Skip to content
Opens in a new window
Listen to this chapter • 5:49

[1] ಇನ್ನೊಂದು ಸಾರಿ ಯೇಸು ಸಭಾಮಂದಿರಕ್ಕೆ ಹೋದರು. ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು.

[2] ಕೆಲವರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು, ಸಬ್ಬತ್ ದಿನದಲ್ಲಿ ಅವನನ್ನು ಯೇಸು ಗುಣಪಡಿಸುವರೋ ಏನೋ ಎಂದು ಲಕ್ಷವಿಟ್ಟು ನೋಡುತ್ತಿದ್ದರು.

[3] ಯೇಸು ಕೈಬತ್ತಿದವನಿಗೆ, “ಎದ್ದು ಮುಂದೆ ಬಾ,” ಎಂದರು.

[4] ಆಗ ಯೇಸು ಅವರನ್ನು, “ಸಬ್ಬತ್ ದಿನದಲ್ಲಿ ಒಳ್ಳೆಯದನ್ನು ಮಾಡುವುದು ನಿಯಮಕ್ಕೆ ಸಮ್ಮತವೋ ಅಥವಾ ಕೆಟ್ಟದ್ದನ್ನು ಮಾಡುವುದೋ? ಪ್ರಾಣವನ್ನು ಉಳಿಸುವುದೋ ಅಥವಾ ತೆಗೆಯುವುದೋ?” ಎಂದು ಕೇಳಿದರು. ಅದಕ್ಕೆ ಅವರು ಸುಮ್ಮನಿದ್ದರು.

[5] ಆಗ ಯೇಸು ಸುತ್ತಲೂ ಇದ್ದವರನ್ನು ಕೋಪದಿಂದ ನೋಡಿ, ಅವರ ಹೃದಯಕಾಠಿಣ್ಯಕ್ಕಾಗಿ ದುಃಖಪಟ್ಟು, ಆ ಮನುಷ್ಯನಿಗೆ, “ನಿನ್ನ ಕೈಚಾಚು,” ಎಂದು ಹೇಳಿದರು. ಅವನು ಕೈಚಾಚಿದಾಗ, ಅವನ ಕೈ ಸಂಪೂರ್ಣವಾಗಿ ಗುಣವಾಯಿತು.

[6] ಫರಿಸಾಯರು ಅಲ್ಲಿಂದ ಹೊರಗೆ ಹೋಗಿ ಕೂಡಲೇ ಹೆರೋದ್ಯರೊಂದಿಗೆ ಸೇರಿಕೊಂಡು ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಒಳಸಂಚು ಮಾಡಿದರು.

[7] ಯೇಸು ತಮ್ಮ ಶಿಷ್ಯರೊಂದಿಗೆ ಸರೋವರದ ಬಳಿಗೆ ಹೊರಟು ಹೋದರು. ಗಲಿಲಾಯದಿಂದ ಬಂದ ಒಂದು ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು.

[8] ಯೇಸು ಮಾಡುತ್ತಿದ್ದ ಎಲ್ಲವನ್ನು ಕೇಳಿ, ಬಹುಜನರು ಯೂದಾಯದಿಂದಲೂ ಯೆರೂಸಲೇಮ್ ನಗರದಿಂದಲೂ ಇದುಮಾಯದಿಂದಲೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಟೈರ್, ಸೀದೋನ್ ಪಟ್ಟಣಗಳ ಸುತ್ತಲಿನಿಂದಲೂ ಯೇಸುವಿನ ಬಳಿಗೆ ಬಂದರು.

[9] ಜನರ ಗುಂಪು ಹೆಚ್ಚಾಗುತ್ತಿದ್ದುದರಿಂದ ಅವರು ತಮ್ಮ ಮೈಮೇಲೆ ಬಿದ್ದಾರೆಂದು ಯೇಸು ತಮಗಾಗಿ ಒಂದು ಚಿಕ್ಕ ದೋಣಿಯನ್ನು ಸಿದ್ಧವಾಗಿಡಲು ತಮ್ಮ ಶಿಷ್ಯರಿಗೆ ಹೇಳಿದರು.

[10] ಯೇಸು ಅನೇಕರನ್ನು ಗುಣಪಡಿಸಿದ್ದರಿಂದ ರೋಗಿಗಳೆಲ್ಲರೂ ಯೇಸುವನ್ನು ಮುಟ್ಟಬೇಕೆಂದು ನುಗ್ಗುತ್ತಿದ್ದರು.

[11] ದುರಾತ್ಮಗಳು ಯೇಸುವನ್ನು ಕಂಡಾಗಲೆಲ್ಲಾ ಅವರ ಮುಂದೆ ಬಿದ್ದು, “ನೀವು ದೇವರ ಪುತ್ರ,” ಎಂದು ಕಿರುಚಿದವು.

[12] ಆದರೆ ಯೇಸು, ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವುಗಳಿಗೆ ಕಟ್ಟಪ್ಪಣೆ ಮಾಡಿದರು.

[13] ಯೇಸು ಬೆಟ್ಟವನ್ನೇರಿ ತಮಗೆ ಬೇಕಾದವರನ್ನು ಕರೆದರು. ಅವರು ಯೇಸುವಿನ ಬಳಿಗೆ ಬಂದರು.

[14] ಯೇಸು ಹನ್ನೆರಡು ಮಂದಿಯನ್ನು ತಮ್ಮ ಸಂಗಡ ಇರಲು ಮತ್ತು ಅವರನ್ನು ಉಪದೇಶಮಾಡಲು ನೇಮಿಸಿ, ಅವರಿಗೆ “ಅಪೊಸ್ತಲರು” ಎಂದು ಕರೆದರು.

[15] ಅವರಿಗೆ ದೆವ್ವಗಳನ್ನು ಓಡಿಸುವ ಅಧಿಕಾರ ಕೊಟ್ಟರು.

[16] ಯೇಸು ನೇಮಿಸಿದ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಇಂತಿವೆ: ಸೀಮೋನನಿಗೆ ಯೇಸು “ಪೇತ್ರ” ಎಂಬ ಹೆಸರನ್ನು ಕೊಟ್ಟರು.

[17] ಜೆಬೆದಾಯನ ಮಗ ಯಾಕೋಬ ಮತ್ತು ಅವನ ತಮ್ಮ ಯೋಹಾನ ಇವರಿಗೆ ಯೇಸು “ಬೊವನೆರ್ಗೆಸ್” ಎಂದರೆ ಗುಡುಗಿನ ಪುತ್ರರು ಎಂಬ ಹೆಸರಿಟ್ಟರು.

[18] ಅಂದ್ರೆಯ, ಫಿಲಿಪ್ಪ, ಬಾರ್ತೊಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನನು.

[19] ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ.

[20] ಯೇಸು ಒಂದು ಮನೆಯೊಳಗೆ ಹೋದಾಗ, ಜನರು ತಿರುಗಿ ಗುಂಪಾಗಿ ನೆರೆದು ಬಂದದ್ದರಿಂದ ಯೇಸುವಿಗೂ ಅವರ ಶಿಷ್ಯರಿಗೂ ಊಟಮಾಡುವುದಕ್ಕೂ ಸಾಧ್ಯವಾಗಲಿಲ್ಲ.

[21] ಯೇಸುವಿನ ಕುಟುಂಬದವರು ಇದನ್ನು ಕೇಳಿದಾಗ, “ಆತನಿಗೆ ಹುಚ್ಚುಹಿಡಿದಿದೆ,” ಎಂದು ಹೇಳಿ, ಯೇಸುವನ್ನು ಹಿಡಿದು ತರಲು ಹೊರಟರು.

[22] ಯೆರೂಸಲೇಮಿನಿಂದ ಬಂದ ನಿಯಮ ಬೋಧಕರು, “ಈತನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ! ದೆವ್ವಗಳ ಅಧಿಪತಿಯ ಸಹಾಯದಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.

[23] ಆಗ ಯೇಸು ಅವರನ್ನು ಹತ್ತಿರಕ್ಕೆ ಕರೆದು ಸಾಮ್ಯರೂಪದಲ್ಲಿ ಹೇಳಿದ್ದೇನೆಂದರೆ: “ಸೈತಾನನು ಸೈತಾನನನ್ನು ಓಡಿಸುವುದು ಹೇಗೆ?

[24] ಒಂದು ರಾಜ್ಯ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ರಾಜ್ಯವು ನಿಲ್ಲುವುದಿಲ್ಲ.

[25] ಒಂದು ಕುಟುಂಬ ತನಗೆ ವಿರೋಧವಾಗಿ ವಿಭಾಗಿಸಿಕೊಂಡರೆ ಆ ಕುಟುಂಬವು ನಿಲ್ಲುವುದಿಲ್ಲ.

[26] ಸೈತಾನನು ತನಗೆ ವಿರೋಧವಾಗಿ ತಾನೇ ಎದ್ದು ವಿಭಾಗಿಸಿಕೊಂಡರೆ, ಅವನು ನಿಲ್ಲಲಾರದೆ ನಾಶವಾಗುವನು.

[27] ಒಬ್ಬನು ಬಲಿಷ್ಠನ ಮನೆಗೆ ನುಗ್ಗಿ ಮೊದಲು ಅವನನ್ನು ಕಟ್ಟಿಹಾಕದೆ ಅವನ ಸೊತ್ತನ್ನು ಸೂರೆ ಮಾಡಲಾಗುವುದಿಲ್ಲ. ಮೊದಲು ಅವನನ್ನು ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.

[28] ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಗಳಿಗೆ ಮತ್ತು ದೂಷಣೆಗಳಿಗೆ ಕ್ಷಮಾಪಣೆ ದೊರೆಯುವುದು.

[29] ಆದರೆ ಪವಿತ್ರಾತ್ಮರನ್ನು ದೂಷಿಸುವವನಿಗೆ ಎಂದಿಗೂ ಕ್ಷಮಾಪಣೆ ದೊರೆಯುವುದಿಲ್ಲ. ಅವನು ನಿತ್ಯ ಪಾಪದ ಅಪರಾಧಿಯಾಗಿದ್ದಾನೆ,” ಎಂದರು.

[30] “ಆತನಲ್ಲಿ ಅಶುದ್ಧಾತ್ಮವಿದೆ,” ಎಂದು ಅವರು ಹೇಳುತ್ತಿದ್ದುದರಿಂದ ಯೇಸು ಹೀಗೆ ಹೇಳಿದರು.

[31] ಆಗ ಯೇಸುವಿನ ತಾಯಿ ಮತ್ತು ಸಹೋದರರು ಬಂದು ಹೊರಗೆ ನಿಂತುಕೊಂಡು, ಯೇಸುವನ್ನು ಕರೆಯಲು ಹೇಳಿ ಕಳುಹಿಸಿದರು.

[32] ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದ ಜನರು ಅವರಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮಗಾಗಿ ಹೊರಗೆ ಕಾದಿದ್ದಾರೆ,” ಎಂದು ಹೇಳಿದರು.

[33] ಅದಕ್ಕೆ ಯೇಸು, “ನನ್ನ ತಾಯಿ ಮತ್ತು ಸಹೋದರರು ಯಾರು?” ಎಂದು ಕೇಳಿದರು.

[34] ಅನಂತರ ತಮ್ಮ ಸುತ್ತಲೂ ಕುಳಿತ್ತಿದ್ದವರನ್ನು ನೋಡಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು!

[35] ದೇವರ ಚಿತ್ತದಂತೆ ಮಾಡುವವರೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ ಆಗಿದ್ದಾರೆ,” ಎಂದು ಹೇಳಿದರು.

ಮಾರ್ಕ — Chapters