Skip to content
Opens in a new window
Listen to this chapter • 10:04

[1] ಯೇಸು ಅಲ್ಲಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು. ಅಲ್ಲಿ ಜನರು ತಿರುಗಿ ಅವರ ಬಳಿಗೆ ಬರಲು, ಯೇಸು ತಮ್ಮ ವಾಡಿಕೆಯಂತೆ ಅವರಿಗೆ ಮತ್ತೆ ಬೋಧಿಸಿದರು.

[2] ಫರಿಸಾಯರಲ್ಲಿ ಕೆಲವರು ಯೇಸುವಿನ ಬಳಿಗೆ ಬಂದು ಅವರನ್ನು ಪರೀಕ್ಷಿಸುವುದಕ್ಕಾಗಿ ಯೇಸುವಿಗೆ, “ಒಬ್ಬ ಪುರುಷನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.

[3] ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮಗೆ ಏನು ಅಪ್ಪಣೆಕೊಟ್ಟನು?” ಎಂದು ಕೇಳಿದರು.

[4] ಅದಕ್ಕೆ ಅವರು, “ವಿವಾಹ ವಿಚ್ಛೇದನ ಪತ್ರವನ್ನು ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬೇಕೆಂದು ಮೋಶೆಯು ಅನುಮತಿ ಕೊಟ್ಟನು,” ಎಂದರು.

[5] ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ನಿಮಿತ್ತವಾಗಿ ನಿಮಗೆ ಈ ಆಜ್ಞೆಯನ್ನು ಬರೆದನು.

[6] ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.’

[7] ‘ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು.

[8] ಅವರಿಬ್ಬರೂ ಒಂದೇ ಶರೀರವಾಗಿರುವರು.’ ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ.

[9] ಆದಕಾರಣ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು,” ಎಂದರು.

[10] ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಯೇಸುವಿಗೆ ತಿರುಗಿ ಕೇಳಿದರು.

[11] ಅದಕ್ಕೆ ಯೇಸು ಅವರಿಗೆ, “ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಯಾದರೆ, ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿದ್ದಾನೆ.

[12] ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ, ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ,” ಎಂದರು.

[13] ಕೆಲವರು ತಮ್ಮ ಚಿಕ್ಕಮಕ್ಕಳನ್ನು ಯೇಸು ಮುಟ್ಟಬೇಕೆಂದು ಅವರ ಬಳಿಗೆ ತಂದರು. ಆದರೆ ಶಿಷ್ಯರು ಜನರನ್ನು ಗದರಿಸಿದರು.

[14] ಯೇಸು ಅದನ್ನು ಕಂಡಾಗ ಕೋಪಗೊಂಡು ಅವರಿಗೆ, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ. ಅವುಗಳಿಗೆ ಅಡ್ಡಿಮಾಡಬೇಡಿರಿ. ಏಕೆಂದರೆ ದೇವರ ರಾಜ್ಯವು ಇಂಥವರದೇ.

[15] ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾರಾದರೂ ಚಿಕ್ಕಮಗುವಿನಂತೆ ದೇವರ ರಾಜ್ಯವನ್ನು ಸ್ವೀಕರಿಸದಿದ್ದರೆ, ಅವರು ಅದರೊಳಗೆ ಸೇರುವುದೇ ಇಲ್ಲ,” ಎಂದರು.

[16] ಇದಲ್ಲದೆ ಯೇಸು ಆ ಮಕ್ಕಳನ್ನು ಎತ್ತಿಕೊಂಡು ತಮ್ಮ ಕೈಗಳನ್ನು ಅವುಗಳ ಮೇಲೆ ಇಟ್ಟು ಆಶೀರ್ವದಿಸಿದರು.

[17] ಯೇಸು ಅಲ್ಲಿಂದ ಹೋಗುತ್ತಿದ್ದಾಗ ಒಬ್ಬನು ಓಡುತ್ತಾ ಬಂದು ಅವರ ಮುಂದೆ ಮೊಣಕಾಲೂರಿ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಪ್ರಾಪ್ತಿಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?” ಎಂದು ಯೇಸುವನ್ನು ಕೇಳಿದನು.

[18] ಯೇಸು ಅವನಿಗೆ, “ನೀನು ನನ್ನನ್ನು ಒಳ್ಳೆಯವನೆಂದು ಏಕೆ ಕರೆಯುತ್ತಿ? ದೇವರೊಬ್ಬನೇ ಹೊರತು ಬೇರೆ ಯಾರೂ ಒಳ್ಳೆಯವರಲ್ಲ.

[19] ‘ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ಮೋಸಮಾಡಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,’ ಎಂಬ ಈ ಆಜ್ಞೆಗಳು ನಿನಗೆ ಗೊತ್ತಿವೆಯಲ್ಲಾ,” ಎಂದರು.

[20] ಅವನು, “ಬೋಧಕರೇ, ನಾನು ಇವೆಲ್ಲವನ್ನು ನನ್ನ ಬಾಲ್ಯದಿಂದಲೇ ಅನುಸರಿಸಿದ್ದೇನೆ,” ಎಂದು ಹೇಳಿದನು.

[21] ಯೇಸು ಅವನನ್ನು ದೃಷ್ಟಿಸಿ ನೋಡುತ್ತಾ ಅವನನ್ನು ಪ್ರೀತಿಸಿ ಅವನಿಗೆ, “ನಿನಗೆ ಒಂದು ಕಡಿಮೆ ಇದೆ. ನೀನು ಹೋಗಿ ನಿನಗೆ ಇರುವುದೆಲ್ಲವನ್ನು ಮಾರಿ ಬಡವರಿಗೆ ಕೊಡು; ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದರು.

[22] ಆ ಮಾತಿಗೆ ಅವನು ವ್ಯಸನಗೊಂಡು ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.

[23] ಯೇಸು ಸುತ್ತಲೂ ನೋಡಿ ತಮ್ಮ ಶಿಷ್ಯರಿಗೆ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ!” ಎಂದರು.

[24] ಶಿಷ್ಯರು ಯೇಸುವಿನ ಮಾತುಗಳಿಗೆ ಬೆರಗಾದರು. ಆದರೆ ಯೇಸು ತಿರುಗಿ ಅವರಿಗೆ, “ಮಕ್ಕಳೇ, ದೇವರ ರಾಜ್ಯವನ್ನು ಪ್ರವೇಶಿಸುವುದು ಬಹಳ ಕಷ್ಟ.

[25] ಒಬ್ಬ ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ,” ಎಂದು ಹೇಳಿದರು.

[26] ಅದಕ್ಕೆ ಶಿಷ್ಯರು ಅತ್ಯಂತ ಆಶ್ಚರ್ಯಪಟ್ಟು ತಮ್ಮೊಳಗೆ, “ಹಾಗಾದರೆ ಯಾರು ರಕ್ಷಣೆ ಹೊಂದುವವರು?” ಎಂದುಕೊಂಡರು.

[27] ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ, ದೇವರಿಗೆ ಅಲ್ಲ, ದೇವರಿಗೆ ಎಲ್ಲವೂ ಸಾಧ್ಯ,” ಎಂದರು.

[28] ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ,” ಎಂದು ಹೇಳಲಾರಂಭಿಸಿದನು.

[29] ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಯಾರಾದರೂ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಯನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ ಬಿಟ್ಟುಬಿಟ್ಟರೆ,

[30] ಅವರು ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳನ್ನೂ ಸಹೋದರರನ್ನೂ ಸಹೋದರಿಯರನ್ನೂ ತಾಯಂದಿರನ್ನೂ ಮಕ್ಕಳನ್ನೂ ಹೊಲವನ್ನೂ ನೂರರಷ್ಟು ಪಡೆಯುವುದಲ್ಲದೆ ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಹೊಂದುವರು.

[31] ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲಿನವರಾಗುವರು,” ಎಂದರು.

[32] ಅವರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿದ್ದರು. ಯೇಸು ಅವರ ಮುಂದಾಗಿ ಹೋದದ್ದರಿಂದ ಶಿಷ್ಯರು ಆಶ್ಚರ್ಯಪಟ್ಟರು. ಯೇಸುವಿನ ಹಿಂದೆ ಬರುತ್ತಿದ್ದವರು ಭಯಪಟ್ಟರು. ಯೇಸು ತಮ್ಮ ಹನ್ನೆರಡು ಮಂದಿಯನ್ನು ತಿರುಗಿ ಕರೆದು ತನಗೆ ಸಂಭವಿಸುವ ಸಂಗತಿಗಳನ್ನು ಅವರಿಗೆ ಹೇಳಲಾರಂಭಿಸಿದರು:

[33] “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸಿ ನನ್ನನ್ನು ಯೆಹೂದ್ಯರಲ್ಲದವರಿಗೆ ಒಪ್ಪಿಸುವರು.

[34] ಇವರು ನನ್ನನ್ನು ಹಾಸ್ಯಮಾಡಿ, ನನ್ನ ಮೇಲೆ ಉಗುಳಿ, ಕೊರಡೆಯಿಂದ ಹೊಡೆದು ನನ್ನನ್ನು ಕೊಂದುಹಾಕುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದರು.

[35] ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಯೇಸುವಿನ ಬಳಿಗೆ ಬಂದು, “ಬೋಧಕರೇ, ನಾವು ಕೇಳುವುದನ್ನು ನೀವು ನಮಗೋಸ್ಕರ ಮಾಡಬೇಕು,” ಎಂದರು.

[36] ಅದಕ್ಕೆ ಯೇಸು ಅವರಿಗೆ, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.

[37] ಅವರು ಯೇಸುವಿಗೆ, “ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು,” ಎಂದರು.

[38] ಯೇಸು ಅವರಿಗೆ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯುವ ಪಾತ್ರೆಯಲ್ಲಿ ನೀವೂ ಕುಡಿಯುವಿರೋ? ನಾನು ಪಡೆಯಲಿರುವ ದೀಕ್ಷಾಸ್ನಾನವನ್ನು ನೀವೂ ಪಡೆಯುವಿರೋ?” ಎಂದರು.

[39] ಅದಕ್ಕೆ ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು. ಆಗ ಯೇಸು ಅವರಿಗೆ, “ನಾನು ಕುಡಿಯುವ ಪಾತ್ರೆಯಿಂದ ನೀವು ಕುಡಿಯುವಿರಿ. ನಾನು ಹೊಂದುವ ದೀಕ್ಷಾಸ್ನಾನವನ್ನು ನೀವೂ ಹೊಂದುವಿರಿ.

[40] ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದರು.

[41] ಆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಯಾಕೋಬ ಮತ್ತು ಯೋಹಾನರ ಮೇಲೆ ಕೋಪಗೊಂಡರು.

[42] ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು ಅವರಿಗೆ, “ಆಳುವವರು ಎಂದೆನಿಸಿಕೊಂಡವರು ಯೆಹೂದ್ಯರಲ್ಲದವರ ಮೇಲೆ ದೊರೆತನ ಮಾಡುತ್ತಾರೆ. ಅವರಲ್ಲಿ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರ ಮಾಡುತ್ತಾರೆಂದು ನೀವು ಬಲ್ಲಿರಿ.

[43] ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ.

[44] ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ ಎಲ್ಲರಿಗೂ ದಾಸನಾಗಿರಲಿ.

[45] ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.

[46] ತರುವಾಯ ಅವರು ಯೆರಿಕೋವಿಗೆ ಬಂದರು. ಯೇಸು ತಮ್ಮ ಶಿಷ್ಯರೊಡನೆಯೂ ಅಸಂಖ್ಯಾತ ಜನರೊಡನೆಯೂ ಯೆರಿಕೋವಿನಿಂದ ಹೊರಟಾಗ ತಿಮಾಯನ ಮಗ ಕುರುಡ ಬಾರ್ತಿಮಾಯನು ದಾರಿಯಲ್ಲಿ ಕುಳಿತುಕೊಂಡು ಭಿಕ್ಷೆಬೇಡುತ್ತಿದ್ದನು.

[47] ನಜರೇತಿನ ಯೇಸು ಬರುತ್ತಿದ್ದಾರೆ ಎಂದು ಅವನು ಕೇಳಿದಾಗ, “ಯೇಸುವೇ, ದಾವೀದನ ಪುತ್ರನೇ, ನನ್ನನ್ನು ಕರುಣಿಸು,” ಎಂದು ಕೂಗಿಕೊಳ್ಳಲಾರಂಭಿಸಿದನು.

[48] ಸುಮ್ಮನಿರುವಂತೆ ಅನೇಕರು ಅವನಿಗೆ ಒತ್ತಾಯಪಡಿಸಿ ಹೇಳಿದರು. ಆದರೆ ಅವನು ಇನ್ನೂ ಗಟ್ಟಿಯಾಗಿ, “ದಾವೀದನ ಪುತ್ರನೇ, ನನ್ನನ್ನು ಕರುಣಿಸು,” ಎಂದು ಇನ್ನಷ್ಟು ಕೂಗಿದನು.

[49] ಯೇಸು ನಿಂತು, ಅವನನ್ನು ಕರೆಯಬೇಕೆಂದು ಆಜ್ಞಾಪಿಸಲು, ಅವರು ಆ ಕುರುಡನನ್ನು ಕರೆದು, “ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಿದ್ದಾರೆ,” ಎಂದು ಅವನಿಗೆ ಹೇಳಿದರು.

[50] ಅವನು ತನ್ನ ಮೇಲಂಗಿಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು.

[51] ಯೇಸು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ನೀನು ಕೋರುತ್ತೀ?” ಎಂದು ಕೇಳಲು, ಆ ಕುರುಡನು ಯೇಸುವಿಗೆ, “ಗುರುವೇ, ನನಗೆ ಕಣ್ಣು ಕಾಣುವಂತೆ ಮಾಡಬೇಕು,” ಎಂದನು.

[52] ಅದಕ್ಕೆ ಯೇಸು ಅವನಿಗೆ, “ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ,” ಎಂದರು. ಕೂಡಲೇ ಅವನು ತನ್ನ ದೃಷ್ಟಿಯನ್ನು ಪಡೆದು, ದಾರಿಯಲ್ಲಿ ಯೇಸುವನ್ನು ಹಿಂಬಾಲಿಸಿದನು.

ಮಾರ್ಕ — Chapters