[1] ಯೇಸು ಮತ್ತೊಮ್ಮೆ ಗಲಿಲಾಯ ಸರೋವರದ ತೀರದಲ್ಲಿ ಬೋಧಿಸಲಾರಂಭಿಸಿದರು. ಜನರು ಗುಂಪುಗುಂಪಾಗಿ ಯೇಸುವಿನ ಸುತ್ತಲೂ ನೆರೆದು ಬಂದದ್ದರಿಂದ ಯೇಸು ಸರೋವರದಲ್ಲಿದ್ದ ದೋಣಿಯನ್ನು ಹತ್ತಿ ಕುಳಿತುಕೊಂಡರು. ಜನರು ದಡದಲ್ಲಿ ಸುತ್ತಲೂ ನಿಂತಿದ್ದರು.
[2] ಯೇಸು ಸಾಮ್ಯಗಳ ಮೂಲಕ ಅನೇಕ ಸಂಗತಿಗಳನ್ನು ಅವರಿಗೆ ಬೋಧಿಸಿ ಹೇಳಿದ್ದೇನೆಂದರೆ:
[3] “ಕೇಳಿರಿ! ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು.
[4] ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು. ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
[5] ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.
[6] ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.
[7] ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಆ ಎಳೆಯ ಸಸಿಗಳನ್ನು ಅಡಗಿಸಿಬಿಟ್ಟಿದ್ದರಿಂದ ಅವು ಫಲ ಕೊಡಲಿಲ್ಲ.
[8] ಇನ್ನು ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು ಬೆಳೆದು ಮೂವತ್ತರಷ್ಟು, ಅರವತ್ತರಷ್ಟು, ನೂರರಷ್ಟು ಫಲಕೊಟ್ಟವು.”
[9] ಅನಂತರ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ,” ಎಂದು ಹೇಳಿದರು.
[10] ಯೇಸು ಒಬ್ಬರೇ ಇದ್ದಾಗ, ಹನ್ನೆರಡು ಮಂದಿ ಶಿಷ್ಯರು ಮತ್ತು ಯೇಸುವಿನ ಸುತ್ತಲಿದ್ದವರು ಬಂದು ಆ ಸಾಮ್ಯಗಳ ವಿಷಯವಾಗಿ ಕೇಳಿದರು.
[11] ಅದಕ್ಕೆ ಯೇಸು, “ದೇವರ ರಾಜ್ಯದ ರಹಸ್ಯವನ್ನು ತಿಳಿದುಕೊಳ್ಳುವ ಜ್ಞಾನ ನಿಮಗೆ ಕೊಡಲಾಗಿದೆ. ಆದರೆ ಹೊರಗಿನವರಿಗೆ ಎಲ್ಲವೂ ಸಾಮ್ಯದ ರೂಪದಲ್ಲಿ ಹೇಳಲಾಗಿದೆ.
[12] ಈ ಕಾರಣದಿಂದ, “ ‘ಅವರು ಕಣ್ಣಿದ್ದರೂ ಕಾಣುವುದಿಲ್ಲ. ಕೇಳಿಸಿಕೊಳ್ಳುತ್ತಿದ್ದರೂ ಗ್ರಹಿಸುವುದಿಲ್ಲ. ಹಾಗೆ ಮಾಡುವುದಾದರೆ, ಅವರು ದೇವರ ಕಡೆಗೆ ತಿರುಗಿಕೊಂಡು ಕ್ಷಮೆಹೊಂದುತ್ತಿದ್ದರು!’” ಎಂದರು.
[13] ಅನಂತರ ಯೇಸು ಅವರಿಗೆ, “ನಿಮಗೆ ಈ ಸಾಮ್ಯ ಅರ್ಥವಾಗಲಿಲ್ಲವೇ? ಹಾಗಾದರೆ ನೀವು ಬೇರೆ ಸಾಮ್ಯಗಳನ್ನು ಹೇಗೆ ಅರ್ಥಮಾಡಿಕೊಳ್ಳುವಿರಿ?
[14] ರೈತನು ‘ವಾಕ್ಯ’ ಎಂಬ ಬೀಜ ಬಿತ್ತುತ್ತಾನೆ.
[15] ಕೆಲವರು ದಾರಿಯ ಪಕ್ಕದಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯ ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ದೇವರ ವಾಕ್ಯವನ್ನು ತೆಗೆದುಬಿಡುತ್ತಾನೆ.
[16] ಇನ್ನೂ ಕೆಲವರು ಕಲ್ಲು ನೆಲದ ಮೇಲೆ ಬಿದ್ದ ಬೀಜದಂತಿರುವರು. ಅವರು ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.
[17] ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ.
[18] ಮತ್ತೆ ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜದಂತಿದ್ದಾರೆ. ಅವರು ವಾಕ್ಯವನ್ನು ಕೇಳುತ್ತಾರೆ.
[19] ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ಇನ್ನಿತರ ಅಭಿಲಾಷೆಗಳು ಸೇರಿ ದೇವರ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ.
[20] ಇನ್ನೂ ಕೆಲವರು ಒಳ್ಳೆಯ ಭೂಮಿಯಲ್ಲಿ ಬಿದ್ದ ಬೀಜದಂತಿದ್ದು, ವಾಕ್ಯವನ್ನು ಕೇಳಿ ಅಂಗೀಕರಿಸಿ, ಮೂವತ್ತರಷ್ಟು, ಅರವತ್ತರಷ್ಟು, ನೂರರಷ್ಟು ಫಲಕೊಡುತ್ತಾರೆ,” ಎಂದರು.
[21] ಯೇಸು ಅವರಿಗೆ, “ಯಾರಾದರೂ ದೀಪವನ್ನು ತಂದು ಬೋಗುಣಿಯೊಳಗೆ ಅಥವಾ ಮಂಚದ ಕೆಳಗೆ ಇಡುತ್ತಾರೋ? ಅದರ ಬದಲು ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ.
[22] ಮರೆಯಾಗಿರುವ ಯಾವುದೂ ವ್ಯಕ್ತವಾಗದೇ ಇರುವುದಿಲ್ಲ. ರಹಸ್ಯಗಳು ಬಹಿರಂಗವಾಗದೆ ಇರುವುದಿಲ್ಲ.
[23] ಕಿವಿಯುಳ್ಳವರು ಕೇಳಲಿ.”
[24] ಮತ್ತು ಯೇಸು ಅವರಿಗೆ, “ನೀವು ಕೇಳುವುದನ್ನು ಎಚ್ಚರಿಕೆಯಿಂದ ಗಮನಿಸಿರಿ; ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆದುಕೊಡಲಾಗುವುದು; ಇನ್ನೂ ಹೆಚ್ಚಾಗಿ ಸೇರಿಸಿಕೊಡಲಾಗುವುದು.
[25] ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದರು.
[26] ಯೇಸು, “ದೇವರ ರಾಜ್ಯವು ಹೀಗಿದೆ: ಒಬ್ಬನು ತನ್ನ ಹೊಲದಲ್ಲಿ ಬೀಜವನ್ನು ಬಿತ್ತಿದನು.
[27] ರಾತ್ರಿ ಅವನು ಮಲಗಿದ್ದರೂ ಹಗಲು ಎದ್ದಿದ್ದರೂ ಆ ಬೀಜವು ಅವನಿಗೆ ತಿಳಿಯದ ರೀತಿಯಲ್ಲಿ ಅಂಕುರಿಸಿ ಬೆಳೆಯುತ್ತದೆ.
[28] ಭೂಮಿಯು ಮೊದಲು ಸಸಿಯನ್ನು ಆಮೇಲೆ ಹೊಡೆಯನ್ನು ಅನಂತರ ತೆನೆಯ ತುಂಬಾ ಕಾಳನ್ನು ತನ್ನಷ್ಟಕ್ಕೆ ತಾನೇ ಬೆಳೆಸುತ್ತದೆ.
[29] ಬೆಳೆಯು ಮಾಗಿದ ಕೂಡಲೇ, ಅವನು ಕುಡುಗೋಲನ್ನು ಉಪಯೋಗಿಸುತ್ತಾನೆ. ಏಕೆಂದರೆ ಸುಗ್ಗಿಯು ಬಂದಿದೆ,” ಎಂದರು.
[30] ಯೇಸು ಮುಂದುವರಿಸಿ, “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ ಅಥವಾ ಅದನ್ನು ವಿವರಿಸಲು ಯಾವ ಸಾಮ್ಯವನ್ನು ಉಪಯೋಗಿಸೋಣ?
[31] ಅದು ಭೂಮಿಯ ಎಲ್ಲಾ ಬೀಜಗಳಿಗಿಂತ ಅತಿ ಚಿಕ್ಕದಾದ ಸಾಸಿವೆ ಕಾಳಿನಂತಿದೆ.
[32] ಅದನ್ನು ಬಿತ್ತಿದ ಮೇಲೆ, ಅದು ಬೆಳೆದು ತೋಟದ ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡ ರೆಂಬೆಗಳುಳ್ಳ ಮರವಾಗಿ ಬೆಳೆಯುತ್ತದೆ. ಆಕಾಶದ ಪಕ್ಷಿಗಳು ಬಂದು ಅದರ ನೆರಳಿನಲ್ಲಿ ಗೂಡು ಕಟ್ಟಿ ವಾಸಿಸುತ್ತವೆ,” ಎಂದು ಹೇಳಿದರು.
[33] ಈ ರೀತಿಯ ಅನೇಕ ಸಾಮ್ಯಗಳಿಂದ ಅವರ ಗ್ರಹಿಕೆಗೆ ತಕ್ಕ ಹಾಗೆ ಯೇಸು ಅವರಿಗೆ ವಾಕ್ಯವನ್ನು ಉಪದೇಶಿಸುತ್ತಿದ್ದರು.
[34] ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ. ಆದರೆ ಯೇಸು ತಮ್ಮ ಶಿಷ್ಯರೊಡನೆ ಏಕಾಂತವಾಗಿದ್ದಾಗ ಮಾತ್ರ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.
[35] ಆ ದಿನ ಸಂಜೆಯಾದಾಗ ಯೇಸು ತಮ್ಮ ಶಿಷ್ಯರಿಗೆ, “ನಾವು ಆಚೆದಡಕ್ಕೆ ಹೋಗೋಣ,” ಎಂದು ಹೇಳಿದರು.
[36] ಅವರು ಜನರ ಗುಂಪನ್ನು ಬಿಟ್ಟು, ಯೇಸುವನ್ನು ಇದ್ದ ಹಾಗೆಯೇ ದೋಣಿಯಲ್ಲಿ ಕರೆದುಕೊಂಡು ಹೋದರು. ಯೇಸುವಿನ ಸಂಗಡ ಬೇರೆ ದೋಣಿಗಳೂ ಇದ್ದವು.
[37] ಇದ್ದಕ್ಕಿದ್ದ ಹಾಗೆ ದೊಡ್ಡ ಬಿರುಗಾಳಿಯು ರಭಸವಾಗಿ ಬೀಸಿದ್ದರಿಂದ ಅಲೆಗಳು ದೋಣಿಗೆ ಅಪ್ಪಳಿಸಿದವು. ಆಗ ದೋಣಿಯೊಳಗೆ ನೀರು ನುಗ್ಗಿ ಅದು ಮುಳುಗಿ ಹೋಗುವುದರಲ್ಲಿತ್ತು.
[38] ಯೇಸು ದೋಣಿಯ ಹಿಂಭಾಗದಲ್ಲಿ ದಿಂಬಿನ ಮೇಲೆ ಒರಗಿ ನಿದ್ದೆಮಾಡುತ್ತಿದ್ದರು. ಶಿಷ್ಯರು ಯೇಸುವನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿ ಸಾಯುತ್ತಿದ್ದೇವೆ. ನಿಮಗೆ ಚಿಂತೆಯಿಲ್ಲವೇ?” ಎಂದು ಕೇಳಿದರು.
[39] ಯೇಸು ಎದ್ದು ಬಿರುಗಾಳಿಯನ್ನು ಗದರಿಸಿದರು ಮತ್ತು ಅಲೆಗಳಿಗೆ, “ಸುಮ್ಮನಿರು, ಶಾಂತವಾಗು!” ಎಂದು ಆಜ್ಞಾಪಿಸಿದರು. ಆಗ ಬಿರುಗಾಳಿಯು ನಿಂತು ಹೋಗಿ ಎಲ್ಲವೂ ಪ್ರಶಾಂತವಾಯಿತು.
[40] ಯೇಸು ತಮ್ಮ ಶಿಷ್ಯರಿಗೆ, “ನೀವು ಏಕೆ ಭಯಪಡುತ್ತೀರಿ? ನಿಮಗೆ ಇನ್ನೂ ನಂಬಿಕೆಯಿಲ್ಲವೇ?” ಎಂದರು.
[41] ಶಿಷ್ಯರು ಭಯಭೀತರಾಗಿ, “ಇವರು ಯಾರಿರಬಹುದು? ಗಾಳಿಯೂ ಸರೋವರವೂ ಸಹ ಇವರ ಮಾತುಗಳನ್ನು ಕೇಳುತ್ತವಲ್ಲಾ!” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.