Skip to content
Opens in a new window
Listen to this chapter • 8:48

[1] ಯೇಸು ಸಾಮ್ಯಗಳಿಂದ ಮಾತನಾಡಲು ಪ್ರಾರಂಭಿಸಿದರು: “ಒಬ್ಬಾನೊಬ್ಬ ಮನುಷ್ಯನು ಒಂದು ದ್ರಾಕ್ಷಿಯ ತೋಟವನ್ನು ಮಾಡಿ ಸುತ್ತಲೂ ಬೇಲಿ ಹಾಕಿದನು. ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ವಹಿಸಿಬಿಟ್ಟು ದೂರದೇಶಕ್ಕೆ ಹೊರಟುಹೋದನು.

[2] ಫಲದ ಕಾಲ ಬಂದಾಗ ಅವನು ದ್ರಾಕ್ಷಿತೋಟದ ಫಲವನ್ನು ರೈತರಿಂದ ಪಡೆಯುವುದಕ್ಕಾಗಿ ಅವರ ಬಳಿಗೆ ಒಬ್ಬ ಸೇವಕನನ್ನು ಕಳುಹಿಸಿದನು.

[3] ಆದರೆ ಅವರು ಅವನನ್ನು ಹಿಡಿದು ಹೊಡೆದು, ಬರಿಗೈಯಲ್ಲಿ ಕಳುಹಿಸಿಬಿಟ್ಟರು.

[4] ಯಜಮಾನನು ಪುನಃ ಮತ್ತೊಬ್ಬ ಸೇವಕನನ್ನು ಅವರ ಬಳಿಗೆ ಕಳುಹಿಸಿದಾಗ ಅವರು ಅವನ ತಲೆಯನ್ನು ಗಾಯಗೊಳಿಸಿ ಅವಮಾನ ಮಾಡಿ ಕಳುಹಿಸಿಬಿಟ್ಟರು.

[5] ಯಜಮಾನನು ಮತ್ತೊಬ್ಬ ಸೇವಕನನ್ನು ಕಳುಹಿಸಿದಾಗ ಅವರು ಅವನನ್ನು ಕೊಂದುಹಾಕಿದರು. ಯಜಮಾನನು ಬೇರೆ ಕೆಲವರನ್ನು ಕಳುಹಿಸಿದಾಗ ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕೊಂದುಹಾಕಿದರು.

[6] “ಕಡೆಯದಾಗಿ ತನಗೆ ಪ್ರಿಯನಾಗಿದ್ದ ಒಬ್ಬನೇ ಮಗನಿದ್ದನು. ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು,’ ಎಂದು ಭಾವಿಸಿ, ಅವನನ್ನು ಅವರ ಬಳಿಗೆ ಕಳುಹಿಸಿದನು.

[7] “ಆದರೆ ಆ ರೈತರು, ‘ಇವನೇ ಬಾಧ್ಯಸ್ಥನು, ಬನ್ನಿರಿ, ಇವನನ್ನು ನಾವು ಕೊಂದು ಹಾಕೋಣ. ಆಗ ಆಸ್ತಿ ನಮ್ಮದಾಗುವುದು,’ ಎಂದು ತಮ್ಮ ತಮ್ಮಲ್ಲಿ ಮಾತನಾಡಿಕೊಂಡರು.

[8] ಅವರು ಅವನನ್ನು ಹಿಡಿದು ಕೊಂದುಹಾಕಿ ದ್ರಾಕ್ಷಿತೋಟದ ಹೊರಗೆ ಬಿಸಾಡಿದರು.

[9] “ಹಾಗಾದರೆ ದ್ರಾಕ್ಷಿತೋಟದ ಯಜಮಾನನು ಅವರಿಗೆ ಏನು ಮಾಡುವನು? ಅವನು ಬಂದು ಆ ರೈತರನ್ನು ಸಂಹರಿಸಿ ದ್ರಾಕ್ಷಿಯ ತೋಟವನ್ನು ಬೇರೆಯವರಿಗೆ ಕೊಡುವನು.

[10] ಈ ಪವಿತ್ರ ವಾಕ್ಯವನ್ನು ನೀವು ಓದಲಿಲ್ಲವೋ: “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.

[11] ಇದು ಕರ್ತನಿಂದಲೇ ಆಯಿತು. ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ,’” ಎಂದು ಹೇಳಿದರು.

[12] ಆಗ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ತಮ್ಮ ವಿರೋಧವಾಗಿಯೇ ಈ ಸಾಮ್ಯವನ್ನು ಹೇಳಿದರೆಂದು ತಿಳಿದು ಯೇಸುವನ್ನು ಹಿಡಿಯುವುದಕ್ಕೆ ಸಂದರ್ಭ ನೋಡಿದರು. ಆದರೆ ಅವರು ಜನರಿಗೆ ಹೆದರಿ, ಯೇಸುವನ್ನು ಬಿಟ್ಟು ಹೊರಟು ಹೋದರು.

[13] ಆಮೇಲೆ ಅವರು ಯೇಸುವನ್ನು ಅವರ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯರಲ್ಲಿಯೂ ಕೆಲವರನ್ನು ಅವರ ಬಳಿಗೆ ಕಳುಹಿಸಿದರು.

[14] ಅವರು ಬಂದು ಯೇಸುವಿಗೆ, “ಬೋಧಕರೇ, ನೀವು ಸತ್ಯವಂತರು ಮತ್ತು ಯಾವ ಮನುಷ್ಯನನ್ನೂ ಲಕ್ಷಿಸದವರೂ ನೀವು ಮನುಷ್ಯರ ಮುಖದಾಕ್ಷಿಣ್ಯ ಮಾಡದೆ ದೇವರ ಮಾರ್ಗವನ್ನು ಸತ್ಯದಲ್ಲಿ ಬೋಧಿಸುತ್ತೀರಿ ಎಂದೂ ನಾವು ಬಲ್ಲೆವು. ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಇಲ್ಲವೋ?

[15] ನಾವು ಕೊಡಬೇಕೋ? ಕೊಡಬಾರದೋ?” ಎಂದು ಕೇಳಿದರು. ಆದರೆ ಯೇಸು ಅವರ ಕಪಟವನ್ನು ತಿಳಿದು ಅವರಿಗೆ, “ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ? ಒಂದು ಬೆಳ್ಳಿ ನಾಣ್ಯವನ್ನು ತಂದು ನನಗೆ ತೋರಿಸಿರಿ,” ಎಂದು ಹೇಳಿದರು.

[16] ಅವರು ಅದನ್ನು ತಂದಾಗ ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಮೆಲ್ಬರಹವು ಯಾರದು?” ಎಂದು ಕೇಳಿದ್ದಕ್ಕೆ ಅವರು, “ಕೈಸರನದು,” ಎಂದು ಉತ್ತರಕೊಟ್ಟರು.

[17] ಆಗ ಯೇಸು ಉತ್ತರವಾಗಿ ಅವರಿಗೆ, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಹೇಳಿದರು. ಇದಕ್ಕೆ ಅವರು ಯೇಸುವಿನ ವಿಷಯವಾಗಿ ಆಶ್ಚರ್ಯಪಟ್ಟರು.

[18] ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಯೇಸುವಿನ ಬಳಿಗೆ ಬಂದು,

[19] “ಬೋಧಕರೇ, ‘ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ವಿಧವೆಯನ್ನು ಬಿಟ್ಟು ಸತ್ತರೆ, ಅವನ ಸಹೋದರನು ಅವನ ಹೆಂಡತಿಯನ್ನು ತೆಗೆದುಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು’ ಎಂದು ಮೋಶೆಯು ನಮಗೆ ಬರೆದಿರುತ್ತಾನಷ್ಟೆ.

[20] ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಮೃತಪಟ್ಟನು.

[21] ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಮೃತನಾದನು. ಅದರಂತೆಯೇ ಮೂರನೆಯವನೂ ಆದನು.

[22] ಹೀಗೆ ಏಳುಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವರಾಗಿ ಮೃತರಾದರು. ಕೊನೆಯಲ್ಲಿ ಆ ಸ್ತ್ರೀಯೂ ಸಹ ಮರಣಹೊಂದಿದಳು.

[23] ಹಾಗಾದರೆ, ಪುನರುತ್ಥಾನದಲ್ಲಿ ಅವರು ಜೀವಂತವಾಗಿ ಎದ್ದಾಗ ಅವರಲ್ಲಿ ಆಕೆಯು ಯಾರ ಪತ್ನಿಯಾಗಿರುವಳು? ಏಕೆಂದರೆ ಏಳುಮಂದಿಯೂ ಅವಳನ್ನು ಮದುವೆ ಮಾಡಿಕೊಂಡಿದ್ದರಲ್ಲಾ,” ಎಂದು ಪ್ರಶ್ನಿಸಿದರು.

[24] ಅದಕ್ಕೆ ಯೇಸು, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದಿರಲ್ಲವೇ?

[25] ಅವರು ಸತ್ತವರೊಳಗಿಂದ ಜೀವಂತವಾಗಿ ಎದ್ದ ಮೇಲೆ, ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.

[26] ಸತ್ತವರು ಎದ್ದು ಬರುವುದರ ವಿಷಯವಾಗಿ, ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ’ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದರೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ?

[27] ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ, ಆದ್ದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪುಮಾಡುತ್ತೀರಿ,” ಎಂದು ಹೇಳಿದರು.

[28] ನಿಯಮ ಬೋಧಕರಲ್ಲಿ ಒಬ್ಬನು ಬಂದು ಅವರು ಕೂಡಿಕೊಂಡು ತರ್ಕಿಸುತ್ತಿರುವುದನ್ನು ಕೇಳಿ ಯೇಸು ಅವರಿಗೆ ಸರಿಯಾಗಿ ಉತ್ತರವನ್ನು ಕೊಟ್ಟನೆಂದು ತಿಳಿದು ಅವರಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವುದು?” ಎಂದು ಕೇಳಿದನು.

[29] ಯೇಸು ಉತ್ತರವಾಗಿ ಅವನಿಗೆ, “ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು, ‘ಇಸ್ರಾಯೇಲೇ, ಕೇಳು: ನಮ್ಮ ದೇವರಾದ ಕರ್ತ ಒಬ್ಬರೇ ಕರ್ತನಾಗಿದ್ದಾರೆ.

[30] ನೀನು ನಿನ್ನ ದೇವರನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು?’

[31] ‘ನೀನು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,’ ಎಂಬುದು ಅದರಂತೆಯೇ ಇರುವ ಎರಡನೆಯ ಆಜ್ಞೆಯಾಗಿದೆ. ಇವುಗಳಿಗಿಂತ ಹೆಚ್ಚಿನ ಆಜ್ಞೆಯು ಮತ್ತೊಂದಿಲ್ಲ,” ಎಂದು ಹೇಳಿದರು.

[32] ಅದಕ್ಕೆ ಆ ನಿಯಮ ಬೋಧಕನು ಯೇಸುವಿಗೆ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ನೀವು ಹೇಳಿದ್ದು ಸತ್ಯವೇ; ಏಕೆಂದರೆ ದೇವರು ಒಬ್ಬರೇ, ಅವರ ಹೊರತು ಬೇರೊಬ್ಬರು ಇಲ್ಲ.

[33] ಅವರನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಮನಸ್ಸಿನಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ಪ್ರೀತಿಸಿ, ತನ್ನ ನೆರೆಯವನನ್ನು ತನ್ನಂತೆಯೇ ಪ್ರೀತಿಸುವುದು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಗಳಿಗಿಂತಲೂ ಹೆಚ್ಚಿನದಾಗಿದೆ,” ಎಂದನು.

[34] ಅವನು ವಿವೇಕದಿಂದ ಉತ್ತರ ಕೊಟ್ಟದ್ದನ್ನು ಯೇಸು ಕಂಡು ಅವನಿಗೆ, “ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ,” ಎಂದರು. ಅಂದಿನಿಂದ ಯೇಸುವನ್ನು ಪ್ರಶ್ನೆಮಾಡುವುದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.

[35] ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ, “ಕ್ರಿಸ್ತನು ದಾವೀದನ ಪುತ್ರನು ಎಂದು ನಿಯಮ ಬೋಧಕರು ಹೇಳುತ್ತಿರುವುದು ಹೇಗೆ?

[36] ದಾವೀದನು ತಾನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದೇನೆಂದರೆ: “ ‘ಕರ್ತದೇವರು ನನ್ನ ಕರ್ತದೇವರಿಗೆ ಹೇಳಿದ್ದಾರೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನೀನು ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು.” ’

[37] ಆದ್ದರಿಂದ ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವಾಗ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದರು. ಜನಸಮೂಹವು ಸಂತೋಷದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು.

[38] ಯೇಸು ಬೋಧನೆಮಾಡುತ್ತಾ, “ನಿಯಮ ಬೋಧಕರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಅವರು ನಿಲುವಂಗಿಯನ್ನು ತೊಟ್ಟುಕೊಂಡು ತಿರುಗಾಡುವುದಕ್ಕೆ ಬಯಸುವವರೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ

[39] ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಇಷ್ಟಪಡುತ್ತಾರೆ.

[40] ಇವರು ವಿಧವೆಯರ ಮನೆಗಳನ್ನು ದೋಚಿ ನಟನೆಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ, ಇಂಥವರು ಹೆಚ್ಚಾದ ದಂಡನೆಯನ್ನು ಹೊಂದುವರು,” ಎಂದರು.

[41] ಯೇಸು ಕಾಣಿಕೆ ಪೆಟ್ಟಿಗೆಯ ಎದುರಾಗಿ ಕುಳಿತುಕೊಂಡು ಜನರು ಹೇಗೆ ಅದರಲ್ಲಿ ಹಣ ಹಾಕುತ್ತಿದ್ದಾರೆಂಬುದನ್ನು ಗಮನಿಸುತ್ತಿದ್ದರು. ಅನೇಕ ಐಶ್ವರ್ಯವಂತರು ಹೆಚ್ಚು ಹಣ ಹಾಕಿದರು.

[42] ಆದರೆ ಒಬ್ಬ ಬಡ ವಿಧವೆಯು ಬಂದು ಎರಡು ಚಿಕ್ಕ ನಾಣ್ಯಗಳನ್ನು ಹಾಕಿದಳು.

[43] ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ, “ಈ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

[44] ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು. ಆದರೆ ಈಕೆಯು ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಎಂದರೆ, ತನ್ನ ಜೀವನಕ್ಕೆ ಆಧಾರವಾಗಿದ್ದುದನ್ನು ಹಾಕಿದ್ದಾಳೆ,” ಎಂದರು.

ಮಾರ್ಕ — Chapters