Skip to content
Opens in a new window
Listen to this chapter • 7:44

[1] ಅವರೆಲ್ಲರು ಸರೋವರದ ಆಚೆಯ ಕಡೆಯಲ್ಲಿದ್ದ ಗೆರಸೇನರ ಪ್ರಾಂತವನ್ನು ಸೇರಿದರು.

[2] ಯೇಸು ದೋಣಿಯಿಂದ ಇಳಿದುಬರುವಾಗ, ಅಶುದ್ಧಾತ್ಮವುಳ್ಳ ಒಬ್ಬನು ಸಮಾಧಿಯ ಗುಹೆಯೊಳಗಿಂದ ಹೊರಬಂದು ಅವರನ್ನು ಸಂಧಿಸಿದನು.

[3] ಅವನು ಸಮಾಧಿಯ ಗುಹೆಗಳ ನಡುವೆ ವಾಸಿಸುತ್ತಿದ್ದನು ಮತ್ತು ಯಾರಿಗೂ ಅವನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. ಸರಪಣಿಯಿಂದಲೂ ಅವನನ್ನು ಕಟ್ಟಿ ಹಾಕಲು ಆಗುತ್ತಿರಲಿಲ್ಲ.

[4] ಅನೇಕ ಸಾರಿ ಅವನ ಕೈಕಾಲುಗಳನ್ನು ಸರಪಣಿಗಳಿಂದ ಕಟ್ಟಿಹಾಕಿದ್ದರೂ ಅವನು ಅವುಗಳನ್ನು ಕಿತ್ತೆಸೆದು, ಬೇಡಿಗಳನ್ನು ತುಂಡುತುಂಡು ಮಾಡುತ್ತಿದ್ದನು. ಅವನನ್ನು ಹತೋಟಿಯಲ್ಲಿಡುವಷ್ಟು ಬಲ ಯಾರಿಗೂ ಇರಲಿಲ್ಲ.

[5] ಅವನು ಹಗಲಿರುಳು ಸಮಾಧಿಯ ಗುಹೆಗಳಲ್ಲಿಯೂ ಗುಡ್ಡಗಳಲ್ಲಿಯೂ ಇರುವವನಾಗಿ ಅರಚುತ್ತಾ ಕಲ್ಲುಗಳಿಂದ ತನ್ನನ್ನು ತಾನೇ ಚಚ್ಚಿಕೊಳ್ಳುತ್ತಿದ್ದನು.

[6] ಅವನು ಯೇಸುವನ್ನು ದೂರದಿಂದ ಕಂಡು ಓಡಿಬಂದು, ಅವರ ಮುಂದೆ ಮೊಣಕಾಲೂರಿ,

[7] ಮಹಾಶಬ್ದದಿಂದ ಆರ್ಭಟಿಸಿ, “ಯೇಸುವೇ, ಮಹೋನ್ನತ ದೇವಪುತ್ರನೇ, ನನ್ನ ಗೊಡವೆ ನಿಮಗೆ ಏಕೆ? ದೇವರಾಣೆ, ನನ್ನನ್ನು ಪೀಡಿಸಬೇಡಿರಿ!” ಎಂದು ಅರಚಿದನು.

[8] ಏಕೆಂದರೆ ಯೇಸು ಅವನಿಗೆ, “ಅಶುದ್ಧಾತ್ಮವೇ ಅವನನ್ನು ಬಿಟ್ಟು ಹೊರಗೆ ಬಾ!” ಎಂದು ಹೇಳಿದ್ದರು.

[9] ಅನಂತರ, ಯೇಸು ಅವನಿಗೆ, “ನಿನ್ನ ಹೆಸರೇನು?” ಎಂದು ಕೇಳಿದಾಗ, “ನನ್ನ ಹೆಸರು ಸೇನೆ, ಏಕೆಂದರೆ ನಾವು ಬಹುಮಂದಿ ಇದ್ದೇವೆ,” ಎಂದು ಹೇಳಿದನು.

[10] ಅವುಗಳನ್ನು ಆ ಪ್ರಾಂತದಿಂದ ಹೊರಗಟ್ಟಬಾರದೆಂದು ಅವನು ಯೇಸುವನ್ನು ಬಹಳವಾಗಿ ಬೇಡಿಕೊಂಡನು.

[11] ಹತ್ತಿರದಲ್ಲಿದ್ದ ಗುಡ್ಡದ ಸಮೀಪದಲ್ಲಿ ಹಂದಿಗಳ ಒಂದು ದೊಡ್ಡ ಹಿಂಡು ಮೇಯುತ್ತಿತ್ತು.

[12] “ನಾವು ಆ ಹಂದಿಗಳ ಹಿಂಡಿನೊಳಗೆ ಸೇರಿಕೊಳ್ಳುವಂತೆ ನಮ್ಮನ್ನು ಅವುಗಳೊಳಗೆ ಕಳುಹಿಸಿಕೊಡಿ,” ಎಂದು ದೆವ್ವಗಳು ಯೇಸುವನ್ನು ಬೇಡಿಕೊಂಡವು.

[13] ಯೇಸು ಅವುಗಳಿಗೆ ಅಪ್ಪಣೆಕೊಡಲು, ಆ ಅಶುದ್ಧಾತ್ಮಗಳು ಅವನಿಂದ ಹೊರಗೆ ಬಂದು ಹಂದಿಗಳೊಳಗೆ ಸೇರಿದವು. ಸುಮಾರು ಎರಡು ಸಾವಿರ ಹಂದಿಗಳಿದ್ದ ಆ ಹಿಂಡು ಓಡಿ ಕಡಿದಾದ ಬದಿಯಿಂದ ಸರೋವರದೊಳಗೆ ಬಿದ್ದು ಮುಳುಗಿ ಸತ್ತು ಹೋದವು.

[14] ಆ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ ಪಟ್ಟಣದಲ್ಲಿಯೂ ಸೀಮೆಯಲ್ಲಿಯೂ ನಡೆದ ಸಂಗತಿಯನ್ನು ತಿಳಿಸಿದರು ಮತ್ತು ನಡೆದದ್ದನ್ನು ಕಾಣಲು ಜನರು ಬಂದರು.

[15] ಅವರು ಯೇಸುವಿನ ಬಳಿಗೆ ಬಂದಾಗ, ದೆವ್ವಗಳ ಸೇನೆಯಿಂದ ಪೀಡಿತನಾಗಿದ್ದವನು ಬಟ್ಟೆಗಳನ್ನು ಧರಿಸಿಕೊಂಡು ಸ್ವಸ್ಥಬುದ್ಧಿಯುಳ್ಳವನಾಗಿ ಕುಳಿತಿರುವುದನ್ನು ಕಂಡು ಭಯಪಟ್ಟರು.

[16] ನಡೆದದ್ದನ್ನು ಕಂಡವರು, ದೆವ್ವಪೀಡಿತನಾಗಿದ್ದವನಿಗೆ ಏನಾಯಿತೆಂಬುದನ್ನು ಮತ್ತು ಹಂದಿಗಳಿಗಾದ ಗತಿಯನ್ನು ಜನರಿಗೆ ತಿಳಿಸಿದರು.

[17] ಆಗ ಅವರು ಯೇಸುವಿಗೆ, ತಮ್ಮ ಪ್ರಾಂತವನ್ನು ಬಿಟ್ಟು ಹೊರಟುಹೋಗಬೇಕೆಂದು ಕೇಳಿಕೊಂಡರು.

[18] ಯೇಸು ದೋಣಿಯನ್ನು ಹತ್ತುತ್ತಿದ್ದಾಗ, ದೆವ್ವಪೀಡಿತನಾಗಿದ್ದವನು ತನ್ನನ್ನು ಅವರ ಜೊತೆಯಲ್ಲಿ ಕರೆದುಕೊಂಡು ಹೋಗಬೇಕೆಂದು ಬೇಡಿಕೊಂಡನು.

[19] ಯೇಸು ಅದಕ್ಕೊಪ್ಪದೆ ಅವನಿಗೆ, “ನೀನು ಮನೆಗೆ ಹೋಗಿ ನಿನ್ನ ಜನರಿಗೆ ಕರ್ತದೇವರು ನಿನಗೆ ಮಾಡಿರುವ ಮಹಾಕಾರ್ಯಗಳನ್ನು ಮತ್ತು ನಿನ್ನನ್ನು ಹೇಗೆ ಕರುಣಿಸಿದ್ದಾರೆ ಎಂಬುದನ್ನು ತಿಳಿಸು,” ಎಂದರು.

[20] ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಮಹಾಕಾರ್ಯಗಳನ್ನು ದೆಕಪೊಲಿಯಲ್ಲಿ ಸಾರಲಾರಂಭಿಸಿದನು ಮತ್ತು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು.

[21] ಯೇಸು ಪುನಃ ದೋಣಿಯಲ್ಲಿ ಆಚೆಯ ದಡವನ್ನು ಮುಟ್ಟಿದಾಗ, ಜನರು ದೊಡ್ಡ ಗುಂಪಾಗಿ ಅವರ ಸುತ್ತಲೂ ಸೇರಿ ಬಂದರು.

[22] ಯೇಸು ಸರೋವರದ ದಡದಲ್ಲಿದ್ದಾಗ ಸಭಾಮಂದಿರದ ಅಧಿಕಾರಿಗಳಲ್ಲಿ ಒಬ್ಬನಾದ ಯಾಯೀರನು ಅಲ್ಲಿಗೆ ಬಂದು ಯೇಸುವನ್ನು ಕಂಡು ಅವರ ಪಾದಕ್ಕೆ ಬಿದ್ದು,

[23] “ನನ್ನ ಚಿಕ್ಕ ಮಗಳು ಸಾಯುತ್ತಿದ್ದಾಳೆ. ಅವಳು ಗುಣಹೊಂದಿ ಬದುಕುವಂತೆ ದಯಮಾಡಿ ಬಂದು ಅವಳ ಮೇಲೆ ನಿಮ್ಮ ಕೈಗಳನ್ನಿಡಬೇಕು,” ಎಂದು ಬಹಳವಾಗಿ ಬೇಡಿಕೊಂಡನು.

[24] ಆಗ ಯೇಸು ಅವನೊಂದಿಗೆ ಹೋದರು. ಜನರು ದೊಡ್ಡ ಗುಂಪಾಗಿ ಯೇಸುವನ್ನು ನೂಕುತ್ತಾ ಹಿಂಬಾಲಿಸಿದರು.

[25] ಹನ್ನೆರಡು ವರ್ಷಗಳಿಂದಲೂ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀ ಆ ಗುಂಪಿನಲ್ಲಿದ್ದಳು.

[26] ಆಕೆ ಅನೇಕ ವೈದ್ಯರ ಚಿಕಿತ್ಸೆಯಿಂದ ಬಹು ಶ್ರಮಪಟ್ಟು, ತನಗಿದ್ದದ್ದೆಲ್ಲವನ್ನು ಖರ್ಚು ಮಾಡಿದ್ದರೂ ಸ್ವಲ್ಪವೂ ಪ್ರಯೋಜನವಾಗದೆ ಆ ರೋಗವು ಇನ್ನೂ ಹೆಚ್ಚಾಗುತ್ತಾ ಬಂತು.

[27] ಆಕೆ ಯೇಸುವಿನ ವಿಷಯವಾಗಿ ಕೇಳಿ, ಜನರ ಗುಂಪಿನಲ್ಲಿ ಅವರ ಹಿಂದೆ ಬಂದು ಯೇಸುವಿನ ಉಡುಪಿನ ಅಂಚನ್ನು ಮುಟ್ಟಿದಳು.

[28] ಏಕೆಂದರೆ, “ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದುಕೊಂಡಿದ್ದಳು.

[29] ಕೂಡಲೇ ಆಕೆಯ ರಕ್ತಸ್ರಾವವು ನಿಂತಿತು ಮತ್ತು ರೋಗಬಾಧೆಯಿಂದ ತಾನು ಗುಣಹೊಂದಿದಳೆಂದು ಆಕೆಗೆ ತಿಳಿಯಿತು.

[30] ಕೂಡಲೇ ಗುಣಪಡಿಸುವ ಶಕ್ತಿಯು ತನ್ನಿಂದ ಹೊರಟಿತೆಂದು ಯೇಸು ತಿಳಿದು, ಜನರ ನಡುವೆ ಸುತ್ತಲೂ ನೋಡಿ, “ನನ್ನ ಉಡುಪನ್ನು ಮುಟ್ಟಿದವರು ಯಾರು?” ಎಂದು ಕೇಳಿದರು.

[31] ಯೇಸುವಿನ ಶಿಷ್ಯರು ಅವರಿಗೆ, “ಇಷ್ಟು ದೊಡ್ಡ ಗುಂಪು ನಿಮ್ಮ ಸುತ್ತಲೂ ನೂಕುತ್ತಿರುವುದನ್ನು ನೀವೇ ಕಾಣುತ್ತಿರುವಲ್ಲಿ, ‘ನನ್ನನ್ನು ಮುಟ್ಟಿದವರು ಯಾರು,’ ಎಂದು ಕೇಳುತ್ತೀರಲ್ಲಾ?” ಎಂದರು.

[32] ಆದರೆ ಯೇಸು ತಮ್ಮನ್ನು ಮುಟ್ಟಿದವರು ಯಾರು ಎಂದು ಕಾಣಲು ಸುತ್ತಲೂ ನೋಡಲಾರಂಭಿಸಿದರು.

[33] ಆಗ ಆ ಸ್ತ್ರೀ ತನಗೆ ಸಂಭವಿಸಿದ್ದನ್ನು ಗ್ರಹಿಸಿ, ಬಂದು ಯೇಸುವಿನ ಮುಂದೆ ಅಡ್ಡಬಿದ್ದು, ಭಯದಿಂದ ನಡುಗುತ್ತಾ ನಡೆದ ಎಲ್ಲಾ ನಿಜಸಂಗತಿಯನ್ನು ತಿಳಿಸಿದಳು.

[34] ಯೇಸು ಆ ಸ್ತ್ರೀಗೆ, “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ. ಸಮಾಧಾನದಿಂದ ಹೋಗು, ನಿನ್ನ ಬಾಧೆಯಿಂದ ನೀನು ಮುಕ್ತಳಾಗಿರುವೆ,” ಎಂದು ಹೇಳಿದರು.

[35] ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಸಭಾಮಂದಿರದ ಅಧಿಕಾರಿಯಾದ ಯಾಯೀರನ ಮನೆಯಿಂದ ಕೆಲವರು ಬಂದು, “ನಿನ್ನ ಮಗಳು ತೀರಿಹೋದಳು. ಇನ್ನೂ ಗುರುವಿಗೆ ತೊಂದರೆಪಡಿಸುವುದೇಕೆ?” ಎಂದರು.

[36] ಆದರೆ ಯೇಸು ಅವರು ಹೇಳಿದ ಮಾತನ್ನು ಲಕ್ಷ್ಯಮಾಡದೆ, ಆ ಸಭಾಮಂದಿರದ ಅಧಿಕಾರಿಗೆ, “ಭಯಪಡಬೇಡ ನಂಬಿಕೆ ಮಾತ್ರ ಇರಲಿ,” ಎಂದರು.

[37] ಯೇಸು ತಮ್ಮ ಸಂಗಡ ಪೇತ್ರ, ಯಾಕೋಬ ಮತ್ತು ಅವನ ತಮ್ಮ ಯೋಹಾನನನ್ನು ಹೊರತು ಬೇರೆ ಯಾರನ್ನೂ ಬರುವುದಕ್ಕೆ ಅನುಮತಿಸಲಿಲ್ಲ.

[38] ಅವರು ಸಭಾಮಂದಿರದ ಅಧಿಕಾರಿಯ ಮನೆಗೆ ಬಂದಾಗ, ಯೇಸು ಜನರು ಬಹಳವಾಗಿ ಗೋಳಾಡುವುದನ್ನೂ ಪ್ರಲಾಪಿಸುವುದನ್ನೂ ಕಂಡರು.

[39] ಯೇಸು ಮನೆಯೊಳಗೆ ಹೋಗಿ, “ನೀವು ಗೋಳಾಡಿ ಅಳುವುದೇಕೆ? ಮಗು ಸತ್ತಿಲ್ಲ, ಅವಳು ನಿದ್ದೆ ಮಾಡುತ್ತಿದ್ದಾಳೆ,” ಎಂದರು.

[40] ಆದರೆ ಅವರು ಯೇಸುವನ್ನು ಪರಿಹಾಸ್ಯ ಮಾಡಿದರು. ಯೇಸು ಅವರನ್ನೆಲ್ಲಾ ಹೊರಗೆ ಹಾಕಿ, ಆ ಹುಡುಗಿಯ ತಂದೆತಾಯಿ ಮತ್ತು ತನ್ನೊಂದಿಗಿದ್ದ ಶಿಷ್ಯರನ್ನು ಮಾತ್ರ ಕರೆದುಕೊಂಡು ಆ ಹುಡುಗಿಯನ್ನಿಟ್ಟಿದ್ದ ಕೋಣೆಗೆ ಹೋದರು.

[41] ಯೇಸು ಆಕೆಯ ಕೈಹಿಡಿದು, “ತಲಿಥಾ ಕೂಮ್!” ಎಂದರು. ಅರಮೀಯ ಭಾಷೆಯಲ್ಲಿ ಇದರ ಅರ್ಥ, “ಚಿಕ್ಕ ಹುಡುಗಿಯೇ! ನಾನು ನಿನಗೆ ಹೇಳುತ್ತೇನೆ, ಎದ್ದೇಳು!” ಎಂಬುದು.

[42] ಕೂಡಲೇ ಆ ಹುಡುಗಿ ಎದ್ದು ನಡೆದಾಡಿದಳು. ಆಕೆಗೆ ಹನ್ನೆರಡು ವಯಸ್ಸಾಗಿತ್ತು. ಎಲ್ಲರೂ ಬಹಳ ಆಶ್ಚರ್ಯಪಟ್ಟರು.

[43] ಯೇಸು ಅವರಿಗೆ ನಡೆದದ್ದನ್ನು ಯಾರಿಗೂ ತಿಳಿಸಬಾರದು ಎಂದು ಬಹು ಖಂಡಿತವಾಗಿ ಹೇಳಿ ಹುಡುಗಿಗೆ ತಿನ್ನಲು ಏನಾದರೂ ಕೊಡಬೇಕೆಂದು ಹೇಳಿದರು.

ಮಾರ್ಕ — Chapters