್ಞಾಪಿಸಿದರು.

[46] ಯೇಸು ಜನಸಮೂಹವನ್ನು ಕಳುಹಿಸಿದ ಮೇಲೆ ಪ್ರಾರ್ಥನೆಮಾಡಲು ಬೆಟ್ಟಕ್ಕೆ ಹೋದರು.

[47] ಸಂಜೆಯಾದಾಗ, ದೋಣಿಯು ಸರೋವರದ ಮಧ್ಯದಲ್ಲಿತ್ತು. ಯೇಸು ದಡದಲ್ಲಿ ಒಬ್ಬರೇ ಇದ್ದರು.

[48] ಎದುರುಗಾಳಿ ಬಲವಾಗಿ ಬೀಸುತ್ತಿದ್ದುದರಿಂದ ಶಿಷ್ಯರು ದೋಣಿಯನ್ನು ನಿಯಂತ್ರಿಸಲು ದಣಿದು ಹೋದದ್ದನ್ನು ಯೇಸು ಕಂಡು, ಮುಂಜಾನೆ ಸುಮಾರು ಮೂರು ಗಂಟೆಯಲ್ಲಿ ಅವರ ಬಳಿಗೆ ಸರೋವರದ ಮೇಲೆ ನಡೆಯುತ್ತಾ ಬಂದರು. ಯೇಸು ಅವರನ್ನು ದಾಟಿ ಹೋಗುವುದರಲ್ಲಿದ್ದರು.

[49] ಆದರೆ ಯೇಸು ಸರೋವರದ ಮೇಲೆ ನಡೆಯುವುದನ್ನು ಕಂಡಾಗ, ಅವರು ಯೇಸುವನ್ನು ಭೂತವೆಂದು ಭಾವಿಸಿ, ಕಿರುಚಿದರು.

[50] ಅವರೆಲ್ಲರೂ ಯೇಸುವನ್ನು ಕಂಡು ದಿಗಿಲುಗೊಂಡಿದ್ದರು. ಕೂಡಲೇ ಯೇಸು ಅವರಿಗೆ, “ಧೈರ್ಯವಾಗಿರಿ, ನಾನೇ! ಭಯಪಡಬೇಡಿರಿ,” ಎಂದರು.

[51] ಆಮೇಲೆ ಯೇಸು ದೋಣಿಯನ್ನು ಹತ್ತಿ ಅವರ ಬಳಿಗೆ ಬರಲು ಗಾಳಿ ನಿಂತುಹೋಯಿತು. ಅವರು ಬಹು ಆಶ್ಚರ್ಯಗೊಂಡರು.

[52] ರೊಟ್ಟಿಗಳ ಅದ್ಭುತವನ್ನು ಅವರು ಇನ್ನೂ ಗ್ರಹಿಸಿಕೊಂಡಿಲ್ಲವಾದ್ದರಿಂದ ಆಶ್ಚರ್ಯಚಕಿತರಾದರು. ಏಕೆಂದರೆ ಅವರ ಹೃದಯ ಕಠಿಣವಾಗಿತ್ತು.

[53] ಅವರು ಸರೋವರವನ್ನು ದಾಟಿ, ಗೆನೆಜರೇತ್ ಸೀಮೆಯ ದಡ ಸೇರಿದರು.

[54] ಅವರು ದೋಣಿಯಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುವಿನ ಗುರುತು ಹಿಡಿದರು.

[55] ಅವರು ಆ ಪ್ರದೇಶದಲ್ಲೆಲ್ಲಾ ಓಡಾಡಿ, ಕಾಯಿಲೆಯಾಗಿದ್ದವರನ್ನು ಚಾಪೆಗಳ ಮೇಲೆ ಹಾಕಿಕೊಂಡು ಯೇಸು ಎಲ್ಲಿದ್ದಾರೆಂದು ಕೇಳಿದರೋ ಅಲ್ಲಿಗೆ ಬರಲಾರಂಭಿಸಿದರು.

[56] ಯೇಸು ಹಳ್ಳಿ, ಪಟ್ಟಣ ಊರುಗಳಲ್ಲಿ ಎಲ್ಲೆಲ್ಲಿ ಹೋದರೋ ಅಲ್ಲಿ ಜನರು ರೋಗಿಗಳನ್ನು ತಂದು ಪೇಟೆಗಳಲ್ಲಿ ಇಟ್ಟು, ಯೇಸುವಿನ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಅವರನ್ನು ಬೇಡಿಕೊಂಡರು. ಯೇಸುವನ್ನು ಮುಟ್ಟಿದವರೆಲ್ಲರೂ ಗುಣಹೊಂದಿದರು.

ಮಾರ್ಕ — Chapters